ಅಬುಧಾಬಿ, ಅ. 08: ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ನಲ್ಲೇ ದಾಖಲೆ ಮೊತ್ತ ಕಲೆಹಾಕಿತು. ಆದರೆ, ಪ್ಲೇ ಆಫ್ ರೇಸ್ನಿಂದ ಮುಂಬೈ ಹೊರಬಿದ್ದಿದೆ. ಪ್ಲೇ ಆಫ್ ಪ್ರವೇಶಿಸಲು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕನಿಷ್ಠ 171 ರನ್ಗಳ ಅಂತರದಿಂದ ಗೆಲ್ಲಬೇಕಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಗುರಿ ಈಡೇರಿಲ್ಲ. ಸನ್ರೈಸರ್ಸ್ ತಂಡ ಕೂಡ 193 ರನ್ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮುಂಬೈ ತಂಡ 42 ರನ್ಗಳಿಂದ ಪಂದ್ಯ ಗೆದ್ದರೂ ಪ್ಲೇ ಆಫ್ ಅವಕಾಶದಿಂದ ವಂಚಿತವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ನಲ್ಲಿ 235 ರನ್ ಗಳಿಸಿತು. ಇಶಾನ್ ಕಿಶನ್ 32 ಬಾಲ್ನಲ್ಲಿ 84 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 40 ಬಾಲ್ನಲ್ಲಿ 82 ರನ್ ಚಚ್ಚಿದರು. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ಗೆ 80 ರನ್ ಜೊತೆಯಾಟ ಆಡಿದರು. ಮೂರು ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್ ಬಹುತೇಕ ಕೊನೆಯರೆಗೂ ನಿಂತು ಮುಂಬೈ ಇಂಡಿಯನ್ಸ್ ಸ್ಕೋರು 230ರ ಗಡಿ ದಾಟುವಂತೆ ನೋಡಿಕೊಂಡರು. 250ಕ್ಕೂ ಹೆಚ್ಚು ರನ್ಗಳನ್ನ ಕಲೆಹಾಕುವ ಗುರಿ ಹೊಂದಿದ್ದ ಮುಂಬೈ ಇಂಡಿಯನ್ಸ್ ಕೊನೆಗೆ 235 ರನ್ಗೆ ತೃಪ್ತಿಪಡಬೇಕಾಯಿತು.
ಮುಂಬೈ ಇಂಡಿಯನ್ಸ್ ತಂಡದ ಈ ಸ್ಕೋರು ಇದೂವರೆಗಿನ ಅದರ ಗರಿಷ್ಠ ಸ್ಕೋರ್ ಎನಿಸಿದೆ. ಯಾವುದೇ ಐಪಿಎಲ್ ಅಥವಾ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗಳಲ್ಲಿ ಮುಂಬೈ ಇಂಡಿಯನ್ಸ್ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ. ಈ ಐಪಿಎಲ್ನಲ್ಲಿ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ ಆಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ತಂಡವೊಂದು 200 ರನ್ ಗಡಿ ದಾಟಿದ್ದು.
ಪ್ಲೇ ಆಫ್ ಪ್ರವೇಶಿಸಲು 171 ರನ್ಗಳ ಅಂತರದಿಂದ ಗೆಲ್ಲಬೇಕಿದ್ದ ಮುಂಬೈ ಇಂಡಿಯನ್ಸ್ ತಂಡ ತನ್ನ ಎದುರಾಳಿಯನ್ನ 64 ರನ್ಗಳಿಗೆ ನಿಯಂತ್ರಿಸಬೇಕಿತ್ತು. ಆದರೆ, ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಸ್ ಸುಲಭಕ್ಕೆ ವಿಕೆಟ್ ಒಪ್ಪಿಸುವವರಾಗಲಿಲ್ಲ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಹೈದರಾಬಾದ್ ತಂಡದ ನಾಯಕತ್ವ ವಹಿಸಿದ್ದ ಮನೀಶ್ ಪಾಂಡೆ ಅವರು ಅಜೇಯ 69 ರನ್ ಗಳಿಸಿ ಮುಂಬೈ ಆಸೆಗೆ ತಣ್ಣೀರು ಎರಚಿದರು. ಜೇಸನ್ ರಾಯ್, ಅಭಿಷೇಕ್ ಶರ್ಮಾ ಮತ್ತು ಪ್ರಿಯಂ ಗರ್ಗ್ ಅವರೂ ಉತ್ತಮ ಪ್ರದರ್ಶನ ನೀಡಿ ಹೈದರಾಬಾದ್ ಸ್ಕೋರು 200 ರನ್ ಗಡಿ ಸಮೀಪಿಸುವಂತೆ ನೋಡಿಕೊಂಡರು.
ಇವತ್ತಿನ ಪಂದ್ಯದಲ್ಲಿ ಮುಂಬೈ ಮತ್ತು ಹೈದರಾಬಾದ್ ಗಳಿಸಿದ ಸ್ಕೋರು ಈ ಐಪಿಎಲ್ನಲ್ಲೇ ಗರಿಷ್ಠ ಎನಿಸಿದೆ. ಮುಂಬೈನ ಸ್ಕೋರು ನಂಬರ್ ಆದರೆ, ಹೈದರಾಬಾದ್ದು ನಂಬರ್ 2 ಆಗಿದೆ. ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಂಡ ಪಂದ್ಯ ಇದು.
ಇದನ್ನೂ ಓದಿ: RCB beat DC- ಭರತ್, ಮ್ಯಾಕ್ಸ್ವೆಲ್ ಭರ್ಜರಿ ಆಟ; ಡೆಲ್ಲಿ ವಿರುದ್ಧ ಆರ್ಸಿಬಿಗೆ ರೋಚಕ ಗೆಲುವು
ಕೆಕೆಆರ್ ಪ್ಲೇ ಆಫ್ ಪ್ರವೇಶ: ಇದೀಗ ಪ್ಲೇ ಆಫ್ ಸ್ಥಾನಮಾನ ಖಚಿತಗೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ವಾಲಿಫಯರ್ ಪಂದ್ಯದಲ್ಲಿ ಆಡಲಿವೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಆಡಲಿವೆ. ಮೊದಲ ಕ್ವಾಲಿಫಯರ್ ಪಂದ್ಯ ಅ. 10ರಂದು ದುಬೈನಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಅ. 11ರಂದು ಶಾರ್ಜಾದಲ್ಲಿ ನಡೆಯಲಿದೆ.
ತಂಡಗಳು:
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಜೇಮ್ಸ್ ನೀಶಮ್, ಕೃಣಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ಪಿಯೂಶ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಸನ್ರೈಸರ್ಸ್ ಹೈದರಾಬಾದ್ ತಂಡ: ಜೇಸನ್ ರಾಯ್, ಅಭಿಷೇಕ್ ಶರ್ಮಾ, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಪ್ರಿಯಂ ಗರ್ಗ್, ಅಬ್ದುಲ್ ಸಮದ್, ವೃದ್ಧಿಮಾನ್ ಸಾಹಾ, ಜೇಸನ್ ಹೋಲ್ಡರ್, ರಷೀದ್ ಖಾನ್, ಉಮ್ರಾನ್ ಮಲಿಕ್, ಸಿದ್ಧಾರ್ಥ್ ಕೌಲ್.
ಸ್ಕೋರು ವಿವರ:
ಮುಂಬೈ ಇಂಡಿಯನ್ಸ್ 20 ಓವರ್ 235/9
(ಇಶಾನ್ ಕಿಶನ್ 84, ಸೂರ್ಯಕುಮಾರ್ ಯಾದವ್ 82 – ಜೇಸನ್ ಹೋಲ್ಡರ್ 52/4, ಅಭಿಷೇಕ್ ಶರ್ಮಾ 4/2, ರಷೀದ್ ಖಾನ್ 40/2)
ಸನ್ರೈಸರ್ಸ್ ಹೈದರಾಬಾದ್ 20 ಓವರ್ 198/8
(ಮನೀಶ್ ಪಾಂಡೆ ಅಜೇಯ 69, ಜೇಸನ್ ರಾಯ್ 34, ಅಭಿಷೇಕ್ ಶರ್ಮಾ 33 ರನ್ – ಜೇಮ್ಸ್ ನೀಶಮ್ 28/2, ಜಸ್ಪ್ರೀತ್ ಬುಮ್ರಾ 39/2, ನೇಥನ್ ಕೌಲ್ಟರ್-ನೈಲ್ 40/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ