ದುಬೈ: ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 4ನೇ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಎಂಎಸ್ ಧೋನಿ ತಮ್ಮ ತಂಡದ ಸಾಧನೆಯನ್ನ ಹೊಗಳುವುದಕ್ಕಿಂತ ಹೆಚ್ಚಾಗಿ ಎದುರಾಳಿ ಕೆಕೆಆರ್ ತಂಡವನ್ನೇ ಗುಣಗಾನ ಮಾಡಿದರು. ಆತ್ಮವಿಶ್ವಾಸ ಉಳ್ಳ ವ್ಯಕ್ತಿ ಮಾತ್ರವೇ ಎದುರಾಳಿಗಳನ್ನ ಹೊಗಳಲು ಸಾಧ್ಯ ಎಂಬ ಮಾತು ಮಹೇಂದ್ರ ಸಿಂಗ್ ಧೋನಿಗೆ ಅನ್ವಯ ಆಗುತ್ತದೇನೋ ಎಂಬಂತಿತ್ತು ಅವರು ಕೋಲ್ಕತಾ ತಂಡದ ಬಗ್ಗೆ ಆಡಿದ ಮಾತುಗಳು. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಅರ್ಹವಾಗಿದ್ದ ಯಾವುದಾದರೂ ತಂಡವಿದ್ದರೆ ಅದು ಕೋಲ್ಕತಾ ನೈಟ್ ರೈಡರ್ಸ್ ಎಂದು ಧೋನಿ ಹೇಳಿದ್ದು ಅಚ್ಚರಿ ಮೂಡಿಸಿತು.
ನಿನ್ನೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021 ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 27 ರನ್ಗಳಿಂದ ಸೋಲಿಸಿತು. ಗೆಲ್ಲಲು 193 ರನ್ಗಳ ಪ್ರಬಲ ಗುರಿ ಪಡೆದ ಕೆಕೆಆರ್ ತಂಡ ಒಂದು ಹಂತದಲ್ಲಿ ಭರ್ಜರಿ ಆರಂಭಿಕ ಜೊತೆಯಾಟದ ಮೂಲಕ ಯಶಸ್ವಿಯಾಗಿ ಚೇಸ್ ಮಾಡುವ ನಿರೀಕ್ಷೆ ಹುಟ್ಟಿಸಿತು. ಆದರೆ, ಕೆಕೆಅರ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಮತ್ತೊಮ್ಮೆ ವಿಫಲಗೊಂಡು ತರಗೆಲೆಗಳಂತೆ ಉದುರಿ ಹೋಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೂಪರ್ ಗೆಲುವು ಸಿಗಲು ಅವಕಾಶ ಮಾಡಿಕೊಟ್ಟರು. ಆದರೆ, ಎಂಎಸ್ ಧೋನಿ ಅವರು ಈ ಫೈನಲ್ ಪಂದ್ಯದಲ್ಲಿ ಕೆಕೆಆರ್ ಪ್ರದರ್ಶನಕ್ಕಿಂತ ಇಡೀ ಸರಣಿಯಲ್ಲಿ ಒಟ್ಟಾರೆಯಾಗಿ ಕೆಕೆಆರ್ ತೋರಿದ ಕೆಚ್ಚೆದೆಯ ಹೋರಾಟದ ಬಗ್ಗೆ ಬೆಳಕು ಚೆಲ್ಲಿ ಮಾತನಾಡಿದರು.
ಚಾಂಪಿಯನ್ ಪಟ್ಟಕ್ಕೆ ಕೆಕೆಆರ್ ಅರ್ಹ: “ಸಿಎಸ್ಕೆ ಬಗ್ಗೆ ಮಾತನಾಡುವ ಮುನ್ನ ನಾನು ಕೆಕೆಆರ್ ಬಗ್ಗೆ ಹೇಳುವುದು ಮುಖ್ಯ ಎನಿಸುತ್ತದೆ. ಈ ಐಪಿಎಲ್ನ ಮೊದಲ ಭಾಗದಲ್ಲಿ ಅವರಿದ್ದ ಸ್ಥಿತಿ ನೋಡಿದರೆ ತಿರುಗಿ ನಿಲ್ಲುವುದು ಬಲು ಕಷ್ಟಕರ ಎನಿಸಿತ್ತು. ಐಪಿಎಲ್ ಫೈನಲ್ವರೆಗೆ ಆ ತಂಡ ಪ್ರವೇಶಿಸುತ್ತದೆ ಎಂದು ಯಾರೂ ಎಣಿಸಿರಲು ಸಾಧ್ಯವಿರಲಿಲ್ಲ. ಈ ವರ್ಷ ಐಪಿಎಲ್ ಗೆಲ್ಲುವ ಅರ್ಹತೆ ಯಾವಾದಾದರೂ ತಂಡಕ್ಕಿದ್ದರೆ ಅದು ಕೆಕೆಆರ್ಗೆ ಅಂತ ನನ್ನ ಭಾವನೆ. ಮೊದಲ ಲೆಗ್ ಬಳಿಕ ಅವರಿಗೆ ಸಿಕ್ಕ ವಿರಾಮವು ತಂಡಕ್ಕೆ ಚೇತರಿಸಿಕೊಳ್ಳಲು ಸಹಾಯಕ್ಕೆ ಬಂದಿರಬಹುದು” ಎಂದು ಎಂಎಸ್ ಧೋನಿ ಹೇಳಿದರು.
ಧೋನಿ ಹೇಳಿದಂತೆ ಮೊದಲ ಲೆಗ್ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಐಪಿಎಲ್ನಲ್ಲಿ ಫೈನಲ್ ತಲುಪುತ್ತದೆ ಎಂದು ಅಂದಾಜಿಸಿದವರು ಬಹಳ ಕಡಿಮೆ. ಭಾರತದಲ್ಲಿ ನಡೆದ ಈ ವರ್ಷದ ಐಪಿಎಲ್ ಪಂದ್ಯಗಳ ಪೈಕಿ ಏಳರಲ್ಲಿ ಕೆಕೆಆರ್ ಗೆದ್ದದ್ದು ಕೇವಲ ಎರಡು ಮಾತ್ರ. ಕೋವಿಡ್ ಕಾರಣಕ್ಕೆ ಟೂರ್ನಿ ಸ್ಥಗಿತಗೊಂಡು ಕೆಲ ತಿಂಗಳ ಬಳಿಕ ಯುಎಇಗೆ ಪಂದ್ಯಗಳು ವರ್ಗವಾದವು. ಯುಎಇಯಲ್ಲಿ ಕೆಕೆಆರ್ ಭರ್ಜರಿ ಕಂಬ್ಯಾಕ್ ಮಾಡಿತು. ಗೆಲುವಿನ ಮೇಲೆ ಗೆಲುವು ದಾಖಲಿಸಿತು. ಕೆಲ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ದಕ್ಕಿಸಿಕೊಂಡು ರನ್ ರೇಟ್ ಉತ್ತಮಪಡಿಸಿಕೊಂಡ ಕೆಕೆಆರ್ ಅದೇ ಕಾರಣಕ್ಕೆ ಪ್ಲೇ ಆಫ್ ಪ್ರವೇಶಿಸಲು ಶಕ್ಯವಾಯಿತು.
ಇದನ್ನೂ ಓದಿ: Avi Barot- ಐಪಿಎಲ್ ಫೈನಲ್ ನೋಡುತ್ತಲೇ ಮೃತಪಟ್ಟ ಮಾಜಿ ಜೂನಿಯರ್ ಕ್ಯಾಪ್ಟನ್ ಅವಿ ಬರೋಟ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣವಾದ ಅಂಶಗಳು:
ಇತ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಧನೆ ಕೂಡ ಅಚ್ಚರಿ ಹುಟ್ಟಿಸುವಂಥದ್ದು. ಕಳೆದ ಸೀಸನ್ನಲ್ಲಿ ಏಳನೇ ಸ್ಥಾನ ಪಡೆದಿದ್ದ ಸಿಎಸ್ಕೆ ಈ ವರ್ಷ ಪ್ರಶಸ್ತಿ ಜಯಿಸಿದೆ. ಇದಕ್ಕೆ ಕಾರಣ ಏನು ಎಂಬುದನ್ನೂ ಧೋನಿ ಬಿಚ್ಚಿಟ್ಟಿದ್ದಾರೆ.
“ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೆಲ ಆಟಗಾರರನ್ನ ಅದಲುಬದಲು ಮಾಡಿ ಅವರನ್ನ ವಿಭಿನ್ನವಾಗಿ ಉಪಯೋಗಿಸಿದೆವು. ಆಟಗಾರರು ಜವಾಬ್ದಾರಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿತ್ತು. ನಮ್ಮಲ್ಲಿ ಮ್ಯಾಚ್ ವಿನ್ನರ್ಸ್ ಇದ್ದಾರೆಂದು ನನಗೆ ಪಂದ್ಯಗಳು ಹೋದಂತೆ ಅನಿಸತೊಡಗಿತು. ಫಾರ್ಮ್ನಲ್ಲಿದ್ದ ಬ್ಯಾಟರ್ಸ್ ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ತೋರುವಂತೆ ನೋಡಿಕೊಳ್ಳಲಾಯಿತು. ಜೊತೆಗೆ ಇತರ ಬ್ಯಾಟ್ಸ್ಮನ್ಗಳೂ ಶಕ್ಯವಿದ್ದಷ್ಟು ರನ್ ಗಳಿಸುವುದು ತಂಡದ ಗುರಿಯಾಗಿತ್ತು.
”…ಐಪಿಎಲ್ನ ಅಂಕಿ ಅಂಶಗಳನ್ನ ನೋಡಿದರೆ ಚೆನ್ನೈ ತಂಡ ಬಹಳ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ ಅಂತ ಅನಿಸಬಹುದು. ಆದರೆ, ನಾವು ಕೂಡ ಫೈನಲ್ ಪಂದ್ಯಗಳಲ್ಲಿ ಸೋತಿದ್ದೇವೆ. ಎದುರಾಳಿ ತಂಡಕ್ಕೆ ಮೇಲುಗೈ ಸಾಧಿಸಲು ಅವಕಾಶ ಕೊಡದಂತೆ ಆಡುವುದು ನಮ್ಮ ಧ್ಯೇಯಗಳಲ್ಲೊಂದಾಗಿತ್ತು. ಮುಂದಿನ ವರ್ಷಗಳಲ್ಲಿ ಚೆನ್ನೈ ತಂಡ ಈ ವಿಚಾರಕ್ಕೇ ಹೆಚ್ಚು ಜನಜನಿತವಾಗುತ್ತದೆ” ಎಂದು ಧೋನಿ ಭವಿಷ್ಯ ನುಡಿದಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ