KL Rahul- ಮುಂದಿನ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಸೆಳೆಯಲು ಕಾಯುತ್ತಿವೆ ಈ 3 ತಂಡಗಳು

IPL 2021- ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ಕೆಎಲ್ ರಾಹುಲ್ ಮುಂದಿನ ಐಪಿಎಲ್​ನಲ್ಲಿ ಬೇರೆ ತಂಡದಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಯಾವ ತಂಡಗಳು ರಾಹುಲ್​ಗಾಗಿ ಪ್ರಯತ್ನಿಸಬಹುದು ಎಂಬ ವಿವರ ಇಲ್ಲಿದೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡದಿಂದ ಹೊರಹೋಗುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್​ನಿಂದ ದೂರವಾಗಲು ಸ್ವತಃ ಕೆಎಲ್ ರಾಹುಲ್ ಅವರೇ ಬಯಸಿದ್ದಾರೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡ ಕೂಡ ಕೆಎಲ್ ರಾಹುಲ್ ಅವರನ್ನ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಮುಂದಿನ ಐಪಿಎಲ್​ಗೆ ಉಳಿಸಿಕೊಳ್ಳಲಾಗುವ ತಂಡದ ಆಟಗಾರರ ಪಟ್ಟಿಯಿಂದ ರಾಹುಲ್ ಅವರನ್ನ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನೇ ಇದ್ದರೂ ಪಂಜಾಬ್ ಮತ್ತು ರಾಹುಲ್ ದೂರವಾಗುವುದು ಬಹುತೇಕ ಖಚಿತವಾಗಿದೆ.

  ಕೆಎಲ್ ರಾಹುಲ್ ಬ್ಯಾಟರ್ ಆಗಿ ಐಪಿಎಲ್ 2021ನಲ್ಲಿ ಮಿಂಚಿದ್ದಾರೆ. ಕ್ಯಾಪ್ಟನ್ ಆಗಿ ನಿರಾಶೆಗೊಳಿಸಿದ್ಧಾರೆ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ಧಾರೆ. ಆದರೆ, ಪಂಜಾಬ್​ನ ಸೀಮಿತ ಬ್ಯಾಟಿಂಗ್ ಲೈನಪ್ ಇಟ್ಟುಕೊಂಡು ಅಂತಿಮ ಪಂದ್ಯದವರೆಗೂ ಪ್ಲೇ ಆಫ್ ಪ್ರವೇಶದ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಂಡಿದ್ದಕ್ಕೆ ಕೆಎಲ್ ರಾಹುಲ್ ಅವರನ್ನ ಪ್ರಶಂಸಿಸಲೇಬೇಕು. ಕೆಎಲ್ ರಾಹುಲ್ ಅವರು ಈ ಐಪಿಎಲ್​ನಲ್ಲಿ 626 ರನ್ ಗಳಿಸಿದ್ದಾರೆ. ಪಂಜಾಬ್ ತಂಡ ಪ್ಲೇ ಆಫ್ ಪ್ರವೇಶ ಮಾಡದೇ ಹೋದರೂ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಕೆಎಲ್ ರಾಹುಲ್ ಹೆಸರೇ ಈಗಲೂ ಮುಂಚೂಣಿಯಲ್ಲಿದೆ. ಮೇಲಾಗಿ ಹಲವು ಪಂದ್ಯಗಳಲ್ಲಿ ಪಂಜಾಬ್ ತಂಡ ಗೆಲುವಿನ ಅಂಚಿಗೆ ಬಂದು ಸೋತಿತ್ತು. ಇಲ್ಲಿ ರಾಹುಲ್ ಅವರ ಕ್ಯಾಪ್ಟನ್ಸಿ ವಿಫಲವಾಯಿತು ಎಂದು ಹೇಳುವವರಿದ್ದಾರೆ. ಕೆಎಲ್ ರಾಹುಲ್ ಅವರಿಗೆ ಒತ್ತಡದ ಸಂದರ್ಭಗಳನ್ನ ನಿಭಾಯಿಸಲು ಆಗುವುದಿಲ್ಲ ಎಂದು ಟೀಕಿಸುವವರಿದ್ದಾರೆ. ಆದರೆ, ಕೆಎಲ್ ರಾಹುಲ್ ತಾನೆಂಥ ಸಮರ್ಥ ಬ್ಯಾಟರ್ ಮತ್ತು ಕ್ಯಾಪ್ಟನ್ ಎಂಬುದನ್ನು ಕೊನೆಯ ಕೆಲ ಪಂದ್ಯಗಳಲ್ಲಿ ತೋರಿಸಿಕೊಟ್ಟಿದ್ದಾರೆ.

  ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಎಲ್ ರಾಹುಲ್ ಸಾಧನೆ ಬಹಳ ಗಮನಾರ್ಹವಾದುದು. ನಾಲ್ಕು ಸೀಸನ್​ಗಳಲ್ಲಿ ಅವರು ಪಂಜಾಬ್ ಪರವಾಗಿ ಆಡಿದ್ಧಾರೆ. ಅದರಲ್ಲಿ ಮೂರು ಬಾರಿ ಅವರು 600ಕ್ಕಿಂತ ಹೆಚ್ಚು ರನ್ ಕಲೆಹಾಕಿರುವುದು ಅವರ ಬ್ಯಾಟಿಂಗ್ ಸ್ಥಿರತೆಗೆ ಕಾರಣ. ಎರಡು ವರ್ಷ ಅವರು ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ನಿಭಾಯಿಸಿದ್ಧಾರೆ. ಈ ಬಾರಿ ಪಂಜಾಬ್ ತಂಡ ಕೆಎಲ್ ರಾಹುಲ್ ಅವರನ್ನ ರಿಲೀಸ್ ಮಾಡಿದಲ್ಲಿ ಕೆಲವು ತಂಡಗಳು ಸೆಳೆದುಕೊಳ್ಳಲು ಕಾಯುತ್ತಿವೆ. ಅದರಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತಾ ತಂಡಗಳು ಪ್ರಮುಖವಾದುವು.

  ಇದನ್ನೂ ಓದಿ: David Warner- ಫಾರ್ಮ್ ಕಳೆದುಕೊಂಡಿದ್ದಷ್ಟೇ ಕಾರಣವಾ? SRH ಕ್ಯಾಪ್ಟನ್ಸಿ ವಾರ್ನರ್ ಕೈತಪ್ಪಿದ್ದು ಯಾಕೆ?

  1) ಆರ್​​ಸಿಬಿ: ಕೆಎಲ್ ರಾಹುಲ್ ಈ ಮೊದಲು ರಾಯಲ್ ಚಾಲೆಂಜರ್ಸ್ ತಂಡದಲ್ಲೇ ಇದ್ದವರು. ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಇಳಿಯುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಆರ್​ಸಿಬಿಯಲ್ಲಿ ಕ್ಯಾಪ್ಟನ್ಸಿ ಕೆಲಸ ಖಾಲಿ ಇದೆ. ಆರ್​ಸಿಬಿಗೆ ರಾಹುಲ್ ಫಿಟ್ ಆಗಲಿದ್ದಾರೆ. ಮೇಲಾಗಿ ಕನ್ನಡಿಗ ಹೌದು. ಆರ್​ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಸಹಕಾರಿಯಾಗಬಹುದು. ಒಂದು ವೇಳೆ, ಕ್ಯಾಪ್ಟನ್ ಆಗಿಯಾಗಲ್ಲದಿದ್ದರೂ ವಿಕೆಟ್ ಕೀಪರ್ ಬ್ಯಾಟರ್ ಆಗಿಯೂ ರಾಹುಲ್ ಬೆಂಗಳೂರು ತಂಡಕ್ಕೆ ಮರಳಬಹುದು. ಆರ್​ಸಿಬಿಯೇನಾದರೂ ಕೆಎಸ್ ಭರತ್ ಅವರನ್ನೇ ಉಳಿಸಿಕೊಳ್ಳಲು ಬಯಸಿದರೆ ಕೆಎಲ್ ರಾಹುಲ್ ಅವರ ಆಗಮನ ಅನುಮಾನ.

  2) ಹೈದರಾಬಾದ್: ಟೂರ್ನಿ ಮಧ್ಯೆ ಡೇವಿಡ್ ವಾರ್ನರ್ ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ನಾಯಕನ ಅನ್ವೇಷಣೆಯಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಹೈದರಾಬಾದ್ ತಂಡದ ಹಣೆಬರಹ ಬದಲಿಸಬಲ್ಲ ನಾಯಕನಿಗೆ ತಲಾಶ್ ನಡೆದಿದೆ. ಅಂಥ ನಾಯಕರಲ್ಲಿ ಕೆಎಲ್ ರಾಹುಲ್ ಅವರ ಹೆಸರು ಮುಂಚೂಣಿಯಲ್ಲಿ.

  3) ಕೋಲ್ಕತಾ: ಕೆಕೆಆರ್ ತಂಡದ ಈಗಿನ ಕ್ಯಾಪ್ಟನ್ ಇಯಾನ್ ಮಾರ್ಗನ್ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಹಾಗೂ ಅವರ ಕ್ಯಾಪ್ಟನ್ಸಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್ ಹರಾಜಿನಲ್ಲಿ ಬೇರೊಬ್ಬ ಸಮರ್ಥ ನಾಯಕನನ್ನು ಕೋಲ್ಕತಾ ಹುಡುಕುವ ನಿರೀಕ್ಷೆ ಇದೆ. ಕೆಎಲ್ ರಾಹುಲ್ ಅವರಿಗೂ ಕೆಕೆಆರ್ ಪ್ರಯತ್ನಿಸುವ ಸಾಧ್ಯತೆ ದಟ್ಟವಾಗಿದೆ.

  ಇದನ್ನೂ ಓದಿ: MS Dhoni- ಟಿ20 ವಿಶ್ವಕಪ್ ತಂಡದ ಮೆಂಟರಿಂಗ್ ಆಗಿ ಧೋನಿ ಕೆಲಸವೇನು, ಸಂಭಾವನೆ ಎಷ್ಟು?

  ಮುಂದಿನ ಐಪಿಎಲ್​ನಲ್ಲಿ ಎರಡು ಹೊಸ ತಂಡಗಳು ಬರಲಿರುವ ಹಿನ್ನೆಲೆಯಲ್ಲಿ ಆ ಫ್ರಾಂಚೈಸಿಗಳು ಕೆಎಲ್ ರಾಹುಲ್ ಅವರನ್ನೂ ಮನದಲ್ಲಿಟ್ಟುಕೊಂಡು ಪ್ರಯತ್ನಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಕೆಲ ಫ್ರಾಂಚೈಸಿಗಳು ಕೆಎಲ್ ರಾಹುಲ್ ಅವರನ್ನ ಸಂಪರ್ಕಿಸಿ ಮಾತನಾಡಲು ಉತ್ಸುಕತೆ ತೋರಿರುವುದು ತಿಳಿದುಬಂದಿದೆ.
  Published by:Vijayasarthy SN
  First published: