ಶಾರ್ಜಾ, ಅ. 02: ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿದೆ. ಇಲ್ಲಿ ನಡೆದ ಐಪಿಎಲ್ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಡ್ಡಿದ 130 ರನ್ ಸವಾಲನ್ನು ಬೆನ್ನತ್ತಿದ ಡೆಲ್ಲಿ 4 ವಿಕೆಟ್ಗಳಿಂದ ಗೆದ್ದು ಬೀಗಿದೆ. ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಮುರುಟಿಹೋಗುತ್ತಿದೆ. 12 ಪಂದ್ಯಗಳಿಂದ 10 ಅಂಕಗಳನ್ನ ಹೊಂದಿರುವ ಮುಂಬೈ ತಂಡ ಇನ್ನೆರಡು ಪಂದ್ಯಗಳನ್ನ ಗೆದ್ದರೂ ಪ್ಲೇ ಆಫ್ ಪ್ರವೇಶ ಸಾಧ್ಯತೆ ಖಚಿತ ಎನ್ನುವಂತಿಲ್ಲ. ಅದೃಷ್ಟದ ಲೆಕ್ಕಾಚಾರದ ಮೇಲೆ ಮುಂಬೈ ಅವಲಂಬಿತವಾಗಬೇಕಿದೆ.
ಡೆಲ್ಲಿ ತಂಡ ಗೆಲ್ಲುವ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಸಾಧಾರಣ ಸವಾಲನ್ನ ಚೇಸ್ ಮಾಡುವ ಹಾದಿಯಲ್ಲಿ ಸಾಕಷ್ಟು ಪರದಾಟ ನಡೆಸಬೇಕಾಯಿತು. ಒಂದು ಹಂತದಲ್ಲಿ 93 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ಅವರು ಸಮಯೋಚಿತ ಆಟ ಆಡಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು. ಅದಕ್ಕೂ ಮುನ್ನ ರಿಷಭ್ ಪಂತ್ ಕೂಡ 26 ರನ್ ಗಳಿಸಿದ್ದರು. ಅಯ್ಯರ್ ಅಜೇಯ 33 ರನ್ ಗಳಿಸಿದರೆ, ಆರ್ ಅಶ್ವಿನ್ ವಿನ್ನಿಂಗ್ ರನ್ ಸೇರಿ ಅಜೇಯ 20 ರನ್ ಭಾರಿಸಿದರು.
ಇದಕ್ಕೂ ಮುನ್ನ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಡೆಲ್ಲಿ ಬೌಲರ್ಗಳ ಅಪ್ರತಿಮ ಬೌಲಿಂಗ್ಗೆ ಸಿಕ್ಕು ಮುಂಬೈ ನಿರೀಕ್ಷಿತ ಸ್ಕೋರು ದಾಖಲಿಸಲು ವಿಫಲವಾಯಿತು. ಅವೇಶ್ ಖಾನ್, ಅಕ್ಷರ್ ಪಟೇಲ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರಿಬ್ಬರಿಂದ 8 ಓವರ್ಗಳಲ್ಲಿ 36 ರನ್ಗೆ 6 ವಿಕೆಟ್ ಬಂದವು. ಇಬ್ಬರೂ ತಲಾ 3 ವಿಕೆಟ್ ಪಡೆದರು. ಆನ್ರಿಚ್ ನೋರ್ಟಿಯಾ ಕೇವಲ 1 ವಿಕೆಟ್ ಪಡೆದರೂ ರನ್ ಹರಿಯದಂತೆ ನಿಯಂತ್ರಿಸಿದರು. ಕಗಿಸೋ ರಬಡ ಮತ್ತು ಆರ್ ಅಶ್ವಿನ್ ದುಬಾರಿ ಎನಿಸಿದ್ದು ಬಿಟ್ಟರೆ ಉಳಿದಂತೆ ಡೆಲ್ಲಿ ಬೌಲಿಂಗ್ ಇಂದು ವಿಜೃಂಬಿಸಿತು.
ಮುಂಬೈ ಬ್ಯಾಟ್ಸ್ಮನ್ಗಳ ಪೈಕಿ ಕ್ವಿಂಟನ್ ಡೀ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಉಪಯುಕ್ತ ಆಟ ಆಡಿದರು. ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ ಅವರೂ ಒಂದಷ್ಟು ರನ್ ಗಳಿಸಿದ ಫಲವಾಗಿ ಮುಂಬೈ ಇನ್ನಿಂಗ್ಸ್ 129 ರನ್ವರೆಗೆ ಸಾಗಿತು. ಡೀಕಾಕ್ ಮತ್ತು ಎಸ್ ಕೆ ಯಾದವ್ 3ನೇ ವಿಕೆಟ್ಗೆ 31 ರನ್ ಸೇರಿಸಿದ್ದು ಮುಂಬೈ ಇನಿಂಗ್ಸ್ನ ಗರಿಷ್ಠ ಜೊತೆಯಾಟವಾಯಿತು.
ನಿನ್ನೆ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಗೆಲುವು ಸಾಧಿಸುತ್ತಿದ್ದಂತೆ, ಡೆಲ್ಲಿ ಕ್ಯಾಪಿಟಲ್ ಪ್ಲೇ ಆಫ್ (IPL Play Off) ಪ್ರವೇಶ ಪಡೆದಿತ್ತು. ಇವತ್ತಿನ ಗೆಲುವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಂಕವನ್ನ 18ಕ್ಕೆ ಏರಿಸಿದೆ. ಈಗ ಮೊದಲೆರಡು ಸ್ಥಾನದಲ್ಲಿ ಡೆಲ್ಲಿ ಮತ್ತು ಚೆನ್ನೈ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: Ind vs Aus- ನಿನ್ನೆ ಮೊನ್ನೆ ಸ್ಮೃತಿ, ಇವತ್ತು ದೀಪ್ತಿ ಅಮೋಘ ಆಟ; ಭಾರತದ ಮೊದಲ ಇನ್ನಿಂಗ್ಸ್ 377 ರನ್ಗೆ ಡಿಕ್ಲೇರ್
ಆರ್ಸಿಬಿ ಫ್ಯಾನ್ಸ್ಗೆ ನಿರಾಸೆ?
ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲೆಂದು ಹಾರೈಸಿದ್ದ ಆರ್ಸಿಬಿ ಫ್ಯಾನ್ಸ್ಗೆ ನಿರಾಸೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸುವುದು ಖಚಿತ ಎಂದು ಬೆಂಬಲಿಗರು ನಂಬಿದ್ದಾರೆ. ಈಗೇನಿದ್ದರೂ ಮೊದಲೆರಡು ಸ್ಥಾನ ಗಳಿಸಿ ಎಲಿಮಿನೇಟರ್ಗೆ ಅರ್ಹತೆ ಪಡೆಯುವ ಅವಕಾಶ ಆರ್ಸಿಬಿಗೆ ಇದೆ. ಇದು ಸಾಧ್ಯವಾಗಬೇಕೆಂದರೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕು, ಆರ್ಸಿಬಿ ತನ್ನ ಮುಂದಿನ ಪಂದ್ಯಗಳನ್ನ ಗೆಲ್ಲಬೇಕಿತ್ತು.
ತಂಡಗಳು:
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡೀಕಾಕ್, ಸೌರಬ್ ತಿವಾರಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ಜಯಂತ್ ಯಾದವ್, ನೇಥನ್ ಕೌಲ್ಟರ್ ನೈಲ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್.
ಸ್ಕೋರು ವಿವರ:
ಮುಂಬೈ ಇಂಡಿಯನ್ಸ್ 20 ಓವರ್ 129/8
(ಸೂರ್ಯಕುಮಾರ್ ಯಾದವ್ 33, ಕ್ವಿಂಟನ್ ಡೀಕಾಕ್ 19, ಹಾರ್ದಿಕ್ ಪಾಂಡ್ಯ 17, ಸೌತಬ್ ತಿವಾರಿ 15, ಕೃಣಾಲ್ ಪಾಂಡ್ಯ ಅಜೇಯ 13, ಜಯಂತ್ ಯಾದವ್ 11 ರನ್ – ಅವೇಶ್ ಖಾನ್ 15/3, ಅಕ್ಷರ್ ಪಟೇಲ್ 21/3)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ