ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಂದ್ಯಕ್ಕೂ ಕೆಲವು ಗಂಟೆಗಳು ಮಾತ್ರ ಉಳಿದಿರುವಾಗ ಹೊರಗುಳಿದಿದ್ದರು. ಇದಕ್ಕೆ ಕಾರಣ ತೀವ್ರ ಹೊಟ್ಟೆನೋವು. ಶನಿವಾರ ರಾತ್ರಿಯಿಂದ ಕಾಣಿಸಿಕೊಂಡಿದ್ದ ಹೊಟ್ಟೆನೋವಿನ ಪರಿಣಾಮ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಪೆಂಡಿಸಿಟಿಸ್ ಸಮಸ್ಯೆಗೆ ತುತ್ತಾಗಿರುವುದು ತಿಳಿದು ಬಂತು. ಅಲ್ಲದೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿ ವೈದ್ಯರು, ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು.
ಅದರಂತೆ ಇದೀಗ ಮುಂಬೈನಲ್ಲಿ ಕೆಎಲ್ ರಾಹುಲ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲದೆ ಒಂದು ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ರಾಹುಲ್ ಅವರು ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟೊಮಿ ಚಿಕಿತ್ಸೆಗೆ ಒಳಗಾಗಿದ್ದು, ಹೀಗಾಗಿ ಅವರು ಒಂದು ವಾರ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ಸದ್ಯ ಐಪಿಎಲ್ ಬಯೋಬಬಲ್ನಿಂದ ಹೊರಗುಳಿದಿರುವ ರಾಹುಲ್ ಮತ್ತೆ ತಂಡವನ್ನು ಕೂಡಿಕೊಳ್ಳಲು ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಒಂದು ವಾರದ ನಂತರವಷ್ಟೇ ಅವರು ಮತ್ತೆ ಟೂರ್ನಿಯತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದು, ಕೊನೆಯ ಒಂದೆಡೆರಡು ಪಂದ್ಯಗಳಿಗೆ ರಾಹುಲ್ ಪಂಜಾಬ್ ಕಿಂಗ್ಸ್ಗೆ ಲಭ್ಯರಾಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ