KKR vs SRH- ಶುಬ್ಮನ್ ಗಿಲ್ ಅಮೋಘ ಆಟ; ಎಸ್ಆರ್​ಎಚ್ ವಿರುದ್ಧ ಕೆಕೆಆರ್ ರೋಚಕ ಗೆಲುವು

IPL 2021, Match No. 49, SRH vs KKR- ಪ್ಲೇ ಆಫ್ ರೇಸ್​ನಲ್ಲಿ ಮುಂಬೈ, ಪಂಜಾಬ್, ರಾಜಸ್ಥಾನ್ ತಂಡಗಳಿಗೆ ಹೋಲಿಸಿದರೆ ಕೆಕೆಆರ್ ತಂಡ ಉತ್ತಮ ಸ್ಥಿತಿಯಲ್ಲಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಾಗಿದೆ.

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್

  • Share this:
    ದುಬೈ, ಅ. 03: ಶುಬ್ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್​​ಗಳಿಂದ ರೋಚಕ ಗೆಲುವು ಪಡೆಯಿತು. ಗೆಲ್ಲಲು 116 ರನ್​ಗಳ ಸಾಧಾರಣ ಗುರಿ ಪಡೆದ ಕೆಕೆಆರ್ ತಂಡ ಹಲವು ಏರಿಳಿತಗಳೊಂದಿಗೆ ಗೆಲುವಿನ ದಡ ಮುಟ್ಟಿತು. ಈ ಮೂಲಕ ಪ್ಲೇ ಆಫ್ ಪ್ರವೇಶದ ಸಾಧ್ಯತೆಯನ್ನ ಇನ್ನಷ್ಟು ದಟ್ಟವಾಗಿಸಿಕೊಂಡಿತು. ಇವತ್ತಿನ ಕೆಕೆಆರ್ ಗೆಲುವಿನಲ್ಲಿ ಶುಬ್ಮನ್ ಗಿಲ್ ಅವರ ಬ್ಯಾಟಿಂಗ್ ಜೊತೆಗೆ ತಂಡದ ಬೌಲರ್​ಗಳ ಶಿಸ್ತುಬದ್ಧ ದಾಳಿಯೂ ಪ್ರಮುಖ ಕಾರಣವಾಯಿತು.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 115 ರನ್ ಮಾತ್ರ ಕಲೆಹಾಕುವಲ್ಲಿ ಶಕ್ಯವಾಗಿದೆ. ನಾಯಕ ಕೇನ್ ವಿಲಿಯಮ್ಸನ್ 26 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಎನಿಸಿದೆ. ಪ್ರಿಯಂ ಗರ್ಗ್ ಮತ್ತು ಅಬ್ದುಲ್ ಸಮದ್ ಅವರು 20 ರನ್ ಗಡಿ ದಾಟಿದ ಇತರ ಬ್ಯಾಟರ್ಸ್. ಕೆಕೆಆರ್ ತಂಡದ ಟಿಮ್ ಸೌಥಿ, ಶಿವಮ್ ಮಾವಿ ಮತ್ತು ವರುಣ್ ಚಕ್ರವರ್ತಿ ಅವರಿಗೆ ತಲಾ 2 ವಿಕೆಟ್ ಬಿದ್ದಿತು.

    ಗೆಲ್ಲಲು ಹೈದರಾಬಾದ್ ತಂಡ ಒಡ್ಡಿದ 116 ರನ್​ಗಳ ಸಾಧಾರಣ ಸವಾಲನ್ನ ಎದುರಿಸಲು ಕೋಲ್ಕತಾ ನೈಟ್ ರೈಡರ್ಸ್ ಹರಸಾಹಸ ನಡೆಸಿತು. ಮೊದಲ ಹತ್ತು ಓವರ್​​ನಲ್ಲಿ ಐವತ್ತಕ್ಕೂ ಕಡಿಮೆ ರನ್ ಗಳಿಸಿದ್ದ ಕೆಕೆಆರ್ ತಂಡದ ಇನ್ನಿಂಗ್ಸ್ ಬಳಿಕ ವೇಗಗೊಂಡಿತು. ಶುಬ್ಮನ್ ಗಿಲ್ ಅಮೋಘ ಅರ್ಧಶತಕ ಭಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗಲೇ ಔಟಾದರು. ಬಳಿಕ ನಿತೀಶ್ ರಾಣಾ ಕೂಡ 18ನೇ ಓವರ್​ನಲ್ಲಿ ಔಟಾದರು. ಶುಬ್ಮನ್ ಗಿಲ್ ಮತ್ತು ನಿತೀಶ್ ರಾಣಾ 3ನೇ ವಿಕೆಟ್​ಗೆ 55 ರನ್ ಜೊತೆಯಾಟ ಆಡಿ ತಂಡದ ಚೇಸಿಂಗ್​ಗೆ ಪುಷ್ಟಿ ತುಂಬಿದ್ದರು. ಬಳಿಕ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಆಡಿ ತಂಡದ ಗೆಲುವನ್ನ ಸುಲಭಗೊಳಿಸಿದರು.

    ಪ್ಲೇ ಆಫ್ ಪ್ರವೇಶದ ಲೆಕ್ಕಾಚಾರ: 

    ಈ ಗೆಲುವಿನೊಂದಿಗೆ ಕೆಕೆಆರ್ ತಂಡದ ಪಾಯಿಂಟ್ಸ್ ಮೊತ್ತ 12ಕ್ಕೆ ಏರಿದೆ. 13 ಪಂದ್ಯಗಳಿಂದ ಅದು 12 ಅಂಕ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದೆ. ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿವೆ. ಈಗ ಉಳಿದಿರುವುದು ಒಂದು ಸ್ಥಾನ ಮಾತ್ರ. ಇದಕ್ಕಾಗಿ ಕೆಕೆಆರ್ ಜೊತೆಗೆ ಪಂಜಾಬ್, ರಾಜಸ್ಥಾನ್ ಮತ್ತು ಮುಂಬೈ ತಂಡಗಳು ಪೈಪೋಟಿ ನಡೆಸಿವೆ. ಈ ನಾಲ್ವರ ರೇಸ್​ನಲ್ಲಿ ಕೆಕೆಆರ್ 12 ಅಂಕಗಳೊಂದಿಗೆ ಒಂದು ಹೆಜ್ಜೆ ಮುಂದಿದೆ. ಪಂಜಾಬ್, ರಾಜಸ್ಥಾನ್ ಮತ್ತು ಮುಂಬೈ ತಂಡಗಳು 10 ಅಂಕಗಳನ್ನ ಹೊಂದಿವೆ. ರಾಜಸ್ಥಾನ್ ಮತ್ತು ಮುಂಬೈ ತಂಡಗಳಿಗೆ ಇನ್ನೂ ಎರಡು ಪಂದ್ಯಗಳು ಇವೆ. ಕೆಕೆಆರ್ ಮತ್ತು ಪಂಜಾಬ್​ಗೆ ಉಳಿದಿರುವುದು ಒಂದೇ ಪಂದ್ಯ. ಹೀಗಾಗಿ, ಪ್ಲೇ ಆಫ್ ರೇಸ್​ಗೆ ಭಾರೀ ಪೈಪೋಟಿ ಕೊನೆಯವರೆಗೂ ಇರಲಿದೆ. ಆದರೆ, ಉತ್ತಮ ರನ್ ರೇಟ್ ಹೊಂದಿರುವ ಕೋಲ್ಕತಾ ನೈಟ್ ರೈಡರ್ಸ್​ಗೆ ಹೆಚ್ಚು ಅವಕಾಶ ಇದೆ. ಕೊನೆಯ ಪಂದ್ಯವನ್ನ ಕೆಕೆಆರ್ ಗೆದ್ದರೆ ಪ್ಲೇ ಆಫ್ ಪ್ರವೇಶ ಸಿಗುವ ಎಲ್ಲಾ ಸಾಧ್ಯತೆ ಇದೆ.

    RESULT DATA:

    ಇದನ್ನೂ ಓದಿ: RCB vs PBKS- ಪ್ಲೇ ಆಫ್​ಗೆ ಆರ್​ಸಿಬಿ; ಚೇಸಿಂಗ್​ನಲ್ಲಿ ಹಳಿತಪ್ಪಿದ ಪಂಜಾಬ್

    ತಂಡಗಳು:

    ಕೋಲ್ಕತಾ ನೈಟ್ ರೈಡರ್ಸ್ ತಂಡ: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಟಿಮ್ ಸೌಥಿ, ಶಿವಮ್ ಮಾವಿ, ವರುಣ್ ಚಕ್ರವರ್ತಿ.

    ಸನ್​ರೈಸರ್ಸ್ ಹೈದರಾಬಾದ್ ತಂಡ: ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಉಮ್ರಾನ್ ಮಲಿಕ್.

    ಸ್ಕೋರು ವಿವರ:

    ಸನ್​ರೈಸರ್ಸ್ ಹೈದರಾಬಾದ್ 20 ಒವರ್ 115/8
    (ಕೇನ್ ವಿಲಿಯಮ್ಸನ್ 26, ಅಬ್ದುಲ್ ಸಮದ್ 25, ಪ್ರಿಯಮ್ ಗರ್ಗ್ 21 ರನ್ –ವರುಣ್ ಚಕ್ರವರ್ತಿ 26/2, ಟಿಮ್ ಸೌಥಿ 26/2, ಶಿವಮ್ ಮಾವಿ 29/2)

    ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್ 119/4
    (ಶುಬ್ಮನ್ ಗಿಲ್ 57, ನಿತೀಶ್ ರಾಣಾ 25 ರನ್, ದಿನೇಶ್ ಕಾರ್ತಿಕ್ ಅಜೇಯ 18 ರನ್ – ಜೇಸನ್ ಹೋಲ್ಡರ್ 32/2)
    Published by:Vijayasarthy SN
    First published: