ದುಬೈ, ಅ. 03: ಪ್ಲೇ ಆಫ್ಗೆ ಯಾವೆಲ್ಲಾ ತಂಡಗಳು ಪ್ರವೇಶ ಪಡೆಯುತ್ತವೆ ಎಂಬುದು ನಿರ್ಧಾರವಾಗಲು ಈಗ ಪ್ರತಿಯೊಂದೂ ಪಂದ್ಯವೂ ಮಹತ್ವದ್ದಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶದ ತುದಿಯಲ್ಲಿದೆ. ಇನ್ನೊಂದು ಹೆಜ್ಜೆ ಯಶಸ್ವಿಯಾಗಿ ಇಟ್ಟರೆ ಪ್ಲೇ ಆಫ್ ಬಾಗಿಲು ತೆರೆದಂತೆ. ಈಗ ಉಳಿದಿರುವುದು ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು. ಈ ನಾಲ್ಕು ತಂಡಗಳು ಸಮಾನ ಸ್ಥಿತಿಯಲ್ಲಿವೆ. ಪ್ಲೇ ಆಫ್ನ ಎರಡು ಸ್ಥಾನಕ್ಕೆ ಈ ನಾಲ್ಕು ತಂಡಗಳು ಹಾಗೂ ಆರ್ಸಿಬಿ ಮಧ್ಯೆ ಪೈಪೋಟಿ ಇದೆ. ಇವತ್ತು ಆರ್ಸಿಬಿ ಗೆದ್ದರೆ ಅದು ಪ್ಲೇ ಆಫ್ ಪ್ರವೇಶಿಸುತ್ತದೆ. ಆಗ ಒಂದು ಸ್ಥಾನಕ್ಕೆ ಈ ನಾಲ್ಕು ತಂಡಗಳು ಪೈಪೋಟಿ ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇವತ್ತು ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ.
ಹತ್ತು ಅಂಕಗಳನ್ನ ಹೊಂದಿರುವ ನಾಲ್ಕು ತಂಡಗಳ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಸ್ಥಿತಿಯಲ್ಲಿದೆ. ಒಳ್ಳೆಯ ನೆಟ್ ರನ್ ರೇಟ್ ಇದೆ. ಮೂರು ತಂಡಗಳದ್ದು ಮೈನಸ್ ಇದ್ದರೆ ಕೆಕೆಆರ್ದು ಪ್ಲಸ್ ನೆಟ್ ರನ್ ರೇಟ್ ಇದೆ. ಮುಂಬೈ ಇಂಡಿಯನ್ಸ್ ತಂಡ ತನ್ನ ಹಿಂದಿನ ಪಂದ್ಯವನ್ನ ಸೋತಿದ್ದು ಕೆಕೆಆರ್ಗೆ ಭಾರೀ ಅನುಕೂಲ ಮಾಡಿಕೊಟ್ಟಿದೆ. ಇವತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆದ್ದರೆ ಪ್ಲೇ ಆಫ್ ಪ್ರವೇಶದ ಸಾಧ್ಯತೆ ಗಟ್ಟಿಗೊಳ್ಳುತ್ತದೆ. ಎರಡೂ ಪಂದ್ಯಗಳನ್ನ ಗೆದ್ದರೆ ಪ್ಲೇ ಆಫ್ ಪ್ರವೇಶ ಬಹುತೇಕ ಖಚಿತವಾಗುತ್ತದೆ.
ಇನ್ನೊಂದೆಡೆ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 4 ಅಂಕಗಳೊಂದಿಗೆ ಪ್ಲೇ ಆಫ್ ರೇಸ್ನಿಂದ ಬಹಳ ಹಿಂದೆಯೇ ಹೊರಬಿದ್ದಿದೆ. ಅದೇನಿದ್ದರೂ ಜೇಂಟ್ ಕಿಲ್ಲರ್ ಪಾತ್ರ ಮಾತ್ರ ಬಾಕಿ ಇದೆ. ಕುತೂಹಲ ಎಂದರೆ, ಕಳೆದ ಸೀಸನ್ನಲ್ಲಿ ಕೊನೆಯ ಲೀಗ್ ಪಂದ್ಯ ಕೆಕೆಆರ್ ಮತ್ತು ಎಸ್ಆರ್ಎಚ್ ಮಧ್ಯೆ ಇತ್ತು. ಆ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಗೆದ್ದು ಪ್ಲೇ ಆಫ್ಗೆ ಲಗ್ಗೆ ಹಾಕಿತ್ತು. ಪ್ಲೇ ಆಫ್ ಕನಸಿನಲ್ಲಿದ್ದ ಕೆಕೆಆರ್ಗೆ ಆ ಸೋಲು ಆಘಾತ ಕೊಟ್ಟಿತ್ತು. ಈಗ ಕೆಕೆಆರ್ಗೆ ಅದೇ ಫಲಿತಾಂಶ ರಿಪೀಟ್ ಆಗುತ್ತಾ? ಆದರೆ, ಸನ್ರೈಸರ್ಸ್ ವಿರುದ್ಧ ಆಡಿದ ಕಳೆದ ಐದು ಪಂದ್ಯಗಳಲ್ಲಿ ಕೆಕೆಆರ್ ನಾಲ್ಕರಲ್ಲಿ ಗೆಲುವಿನ ನಗೆ ಬೀರಿದೆ. ಮೇಲಾಗಿ, ಕಳೆದ ಸೀಸನ್ನಲ್ಲಿದ್ದಂತೆ ಸನ್ರೈಸರ್ಸ್ ಈ ಬಾರಿ ಬಲಿಷ್ಠವೆನಿಸಿಲ್ಲ. ಹೀಗಾಗಿ, ಕೋಲ್ಕತಾ ತಂಡ ಇವತ್ತಿನ ಪಂದ್ಯದಲ್ಲಿ ಗೆಲ್ಲಲು ಫೇವರಿಟ್ ಎನಿಸಿದೆ.
ಇದನ್ನೂ ಓದಿ: MI vs DC- ಮುಂಬೈ ಇಂಡಿಯನ್ಸ್ಗೆ ಮತ್ತೆ ಸೋಲಿನ ಆಘಾತ; ಡೆಲ್ಲಿಗೆ ಅಮೋಘ ಜಯ
ಕೋಲ್ಕತಾ ತಂಡದಲ್ಲಿ ವೆಂಕಟೇಶ್ ಅಯ್ಯರ್ ಅವರು ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ಧಾರೆ. ಈ ಪಂದ್ಯದಲ್ಲಿ ಶಾಕಿಬ್ ಅಲ್ ಹಸನ್ ಅವರನ್ನ ಆಡಿಸುವ ನಿರೀಕ್ಷೆ ಇದೆ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಇವತ್ತು ಆಡಲು ಅವಕಾಶ ಸಿಗುತ್ತದಾ ನೋಡಬೇಕು.
ಇನ್ನು, ಸನ್ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಾಹ ಅವರು ಕೆಕೆಆರ್ ವಿರುದ್ಧ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇದೆ. ಅದು ಬಿಟ್ಟರೆ ಹೈದರಾಬಾದ್ ತಂಡಕ್ಕೆ ಹೇಳಿಕೊಳ್ಳುವ ಟ್ರಂಪ್ ಕಾರ್ಡ್ ಉಳಿದಿಲ್ಲ.
ತಂಡಗಳು:
ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಟಿಮ್ ಸೇಫರ್ಟ್/ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಟಿಮ್ ಸೌಥಿ, ಪ್ರಸಿದ್ಧ್ ಕೃಷ್ಣ/ಸಂದೀಪ್ ವಾರಿಯರ್, ವರುಣ್ ಚಕ್ರವರ್ತಿ.
ಸನ್ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ: ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ