ದುಬೈ: ಗುರುವಾರ ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮುಗಿದ ಬಳಿಕ ಸ್ಟೇಡಿಯಂನ ಒಂದು ಮೂಲೆಯಲ್ಲಿ ಚೆನ್ನೈನ ವೇಗದ ಬೌಲರ್ ದೀಪಕ್ ಚಾಹರ್ ಅವರು ತನ್ನ ಸ್ನೇಹಿತೆಗೆ ಮದುವೆಗೆ ಪ್ರೊಪೋಸ್ ಮಾಡಿದ ಘಟನೆ ನಡೆಯಿತು. ಆ ಘಟನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ದೀಪಕ್ ಚಾಹರ್ ಪ್ರೊಪೋಸ್ ಮಾಡಿದ ಆ ಹುಡುಗಿ ಹೆಸರು ಜಯಾ ಭಾರದ್ವಜ್. ಪಂದ್ಯ ಮುಗಿದ ಬಳಿಕ ಪ್ರೆಸೆಂಟೇಶನ್ ಕಾರ್ಯಕ್ರಮಕ್ಕೆ ಎಲ್ಲರೂ ಅಣಿಯಾಗುತ್ತಿರುವಾಗಲೇ ದೀಪಕ್ ಚಾಹರ್ ತನ್ನ ಗರ್ಲ್ ಫ್ರೆಂಡ್ ಬಳಿ ಹೋಗಿ ಒಂದು ಮಂಡಿಯೂರಿ ಪ್ರೊಪೋಸ್ ಮಾಡಿದ್ದಾರೆ. ಅದಕ್ಕೆ ಜಯಾ ಭಾರದ್ವಜ್ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಆಕೆ ದೀಪಕ್ ಪ್ರೊಪೋಸ್ಗೆ ತತ್ಕ್ಷಣವೇ ಓಕೆ ಅಂದಿದ್ದಾರೆ. ಬಳಿಕ ಇಬ್ಬರೂ ಕೆಲವಾರು ಬಾರಿ ತಬ್ಬಿಕೊಂಡು ಆನಂದತುಂದಿಲರಾಗಿದ್ದಾರೆ.
29 ವರ್ಷದ ದೀಪಕ್ ಚಾಹರ್ ಅವರ ಈ ಗರ್ಲ್ ಫ್ರೆಂಡ್ ಜಯಾ ಭಾರದ್ವಜ್ ಅವರು ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನ ಜನಪ್ರಿಯ ಸ್ಪರ್ಧಾಳುವಾಗಿದ್ದ ಸಿದ್ಧಾರ್ಥ್ ಭಾರದ್ವಜ್ ಅವರ ಸಹೋದರಿ ಎನ್ನಲಾಗಿದೆ. ಈಕೆ ದೆಹಲಿಯ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ಕೆಲ ವರ್ಷಗಳಿಂದಲೂ ಇಬ್ಬರೂ ಪರಿಚಿತರಿದ್ದಾರೆ. ಚಾಹರ್ ಜೊತೆ ಜಯಾ ಕೂಡ ಐಪಿಎಲ್ ಪಂದ್ಯ ವೀಕ್ಷಿಸಲು ಯುಎಇಗೆ ಆಗಮಿಸುವ ಮುನ್ನವೇ ಇಬ್ಬರ ಮನಸು ಒಂದಾಗಿತ್ತು. ಐಪಿಎಲ್ ಪಂದ್ಯದ ವೇಳೆ ತನ್ನ ಮನದನ್ನೆಗೆ ಪ್ರೊಪೋಸ್ ಮಾಡುವ ಐಡಿಯಾವನ್ನು ದೀಪಕ್ ಚಾಹರ್ ತಮ್ಮ ನಾಯಕ ಎಂಎಸ್ ಧೋನಿ ಅವರಲ್ಲಿ ಇಟ್ಟಿದ್ದರು. ಅದಕ್ಕೆ ಧೋನಿ ಅವರು ಪ್ಲೇ ಆಫ್ಗೆ ಮುಂಚೆಯೇ ಪ್ರೊಪೋಸ್ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ, ಚಾಹರ್ ಅವರು ಚೆನ್ನೈನ ಕೊನೆಯ ಲೀಗ್ ಪಂದ್ಯವನ್ನು ತಮ್ಮ ಪ್ರಿಯತಮೆಯ ಪ್ರೊಪೋಸ್ಗೆ ಅಯ್ಕೆ ಮಾಡಿಕೊಂಡರೆನ್ನಲಾಗಿದೆ.
ತಮ್ಮ ಲವ್ ಪ್ರೊಪೋಸ್ ಘಟನೆಯ ವಿಡಿಯೋ ಮತ್ತು ಫೋಟೋವನ್ನು ದೀಪಕ್ ಚಾಹರ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡು ಪೋಸ್ಟ್ ಹಾಕಿದ ಅವರು, ಮೊದಲ ಪೋಸ್ಟ್ನಲ್ಲಿ ಅವರು ಪ್ರೊಪೋಸ್ ಮಾಡುತ್ತಿರುವ ಒಂದು ಫೋಟೋ ಹಾಕಿದ್ಧಾರೆ. ಇನ್ನೊಂದು ಪೋಸ್ಟ್ನಲ್ಲಿ ವಿಡಿಯೋ ಕೂಡ ಹಾಕಿದ್ದಾರೆ. ಅವರ ವಿಡಿಯೋ ಪೋಸ್ಟ್ಗೆ 24 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ಧಾರೆ. 10 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಇಬ್ಬರು ಲವ್ ಬರ್ಡ್ಗಳು ಐಪಿಎಲ್ ಮುಗಿದ ಬಳಿಕ ಭಾರತಕ್ಕೆ ಮರಳಿ ನಂತರ ವಿವಾಹ ನಿಶ್ಚಯ ಮಾಡಿಕೊಳ್ಳುವ ಸಾಧ್ಯತೆ ಇದೆ.
View this post on Instagram
ವೇಗದ ಬೌಲರ್ ಆಗಿರುವ ದೀಪಕ್ ಚಾಹರ್ ಅವರು ಟೀಮ್ ಇಂಡಿಯಾದ ಕ್ರಿಕೆಟಿಗರೂ ಹೌದು. 2018ರಲ್ಲೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಐದು ಏಕದಿನ ಹಾಗೂ 14 ಟಿ20 ಪಂದ್ಯಗಳನ್ನ ಆಡಿರುವ ಅವರು ಒಟ್ಟು 26 ವಿಕೆಟ್ಗಳನ್ನ ಪಡೆದಿದ್ದಾರೆ. ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಎನಿಸಿದ್ಧಾರೆ.
ಇದನ್ನೂ ಓದಿ: MI vs SRH- ಪ್ಲೇ ಆಫ್ ಪ್ರವೇಶಕ್ಕೆ ಮುಂಬೈ ಎಷ್ಟು ಅಂತರದಿಂದ ಗೆಲ್ಲಬೇಕು, ಇಲ್ಲಿದೆ ಲೆಕ್ಕಾಚಾರ
ಅವರ ಕಿರಿಯ ಸಹೋದರ ರಾಹುಲ್ ಚಾಹರ್ ಕೂಡ ಕ್ರಿಕೆಟಿಗರಾಗಿದ್ದು ಅವರು ಸ್ಪಿನ್ ಬೌಲರ್ ಆಗಿದ್ದಾರೆ. ಅವರೂ ಕೂಡ ಟೀಮ್ ಇಂಡಿಯಾಗೆ ಆಡಿದ್ದಾರೆ. ಒಂದು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನ ಅವರು ಆಡಿದ್ಧಾರೆ. ಪ್ರಸ್ತುತ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಡು ಎದುರಾಳಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಾಹುಲ್ ಚಾಹರ್ ಅವರಿದ್ಧಾರೆ. ಇನ್ನು, ಇವರ ಸಹೋದರಿ ಮಾಲತಿ ಚಾಹರ್ ಅವರು ಮಾಡೆಲ್ ಮತ್ತು ನಟಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ