Virat Kohli- ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಡಲು ಕುಟುಂಬ ಕಾರಣ ಇರಬಹುದು: ಡೇಲ್ ಸ್ಟೇನ್

IPL 2021- ವಿರಾಟ್ ಕೊಹ್ಲಿ ಆರ್​ಸಿಬಿಯಲ್ಲೇ ಇರುತ್ತಾರೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಅವರು ಡೆಲ್ಲಿಯವರಾದ್ದರಿಂದ ಅಂತಿಮವಾಗಿ ಡೆಲ್ಲಿ ತಂಡ ಸೇರಿಕೊಂಡರೂ ಆಗಬಹುದು ಎಂದು ಡೇಲ್ ಸ್ಟೇನ್ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಕುಟುಂಬ

ವಿರಾಟ್ ಕೊಹ್ಲಿ ಕುಟುಂಬ

 • Cricketnext
 • Last Updated :
 • Share this:
  ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಅವರು ಅಂತರರಾಷ್ಟ್ರೀಯ ಟಿ20 ಮತ್ತು ಆರ್​ಸಿಬಿಯ (RCB) ಐಪಿಎಲ್ ಟಿ20 ತಂಡಗಳ ನಾಯಕ ಸ್ಥಾನಕ್ಕೆ ವಿದಾಯ ಹೇಳುವ ನಿರ್ಧಾರ ಪ್ರಕಟಿಸಿದ್ಧಾರೆ. ಬ್ಯಾಟಿಂಗ್​ನತ್ತ ಗಮನ ಹರಿಸುವುದು ಅವರ ಈ ನಿರ್ಧಾರಕ್ಕೆ ಕಾರಣ. ಅದನ್ನ ಅವರೇ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಡೇಲ್ ಸ್ಟೇನ್ (Dale Steyn) ಅವರು ಕೊಹ್ಲಿಯ ಕ್ಯಾಪ್ಟನ್ಸಿ ನಿರ್ಧಾರದ ಹಿಂದೆ ಇನ್ನೂ ಕೆಲ ಕಾರಣಗಳಿರಬಹುದು ಎಂದು ಅಂದಾಜಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಹಿಂದೆ ಸರಿಯುವ ಕೊಹ್ಲಿಯ ನಿರ್ಧಾರದ ಹಿಂದೆ ಅವರ ಕುಟುಂಬ ಕಾರಣ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ. ಐಪಿಎಲ್ ತಂಡವೊಂದನ್ನ ಮುನ್ನಡೆಸುವಾಗ ಎದುರಾಗುವ ಒತ್ತಡದ ಜೊತೆಗೆ ವಿರಾಟ್ ಕೊಹ್ಲಿ ಅವರ ಹೊಸ ಸಂಸಾರದ ಜವಾಬ್ದಾರಿಯೂ ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.

  “ಆರ್​ಸಿಬಿ ಜೊತೆ ಮೊದಲಿನಿಂದಲೂ ವಿರಾಟ್ ಕೊಹ್ಲಿ ಇದ್ದಾರೆ. ಆದರೆ, ಜೀವನ ಸಾಗುತ್ತಾ ಹೋದಂತೆ ನೀವು ಆದ್ಯತೆಗಳನ್ನ ಬದಲಿಸುತ್ತಾ ಹೋಗಬಹುದು. ಅವರಿಗೆ ಈಗ ಪುಟ್ಟ ಕುಟುಂಬ ಇದೆ. ಕ್ಯಾಪ್ಟನ್ಸಿಯು ಅತಿ ಭಾರ ಎನಿಸಬಹುದು. ನಿಮ್ಮ ವೈಯಕ್ತಿಕ ಜೀವನವೂ ನಿಮ್ಮ ಮೇಲೆ ಭಾರವಾಗಬಹುದು” ಎಂದು ಇಎಸ್​ಪಿಎನ್ ಕ್ರಿಕ್ ಇನ್ಫೋ ವೆಬ್​ಸೈಟ್​ನ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಾ ಇದನ್ನ ಹೇಳಿದ್ದಾರೆ.

  ಕೊಹ್ಲಿ ನಿರ್ಧಾರ ಸರಿ:

  ಹಾಗೆಯೇ, ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವ ವಿರಾಟ್ ಕೊಹ್ಲಿ ನಿರ್ಧಾರವನ್ನ ಸ್ಟೇನ್ ಸ್ವಾಗತ ಕೂಡ ಮಾಡಿದ್ದಾರೆ. “ನಾಯಕತ್ವದ ಕೆಲ ಜವಾಬ್ದಾರಿಯನ್ನ ಕೈಬಿಡುವುದರಿಂದ ಬ್ಯಾಟಿಂಗ್ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ವೃತ್ತಿ ಜೀವನದ ಈ ಸಂದರ್ಭದಲ್ಲಿ ಇದು ಒಳ್ಳೆಯ ನಿರ್ಧಾರ ಆಗಿರಬಹುದು” ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

  “ನಮಗೆ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಅವರು ಅದ್ಭುತ ನಾಯಕರು. ಅವರ ವೈಯಕ್ತಿಕ ಸಾಧನೆಗಳೇ ಇದನ್ನ ಸಾರಿ ಹೇಳುತ್ತವೆ. ಅವರು ಏನು ಮಾಡಬೇಕು ಎಂದು ಅವರೇ ಹೇಳಬೇಕಷ್ಟೇ. ಟಿ20 ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಇದು ಒಳ್ಳೆಯ ನಿರ್ಧಾರ ಆಗಿರಬಹುದು. ಉಳಿದ ಐಪಿಎಲ್ ಮತ್ತು ವಿಶ್ವಕಪ್​ನಲ್ಲಿ ನಾವು ವಿರಾಟ್ ಕೊಹ್ಲಿ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು” ಎಂದು ಸ್ಟೇನ್ ಅಭಿಪ್ರಾಯಪಟ್ಟಿದ್ಧಾರೆ.

  ಇದನ್ನೂ ಓದಿ: Kevin Pietersen- ನರೇಂದ್ರ ಮೋದಿಯನ್ನ ಹೀರೋ ಎಂದು ಹೊಗಳಿದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್

  ಟೀಕೆಗಳಿಂದ ತಪ್ಪಿಸಿಕೊಳ್ಳಲು ಈ ನಿರ್ಧಾರವಾ?:

  ಈ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ ಕಳಪೆ ಪ್ರದರ್ಶನ ತೋರಿದರೆ ಅದರಿಂದ ಉದ್ಭವವಾಗುವ ಟೀಕೆಗಳಿಂದ ತಪ್ಪಿಸಿಕೊಳ್ಳಲು ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದಕ್ಕೆ ಸರಿಯುವ ಮಾತುಗಳನ್ನಾಡುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೆಲವೆಡೆಯಿಂದ ಕೇಳಿಬರುತ್ತಿವೆ. ಡೇಲ್ ಸ್ಟೇನ್ ಅವರೂ ಈ ಸಾಧ್ಯತೆಯನ್ನ ತಳ್ಳಿಹಾಕಲಿಲ್ಲ. “ಭವಿಷ್ಯದಲ್ಲಿ ಉದ್ಭವವಾಗುವ ಬೆಂಕಿಯನ್ನ ನಂದಿಸಲು ಅವರು ಪ್ರಯತ್ನಿಸುತ್ತಿರಬಹುದು. ಭಾರತ ತಂಡದ ನಾಯಕತ್ವ ತ್ಯಜಿಸಿದ ಬಳಿಕ ಅವರು ಐಪಿಎಲ್​ನಲ್ಲಿ ಒಂದೆರಡು ಪಂದ್ಯಗಳಲ್ಲಿ ವಿಫಲರಾದರೆ ಜನರು ಆರ್​ಸಿಬಿ ನಾಯಕತ್ವವನ್ನೂ ಕೈಬಿಡಬೇಕೆಂದು ಕೂಗುತ್ತಾರೆ. ಆ ಪ್ರಶ್ನೆ ಉದ್ಭವವಾಗುವ ಮುನ್ನವೇ, ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯುವ ಆಲೋಚನೆ ನನಗಿದೆ ಎಂದು ಕೊಹ್ಲಿ ಸಂದೇಶ ರವಾನಿಸಿದ್ದಾರೇನೋ ಎಂದನಿಸುತ್ತದೆ” ಎಂದು ಸ್ಟೇಲ್ ಅನುಮಾನ ವ್ಯಕ್ತಪಡಿಸಿದ್ಧಾರೆ.

  ಇದನ್ನೂ ಓದಿ: KKR vs MI- ಅಯ್ಯರ್, ತ್ರಿಪಾಠಿ ಆಕರ್ಷಕ ಬ್ಯಾಟಿಂಗ್; ಮುಂಬೈ ವಿರುದ್ಧವೂ ಗೆದ್ದ ಕೆಕೆಆರ್

  ಕೊಹ್ಲಿ ಆರ್​​ಸಿಬಿಯಲ್ಲೇ ಇರುತ್ತಾರಾ ಗೊತ್ತಿಲ್ಲ:

  ವಿರಾಟ್ ಕೊಹ್ಲಿ ತಾನು ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿದರೂ ಆ ತಂಡದ ಸದಸ್ಯನಾಗಿ ಕೊನೆಯ ಐಪಿಎಲ್ ಪಂದ್ಯವನ್ನ ಆಡುತ್ತೇನೆ ಎಂದು ಹೇಳಿದ್ದರು. ಆ ಬಗ್ಗೆಯೂ ಸ್ಟೇನ್ ಅನುಮಾನ ವ್ಯಕ್ತಪಡಿಸುತ್ತಾರೆ. “ನೀವು ಎಷ್ಟೇ ಒಳ್ಳೆಯ ಆಟಗಾರನಾಗಲಿ, ತಂಡದಲ್ಲಿ ಉಳಿಯುವುದು ಬಿಡುವುದು ಫ್ರಾಂಚೈಸಿ ಮಾಲೀಕರ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಕ್ರಿಸ್ ಗೇಲ್ ಅವರು ಆರ್​ಸಿಬಿ ಬಿಟ್ಟು ಬರಬೇಕಾಯಿತು. ಡೇವಿಡ್ ಬೆಕೆಮ್ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್​ನಲ್ಲಿ ಬಹುತೇಕ ವೃತ್ತಿಜೀವನ ಸವೆಸಿದರೂ ಕೊನೆಗೆ ಆ ಕ್ಲಬ್ ಅನ್ನು ಬಿಟ್ಟು ಬೇರೆ ತಂಡಗಳಲ್ಲಿ ಅವಕಾಶ ಅರಸಬೇಕಾಯಿತು. ಕ್ರಿಸ್ಟಿಯಾನೋ ರೊನಾಲ್ಡೋ ಇತ್ತೀಚೆಗೆ ಮತ್ತೊಮ್ಮೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್​ಗೆ ವಾಪ್ ಬಂದಿದ್ದಾರೆ…. ಯಾರಿಗೆ ಗೊತ್ತು ವಿರಾಟ್ ಕೊಹ್ಲಿ ದೆಹಲಿವರಾಗಿದ್ದು, ಅವರು ಅಂತಿಮವಾಗಿ ಡೆಲ್ಲಿ ಫ್ರಾಂಚೈಸಿಗೆ ಹೋದರೂ ಹೋಗಬಹುದು” ಎಂದು ಸ್ಟೇನ್ ಹೇಳಿದ್ಧಾರೆ.

  ದಕ್ಷಿಣ ಆಫ್ರಿಕಾದ ಅಪ್ರತಿಮ ವೇಗದ ಬೌಲರ್​ಗಳಲ್ಲಿ ಒಬ್ಬರಾಗಿರುವ ಡೇಲ್ ಸ್ಟೇನ್ ಅವರು ಕಳೆದ ತಿಂಗಳಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಇನ್ನು, ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ಧಾರೆ. ಹಾಗೆಯೇ, ಈ ಐಪಿಎಲ್ ಬಳಿಕ ಆರ್​ಸಿಬಿ ಕ್ಯಾಪ್ಟನ್ಸಿಯನ್ನೂ ತೊರೆಯುವುದಾಗಿ ತಿಳಿಸಿದ್ದಾರೆ.
  Published by:Vijayasarthy SN
  First published: