MS Dhoni milestone- 300 ಟಿ20 ಪಂದ್ಯಗಳಲ್ಲಿ ನಾಯಕನಾದ ವಿಶ್ವದ ಏಕೈಕ ಕ್ರಿಕೆಟಿಗ ಎಂಎಸ್ ಧೋನಿ

IPL 2021: ಎಂಎಸ್ ಧೋನಿ ಟಿ20 ಕ್ರಿಕೆಟ್​ನಲ್ಲಿ ಒಟ್ಟು 300 ಪಂದ್ಯಗಳಲ್ಲಿ ನಾಯಕರಾಗಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಡರೆನ್ ಸ್ಯಾಮಿ 208 ಟಿ20 ಪಂದ್ಯಗಳಲ್ಲಿ ಮಾತ್ರ ನಾಯಕರಾಗಿದ್ದಾರೆ.

ಎಂಎಸ್ ಧೋನಿ

ಎಂಎಸ್ ಧೋನಿ

  • Share this:
    ದುಬೈ, ಅ. 15: ಇಂದಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಆಡುವ ಮೂಲಕ ಎಂಎಸ್ ಧೋನಿ ಅವರು ಹೊಸ ಮೈಲಿಗಲ್ಲು ಮುಟ್ಟಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಅವರು ನಾಯಕನಾಗಿ ಆಡಿರುವ 300ನೇ ಪಂದ್ಯ ಇದಾಗಿದೆ. ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಎರಡನ್ನೂ ಒಳಗೊಂಡ ಟಿ20 ಕ್ರಿಕೆಟ್​ನಲ್ಲಿ ಧೋನಿ 300 ಪಂದ್ಯಗಳಲ್ಲಿ ನಾಯಕರಾಗಿದ್ಧಾರೆ. 300 ಟಿ20 ಪಂದ್ಯಗಳಲ್ಲಿ ನಾಯಕನಾದ ವಿಶ್ವದ ಏಕೈಕ ಆಟಗಾರನಾಗಿದ್ಧಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವೊಂದನ್ನೇ 213 ಪಂದ್ಯಗಳಲ್ಲಿ ಅವರು ಮುನ್ನಡೆಸಿದ್ಧಾರೆ. ಎರಡು ಸೀಸನ್​ನಲ್ಲಿ ರೈಸಿಂಗ್ ಸೂಪರ್ ಜೈಂಟ್ ತಂಡಕ್ಕೆ ನಾಯಕರಾಗಿದ್ಧಾರೆ. ಹಾಗೆಯೇ, ಟಿ20 ಟೀಮ್ ಇಂಡಿಯಾದ ನಾಯಕರಾಗಿಯೂ ಅವರು ಸಾಕಷ್ಟು ಪಂದ್ಯಗಳನ್ನ ಆಡಿದ್ದಾರೆ.

    ಐಪಿಎಲ್, ಸ್ಥಳೀಯ ಟಿ20 ಕ್ರಿಕೆಟ್ ಸೇರಿ 346 ಹಾಗೂ ಅಂತರರಾಷ್ಟ್ರೀಯ ಟಿ20 98 ಪಂದ್ಯ ಸೇರಿ ಒಟ್ಟು 444 ಪಂದ್ಯಗಳಲ್ಲಿ ಆಡಿದ್ದಾರೆ. ಕ್ಯಾಪ್ಟನ್ ಆಗಿ ಇದು ಅವರಿಗೆ 300ನೇ ಪಂದ್ಯ. ಟೀಮ್ ಇಂಡಿಯಾದ ನಾಯಕರಾಗಿ ಆಡಿದ ಟಿ20 ಪಂದ್ಯಗಳಲ್ಲಿ ಧೋನಿ ವಿನಿಂಗ್ ಪರ್ಸೆಂಟೇಜ್ 59.79 ಇದೆ. 41 ಪಂದ್ಯಗಳಲ್ಲಿ ಭಾರತ ಗೆದ್ದಿದೆ, 28 ಪಂದ್ಯಗಳನ್ನ ಸೋತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅವರು ಮುನ್ನಡೆಸಿದ 213 ಪಂದ್ಯಗಳಲ್ಲಿ ತಂಡ 130ರಲ್ಲಿ ಗೆದ್ದಿದೆ.

    ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಗೆದ್ದಿತು. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.

    ಧೋನಿ ನಂತರದ ಸ್ಥಾನದಲ್ಲಿರುವವರು:

    300 ಟಿ20 ಪಂದ್ಯಗಳಲ್ಲಿ ನಾಯಕನಾದ ದಾಖಲೆ ಎಂಎಸ್ ಧೋನಿಗೆ ಇದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಡರೆನ್ ಸ್ಯಾಮಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 208 ಟಿ20 ಪಂದ್ಯಗಳಲ್ಲಿ ನಾಯಕರಾಗಿದ್ಧಾರೆ. ಭಾರತದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ 170 ಮತ್ತು 153 ಪಂದ್ಯಗಳಲ್ಲಿ ನಾಯಕರಾಗಿ ನಂತರದ ಸ್ಥಾನದಲ್ಲಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ 2017ರಲ್ಲೇ ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನ ತ್ಯಜಿಸಿದ್ದರು. ನಂತರ ಅವರು ಇತರ ಎರಡು ಮಾದರಿ ಕ್ರಿಕೆಟ್​ಗೂ ವಿದಾಯ ಹೇಳಿದರು. ಇದೀಗ ಅವರು ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾಗೆ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿ ತಮ್ಮಲ್ಲಿ ಇನ್ನೂ ಕ್ರಿಕೆಟ್ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಟ್ಟಿದ್ಧಾರೆ. ಧೋನಿ ಭಾರತದ ಮೆಂಟಾರ್ ಆಗಿರುವ ವಿಚಾರವನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಬಿಸಿಸಿಐನ ಈ ನಿರ್ಧಾರವನ್ನು ಟೀಕಿಸಿದವರೇ ಇಲ್ಲ.

    ‘ಮೆಂಟಾರ್’ ಸಿಂಗ್ ಧೋನಿ:

    ಮೆಂಟಾರ್ ಜವಾಬ್ದಾರಿಯನ್ನ ಧೋನಿ ಯಾವುದೇ ಸಂಭಾವನೆ ಇಲ್ಲದೇ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೊನ್ನೆಯಷ್ಟೇ ಬಹಿರಂಗಪಡಿಸಿದ್ದರು. ಅಲ್ಲದೇ, ಕೋಚ್ ಆಗಿ ರವಿಶಾಸ್ತ್ರಿ ಮತ್ತು ಮೆಂಟಾರ್ ಆಗಿ ಎಂಎಸ್ ಧೋನಿ ಅವರ ಮಧ್ಯೆ ಕೆಲಸದ ವಿಚಾರದಲ್ಲಿ ಯಾವುದೇ ಸಂಘರ್ಷ ಆಗುವುದಿಲ್ಲ. ಕೋಚ್ ಅವರ ಕರ್ತವ್ಯಕ್ಕೆ ಧೋನಿ ಯಾವುದೇ ಕಾರಣಕ್ಕೂ ಅಡ್ಡಿಪಡಿಸುವುದಿಲ್ಲ ಎಂದು ಬಿಸಿಸಿಐ ಬಹಳ ಸ್ಪಷ್ಟವಾಗಿ ಹೇಳಿದೆ.

    ಮೆಂಟಾರ್ ಪಾತ್ರ ಏನು?

    ಮೆಂಟರ್ ಆಗಿ ಎಂಎಸ್ ಧೋನಿ ಅವರ ಜವಾಬ್ದಾರಿ ಮತ್ತು ಕೆಲಸಗಳು ವಿಭಿನ್ನವಾಗಿರುತ್ತವಂತೆ. ಪ್ರತೀ ಪಂದ್ಯಕ್ಕೂ ಸರಿಯಾದ ತಂಡವನ್ನು ಆಯ್ಕೆ ಮಾಡಲು ಸಹಕರಿಸುವುದು ಧೋನಿಯ ಜವಾಬ್ದಾರಿಗಳಲ್ಲಿ ಒಂದು. ಧೋನಿ ಪಿಚ್​ನ ಸ್ಥಿತಿ ಹೇಗಿದೆ ಎಂದು ಚೆನ್ನಾಗಿ ವಿಶ್ಲೇಷಿಸಬಲ್ಲುರು. ಹಾಗೆಯೇ, ಆಟಗಾರರ ಮನಸ್ಥಿತಿಯನ್ನ ಅರಿತುಕೊಳ್ಳಬಲ್ಲಂಥ ಸ್ವಭಾವ ಧೋನಿಗೆ ಇದೆ. ಒಬ್ಬ ಆಟಗಾರನಿಗೆ ಆತ್ಮವಿಶ್ವಾಸದ ಕೊರತೆ ಎದುರಾಗುತ್ತಿದೆ ಎಂದಾದಲ್ಲಿ ಅದನ್ನ ಗ್ರಹಿಸಿ ಆತನಿಗೆ ಉತ್ತೇಜನ ನೀಡಬಲ್ಲಂಥ ಕೆಲಸವನ್ನ ಧೋನಿ ನಿಭಾಯಿಸುತ್ತಾರೆ. ಹಾಗೆಯೇ, ಆಟಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬರದ ಹಾಗೆ ಪರಿಸ್ಥಿತಿ ನಿಭಾಯಿಸುವ ಕಲೆ ಧೋನಿಗೆ ಸಿದ್ಧಿಸಿದೆ. ಅದನ್ನ ಅವರು ಟಿ20 ವಿಶ್ವಕಪ್​ನಲ್ಲಿ ಮಾಡಲಿದ್ದಾರೆ.
    Published by:Vijayasarthy SN
    First published: