IPL 2021 - ಆಂಡ್ರೆ ರಸೆಲ್, ಕುಮಿನ್ಸ್ ಬ್ಯಾಟಿಂಗ್ ಆರ್ಭಟಕ್ಕೆ ಎಂಎಸ್ ಧೋನಿ ಮಾಡಿದ ಕಾಮೆಂಟ್ ಇದು

ತೇವಾಂಶದಿಂದ ಚೆಂಡು ಸುಲಭವಾಗಿ ಬರುತ್ತಿದ್ದ ಹೊತ್ತಲ್ಲೇ ಇಂಥ ಬ್ಯಾಟಿಂಗ್ ಪ್ರದರ್ಶನ ಬರುವಾಗ ಯಾರು ತಾನೆ ಏನು ಮಾಡಲು ಸಾಧ್ಯ? ಸುಮ್ಮನೆ ನೋಡಿಕೊಂಡು ಇರಬೇಕು ಅಷ್ಟೇ ಎಂದು ಆಂಡ್ರೆ ರಸೆಲ್, ಪ್ಯಾಟ್ ಕುಮಿನ್ಸ್ ಆಟದ ಬಗ್ಗೆ ಧೋನಿ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭ್ರಮ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭ್ರಮ

  • Share this:
ಮುಂಬೈ: ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಭಾರೀ ರೋಚಕ ಎನಿಸಿತು. ಪಂದ್ಯದ ಬಹುತೇಕ ಭಾಗ ನಿರಾಸೆಯ ಪ್ರದರ್ಶನ ನೀಡಿದ್ದ ಕೆಕೆಆರ್ ತಂಡ ಅಂತಿಮವಾಗಿ ತಿರುಗಿ ನಿಂತು ವೀರೋಚಿತ ಸೋಲು ಅನುಭವಿಸಿತು. ಸೋಲು ಕಟ್ಟಿಟ್ಟ ಬುತ್ತಿ ಎನ್ನುವಂತಿದ್ದ ಸನ್ನಿವೇಶದಲ್ಲಿ ಕೆಕೆಆರ್ ತಂಡದ ಬ್ಯಾಟುಗಾರರಾದ ಆಂಡ್ರೆ ರಸೆಲ್ ಮತ್ತು ಪ್ಯಾಟ್ ಕುಮಿನ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರ ಆಟದ ನೆರವಿನಿಂದ ತಂಡಕ್ಕೆ ಒಂದು ಹಂತದಲ್ಲಿ ಗೆಲುವಿನ ಆಸೆಯೂ ಚಿಗುರಿತ್ತು. ಕೊನೆಗೆ ದುರದೃಷ್ಟಕರ ರೀತಿಯಲ್ಲಿ ಔಟಾಗಿ ಗೆಲುವು ಕೈಗೆಟುಕದಾಯಿತು. ಸಿಎಸ್​ಕೆ ಗೆಲುವು ಸಾಧಿಸಿದ ಪರಿಣಾಮ ಆ ತಂಡದ ಫ್ಯಾಫ್ ಡುಪ್ಲೆಸಿಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೂ ಈ ಪಂದ್ಯದಲ್ಲಿ ನಿಜವಾದ ಹೀರೋಗಳಾದವರು ಆಂಡ್ರೆ ರಸೆಲ್ ಮತ್ತು ಪ್ಯಾಟ್ ಕಮಿನ್ಸ್ ಅವರು. ಇವರಿಬ್ಬರ ಆಟದ ವೇಳೆ ಮಹೇಂದ್ರ ಸಿಂಗ್ ಧೋನಿ ಕೂಡ ಏನು ಮಾಡಲಾಗದೇ ಕೈಚೆಲ್ಲಿದ್ದರಂತೆ. ಇಂಥ ಬ್ಯಾಟಿಂಗ್ ಪ್ರದರ್ಶನ ನಡೆಯುವಾಗ ಯಾವ ಪ್ಲಾನ್ ಕೂಡ ವರ್ಕೌಟ್ ಆಗುವುದಿಲ್ಲ ಎಂದು ಧೋನಿ ಉದ್ಘರಿಸಿದ್ಧಾರೆ.

“ಈ ಪಂದ್ಯದ 15 ಅಥವಾ 16ನೇ ಓವರ್​ನ ನಂತರ ಬ್ಯಾಟ್ಸ್​ಮ್ಯಾನ್ ಮತ್ತು ಫಾಸ್ಟ್ ಬೌಲರ್ ನಡುವಿನ ಯುದ್ಧವಾಗಿ ಹೋಗಿತ್ತು. ಇಂಥ ಆಟದಲ್ಲಿ ಕೂಲ್ ಆಗಿ ಇರುವುದೇ ಒಳ್ಳೆಯದು… ವಿಭಿನ್ನವಾಗಿ ಫೀಲ್ಡ್ ಸೆಟ್ ಮಾಡಲು ಆಗುವುದಿಲ್ಲ. ತೇವ ಇದ್ದರಿಂದ ಬ್ಯಾಟುಗಾರನ ಬಳಿಗೆ ಚೆಂಡು ಸಲೀಸಾಗಿ ಹೋಗುತ್ತಿತ್ತು. ಇಂಥ ಸಂದರ್ಭದಲ್ಲಿ ನೀವು ಏನೂ ಮಾಡಲು ಸಾಧ್ಯವಾಗುವುದಿಲ್ಲ” ಎಂಬುದು ಎಂಎಸ್ ಧೋನಿ ಅವರ ರಿಯಾಕ್ಷನ್ ಆಗಿದೆ.

“ಅದು ನಾನು ಮತ್ತು ನೀನು ಮಧ್ಯೆ ಕದನವಾಗಿತ್ತು. ನಾನು ಎಷ್ಟು ಕರಾರುವಾಕ್ಕಾಗಿ ಕಾರ್ಯತಂತ್ರ ಆಚರಣೆಗೆ ತರುತ್ತಿದ್ದೇನೆ.. ನೀನು ಯಾವ ರೀತಿ ರನ್ ಗಳಿಸುತ್ತೀರಿ ಎಂಬುದು ಅಲ್ಲಿ ಪ್ರಸ್ತುತ. ಈ ಪಂದ್ಯದಲ್ಲಿ ಗೆದ್ದವರು ತಂತ್ರಗಾರಿಕೆಯನ್ನು ಸ್ವಲ್ಪ ಉತ್ತಮವಾಗಿ ನಿಭಾಯಿಸಿದ್ದಾರೆ. ಆ ತಂಡದವರ ಬಳಿ ವಿಕೆಟ್ ಇದ್ದಿದ್ದರೆ ಏನು ಬೇಕಾದರೂ ಆಗಿರುತ್ತಿತ್ತು. ಇಂಥ ಪಿಚ್​ನಲ್ಲಿ 20 ಓವರ್ ಪೂರ್ಣ ಮುಗಿಸಿದಿದ್ದರೆ ಬಹಳ ಕ್ಲೋಸ್ ಗೇಮ್ ಆಗಿರುತ್ತಿತ್ತು” ಎಂದು ಧೋನಿ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: CSK vs KKR: ಸಿಎಸ್​ಕೆ ವಿರುದ್ದ ಕೆಕೆಆರ್​ಗೆ ವೀರೋಚಿತ ಸೋಲು..!

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 18 ರನ್​ಗಳಿಂದ ಗೆಲುವು ಸಾಧಿಸಿತು. ಚೆನ್ನೈ ತಂಡದ 220 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಕೋಲ್ಕತಾ ತಂಡ ಇನ್ನೂ 5 ಎಸೆತ ಇರುವಾಗಲೇ 202 ರನ್​ಗೆ ಆಲೌಟ್ ಆಯಿತು. ಆದರೆ, ಕೆಕೆಆರ್ ಆರಂಭಿಕ ಆಘಾತ ಅನುಭವಿಸಿದ ಪರಿ ನೋಡಿದರೆ ಅದು 200 ರನ್ ಗಡಿ ದಾಟಿದ್ದೇ ದೊಡ್ಡ ಅಚ್ಚರಿ ಎನಿಸಿತು.

ಒಂದು ಹಂತದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 31 ರನ್​ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿತ್ತು. ಅದಕ್ಕೆ ಸೋಲೊಂದೇ ದಾರಿ ಎಂದಾಗಿತ್ತು. ಆಗ ಜೊತೆಯಾದವರು ನಾಯಕ ದಿನೇಶ್ ಕಾರ್ತಿಕ್ ಮತ್ತು ಆಂಡ್ರೆ ರಸೆಲ್. ಇಬ್ಬರೂ ಒಬ್ಬರಿಗೊಬ್ಬರು ಮೀರಿಸುವಂತೆ ಸ್ಫೋಟಕ ಆಟವಾಡಿದರು. ಕೇವಲ 30 ಎಸೆತದಲ್ಲಿ 81 ರನ್ ಜೊತೆಯಾಟ ಆಡಿದರು. ಇವರಿಬ್ಬರು ಕ್ರೀಸ್​ನಲ್ಲಿರುವಾಗ ಕೆಕೆಆರ್​ಗೆ ಗೆಲುವಿನ ಆಸೆ ಚಿಗುರಿತ್ತು. ಆದರೆ, 22 ಬಾಲ್​ನಲ್ಲಿ 54 ರನ್ ಗಳಿಸಿ ಆಂಡ್ರೆ ರಸೆಲ್ ಔಟಾದಾಗ ಗೆಲುವಿನ ಆಸೆ ಮತ್ತೆ ಕಮರಿಹೋಗಿತ್ತು. 15ನೇ ಓವರ್​ನಲ್ಲಿ ದಿನೇಶ್ ಕಾರ್ತಿಕ್ ನಿರ್ಮಿಸಿದ ಬಳಿಕ ಕೆಕೆಆರ್ ಗೆಲುವಿನ ಹಾದಿ ಇನ್ನೂ ಕಠಿಣವಾಯಿತು. ಆಗ ಆರ್ಭಟಕ್ಕೆ ಇಳಿದವರು ಪ್ಯಾಟ್ ಕುಮಿನ್ಸ್.  ಇವರು ಏಕಾಂಗಿಯಾಗಿ ಹೋರಾಟ ನಡೆಸಿದರು. 34 ಬಾಲ್​ನಲ್ಲಿ ಇವರು ಅಜೇಯ 66 ರನ್ ಗಳಿಸಿದರು. ಮೇಲಾಗಿ, ಕೆಕೆಆರ್ ತಂಡವನ್ನು ಗೆಲುವಿನ ದಡದ ಸಮೀಪಕ್ಕೂ ಇವರು ಕೊಂಡೊಯ್ದರು. ಇನ್ನೊಂದು ಬದಿಯಿಂದ ಇವರಿಗೆ ಸೂಕ್ತ ಜೊತೆ ಸಿಕ್ಕಿದಿದ್ದರೆ ತಂಡವನ್ನು ಗೆಲುವಿನ ದಡಕ್ಕೆ ಯಶಸ್ವಿಯಾಗಿ ಮುಟ್ಟಿಸುವ ಸನ್ನಾಹದಲ್ಲೂ ಅವರಿದ್ದರು. ಆದರೆ, ಬಾಲಂಗೋಚಿ ಬ್ಯಾಟುಗಾರರು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಚೆನ್ನೈ ತಂಡ ಈ ಗೆಲುವಿನೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಆರ್​ಸಿಬಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಕೋಲ್ಕತಾ ತಂಡ ಆರನೇ ಸ್ಥಾನಕ್ಕೆ ಇಳಿಯಬೇಕಾಯಿತು. ಕೆಕೆಆರ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 24ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಸಿಎಸ್​ಕೆ ತಂಡ ಏ. 25ರಂದು ಆರ್​ಸಿಬಿ ಸವಾಲನ್ನು ಎದುರಿಸಲಿದೆ.
Published by:Vijayasarthy SN
First published: