IPL Players list- ಮಯಂಕ್ ಪಂಜಾಬ್ ಕ್ಯಾಪ್ಟನ್? ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ

IPL 2022, Players Retention List by teams- ಪಂಜಾಬ್ ಕಿಂಗ್ಸ್ ತಂಡ ಮಯಂಕ್ ಅವರನ್ನ ಉಳಿಸಿಕೊಂಡು ಕೆಎಲ್ ರಾಹುಲ್ ಅವರನ್ನ ಕೈಬಿಟ್ಟಿದೆ. ಮಯಂಕ್ ಅಗರ್ವಾಲ್ ಅವರೇ ನಾಯಕರಾಗಬಹುದು. ಮುಂಬೈನಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನ ಬಿಡಲಾಗಿದೆ.

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ

 • Share this:
  ನವದೆಹಲಿ, ನ. 30: ಬಹುತೇಕ ನಿರೀಕ್ಷಿತ ರೀತಿಯಲ್ಲಿ ಈ ಬಾರಿ ಎಂಟು ಐಪಿಎಲ್ ತಂಡಗಳು ತಮ್ಮ ಸ್ಟಾರ್ ಆಟಗಾರರನ್ನ (Players retained by IPL teams) ಉಳಿಸಿಕೊಂಡಿವೆ. ಎಂಎಸ್ ಧೋನಿ, ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಅವರು ರೀಟೈನ್ ಆದ ಕೆಲ ಪ್ರಮುಖ ಆಟಗಾರರು. ಐಪಿಎಲ್ ತಂಡಗಳು ಉಳಿಸಿಕೊಳ್ಳದ ಪ್ರಮುಖರಲ್ಲಿ ಇಯಾನ್ ಮಾರ್ಗನ್, ಡೇವಿಡ್ ವಾರ್ನರ್, ಕೆ ಎಲ್ ರಾಹುಲ್, ಯುಜವೇಂದ್ರ ಚಹಲ್, ಹರ್ಷಲ್ ಪಟೇಲ್, ಶ್ರೇಯಸ್ ಅಯ್ಯರ್, ರಷೀದ್ ಖಾನ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಅವರಿದ್ದಾರೆ.

  ಕಳೆದ ಸೀಸನ್​ನಲ್ಲಿ ಆಡಿದ ಎಂಟು ತಂಡಗಳು ಗರಿಷ್ಠ ನಾಲ್ವರು ಅಟಗಾರರನ್ನ ಉಳಿಸಿಕೊಳ್ಳಲು ಅವಕಾಶ ಇದೆ. ಇದರಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರರು, ಗರಿಷ್ಠ ಮೂವರು ಭಾರತೀಯ ಆಟಗಾರರನ್ನ ಹೀಗೆ ಒಟ್ಟು ನಾಲ್ಕು ಸಂಖ್ಯೆ ಮೀರದಂತೆ ಆಟಗಾರರನ್ನ ಪ್ರತೀ ತಂಡ ಉಳಿಸಿಕೊಳ್ಳಬಹುದು.

  ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ:
  ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಋತುರಾಜ್ ಗಾಯಕ್ವಡ್, ಮೊಯೀನ್ ಅಲಿ
  ಕೋಲ್ಕತಾ ನೈಟ್ ರೈಡರ್ಸ್: ಸುನೀಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
  ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್,
  ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್
  ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮ್ಮದ್ ಸಿರಾಜ್.
  ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಆನ್ರಿಕ್ ನೋರ್ಟಿಯಾ.
  ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್
  ಪಂಜಾಬ್ ಕಿಂಗ್ಸ್: ಮಯಂಕ್ ಅಗರ್ವಾಲ್, ಅರ್ಷ್​ದೀಪ್ ಸಿಂಗ್,

  ಇದನ್ನೂ ಓದಿ: IPL 2022- ಐಪಿಎಲ್​ನಿಂದ ಕೆಎಲ್ ರಾಹುಲ್, ರಷೀದ್ ಖಾನ್ ಒಂದು ವರ್ಷ ನಿಷೇಧ? ಕಾರಣ ಇದು

  ಮಯಂಕ್ ಪಂಜಾಬ್ ಕ್ಯಾಪ್ಟನ್?

  ಕ್ರಿಬ್ ಬಜ್ ವರದಿ ಪ್ರಕಾರ, ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಕೆಎಲ್ ರಾಹುಲ್ ಬದಲು ಮಯಂಕ್ ಅಗರ್ವಾಲ್ ಅವರನ್ನ ಉಳಿಸಿಕೊಳ್ಳಲು ನಿರ್ಧರಿಸಿದೆ. ಕಳೆದ ಸೀಸನ್​ನಲ್ಲಿ ಕೆಎಲ್ ರಾಹುಲ್ ಜೊತೆ ಮಯಂಕ್ ಅಗರ್ವಾಲ್ ಟಾಪ್ ಆರ್ಡರ್​ನಲ್ಲಿ ಸ್ಥಿರವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅನಿಲ್ ಕುಂಬ್ಳೆ ಮೆಂಟರ್ ಆಗಿರುವ ಪಂಜಾಬ್ ಕಿಂಗ್ಸ್ ತಂಡ ಮಯಂಕ್ ಅಗರ್ವಾಲ್ ಅವರನ್ನೇ ನಾಯಕರನ್ನಾಗಿ ಆರಿಸಿಕೊಳ್ಳುವ ಚಾನ್ಸ್ ಇದೆ. ಕಳೆದ ಸೀಸನ್​ನಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಶ್​ದೀಪ್ ಸಿಂಗ್ ಅವರನ್ನೂ ತಂಡ ಉಳಿಸಿಕೊಂಡಿದೆ ಎನ್ನಲಾಗಿದೆ. ಇನ್ನು ಕಳೆದ ಸೀಸನ್​ನಲ್ಲಿ ಆ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನ ಲಕ್ನೋ ತಂಡ ಖರೀದಿಸುವ ಸಾಧ್ಯತೆ ಇದೆ.

  ಸನ್ ರೈಸರ್ಸ್ ಹೈದರಾಬಾದ್ ತಂಡ ತಮ್ಮ ಹಿಂದಿನ ನಾಯಕ ಡೇವಿಡ್ ವಾರ್ನರ್ ಅವರನ್ನ ನಿರೀಕ್ಷೆಯಂತೆ ಕೈಬಿಟ್ಟಿದೆ. ಕಳೆದ ಸೀಸನ್​ನಲ್ಲೇ ವಾರ್ನರ್ ಮತ್ತು ಹೈದರಾಬಾದ್ ತಂಡ ಮಧ್ಯೆ ಸಂಬಂಧ ಹಳಸಿತ್ತು ಎನ್ನಲಾಗಿದೆ. ಆ ತಂಡ ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಅವರನ್ನ ಉಳಿಸಿಕೊಂಡಿದೆ. ಯುವ ಪ್ರತಿಭೆಗಳಾದ ಉಮರ್ ಮಲಿಕ್ ಮತ್ತು ಅಬ್ದುಲ್ ಸಮದ್ ಅವರೂ ತಂಡದಲ್ಲಿ ಇರಲಿದ್ಧಾರೆ. ಕಳೆದ ಸೀಸನ್​ನಲ್ಲಿ ಅಮೋಘ ಆಟ ಆಡಿದ್ದ ಮನೀಶ್ ಪಾಂಡೆ ಅವರನ್ನ ಉಳಿಸಿಕೊಂಡಿರುವ ಬಗ್ಗೆ ವರದಿ ಬಂದಿಲ್ಲ.

  ಇದನ್ನೂ ಓದಿ: Rahul Dravid- ಕಾನಪುರ್ ಸ್ಟೇಡಿಯಂನ ಗ್ರೌಂಡ್ಸ್​ಮೆನ್​ಗೆ ಹಣ ಕೊಟ್ಟ ರಾಹುಲ್ ದ್ರಾವಿಡ್; ಕಾರಣ ಇದು

  ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದ ಇಯಾನ್ ಮಾರ್ಗನ್ ಅವರನ್ನ ಕೈಬಿಟ್ಟಿರುವುದೂ ನಿರೀಕ್ಷಿತವೇ. ನಾಯಕನಾಗಿ ಯಶಸ್ವಿಯಾದರೂ ಮಾರ್ಗನ್ ಅವರು ಬ್ಯಾಟರ್ ಆಗಿ ವಿಫಲರಾಗಿದ್ದರು. ಇಡೀ ಟೂರ್ನಿಯಲ್ಲಿ ಅವರು ಗಳಿಸಿದ್ದು ಅತ್ಯಲ್ಪ ರನ್. ಹೀಗಾಗಿ, ಅವರನ್ನ ತಂಡ ನಿರೀಕ್ಷೆಯಂತೆ ಕೈಬಿಟ್ಟಿದೆ. ಆದರೆ ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರನ್ನ ಉಳಿಸಿಕೊಂಡಿದೆ.

  ಇನ್ನು, ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ಹಿಂದೆ ಸರಿದಿದ್ದರೂ ಆರ್​ಸಿಬಿ ತಂಡ ಅವರನ್ನ ಉಳಿಸಿಕೊಂಡಿದೆ. ತಂಡದ ಸ್ಟಾರ್ ಆಲ್​ರೌಂಡರ್ ಎನಿಸಿರುವ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನೂ ಉಳಿಸಿಕೊಳ್ಳಲಾಗಿದೆ. ಆದರೆ, ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಹಾಗೂ ಮತ್ತೊಬ್ಬ ಪ್ರಮುಖ ಬೌಲರ್ ಯುಜವೇಂದ್ರ ಚಹಲ್ ಅವರನ್ನ ಕೈಬಿಟ್ಟಿರುವುದು ಗನಾರ್ಹ.

  ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರೀಕ್ಷೆಯಂತೆ ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಡ್ ಮತ್ತು ಮೊಯೀನ್ ಅಲಿ ಅವರನ್ನ ಉಳಿಸಿಕೊಂಡಿದೆ.

  ಇದನ್ನೂ ಓದಿ: ನಿಮ್ಮ ಬಾಲ್ ಎಡ್ಜ್ ಆಗುತ್ತದೆ, ನನಗೆ ಯಾಕೆ ಆಗಲ್ಲ ಎಂದು ಅಕ್ಷರ್ ಪಟೇಲ್​ರನ್ನು ಅಶ್ವಿನ್ ಕೇಳಿದಾಗ…

  ಆಟಗಾರರನ್ನ ಉಳಿಸಿಕೊಂಡರೆ ಎಷ್ಟು ಹಣ?

  ಐಪಿಎಲ್ 2022 ಟೂರ್ನಿಗೆ ಪ್ರತೀ ತಂಡಕ್ಕೂ ಆಟಗಾರರ ಖರೀದಿಗೆ 90 ಕೋಟಿ ರೂ ವ್ಯಯಿಸುವ ಅವಕಾಶ ಕೊಡಲಾಗಿದೆ. ಇದರಲ್ಲಿ ಹಾಲಿ ಆಟಗಾರರನ್ನ ಉಳಿಸಿಕೊಳ್ಳಲು ಗರಿಷ್ಠ 42 ಕೋಟಿ ನಿಗದಿ ಮಾಡಲಾಗಿದೆ.

  ನಾಲ್ವರು ಆಟಗಾರರನ್ನ ರೀಟೈನ್ ಮಾಡಿದರೆ 42 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಮೊದಲ ಆಟಗಾರನಿಗೆ 14-16 ಕೋಟಿ ರೂ, ಎರಡನೇ ಆಟಗಾರನಿಗೆ 10-12 ಕೋಟಿ, ಮೂರನೇ ಆಟಗಾರನಿಗೆ 7-8 ಕೋಟಿ, ನಾಲ್ಕನೇ ಆಟಗಾರನಿಗೆ 6 ಕೋಟಿ ರೂ ತೆರಬೇಕಾಗುತ್ತದೆ.

  ಒಂದು ವೇಳೆ ಉಳಿಸಿಕೊಳ್ಳುವ ಆಟಗಾರನಿಗೆ ಒಂದು ತಂಡ ಹೆಚ್ಚು ಹಣ ಕೊಡಲು ಮುಂದಾದರೆ ಅದು ಒಟ್ಟು ಟೀಮ್ ಬಜೆಟ್​ನಿಂದಲೇ ವ್ಯಯಿಸಬೇಕಾಗುತ್ತದೆ. ಉಳಿಸಿಕೊಂಡ ನಾಲ್ವರು ಆಟಗಾರರಿಗೆ ಒಂದು ತಂಡ 50 ಕೋಟಿ ರೂ ವ್ಯಯಿಸಿದರೆ, ಇತರ ಆಟಗಾರರ ಖರೀದಿಗೆ ಉಳಿದುಕೊಳ್ಳುವುದು ಕೇವಲ 40 ಕೋಟಿ ರೂ ಮಾತ್ರ.
  Published by:Vijayasarthy SN
  First published: