news18-kannada Updated:September 26, 2020, 9:30 PM IST
ಮನೀಷ್ ಪಾಂಡೆ
ಅಬುಧಾಬಿಯ ಶೇಖ್ ಝಯಾದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ 143 ರನ್ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್ಆರ್ಹೆಚ್ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಓಪನರ್ಗಳಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಅವರನ್ನು ಆರಂಭದಲ್ಲೇ ರನ್ ಗಳಿಸದಂತೆ ತಡೆಯುವಲ್ಲಿ ಕೆಕೆಆರ್ ಬೌಲರುಗಳು ಯಶಸ್ವಿಯಾದರು.
ಪ್ಯಾಟ್ ಕಮಿನ್ಸ್ ಎಸೆದ ನಾಲ್ಕನೇ ಓವರ್ನ ಕೊನೆಯ ಬಾಲ್ನ್ನು ಗುರುತಿಸಲು ಎಡವಿದ ಬೈರ್ಸ್ಟೋವ್ (5) ಕ್ಲೀನ್ ಬೌಲ್ಡ್ ಆದರು. ಈ ಬಳಿಕ ಜೊತೆಗೂಡಿದ ವಾರ್ನರ್ -ಮನೀಷ್ ಪಾಂಡೆ ಜೋಡಿ 31 ರನ್ಗಳ ಜೊತೆಯಾಟದೊಂದಿಗೆ 9 ಓವರ್ಗಳಲ್ಲಿ ತಂಡದ ಮೊತ್ತವನ್ನು 59 ಕ್ಕೇರಿಸಿದರು. ಇದೇ ವೇಳೆ 10ನೇ ಓವರ್ನಲ್ಲಿ ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ವಾರ್ನರ್ (36) ನಿರ್ಗಮಿಸಿದರು.
ನಾಯಕ ನಿರ್ಗಮನದೊಂದಿಗೆ ಹೈದರಾಬಾದ್ ರನ್ ಗತಿಯು ನಿಧಾನಗೊಂಡಿತು. ಪರಿಣಾಮ 15 ಓವರ್ಗಳಲ್ಲಿ ಸನ್ರೈಸರ್ಸ್ ಗಳಿಸಿದ್ದು 99 ರನ್ಗಳು ಮಾತ್ರ. ಪಂದ್ಯ ಮೇಲೆ ಹಿಡಿತ ಸಾಧಿಸಿದ್ದ ಕೆಕೆಆರ್ ಬೌಲರುಗಳು ಮನೀಷ್ ಪಾಂಡೆ ಹಾಗೂ ವೃದ್ಧಿಮಾನ್ ಸಾಹ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಇತ್ತ ಪಾಂಡೆ ದೊಡ್ಡ ಹೊಡೆತಕ್ಕೆ ಮುಂದಾದರೂ ನಿರೀಕ್ಷಿತ ಫಲ ಸಿಗಲಿಲ್ಲ. ಹೀಗಾಗಿ 17 ಓವರ್ನಲ್ಲಿ ಎಸ್ಆರ್ಹೆಚ್ 118 ರನ್ ಮಾತ್ರ ಪೇರಿಸಲು ಸಾಧ್ಯವಾಯಿತು. ಇತ್ತ 36 ಎಸೆತಗಳಲ್ಲಿ ಮನೀಷ್ ಪಾಂಡೆ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ರಸೆಲ್ಗೆ ಕ್ಯಾಚ್ ನೀಡಿದ ಪಾಂಡೆ 51 ರನ್ನೊಂದಿಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಕೊನೆಯ ಎರಡು ಓವರ್ಗಳಿರುವಾಗ ಕ್ರೀಸ್ಗಿಳಿದ ಮೊಹಮ್ಮದ್ ನಬಿ ಬಿರುಸಿನ ಆಟಕ್ಕೆ ಮುಂದಾರೂ ಕೆಕೆಆರ್ ಬೌಲರುಗಳ ನಿಖರ ದಾಳಿ ಮುಂದೆ ಪರದಾಡಿದರು. ಹಾಗೆಯೇ 31 ಎಸೆತಗಳಲ್ಲಿ 30 ಬಾರಿಸಿದ ವೃದ್ಧಿಮಾನ್ ಸಾಹ ಕೊನೆಯ ಓವರ್ನಲ್ಲಿ ವಿನಾಕಾರಣ ರನೌಟ್ ಆಗಿ ಹೊರ ನಡೆದರು. ಅಂತಿಮವಾಗಿ ನಬಿ ಕೊನೆಯ ಓವರ್ ಫೋರ್ ಸಹಾಯದಿಂದ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 142 ರನ್ ಪೇರಿಸುವಂತಾಯಿತು.
ಕೆಕೆಆರ್ ಪರ ಉತ್ತಮ ದಾಳಿ ಸಂಘಟಿಸಿದ ವೇಗಿ ಪ್ಯಾಟ್ ಕಮಿನ್ಸ್ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಉರುಳಿಸಿ ಗಮನ ಸೆಳೆದರು.
Published by:
zahir
First published:
September 26, 2020, 9:20 PM IST