ನವದೆಹಲಿ, ನ. 30: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ (Punjab Kings captain KL Rahul) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಪ್ಲೇಯರ್ ರಷೀದ್ ಖಾನ್ (Sunrisers Hyderabad player Rashid Khan) ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ನಲ್ಲಿ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಅವರ ತಂಡಗಳು ಇನ್ನೂ ರಿಟೆಂಶನ್ ಲಿಸ್ಟ್ (Players’ retention list) ಅನ್ನು ಸಲ್ಲಿಸುವ ಮುನ್ನವೇ ಬೇರೊಂದು ಐಪಿಎಲ್ ತಂಡವನ್ನ ಸಂಪರ್ಕಿಸಿ ಮಾತುಕತೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ ಹೈದಬಾರಾದ್ ತಂಡಗಳು ಈ ಬಗ್ಗೆ ಬಿಸಿಸಿಐಗೆ ದೂರು ಕೊಟ್ಟಿರುವುದು ತಿಳಿದುಬಂದಿದೆ. ಒಂದು ವೇಳೆ, ಈ ಆರೋಪ ನಿಜವೇ ಆದಲ್ಲಿ ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ಗೆ ಒಂದು ವರ್ಷ ಬ್ಯಾನ್ ಹೇರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ನಿದರ್ಶನ ನಮ್ಮ ಮುಂದೆ ಇದೆ. ಹೀಗಾಗಿ, ರಾಹುಲ್ ಮತ್ತು ರಷೀದ್ ಈ ವರ್ಷ ನಿಷೇಧವಾದರೆ ಅಚ್ಚರಿ ಅನಿಸುವುದಿಲ್ಲ.
ಲಕ್ನೋ ಮತ್ತು ಅಹ್ಮದಾಬಾದ್ ಐಪಿಎಲ್-2022 ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎರಡು ಹೊಸ ತಂಡಗಳಾಗಿವೆ. ಈ ಪೈಕಿ ಆರ್ಪಿಎಸ್ಜಿ ಮಾಲಕತ್ವದ ಲಕ್ನೋ ಫ್ರಾಂಚೈಸಿಯವರು ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ ಅವರನ್ನ ಸಂಪರ್ಕಿಸಿ ಅಧಿಕ ಹಣದ ಆಫರ್ ಕೊಟ್ಟು ಸೆಳೆಯುವ ಪ್ರಯತ್ನ ಮಾಡಿದ್ಧಾರೆ ಎಂದು ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಬಿಸಿಸಿಐಗೆ ಮೌಖಿಕ ದೂರು ಕೊಟ್ಟಿವೆ. ಬಿಸಿಸಿಐ ಕೂಡ ಇದನ್ನ ದೃಢಪಡಿಸಿದೆ ಎಂದು ಇನ್ಸೈಡ್ ಸ್ಪೋರ್ಟ್ ವೆಬ್ ಸೈಟ್ನಲ್ಲಿ ವರದಿ ಪ್ರಕಟವಾಗಿದೆ.
“ನಮಗೆ ಲಿಖಿತ ಪತ್ರ ಸಿಕ್ಕಿಲ್ಲ. ಆದರೆ, ಲಕ್ನೋ ತಂಡದಿಂದ ಆಟಗಾರರನ್ನ ಸೆಳೆಯಲಾಗುತ್ತಿರುವ ಬಗ್ಗೆ ಎರಡು ಫ್ರಾಂಚೀಸಿಗಳು ಮೌಖಿಕ ದೂರು ಕೊಟ್ಟಿವೆ. ಆ ದೂರನ್ನು ನಾವು ಪರಿಶೀಲಿಸುತ್ತಿದ್ದೇವೆ. ದೂರಿನಲ್ಲ ಸತ್ಯಾಂಶ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ಧಾರೆನ್ನಲಾಗಿದೆ.
ರಾಹುಲ್ಗೆ 20 ಕೋಟಿ, ರಷೀದ್ಗೆ 16 ಕೋಟಿ ಆಫರ್:
ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದು ತಮ್ಮ ತಂಡ ಸೇರಿಕೊಂಡರೆ 20 ಕೋಟಿ ರೂಗೂ ಹೆಚ್ಚು ಹಣ ಕೊಡುವುದಾಗಿ ಕೆಎಲ್ ರಾಹುಲ್ ಅವರಿಗೆ ಲಕ್ನೋ ತಂಡ ಆಫರ್ ಕೊಟ್ಟಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ರಷೀದ್ ಖಾನ್ ಅವರಿಗೆ ಇದೇ ವೇಳೆ 16 ಕೋಟಿ ರೂ ಕೊಡುತ್ತೇವೆಂದು ಲಕ್ನೋ ಹೇಳಿದೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: Rahul Dravid- ಕಾನಪುರ್ ಸ್ಟೇಡಿಯಂನ ಗ್ರೌಂಡ್ಸ್ಮೆನ್ಗೆ ಹಣ ಕೊಟ್ಟ ರಾಹುಲ್ ದ್ರಾವಿಡ್; ಕಾರಣ ಇದು
ಕಳೆದ ಸೀಸನ್ನಲ್ಲಿ ಆಡಿದ್ದ ಎಂಟು ತಂಡಗಳು ತಾವು ಉಳಿಸಿಕೊಳ್ಳುವ ಗರಿಷ್ಠ ನಾಲ್ವರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕೊಡಲು ಇಂದು ಕೊನೆಯ ದಿನವಾಗಿದೆ. ಈ ಪಟ್ಟಿಯಲ್ಲಿರುವ ಆಟಗಾರರು ಇಚ್ಛಿಸಿದಲ್ಲಿ ತಂಡದಿಂದ ಬೇರ್ಪಟ್ಟು ಹರಾಜಿಗೆ ತಮ್ಮನ್ನು ಒಡ್ಡಿಕೊಳ್ಳಬಹುದು. ಆದರೆ ರಿಟೆನ್ಷನ್ ಪಟ್ಟಿ ಪ್ರಕಟವಾಗುವವರೆಗೂ ಯಾವ ತಂಡವೂ ಬೇರೆ ತಂಡದ ಆಟಗಾರರನ್ನ ಸಂಪರ್ಕಿಸುವಂತಿಲ್ಲ. ತಂಡ ಮತ್ತು ಆಟಗಾರರ ಪರಸ್ಪರ ಸಮ್ಮತಿ ಮೇರೆಗೆ ಮಾತ್ರ ಈ ನಡೆ ಇಡಲು ಅವಕಾಶ ಇದೆ.
ಪಂಜಾಬ್ ಕಿಂಗ್ಸ್ ತಂಡ ಮತ್ತು ಕೆಎಲ್ ರಾಹುಲ್ ಪರಸ್ಪರ ಬೇರ್ಪಡಬಹುದು ಎಂಬ ವರದಿ ಐಪಿಎಲ್ 2021 ಟೂರ್ನಿ ಮುಕ್ತಾಯಗೊಂಡ ದಿನದಿಂದಲೂ ಕೇಳಿಬರುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಸ್ಟಾರ್ ಬೌಲರ್ ಎನಿಸಿರುವ ಅಫ್ಘಾನಿಸ್ತಾನದ ರಷೀದ್ ಖಾನ್ ಅವರನ್ನ ಉಳಿಸಿಕೊಳ್ಳಲು ಬಯಸುತ್ತಿದೆಯಾದರೂ 12 ಕೋಟಿ ರೂಗೂ ಹೆಚ್ಚು ಹಣ ಕೊಡಲು ಸಿದ್ಧವಿಲ್ಲ ಎನ್ನಲಾಗಿದೆ.
ಈಗ ಲಕ್ನೋ ತಂಡ ಈ ಇಬ್ಬರು ಆಟಗಾರರನ್ನ ಸಂಪರ್ಕಿಸಿ ಡೀಲ್ ಕುದುರಿಸಲು ಯತ್ನಿಸಿರುವುದು ಐಪಿಎಲ್ ನಿಯಮಾವಳಿಗೆ ವಿರುದ್ಧವಾಗಿದೆ. ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ ಅವರನ್ನ ಒಂದು ವರ್ಷ ನಿಷೇಧ ಮಾಡಬಹುದು. ಅತ್ತ, ಲಕ್ನೋ ತಂಡ ತನ್ನ ಚೊಚ್ಚಲ ಟೂರ್ನಿಯಲ್ಲೇ ಪೆಟ್ಟು ತಿನ್ನುವ ಸಾಧ್ಯತೆ ಇದೆ.
ಇದನ್ನೂ ಓದಿ: Pakistan- ಭಾರತೀಯರು ಹಿಂದೆಂದೂ ಆ ರೀತಿ ಇರಲಿಲ್ಲ, ಅಂದು ಆ ಸ್ಥಿತಿ ಕಂಡು ಅಚ್ಚರಿ ಆಯಿತು: ಇಂಜಮಮ್
ಈ ಹಿಂದೆ ನಿಷೇಧಕ್ಕೊಳಗಾಗಿದ್ದ ರವೀಂದ್ರ ಜಡೇಜಾ:
ಹನ್ನೊಂದು ವರ್ಷಗಳ ಹಿಂದೆ ಇಂಥದ್ದೇ ಪ್ರಕರಣವೊಂದು ನಡೆದಿತ್ತು. 2010ರಲ್ಲಿ ರವೀಂದ್ರ ಜಡೇಜಾ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಆಗ ಮುಂಬೈ ಇಂಡಿಯನ್ಸ್ ತಂಡ ಸಂಪರ್ಕಿಸಿ ಅನಧಿಕೃತ ಮಾರ್ಗದಲ್ಲಿ ಖರೀದಿ ಮಾಡಲು ಹೊರಟಿತ್ತು. ಆಗ ಜಡೇಜಾ ಅವರನ್ನ ಒಂದು ವರ್ಷ ನಿಷೇಧ ಮಾಡಲಾಗಿತ್ತು. ಮುಂಬೈ ಇಂಡಿಯನ್ಸ್ ತಂಡಕ್ಕೆ ಎಚ್ಚರಿಕೆ ಕೊಟ್ಟು ಸುಮ್ಮನೆ ಬಿಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ