MS Dhoni- ಐದು ವರ್ಷವೇ ಆದರೂ ಇದೇ ನಗರದಲ್ಲಿ ನನ್ನ ಕೊನೆ ಪಂದ್ಯ: ಎಂಎಸ್ ಧೋನಿ
The Champions Call- ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆದ್ದ ನಿಮಿತ್ತ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎಂಎಸ್ ಧೋನಿ ತಮ್ಮ ಕೊನೆಯ ಟಿ20 ಆಸೆಯನ್ನ ತೋಡಿಕೊಂಡಿದ್ದಾರೆ.
ಚೆನ್ನೈ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ (Team India former captain M S Dhoni) ಅಂತರರಾಷ್ಟ್ರಿಯ ಕ್ರಿಕೆಟ್ನಿಂದ ನಿವೃತ್ತರಾದರೂ ಐಪಿಎಲ್ನಲ್ಲಿ ಆಡುವುದನ್ನ ಮುಂದುವರಿಸಿದ್ಧಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಈ ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಅವರ ನಾಯಕತ್ವದಲ್ಲೇ ನಾಲ್ಕನೇ ಬಾರಿ ಸಿಎಸ್ಕೆ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈ ಬಾರಿಯದ್ದೇ ಧೋನಿ ಪಾಲಿಗೆ ಕೊನೆಯ ಐಪಿಎಲ್ ಆಗಬಹುದು ಎಂಬ ಸುದ್ದಿ ಕೆಲ ತಿಂಗಳ ಹಿಂದೆ ದಟ್ಟವಾಗಿತ್ತು. ಆದರೆ, ಧೋನಿ ತಾನು ಇನ್ನೂ ಐಪಿಎಲ್ ಆಡುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದ್ಧಾರೆ. ಆದರೆ, ಧೋನಿ ಯಾವಾಗ ಐಪಿಎಲ್ನಿಂದಲೂ ನಿವೃತ್ತರಾಗುತ್ತಾರೆ ಎಂಬ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಅವರು ಆಡುತ್ತೇನೆಂದು ಹೇಳಿರುವುದು ನಿಜವೇ ಆದರೂ ಸಿಎಸ್ಕೆ ತಂಡದಲ್ಲೇ ಇರುತ್ತಾರಾ ಎಂಬುದು ಅನಿಶ್ಚಿತವಿದೆ. ಆದರೆ, ಧೋನಿ ತಮ್ಮ ಕೊನೆಯ ಕೋರಿಕೆಯನ್ನಂತೂ ತೋಡಿಕೊಂಡಿದ್ಧಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಎಲ್ ದಿಗ್ವಿಜಯದ ಸಂಭ್ರಮಾಚರಣೆಯಾಗಿ ಚೆನ್ನೈನಲ್ಲಿ ನಿನ್ನೆ ನಡೆದ “ದಿ ಚಾಂಪಿಯನ್ಸ್ ಕಾಲ್” (The Champions Call) ಕಾರ್ಯಕ್ರಮದಲ್ಲಿ ಮಾತನಾಡಿದ ಎಂಎಸ್ ಧೋನಿ, ತಮ್ಮ ಕೊನೆಯ ಇಚ್ಛೆಯನ್ನ ಹೇಳಿಕೊಂಡರು. ತಾನು ಸದಾ ಯೋಜಿತವಾಗಿ ಕ್ರಿಕೆಟ್ ಆಡಿದ್ದೇನೆ (I have always planned by cricket). ಈಗ ಚೆನ್ನೈನಲ್ಲೇ ತನ್ನ ಟಿ20 ವೃತ್ತಿಜೀವನ ಅಂತ್ಯಗೊಳಿಸಬೇಕೆಂದಿರುವುದಾಗಿ ಅವರು ತಿಳಿಸಿದರು.
“ನಾನು ಕ್ರಿಕೆಟ್ ಅನ್ನು ಸದಾ ವ್ಯವಸ್ಥಿತವಾಗಿ ಇಟ್ಟಿದ್ದೇನೆ. ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ಆಗಿದ್ದು. ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರುತ್ತದೆ ಎಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ” ಎಂದು ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಕೂಡ ಆದ ಧೋನಿ ಹೇಳಿದರು.
ಎಂಎಸ್ ಧೋನಿ ಇದೇ ವೇಳೆ ಚೆನ್ನೈ ನಗರದ ಕ್ರಿಕೆಟ್ ಪ್ರೇಮಿಗಳನ್ನ ಶ್ಲಾಘಿಸಿದರು. “ನಾವು ಚೀಪಾಕ್ನಲ್ಲಿ ಆಡಿದ ಪ್ರತಿಯೊಂದು ಪಂದ್ಯಕ್ಕೂ ಕ್ರಿಕೆಟ್ ಫ್ಯಾನ್ಸ್ ಬಂದು ಉತ್ತಮ ಆಟವನ್ನ ಬೆಂಬಲಿಸಿದ್ದಾರೆ. ನಿಮ್ಮ ತಂಡ ಮಾತ್ರ ಚೆನ್ನಾಗಿ ಆಡಬೇಕು, ಬೇರೆ ತಂಡ ಚೆನ್ನಾಗಿ ಆಡಬಾರದು ಎಂಬ ಭಾವನೆ ಸಹಜವಾಗಿಯೇ ಇರುತ್ತದೆ. ಆದರೆ, ಚೆನ್ನೈನಲ್ಲಿ ಇದು ಕಾಣಿಸುವುದಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಜೊತೆ ಆಡವಾಗಲೂ ಸಚಿನ್ ಚೇಪಾಕ್ ಮೈದಾನಕ್ಕೆ ಕಾಲಿಟ್ಟಾಗೆಲ್ಲಾ ಭಾರೀ ಸ್ವಾಗತ ಸಿಕ್ಕಿದೆ. ತಮಿಳುನಾಡಿನ ಚೆನ್ನೈನ ಫ್ಯಾನ್ಸ್ ವಿಷಯಕ್ಕೆ ಬಂದರೆ ಅದು ಕ್ರಿಕೆಟ್ ಮೇಲಿರುವ ಪರಿಶುದ್ಧ ಪ್ರೀತಿ ಮತ್ತು ಆಟದ ಮೇಲಿರುವ ಅವರ ಸರಿಕಲ್ಪನೆ” ಎಂದು ಧೋನಿ ತಿಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ವರ್ಷದ ಐಪಿಎಲ್ನಲ್ಲಿ ಧೋನಿಯೇ ಸಾರಥ್ಯ ವಹಿಸಿದ್ದರೂ ನೀರಸ ಪ್ರದರ್ಶನ ನೀಡಿತ್ತು. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ತಂಡ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಈ ಬಗ್ಗೆ ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ ಎಸ್ ಧೋನಿ, “ಕಳೆದ ವರ್ಷದ ವೈಫಲ್ಯವು ಈ ವರ್ಷ ತಂಡದ ಆಟಗಾರರ ಛಲವನ್ನು ಹೆಚ್ಚಿಸಿತು. ಒಗ್ಗೂಡಲು ಸಹಕಾರಿ ಆಯಿತು. ಅಂದುಕೊಂಡಿದ್ದನ್ನ ಸಾಧಿಸಿ ತೋರಿಸುವ ಬಲ ಸಿಕ್ಕಿತು” ಎಂದು ಧೋನಿ ಅಭಿಪ್ರಾಯಪಟ್ಟರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ