• ಹೋಂ
  • »
  • ನ್ಯೂಸ್
  • »
  • IPL
  • »
  • KL Rahul: ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಅಪಸ್ವರ: ಭವಿಷ್ಯಕ್ಕೂ ಇದು ಕಂಟಕ..!

KL Rahul: ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಅಪಸ್ವರ: ಭವಿಷ್ಯಕ್ಕೂ ಇದು ಕಂಟಕ..!

KL Rahul

KL Rahul

IPL 2020: ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 30 ರನ್ ಬಾರಿಸಿದ್ರೆ, ಕೀರನ್ ಪೊಲಾರ್ಡ್ 20 ಎಸೆತಗಳಲ್ಲಿ 47 ರನ್ ಸಿಡಿಸಿದ್ದರು. ಇವರಿಬ್ಬರ ಈ ಸ್ಫೋಟಕ ಇನಿಂಗ್ಸ್​ನಲ್ಲಿ ಮೂಡಿಬಂದಿದ್ದು 6 ಸಿಕ್ಸರ್ ಹಾಗೂ 6 ಬೌಂಡರಿಗಳು.

  • Share this:

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ 'ಸೂಪರ್' ಸೋಲು...ರಾಜಸ್ಥಾನ್ ರಾಯಲ್ಸ್ ವಿರುದ್ಧ ಪರಾಜಯ...ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತದೇ ಸೋಲು...ಆಡಿರುವ ನಾಲ್ಕು ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಸೋಲುಂಡಿದೆ. ಸಮಾಧಾನಕರ ಎನ್ನುವುದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ 97 ರನ್​ಗಳ ಭರ್ಜರಿ ಜಯ. ಆದರೆ ಸೋಲು-ಗೆಲುವುಗಳ ಲೆಕ್ಕಚಾರದಲ್ಲಿ ಪಂಜಾಬ್​ ವೈಫಲ್ಯಕ್ಕೆ ನಾಯಕನ ದೂರದೃಷ್ಟಿಯ ಕೊರತೆಯೇ ಕಾರಣ ಎಂಬ ಟೀಕೆಗಳು ಕೇಳಿ ಬರಲಾರಂಭಿಸಿದೆ. ಇದಕ್ಕೆ ಕಾರಣ ಕೂಡ ಇದೆ.


ಏಕೆಂದರೆ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮಯಾಂಕ್ ಅವರ ಅದ್ಭುತ ಬ್ಯಾಟಿಂಗ್ ಪರಿಣಾಮ ಸೋಲುವ ಪಂದ್ಯವನ್ನು ಟೈ ಮಾಡಿಕೊಂಡಿತು. ಆದರೆ ಆ ಬಳಿಕ ಸಿಕ್ಕ ಸೂಪರ್ ಓವರ್​ನಲ್ಲಿ ಕಣಕ್ಕಿಳಿದದ್ದು ಕೆಎಲ್ ರಾಹುಲ್, ಪೂರನ್ ಹಾಗೂ ಮ್ಯಾಕ್ಸ್​ವೆಲ್. ಮ್ಯಾಕ್ಸ್​ ವೆಲ್ ಹಾಗೂ ಪೂರನ್ ನಿಗದಿತ ಓವರ್​ ವೇಳೆಯೇ ಡೆಲ್ಲಿ ಬೌಲರುಗಳ ಮುಂದೆ ರನ್​ಗಾಗಿ ಪರದಾಡಿದ್ದರು. ಹಾಗೆಯೇ ಸೂಪರ್ ಓವರ್​​ನಲ್ಲೂ ಪೂರನ್ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿದ್ದರು. ಅಲ್ಲಿಗೆ ಪಂಜಾಬ್​ ಸೋಲು ಖಚಿತವಾಗಿತ್ತು. ಆದರೆ ಇಲ್ಲಿ ಪೂರನ್-ಮ್ಯಾಕ್ಸ್​ವೆಲ್​ರನ್ನೇ ಪಂಜಾಬ್ ನಾಯಕ ರಾಹುಲ್ ಸೂಪರ್ ಓವರ್​ನಲ್ಲಿ ಕಣಕ್ಕಿಳಿಸಿದ್ದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಉತ್ತರ ಸಿಗುವ ಮುನ್ನವೇ ಆರ್​ಸಿಬಿ ವಿರುದ್ಧದ ಭರ್ಜರಿ ಗೆಲುವು ನಾಯಕನ ನಿರ್ಧಾರ ಮೇಲೆ ಮೂಡಿದ ಪ್ರಶ್ನೆಯನ್ನು ಮರೆಸಿತ್ತು.


ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 223 ರನ್ ಬಾರಿಸಿ ಅದನ್ನು ನಿಯಂತ್ರಿಸಿಕೊಳ್ಳುವಲ್ಲಿ ಕಿಂಗ್ಸ್​ ಬೌಲರುಗಳು ಎಡವಿದರು. ಪರಿಣಾಮ ಐಪಿಎಲ್ ಇತಿಹಾಸದ ಭರ್ಜರಿ ಚೇಸಿಂಗ್ ದಾಖಲೆಯನ್ನು ರಾಜಸ್ಥಾನ್ ತನ್ನ ಹೆಸರಿಗೆ ಬರೆದುಕೊಂಡಿತು. ಇಲ್ಲೂ ಕೂಡ ಕೆಎಲ್ ರಾಹುಲ್ ಬೌಲರುಗಳಿಗೆ ಧೈರ್ಯ ತುಂಬುವ ಅಥವಾ ಬೌಲರುಗಳನ್ನು ಬಳಸಿಕೊಳ್ಳುವಲ್ಲಿ ಎಡವಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಪಂಜಾಬ್ ಅಭಿಮಾನಿಗಳ ನಿರೀಕ್ಷೆ ಮುಂಬೈ ವಿರುದ್ಧದ ಪಂದ್ಯವಾಗಿತ್ತು. ಆದರೆ ಅಲ್ಲೂ ಕೂಡ ಕೆಎಲ್​ಆರ್ ಮಾಡಿದ ತಪ್ಪೊಂದಕ್ಕೆ ಸೋಲೆಂಬ ದುಬಾರಿ ಬೆಲೆ ತೆರಬೇಕಾಯಿತು.


ಹೌದು, ಗುರುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ಮತ್ತೊಮ್ಮೆ ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಒಂದು ಹಂತದಲ್ಲಿ ಮುಂಬೈ 150 ರನ್​ ಗಡಿದಾಟುವುದು ಕಷ್ಟಕರ ಎನ್ನುವ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು. ಅಂದರೆ ಕೊನೆಯ ಮೂರು ಓವರ್​ನಲ್ಲಿ ಮುಂಬೈ ದಾಂಡಿಗರು ಪೇರಿಸಿದ್ದು ಬರೋಬ್ಬರಿ 62 ರನ್​ಗಳನ್ನು.


ಅದರಲ್ಲೂ ಕೆಎಲ್ ರಾಹುಲ್ ಕೊನೆಯ ಓವರ್​ನ್ನು ಸ್ಪಿನ್ನರ್​ ಕೃಷ್ಣಪ್ಪ ಗೌತಮ್​ಗೆ ನೀಡಿದ್ದು ತಪ್ಪು ನಿರ್ಧಾರ ಎನ್ನಲಾಗುತ್ತಿದೆ. ಏಕೆಂದರೆ ಕ್ರೀಸ್​ನಲ್ಲಿ ಯಾವುದೇ ಒತ್ತಡಗಳಿಲ್ಲದೆ ಬ್ಯಾಟ್​ ಬೀಸುತ್ತಿದ್ದದ್ದು ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ. ಇಬ್ಬರೂ ಮುಂಬೈ ಪಾಳಯದ ಬಿಗ್ ಹಿಟ್ಟರ್​ಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪಂಜಾಬ್ ನಾಯಕ ಸ್ಪಿನ್ನರ್​ ಕೈಯಲ್ಲಿ ಚೆಂಡು ನೀಡಿದ್ದು ಮುಂಬೈ ಬ್ಯಾಟ್ಸ್​ಮನ್​ಗಳಿಗೆ  ಸಿಕ್ಸ್ ಸಿಡಿಸಲು ಲೈಸೆನ್ಸ್​ ನೀಡಿದಂತಿತ್ತು. ಅದರಂತೆ ಕೊನೆಯ ಓವರ್​ನಲ್ಲಿ ಮೂಡಿ ಬಂದಿದ್ದು ಬರೋಬ್ಬರಿ 25 ರನ್​ಗಳು. ಅಲ್ಲಿಗೆ 150ರೊಳಗೆ ನಿಯಂತ್ರಿಸಬಹುದಾಗಿದ್ದ ಮುಂಬೈ ಇಂಡಿಯನ್ಸ್ ಸ್ಕೋರ್ ಬಂದು ನಿಂತಿದ್ದು 191 ಕ್ಕೆ.


ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 30 ರನ್ ಬಾರಿಸಿದ್ರೆ, ಕೀರನ್ ಪೊಲಾರ್ಡ್ 20 ಎಸೆತಗಳಲ್ಲಿ 47 ರನ್ ಸಿಡಿಸಿದ್ದರು. ಇವರಿಬ್ಬರ ಈ ಸ್ಫೋಟಕ ಇನಿಂಗ್ಸ್​ನಲ್ಲಿ ಮೂಡಿಬಂದಿದ್ದು 6 ಸಿಕ್ಸರ್ ಹಾಗೂ 6 ಬೌಂಡರಿಗಳು. ಈ ಇನಿಂಗ್ಸ್​ ಅಂತ್ಯದೊಂದಿಗೆ ಮತ್ತೆ ಕೆಎಲ್ ರಾಹುಲ್ ಕ್ಯಾಪ್ಟನ್ಸಿ ಬಗ್ಗೆ ಚಕಾರಗಳು ಕೇಳಿ ಬರಲಾರಂಭಿಸಿತು. ಹಾಗೆಯೇ ಪಂದ್ಯದ ಸೋಲಿನೊಂದಿಗೆ ಮತ್ತೊಮ್ಮೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಎಡವಿರುವುದು ಕನ್ಫರ್ಮ್ ಆಯಿತು. ಇದೀಗ ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಬಿಂಬಿತವಾಗಿರುವ ರಾಹುಲ್ ಕಪ್ತಾನಗಿರಿ ಸಾಮರ್ಥ್ಯದ ಬಗ್ಗೆ ಅನುಮಾನಗಳು ಮೂಡಿಬರಲಾರಂಭಿಸಿದೆ.


ಅಲ್ಲದೆ ರಾಹುಲ್ ಅವರನ್ನು ಈಗಲೇ ಭಾರತ ತಂಡದ ಮುಂದಿನ ನಾಯಕ ಎಂದು ಬಿಂಬಿಸುತ್ತಿರುವ ಬಗ್ಗೆ ಕೂಡ ಅಪಸ್ವರಗಳು ಕೇಳಿ ಬರುತ್ತಿವೆ. ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಈಗ ಬಹಿರಂಗವಾಗುತ್ತಿದೆ. ಆದರೆ ಕೆಲವರು ರಾಹುಲ್​ಗೆ ಪಟ್ಟ ಕಟ್ಟಲು ಈಗಾಗಲೇ ರೆಡಿಯಾಗಿ ನಿಂತಿದ್ದಾರೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಪಂಜಾಬ್ ತಂಡದ ನಾಯಕತ್ವದ ಪಟ್ಟ ಕೆಎಲ್​ಆರ್ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.


ಇದಕ್ಕೆ ಪೂರಕ ಎಂಬಂತೆ, ಐಪಿಎಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ದಂತಕಥೆ ಸುನೀಲ್ ಗಾವಸ್ಕರ್ ಹೇಳಿಕೆಯೊಂದನ್ನು ನೀಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ರಾಹುಲ್ ಕಿಂಗ್ಸ್​ ಇಲೆವೆನ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ರೆ ಮಾತ್ರ, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ನಾಯಕನಾಗಲಿದ್ದಾರೆ ಎಂದು ಗಾವಸ್ಕರ್ ತಿಳಿಸಿದ್ದರು. ಅವರ ಈ ಮಾತು ನಿಜವಾಗಲಿದೆಯಾ ಎಂಬುದು ಉಳಿದಿರುವ ಪಂದ್ಯಗಳ ಮೂಲಕ ನಿರ್ಧಾರವಾಗಲಿದೆ.


POINTS TABLE:SCHEDULE TIME TABLE:ORANGE CAP:PURPLE CAP:RESULT DATA:MOST SIXES:ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!

First published: