HOME » NEWS » Ipl » MANISH PANDEY SHOULD HAVE TAKEN THE INITIATIVE TO SMASH A FEW BOUNDARIES SAYS VIRENDER SEHWAG ZP

IPL 2021: SRH ಸೋಲಿಗೆ ಮನೀಷ್ ಪಾಂಡೆ ಬ್ಯಾಟಿಂಗ್ ಕಾರಣ ಎಂದ ಸೆಹ್ವಾಗ್..!

ಕೋಲ್ಕತಾ ವಿರುದ್ಧ ಸನ್‌ರೈಸರ್ಸ್ ತಂಡ 12 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 100 ರನ್ ಗಳಿಸಿತ್ತು. ಕೊನೆಯ 8 ಓವರ್‌ಗಳಲ್ಲಿ ಗೆಲ್ಲಲು 88 ರನ್‌ಗಳ ಅಗತ್ಯವಿತ್ತು. ಆದರೆ 13 ನೇ ಓವರ್‌ನಲ್ಲಿ ಜಾನಿ ಬೈರ್‌ಸ್ಟೋವ್ ಔಟಾದ ಬಳಿಕ ಹೈದರಾಬಾದ್‌ನ ರನ್​ಗಳಿಕೆ ಕುಂಠಿತಗೊಂಡಿತು.

news18-kannada
Updated:April 12, 2021, 10:17 PM IST
IPL 2021: SRH ಸೋಲಿಗೆ ಮನೀಷ್ ಪಾಂಡೆ ಬ್ಯಾಟಿಂಗ್ ಕಾರಣ ಎಂದ ಸೆಹ್ವಾಗ್..!
manish pandey-virender sehwg
  • Share this:
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ನಿಧಾನ ಗತಿಯ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಎಸ್​ಆರ್​ಹೆಚ್​ ಆಟಗಾರ ಮನೀಷ್ ಪಾಂಡೆ ಅವರನ್ನು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಿಮ ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರೆ ಸನ್‌ರೈಸರ್ಸ್ ಹೈದರಾಬಾದ್ ಸೋಲುತ್ತಿರಲಿಲ್ಲ ಎಂದು ಸೆಹ್ವಾಗ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸೆಹ್ವಾಗ್, ಕೊನೆಯ 6 ಓವರ್‌ಗಳಲ್ಲಿ ಮನೀಷ್ ಪಾಂಡೆ ಕೇವಲ ಒಂದು ಸಿಕ್ಸರ್ ಬಾರಿಸಿದ್ದಾರೆ. ಹಾಗೆಯೇ ಕೊನೆಯ ಎರಡು ಮೂರು ಓವರ್‌ಗಳಲ್ಲಿ ಮನೀಷ್ ಬ್ಯಾಟ್​ನಿಂದ ಬೌಂಡರಿ ಕೂಡ ಮೂಡಿ ಬಂದಿರಲಿಲ್ಲ. ಕೊನೆಯ ಎಸೆತದಲ್ಲಿ ಅವರು ಸಿಕ್ಸ್ ಬಾರಿಸಿದ್ದರು. ಅಷ್ಟೊತ್ತಿಗೆ ಪಂದ್ಯ ಕೂಡ ಮುಗಿದಿತ್ತು. ಆದರೆ ಇದಕ್ಕೂ ಮುನ್ನವೇ ಅವರು ಒತ್ತಡವನ್ನು ತಡೆದು, ಭರ್ಜರಿ ಹೊಡೆತಗಳನ್ನು ಬಾರಿಸಬೇಕಿತ್ತು. ಅವರು ಇದನ್ನು ಮಾಡಿದ್ದರೆ, ಬಹುಶಃ ಎಸ್​ಆರ್​ಹೆಚ್​ 10 ರನ್‌ಗಳಿಂದ ಸೋಲದೇ, ಒಂದು ಅಥವಾ ಎರಡು ಎಸೆತಗಳು ಬಾಕಿ ಇರುವಂತೆ ಗೆಲ್ಲುತ್ತಿದ್ದರು ಎಂದು ವೀರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮನೀಷ್ ಬ್ಯಾಟಿಂಗ್ ಬಗ್ಗೆ ವಿಶ್ಲೇಷಿಸಿದ ಸೆಹ್ವಾಗ್, ಈ ರೀತಿಯಾಗಿ ಹಲವು ಬಾರಿ ಸಂಭವಿಸುತ್ತದೆ. ಕ್ರೀಸ್​ನಲ್ಲಿ ಸೆಟ್​ ಆಗಿದ್ದರೂ ಚೆಂಡುಗಳು ಅಂದುಕೊಂಡಂತೆ ಸಿಗುವುದಿಲ್ಲ. ಇಂತಹ ಸಮಯದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸುವುದು ಕೂಡ ಕಷ್ಟವಾಗುತ್ತದೆ. ಮನೀಷ್​ಗೂ ಅದೇ ಪರಿಸ್ಥಿತಿ ಎದುರಾಯಿತು ಎಂದು ಭಾವಿಸುತ್ತೇನೆ ಎಂದು ಸೆಹ್ವಾಗ್ ತಿಳಿಸಿದರು.

ಕೆಕೆಆರ್ ಗೆಲುವಿನ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ, ಇಯಾನ್ ಮೋರ್ಗನ್ ಅವರನ್ನು ಶ್ಲಾಘಿಸಿದರು. ಮನೀಷ್ ಪಾಂಡೆ ಮಿಡ್ ವಿಕೆಟ್ ಮತ್ತು ಲಾಂಗ್ ಆನ್ ನಂತಹ ಹೆಚ್ಚಿನ ಹೊಡೆತಗಳನ್ನು ಬಾರಿಸುತ್ತಿದ್ದರು. ಆ ಹೊತ್ತಿಗೆ ಮಿಡ್-ವಿಕೆಟ್ ಫೀಲ್ಡರ್ 30 ಯಾರ್ಡ್ ಸರ್ಕಲ್​ನಲ್ಲಿದ್ದರು. ಅಲ್ಲಿಯವರೆಗೆ ಪಾಂಡೆ ರನ್ ಗಳಿಸುತ್ತಲೇ ಇದ್ದರು. ಆದರೆ ಕ್ಯಾಪ್ಟನ್ ಮೋರ್ಗನ್ ಫೀಲ್ಡರ್ ಅವರನ್ನು ವಾಪಸ್ ಲಾಂಗ್​ಗೆ ಕಳುಹಿಸುತ್ತಿದ್ದಂತೆ ರನ್ ಗಳಿಸುವಲ್ಲಿ ತೊಂದರೆ ಅನುಭವಿಸಲು ಪ್ರಾರಂಭಿಸಿದರು. ಕೆಕೆಆರ್​ ನಾಯಕ ಫೀಲ್ಡಿಂಗ್ ಬದಲಾವಣೆಯನ್ನು ತಡ ಮಾಡಿರಬಹುದು. ಆದರೆ ಅವರ ತಂತ್ರವು ಮನೀಷ್ ಪಾಂಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು ಎಂದಿದ್ದಾರೆ.

ಕೋಲ್ಕತಾ ವಿರುದ್ಧ ಸನ್‌ರೈಸರ್ಸ್ ತಂಡ 12 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 100 ರನ್ ಗಳಿಸಿತ್ತು. ಕೊನೆಯ 8 ಓವರ್‌ಗಳಲ್ಲಿ ಗೆಲ್ಲಲು 88 ರನ್‌ಗಳ ಅಗತ್ಯವಿತ್ತು. ಆದರೆ 13 ನೇ ಓವರ್‌ನಲ್ಲಿ ಜಾನಿ ಬೈರ್‌ಸ್ಟೋವ್ ಔಟಾದ ಬಳಿಕ ಹೈದರಾಬಾದ್‌ನ ರನ್​ಗಳಿಕೆ ಕುಂಠಿತಗೊಂಡಿತು. ಡೆತ್ ಓವರ್‌ನಲ್ಲಿ ಮನೀಷ್ ಪಾಂಡೆಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಎರಡು ಓವರ್‌ಗಳಲ್ಲಿ ಕೇವಲ ಒಂದು ಸಿಕ್ಸರ್ ಮಾತ್ರ ಮೂಡಿಬಂತು.

ಇದಲ್ಲದೆ ಹೈದರಾಬಾದ್ ತಂಡ ಮತ್ತೊಂದು ತಪ್ಪು ಮಾಡಿತು. ಐಪಿಎಲ್‌ನಲ್ಲಿ ಉತ್ತಮ ಸ್ಟ್ರೈಕ್ ಹೊಂದಿರುವ ಯುವ ಆಟಗಾರ ಅಬ್ದುಲ್ ಸಮದ್​ರನ್ನು ಅಂತಿಮ ಹಂತದಲ್ಲಿ ಕಣಕ್ಕಿಳಿಸಿತು. ಇದಕ್ಕೂ ಮುನ್ನ ಬಂದ ನಬಿ 11 ಎಸೆತಗಳಲ್ಲಿ 14 ಮತ್ತು ಶಂಕರ್ 7 ಎಸೆತಗಳಲ್ಲಿ 11 ರನ್ ಗಳಿಸಿದರು. ಆದರೆ ಕೊನೆಯ ಕೆಲವೇ ಕೆಲವು ಎಸೆತಗಳು ಬಾಕಿ ಇರುವಾಗ ಕ್ರೀಸ್​ಗಿಳಿದ ಬಿಗ್ ಹಿಟ್ಟರ್ ಸಮದ್ 8 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಯುವ ಆಟಗಾರನಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಬೌಲ್​ಗಳು ಸಿಗದಿರುವುದು ಕೂಡ ಹೈದರಾಬಾದ್ ಸೋಲಿಗೆ ಕಾರಣವಾಯಿತು. ಮತ್ತೊಂದೆಡೆ 44 ಎಸೆತಗಳಲ್ಲಿ 61 ರನ್ ಗಳಿಸಿದ ಮನೀಷ್ ಪಾಂಡೆ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಮಾತ್ರ ಬಾರಿಸಿದ್ದರು. ಅದರಲ್ಲೂ ಡೆತ್ ಓವರ್​ಗಳಲ್ಲಿ ಪಾಂಡೆ ಸಿಡಿಯದಿರುವುದು ಸನ್​ರೈಸರ್ಸ್ ಹೈದರಾಬಾದ್ ಪಾಲಿಗೆ ಮುಳುವಾಯಿತು.
Published by: zahir
First published: April 12, 2021, 10:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories