Gautam Gambhir| ಕೊಹ್ಲಿ-ರೋಹಿತ್ಗಿಂತ ಕೆ.ಎಲ್. ರಾಹುಲ್ ಉತ್ತಮ ಬ್ಯಾಟ್ಸ್ಮನ್; ಗೌತಮ್ ಗಂಭೀರ್
ನೀವು ನಿಮ್ಮ ಆಟವಾಡಿ. ಜಗತ್ತು ನಿಮ್ಮನ್ನು ಗೌರವಿಸಲಿ. ಭಾರತ ಮಾತ್ರವಲ್ಲ ನಿಮ್ಮ ಸಾಮರ್ಥ್ಯವನ್ನು ಈ ಜಗತ್ತಿಗೆ ತೋರಿಸಿ ಎಂದು ಕೆ.ಎಲ್. ರಾಹುಲ್ ಬಗ್ಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ (PBKS) ನಾಯಕ ಕೆ.ಎಲ್. ರಾಹುಲ್ (KL Rahul) ಭಾರತದ ಇತರ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿಗಿಂತ (Virat Kohli) ಹೆಚ್ಚು ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೆ, ಉತ್ತಮ ಶಾಟ್ಗಳನ್ನು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುವ ಉತ್ತಮ ಬ್ಯಾಟ್ಸ್ಮನ್ ಎಂದು ಭಾರತದ ತಂಡದ ಮಾಜಿ ನಾಯಕ ಸಂಸದ ಗೌತಮ್ ಗಂಭೀರ್ (Gautam Gambhir) ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಕೇವಲ 42 ಎಸೆತಗಳಿಗೆ 98 ರನ್ ಗಳಿಸಿ ಔಟ್ ಆಗದೆ ಉಳಿದಿದ್ದರು. ಪರಿಣಾಮ ಪಂಜಾಬ್ 6 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿದ್ದರೂ ಸಹ ಪ್ಲೇ ಆಫ್ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿನ ಅವರ ಆಟ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆ.ಎಲ್. ರಾಹುಲ್ ಆಟದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗೌತಮ್ ಗಂಭೀರ್, "ನೀವು ಈ ರೀತಿ ಬ್ಯಾಟ್ ಮಾಡಲು ಸಾಧ್ಯವಾದರೆ ಭವಿಷ್ಯದಲ್ಲೂ ನೀವು ಏಕೆ ಇದೇ ರೀತಿಯ ಬ್ಯಾಟಿಂಗ್ ಅನ್ನು ಮುಂದುವರೆಸಬಾರದು? ಮತ್ತು ಈ ರೀತಿಯ ಬ್ಯಾಟಿಂಗ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗಿಂತ ಕೆ.ಎಲ್. ರಾಹುಲ್ ಅತ್ಯುತ್ತಮ ಬ್ಯಾಟ್ಸ್ಮನ್ ಹಾಗೂ ಅವರಿಗಿಂತ ಅಧಿಕ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಸಾಭೀತುಪಡಿಸಿದೆ. ಅಲ್ಲದೆ, ಭಾರತದ ಇತರೆ ಎಲ್ಲಾ ಬ್ಯಾಟ್ಸ್ಮನ್ಗಳಿಗಿಂತಲೂ ಉತ್ತಮ ಶಾಟ್ಗಳನ್ನು ರಾಹುಲ್ ಹೊಂದಿದ್ದಾರೆ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
"ನೀವು ನಿಮ್ಮ ಆಟವಾಡಿ. ಜಗತ್ತು ನಿಮ್ಮನ್ನು ಗೌರವಿಸಲಿ. ಭಾರತ ಮಾತ್ರವಲ್ಲ ನಿಮ್ಮ ಸಾಮರ್ಥ್ಯವನ್ನು ಈ ಜಗತ್ತಿಗೆ ತೋರಿಸಿ. ಜನರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವಾಗ, ಬಹುಶಃ ಜನರು ನಿಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಏಕೆಂದರೆ ನೀವು ಯಾರಿಗೇ ಹೋಲಿಸಿದರೂ ಇನ್ನೂ ಹೆಚ್ಚಿನ ಸಾಮರ್ಥ್ಯವಿರುವ ಬ್ಯಾಟ್ಸ್ಮನ್ ಆಗಿದ್ದೀರಿ" ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಐಪಿಎಲ್ 2021 ರ ಋತುವಿನಲ್ಲಿ 14 ಪಂದ್ಯಗಳಿಂದ 12 ಅಂಕಗಳೊಂದಿಗೆ ತಮ್ಮ ಆಟವನ್ನು ಮುಕ್ತಾಯಗೊಳಿಸಿದೆ. ಆದರೆ, ಕೆ.ಎಲ್. ರಾಹುಲ್ 13 ಪಂದ್ಯಗಳಲ್ಲಿ 626 ರನ್ ಗಳಿಸಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಹುಲ್ ನಂತರದ ಸ್ಥಾನದಲ್ಲಿ ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್ ಮತ್ತು ಶಿಖರ್ ಧವನ್ ಇದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ