KS Bharat- ಕೊನೆ ಬಾಲ್ ಸಿಕ್ಸರ್ ಹೊಡೆಯುವ ಮುನ್ನ ಮ್ಯಾಕ್ಸ್​ವೆಲ್ ಹೇಳಿದ ಮಾತು ಸ್ಮರಿಸಿದ ಭರತ್

IPL 2021- ಕೊನೆಯ ಓವರ್​ನಲ್ಲಿ 15 ರನ್ ಗಳಿಸಬೇಕಾದ ಸನ್ನಿವೇಶದಲ್ಲೂ ದೃತಿಗೆಡದೆ ತಂಡವನ್ನ ಗೆಲುವಿನ ದಡ ಮುಟ್ಟಿಸಿದ ಉದಯೋನ್ಮುಖ ಪ್ರತಿಭೆ ಕೆಎಸ್ ಭರತ್ ಆ ಕ್ಷಣಗಳ ಅನುಭವವನ್ನ ಹಂಚಿಕೊಂಡಿದ್ದಾರೆ.

ಕೆಎಸ್ ಭರತ್

ಕೆಎಸ್ ಭರತ್

 • Share this:
  ದುಬೈ: ಈ ಸೀಸನ್​ನ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಭಾರತೀಯ ಯುವ ಸ್ಟಾರ್ ಬ್ಯಾಟರ್ ದೊರಕಿದ್ದಾರೆ. ಆಂಧ್ರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೋನಾ ಶ್ರೀಕರ್ ಭರತ್ ತಮ್ಮ ಅದ್ಭುತ ಪ್ರತಿಭೆ ಮೂಲಕ ಆರ್​ಸಿಬಿಗೆ ಮತ್ತೊಬ್ಬ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಫಿನಿಶರ್ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಏಳು ವಿಕೆಟ್ ಕೈಲಿದ್ದರೂ ಸೋಲಿನ ಸುಳಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ಕೊನೆಯ ಬಾಲ್​ನಲ್ಲಿ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟಿದ್ದಾರೆ ಕೆಎಸ್ ಭರತ್. 52 ಬಾಲ್​ನಲ್ಲಿ ಅಜೇಯ 78 ರನ್ ಸಿಡಿಸಿ ಮ್ಯಾಕ್ಸ್​ವೆಲ್ ಅವರಂಥ ದೈತ್ಯ ಪ್ರತಿಭೆಯ ಉಪಸ್ಥಿತಿಯೂ ನಗಣ್ಯವೆನಿಸುವಂತೆ ಮಾಡಿದ್ದಾರೆ. ಅತೀವ ಒತ್ತಡದ ಸಂದರ್ಭದಲ್ಲೂ ಧೃತಿಗೆಡದೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಭರತ್ ಆಟಕ್ಕೆ ಪ್ರತಿಯೊಬ್ಬರೂ ಮಾರು ಹೋಗಿದ್ದಾರೆ.

  ತಿರುವು ಕೊಟ್ಟ 19ನೇ ಓವರ್: ಗೆಲ್ಲಲು 165 ರನ್ ಗುರಿ ಹೊತ್ತ ಆರ್​ಸಿಬಿಯನ್ನ ಭರತ್ ಮತ್ತು ಮ್ಯಾಕ್ಸ್​ವೆಲ್ ಸುಲಭ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆಗ ತಿರುವು ಸಿಕ್ಕಿದ್ದು ನೋರ್ಟಿಯಾ ಎಸೆದ 19ನೇ ಓವರ್. ಆರ್​ಸಿಬಿಗೆ ಬೇಕಿದ್ದಿದು 2 ಓವರ್​ನಲ್ಲಿ 19 ರನ್ ಮಾತ್ರ. ಕ್ರೀಸ್​ನಲ್ಲಿ ಇದ್ದದ್ದು ಫಾರ್ಮ್​ನಲ್ಲಿದ್ದ ಇಬ್ಬರು ಬ್ಯಾಟರ್ಸ್. ಕೈಯಲ್ಲಿ ಇನ್ನೂ 7 ವಿಕೆಟ್ ಇದೆ. ಯಾವ ತಂಡ ಬೇಕಾದರೂ ಸುಲಭವಾಗಿ ಗೆಲುವಿನ ದಡ ಮುಟ್ಟುವ ಸಾಧ್ಯತೆ ಇದೆ ಎನಿಸಿತ್ತು. ಆದರೆ, ನೋರ್ಟಿಯಾ ಎಸೆದ ಆ ಓವರ್​ನಲ್ಲಿ ಕೇವಲ 5 ರನ್ ಬಂತು. ಆ ಓವರ್​ನಲ್ಲಿ ಭರತ್ 3 ಬಾಲ್ ಎದುರಿಸಿ 2 ರನ್ ಗಳಿಸಿದರೆ, ಮ್ಯಾಕ್ಸ್​ವೆಲ್ ಕೂಡ 3 ಬಾಲ್ ಎದುರಿಸಿ 2 ರನ್ ಮಾತ್ರ ಗಳಿಸಿದ್ದರು.

  ಕೊನೆ ಓವರ್​ಗೆ ಮುನ್ನ ಮ್ಯಾಕ್ಸ್​ವೆಲ್, ಭರತ್ ಮಧ್ಯೆ ನಡೆದ ಮಾತುಕತೆ ಏನಾಗಿತ್ತು?:

  ಕೊನೆಯ ಓವರ್ ಅವೇಶ್ ಖಾನ್ ಅವರದ್ದು. ಆ ಓವರ್​ನಲ್ಲಿ ಆರ್​ಸಿಬಿಗೆ ಗೆಲ್ಲಲು ಬೇಕಿದ್ದದ್ದು 15 ರನ್. ಆಗ ಬೆಂಗಳೂರು ಪಾಳಯದಲ್ಲಿ ಆತಂಕದ ವಾತಾವರಣ ಮನೆಮಾಡಿತ್ತು. ಅವೇಶ್ ಖಾನ್ ಸಾಮಾನ್ಯ ಬೌಲರ್ ಆಗಿರಲಿಲ್ಲ. ಈ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅವರು. ಸ್ಟ್ರೈಕ್​ನಲ್ಲಿ ಮ್ಯಾಕ್ಸ್​ವೆಲ್ ಬದಲು ಭರತ್ ಇದ್ದರು. ಈ ಓವರ್​ಗೆ ಮುನ್ನ ಭರತ್ ಮತ್ತು ಮ್ಯಾಕ್ಸ್​ವೆಲ್ ಯಾವ ರೀತಿ ಆಡಬೇಕೆಂದು ಚರ್ಚೆ ನಡೆಸುತ್ತಾರೆ. ಯುವ ಆಟಗಾರನಿಗೆ ಮ್ಯಾಕ್ಸ್​ವೆಲ್ ಕೆಲ ಸಲಹೆಯನ್ನೂ ಕೊಡುತ್ತಾರೆ.

  “ಕೊನೆಯ ಓವರ್… ಯಾವ್ಯಾವ ಕಡೆ ಚೆಂಡನ್ನು ಹೊಡೆಯಬಹುದು ಎಂದು ನಾನು ಮತ್ತು ಮ್ಯಾಕ್ಸಿ ಮಾತನಾಡಿದೆವು. ಚೆಂಡನ್ನ ಗಮನಿಸಿ ಬ್ಯಾಟ್ ಮಾಡುವಂತೆ ಮ್ಯಾಕ್ಸಿ ನನಗೆ ಸಲಹೆ ನೀಡಿದರು. ಕೊನೆಯ 3 ಬಾಲ್ ಇದ್ದಾಗ ನಾನು ಓಡಬೇಕೋ ಬೇಡವೋ ಎಂದು ಅವರನ್ನ ಕೇಳಿದೆ. ಅದಕ್ಕೆ ಅವರು, ಬೇಡ, ನೀವೇ ಫಿನಿಶ್ ಮಾಡಬಲ್ಲಿರಿ ಎಂದರು. ಅದು ನನಗೆ ಬಹಳ ಆತ್ಮವಿಶ್ವಾಸ ನೀಡಿತು” ಎಂದು ಕೆಎಸ್ ಭರತ್ ಹೇಳುತ್ತಾರೆ.
  ORANGE CAP:
  ಕೊನೆಯ ಮೂರು ಬಾಲ್​ನಲ್ಲಿ ಆರ್​ಸಿಬಿಗೆ 8 ರನ್ ಬೇಕಿರುತ್ತದೆ. ಭರತ್ ಸ್ಟ್ರೈಕ್​ಗೆ ಬಂದಿರತ್ತಾರೆ. ಅವೇಶ್ ಖಾನ್ ಎಸೆದ ಚೆಂಡನ್ನ ಹೊಡೆಯಲು ಹೋಗಿ ಮಿಸ್ ಮಾಡಿಕೊಳ್ಳುತ್ತಾರೆ. ಆಗ ಭರತ್ ಓಡಿ ಮ್ಯಾಕ್ಸ್​ವೆಲ್​ಗೆ ಸ್ಟ್ರೈಕ್ ಕೊಡಲು ಪ್ರಯತ್ನಿಸುತ್ತಾರೆ. ಆದರೆ, ಮ್ಯಾಕ್ಸ್​ವೆಲ್ ಬೇಡ ಎಂದು ವಾಪಸ್ ಕಳುಹಿಸುತ್ತಾರೆ. 2 ಬಾಲ್​ಗೆ 8 ರನ್ ಬೇಕು. ಐದನೇ ಎಸೆತವನ್ನ ಅವೇಶ್ ಖಾನ್ ಯಾರ್ಕರ್ ಹಾಕುತ್ತಾರೆ. ಅದನ್ನ ಡಿಗ್ ಮಾಡುವ ಭರತ್ ಎರಡು ರನ್ ಪಡೆಯುತ್ತಾರೆ. ಆಗ ಒಂದು ಬಾಲ್​ನಲ್ಲಿ ಆರ್​ಸಿಬಿಗೆ 6 ರನ್ ಬೇಕಿರುತ್ತದೆ. ಆಗ ಅವೇಶ್ ಖಾನ್ ಲೆಗ್ ಸೈಡ್​ನಲ್ಲಿ ವೈಡ್ ಹಾಕುತ್ತಾರೆ. ಆರ್​ಸಿಬಿಗೆ ಫ್ರೀ ಆಗಿ ಒಂದು ರನ್ ಸಿಗುತ್ತದೆ. ಒಂದು ಬಾಲ್​ನಲ್ಲಿ 5 ರನ್ ಅಗತ್ಯ ಬೀಳುತ್ತದೆ. ಬೌಂಡರಿ ಹೊಡೆದರೆ ಸ್ಕೋರು ಸಮ ಮಾಡಿಕೊಳ್ಳುವ ಅವಕಾಶ. ಹಿಂದಿನ ಬಾಲ್​ನಲ್ಲಿ ವೈಡ್ ಮಾಡಿದ್ದ ಅವೇಶ್ ಖಾನ್ ಕೊನೆಯ ಬಾಲ್​ನಲ್ಲಿ ಧೃತಿಗೆಟ್ಟವರಂತೆ ಫುಲ್ ಟಾಸ್ ಹಾಕುತ್ತಾರೆ. ಭರತ್ ಲಾಂಗ್ ಆನ್ ಕಡೆ ಭರ್ಜರಿ ಸಿಕ್ಸರ್ ಎತ್ತುತ್ತಾರೆ. ಕೊನೆಯ ಬಾಲ್​ನಲ್ಲಿ ಸಿಕ್ಸರ್ ಎತ್ತಿ ಗೆದ್ದ ಪಂದ್ಯಗಳಲ್ಲಿ ಇದೂ ಅವಿಸ್ಮರಣೀಯವಾಗಿ ಉಳಿಯುವಂತೆ ಆಗಿದೆ.

  ಇದನ್ನೂ ಓದಿ: Gautam Gambhir| ಕೊಹ್ಲಿ-ರೋಹಿತ್​ಗಿಂತ ಕೆ.ಎಲ್​. ರಾಹುಲ್​ ಉತ್ತಮ ಬ್ಯಾಟ್ಸ್​ಮನ್; ಗೌತಮ್ ಗಂಭೀರ್

  ಲೆಕ್ಕ ಸರಳಗೊಳಿಸಿದೆ: ಕೊನೆಯ ಓವರ್​ನಲ್ಲಿ ಒತ್ತಡಕ್ಕೆ ಒಳಗಾಗದೇ ಭರತ್ ಆಡಿದ ರೀತಿ ಅಚ್ಚರಿ ಹುಟ್ಟಿಸಿತ್ತು. ಬಹಳ ಯೋಚಿಸದೇ ಆಡಿದ್ದರಿಂದ ಇದು ಸಾಧ್ಯವಾಯಿತು ಎನ್ನುತ್ತಾರೆ ಭರತ್. “ಸದ್ಯ ಹಾಕಲಾಗುವ ಬಾಲ್ ಬಗ್ಗೆ ಮಾತ್ರ ನಾನು ಯೋಚಿಸುತ್ತಿದ್ದೆ. ಬೇರೆ ವಿಚಾರಗಳನ್ನ ತಲೆಯಿಂದ ಆಚೆ ಸರಿಸಿ ಲೆಕ್ಕಾಚಾರವನ್ನ ಸರಳಗೊಳಿಸಿದೆ. ಒಂದು ತಂಡವಾಗಿ ನಾವು ಚೆನ್ನಾಗಿ ಆಡಿ ಗೆಲುವು ಸಾಧಿಸಿದೆವು” ಎಂಬುದು ಭರತ್ ಅನಿಸಿಕೆ.

  ಫಾಸ್ಟ್ ಬೌಲಿಂಗ್ ಅಂದರೆ ಭರತ್​​ಗೆ ಸುಗ್ಗಿ:

  ಕೆಎಸ್ ಭರತ್ ಅವರಿಗೆ ಫಾಸ್ಟ್ ಬೌಲಿಂಗ್ ಎದುರು ಆಡುವುದು ಬಲು ಇಷ್ಟವಂತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಗಿಸೋ ರಬಡ, ಆನ್ರಿಕ್ ನೋರ್ಟಿಯಾ ಮತ್ತು ಅವೇಶ್ ಖಾನ್ ಈ ಮೂವರು ಮಹಾನ್ ವೇಗಿಗಳಿದ್ದಾರೆ. ಹೀಗಾಗಿ ಭರತ್ ಸುಲಲಿತವಾಗಿ ಇನ್ನಿಂಗ್ಸ್ ಕಟ್ಟಿದಂತಿತ್ತು. ಫಾಸ್ಟ್ ಬೌಲ್ ಅನ್ನ ತಳ್ಳಿದರೂ ಸಾಕು ಬೌಂಡರಿ ಗೆರೆ ದಾಟಿಸಬಹುದು ಎನ್ನುತ್ತಾರೆ ಅವರು. “ವೇಗವಾಗಿ ಬೌಲಿಂಗ್ ಮಾಡುವವರನ್ನ ನಾನು ಇಷ್ಟಪಡುತ್ತೇನೆ. ಯಾಕೆಂದರೆ, ಬಲವಾಗಿ ಹೊಡೆಯುವ ಬದಲು ಸ್ವಲ್ಪ ತಳ್ಳಿದರೂ ಸಾಕಾಗುತ್ತದೆ. ಫಾಸ್ಟ್ ಬೌಲಿಂಗ್ ಎದುರಿಸುವ ಕೆಲಸ ಬಹಳ ಆಸಕ್ತಿ ಮೂಡಿಸಿತ್ತು. ಆ ಸವಾಲನ್ನು ನಾನು ಖುಷಿಯಾಗಿ ಎದುರಿಸಿದೆ” ಎಂದು ಭರತ್ ಹೇಳಿದ್ದಾರೆ.
  SCHEDULE TIME TABLE:
  ಆರ್​ಸಿಬಿ ತಂಡ ಸೋಮವಾರ (ಅ. 11) ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನ ಎದುರಿಸಲಿದೆ. ಅದಕ್ಕೆ ಮುನ್ನ ನಾಳೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಕ್ವಾಲಿಫಯರ್​ನಲ್ಲಿ ಹಣಾಹಣಿ ನಡೆಸಲಿವೆ. ಈ ಕ್ವಾಲಿಫಯರ್​ನಲ್ಲಿ ಗೆದ್ದವರು ನೇರ ಫೈನಲ್ ಪ್ರವೇಶಿಸುತ್ತಾರೆ. ಸೋತವರು ಎರಡನೇ ಕ್ವಾಲಿಫಯರ್​ನಲ್ಲಿ ಆಡುತ್ತಾರೆ. ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದವರು ಎರಡನೇ ಕ್ವಾಲಿಫಯರ್​ಗೆ ಅರ್ಹತೆ ಪಡೆಯುತ್ತಾರೆ. ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ.
  Published by:Vijayasarthy SN
  First published: