MI vs SRH- ಪ್ಲೇ ಆಫ್ ಪ್ರವೇಶಕ್ಕೆ ಮುಂಬೈ ಎಷ್ಟು ಅಂತರದಿಂದ ಗೆಲ್ಲಬೇಕು, ಇಲ್ಲಿದೆ ಲೆಕ್ಕಾಚಾರ

IPL 2021- Match No. 55 at Abu Dhabi- ಕೋಲ್ಕತಾ ನೈಟ್ ರೈಡರ್ಸ್ ದೊಡ್ಡ ಗೆಲುವು ಸಾಧಿಸಿದ್ದು ಮುಂಬೈನ ಪ್ಲೇ ಆಫ್ ಹಾದಿ ದುರ್ಗಮಗೊಂಡಿದೆ. ಹೈದರಾಬಾದ್ ವಿರುದ್ಧ ಮುಂಬೈ ಎಷ್ಟು ಅಂತರದಿಂದ ಗೆಲ್ಲಬೇಕು ಎಂಬ ವಿವರ ಇಲ್ಲಿದೆ. ಇಲ್ಲಿ ಮುಂಬೈ ಮೊದಲು ಬ್ಯಾಟ್ ಮಾಡಿದರೆ ಮಾತ್ರ ಆ ಅವಕಾಶ.

ಮುಂಬೈ ಇಂಡಿಯನ್ಸ್ ತಂಡ

ಮುಂಬೈ ಇಂಡಿಯನ್ಸ್ ತಂಡ

 • Share this:
  ಅಬುಧಾಬಿ: ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಪ್ಲೇ ಆಫ್ ರೇಸ್​ನಲ್ಲಿ ವಿಜೇತರು ಯಾರೆಂಬುದು ಬಹುತೇಕ ಸ್ಪಷ್ಟವಾಗಿದೆ. ಈ ಒಂದು ಪಂದ್ಯದ ಫಲಿತಾಂಶದ ಬಳಿಕ ರಾಜಸ್ಥಾನ್ ರಾಯಲ್ಸ್ ಜೊತೆಗೆ ಪಂಜಾಬ್ ಕಿಂಗ್ಸ್ ತಂಡವೂ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿದೆ. ಪ್ಲೇ ಆಫ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಜೊತೆ ಸೇರುವ ರೇಸ್​ನಲ್ಲಿ ಈಗ ಉಳಿದಿರುವುದು ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಾತ್ರ. ಕೋಲ್ಕತಾ ನೈಟ್ ರೈಡರ್ಸ್ ಇವತ್ತಿನ ಪಂದ್ಯದಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿ ತನ್ನ ಹಾದಿಯನ್ನ ಸುಗಮಗೊಳಿಸಿದೆ, ಮುಂಬೈ ಹಾದಿಯನ್ನ ಕಠಿಣಗೊಳಿಸಿದೆ.

  ಕೋಲ್ಕತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಿಂದ 14 ಅಂಕ ಹೊಂದಿದೆ ಅದರ ನೆಟ್ ರನ್ ರೇಟ್ ಪ್ಲಸ್ 0.587 ಇದೆ. ಮುಂಬೈ ಇಂಡಿಯನ್ಸ್ ತಂಡ 13 ಪಂದ್ಯಗಳಿಂದ 12 ಅಂಕ ಹೊಂದಿದೆ. ಅದರ ನೆಟ್ ರನ್ ರೇಟ್ ಮೈನಸ್ 0.048 ಇದೆ. ಶುಕ್ರವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈನ ಕೊನೆಯ ಪಂದ್ಯ ಇದೆ. ಇದರಲ್ಲಿ ಮುಂಬೈ ತಂಡ ಕೆಕೆಆರ್​ನ ನೆಟ್ ರನ್ ರೇಟ್ ಅನ್ನ ಮೀರಿಸುವಂತೆ ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಲೆಕ್ಕಾಚಾರದ ಪ್ರಕಾರ, ಹೈದರಾಬಾದ್ ವಿರುದ್ಧ ಮುಂಬೈ 171 ರನ್​ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಟಾಸ್ ಗೆದ್ದು ಮುಂಬೈ ಬ್ಯಾಟಿಂಗ್ ಆಯ್ದುಕೊಂಡರೆ ಮಾತ್ರ ಈ ಅವಕಾಶ ಸಿಗುತ್ತದೆ. ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿದರೆ ಮುಂಬೈ ನಿರ್ಗಮನ ಖಚಿತ.

  ಒಂದು ವೇಳೆ ಮುಂಬೈ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 250 ರನ್ ಗಳಿಸಿತು ಎಂದಿಟ್ಟುಕೊಳ್ಳಿ, ಆಗ ಹೈದರಾಬಾದ್ ತಂಡವನ್ನು 80 ರನ್​ಗೂ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಬೇಕಾಗುತ್ತದೆ. ಈ ಐಪಿಎಲ್​ನಲ್ಲಿ ಯುಎಇಯ ಪಿಚ್​ಗಳಲ್ಲಿ ಯಾವ ತಂಡವೂ 200 ಕ್ಕಿಂತ ಹೆಚ್ಚು ರನ್​ಗಳನ್ನ ಗಳಿಸಿಲ್ಲ. ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡ 200 ರನ್ ಗಳಿಸಲು ಮಾತ್ರ ಶಕ್ಯವಾದರೆ ಹೈದರಾಬಾದ್ ತಂಡವನ್ನ 30ಕ್ಕಿಂತ ಕಡಿಮೆ ಮೊತ್ತಕ್ಕೆ ಔಟ್ ಮಾಡಬೇಕಾಗುತ್ತದೆ. ಹೀಗೆಲ್ಲಾ ಲೆಕ್ಕಾಚಾರಗಳನ್ನ ನೋಡಿದರೆ ಮುಂಬೈ ಇಂಡಿಯನ್ಸ್ ತಂಡ ಕಣಕ್ಕಿಳಿಯುವ ಮುನ್ನವೇ ಪ್ಲೇ ಆಫ್ ರೇಸ್​ನಿಂದ ಔಟ್ ಆದಂತೆ ಕಾಣುತ್ತಿದೆ.
  POINTS TABLE:
  ಶುಕ್ರವಾರ ಎರಡು ಪಂದ್ಯಗಳು ಇವೆ. ಇವು ಈ ಐಪಿಎಲ್ ಸೀಸನ್​ನ ಲೀಗ್ ಹಂತದ ಕೊನೆಯ ಪಂದ್ಯಗಳಾಗಿವೆ. ಎರಡೂ ಪಂದ್ಯಗಳು ಸಂಜೆ 7:30ಕ್ಕೆ ಪ್ರಾರಂಭವಾಗುತ್ತವೆ. ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಎರಡು ಐಪಿಎಲ್ ಪಂದ್ಯಗಳು ನಡೆಯುತ್ತಿರುವುದು. ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯೆ ಹಣಾಹಣಿ ಇದೆ. ಬೆಂಗಳೂರು ಮತ್ತು ಡೆಲ್ಲಿ ಪಂದ್ಯಗಳು ಕೇವಲ ನಾಮಕಾವಸ್ತೆ ಮಾತ್ರವಾಗಿದೆ. ಮುಂಬೈ ಮತ್ತು ಹೈದರಾಬಾದ್ ಕೂಡ ನಾಮಕಾವಸ್ತೆಯಂತೆಯೇ ಇದೆಯಾದರೂ ಮುಂಬೈಗೆ ಅಲ್ಪಸ್ವಲ್ಪ ಚಾನ್ಸ್ ಅಂತೂ ಇದೆ.

  ಇದನ್ನೂ ಓದಿ: KKR vs RR- ಕೆಕೆಆರ್​ಗೆ ಭರ್ಜರಿ ಗೆಲುವು; ರಾಜಸ್ಥಾನ್, ಪಂಜಾಬ್ ಪ್ಲೇ ಆಫ್ ರೇಸ್​ನಿಂದ ಔಟ್

  ಬೆಂಗಳೂರು ವಿರುದ್ಧ ಡೆಲ್ಲಿ ಸೋತರೂ ಅದರ ಅಗ್ರಸ್ಥಾನ ಅಬಾಧಿತವಾಗಿರಲಿದೆ. ಬೆಂಗಳೂರು ಗೆದ್ದರೂ ಅಥವಾ ಸೋತರೂ ಅದಕ್ಕೆ 3ನೇ ಸ್ಥಾನವೇ ಗತಿ. ಪ್ಲೇ ಆಫ್​ನಲ್ಲಿ ಡೆಲ್ಲಿ ಮತ್ತು ಚೆನ್ನೈ ತಂಡಗಳು ಭಾನುವಾರ (ಅ. 10) ಕ್ವಾಲಿಫಯರ್​ನಲ್ಲಿ ಆಡಲಿವೆ. ಇದರಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸುತ್ತದೆ. ಇನ್ನು, ಕೆಕೆಆರ್ ಅಥವಾ ಮುಂಬೈ ಈ ಇಬ್ಬರಲ್ಲಿ ಪ್ಲೇ ಆಫ್ ಪ್ರವೇಶಿಸುವ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಪ್ಲೇ ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಎದಿರುಗೊಳ್ಳಲಿವೆ. ಇದು ಅ. 11ರಂದು ಶಾರ್ಜಾದಲ್ಲಿ ನಡೆಯಲಿದೆ. ಇದರಲ್ಲಿ ಸೋಲುವ ತಂಡ ಟೂರ್ನಿಯಿಂದ ನಿರ್ಗಮಿಸುತ್ತದೆ. ಗೆಲ್ಲುವ ತಂಡ ಎರಡನೇ ಕ್ವಾಲಿಫಯರ್​ನಲ್ಲಿ ಆಡಬೇಕಾಗುತ್ತದೆ. ಡೆಲ್ಲಿ ಮತ್ತು ಚೆನ್ನೈ ನಡುವಿನ ಮೊದಲ ಕ್ವಾಲಿಫೈಯರ್​ನಲ್ಲಿ ಸೋಲುವ ತಂಡ ಹಾಗೂ ಎಲಿಮಿನೇಟರ್​ನಲ್ಲಿ ಗೆಲ್ಲುವ ತಂಡದ ಮಧ್ಯೆ ಅ. 13ರಂದು ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶ ಪಡೆಯುತ್ತದೆ. ಅಕ್ಟೋಬರ್ 15ರಂದು ದುಬೈನಲ್ಲೇ ಫೈನಲ್ ಪಂದ್ಯ ಇರಲಿದೆ.
  Published by:Vijayasarthy SN
  First published: