RR vs KKR: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿದ ಕೊಲ್ಕತ್ತಾ ನೈಟ್ ರೈಡರ್ಸ್

IPL 2020, Kolkata Knight Riders and Rajasthan Royals : ಐಪಿಎಲ್​ನಲ್ಲಿ ಈವರೆಗೆ ಉಭಯ ತಂಡಗಳು 22 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 12 ಬಾರಿ ಗೆದ್ದಿದ್ರೆ, ಆರ್​ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ.

KKR

KKR

 • Share this:
  IPLನ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕೊಲ್ಕತ್ತಾ ನೈಟ್ ‌ರೈಡರ್ಸ್ 60 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಇದರೊಂದಿಗೆ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್​ಗೇರುವ​ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇದಕ್ಕೂ ಮುನ್ನ ಕೆಕೆಆರ್ ನೀಡಿದ 192 ರನ್​ ಟಾರ್ಗೆಟ್​  ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್​ಗೆ ಆರಂಭಿಕ ಆಘಾತ ನೀಡುವಲ್ಲಿ ಕೊಲ್ಕತ್ತಾ ಬೌಲರುಗಳು ಯಶಸ್ವಿಯಾದರು. ಮೊದಲ ಓವರ್​ನಲ್ಲೇ ರಾಬಿನ್ ಉತ್ತಪ್ಪ (6) ವಿಕೆಟ್ ಪಡೆಯುವ ಮೂಲಕ ಪ್ಯಾಟ್ ಕಮಿನ್ಸ್​ ಮೊದಲ ಯಶಸ್ಸು ತಂದುಕೊಟ್ಟರು. ಮೂರನೇ ಓವರ್​ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಿಡಿದ ಅದ್ಭುತ ಕ್ಯಾಚ್​ಗೆ ಬೆನ್ ಸ್ಟೋಕ್ಸ್ (18) ಹೊರ ನಡೆಯಬೇಕಾಯಿತು. ಇದರ ಬೆನ್ನಲ್ಲೇ ನಾಯಕ ಸ್ಟೀವ್ ಸ್ಮಿತ್ (4) ಎಸೆತದಲ್ಲಿ ಬೌಲ್ಡ್ ಆದರು. ಈ ಮೂಲಕ ಕಮಿನ್ಸ್ ಮೊದಲ ಮೂರು ಓವರ್​ನಲ್ಲೇ ಮೂರು ವಿಕೆಟ್ ಉರುಳಿಸಿದರು.

  ಬಳಿಕ ಶಿವಂ ಮಾವಿ ಎಸೆತದ 4ನೇ ಓವರ್​ನಲ್ಲಿ  ಸಂಜು ಸ್ಯಾಮ್ಸನ್ (1) ಹೊರ ನಡೆಯುವ ಮೂಲಕ ಕೆಕೆಆರ್ ಪಾಲಿನ ನಾಲ್ಕನೇ ಯಶಸ್ಸಾದರು. 5ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಕಮಿನ್ಸ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಿಯಾನ್ ಪರಾಗ್​ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆಗೆ ರಾಜಸ್ಥಾನ್​ ರಾಯಲ್ಸ್ 5 ಓವರ್​ನಲ್ಲಿ​ 5 ವಿಕೆಟ್ ಕಳೆದುಕೊಂಡು 37 ರನ್​ ಗಳಿಸಿತ್ತು.

  ಈ ಹಂತದಲ್ಲಿ ಜೊತೆಗೂಡಿದ ಜೋಸ್ ಬಟ್ಲರ್ ಹಾಗೂ ರಾಹುಲ್ ತಿವಾಠಿಯಾ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅದರಲ್ಲೂ ಬಟ್ಲರ್ ಬಿರುಸಿನ ಹೊಡೆತಗಳ ಮೂಲಕ ರನ್​ ಗತಿಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದರು. ಪರಿಣಾಮ 6ನೇ ವಿಕೆಟ್​ಗೆ 43 ರನ್​ಗಳ ಪಾಟರ್ನರ್​ಶಿಪ್ ಮೂಡಿ ಬಂದಿತ್ತು. ಇದೇ ವೇಳೆ ಬೌಲಿಂಗ್​ಗೆ ಇಳಿದ ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್​ಗೆ ಅಟ್ಟುವ ಆತುರದಲ್ಲಿ ಬಟ್ಲರ್ (35) ಬೌಂಡರಿ ಲೈನಲ್ಲಿ ಕ್ಯಾಚ್ ನೀಡಿದರು.

  ಇನ್ನು ತಂಡದ ಮೊತ್ತ 105 ಆಗಿದ್ದ ವೇಳೆ ರಾಹುಲ್ ತಿವಾಠಿಯ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಜೋಫ್ರಾ ಆರ್ಚರ್ ಕೇವಲ 6 ರನ್​ಗಳಿಸಿ ಹಿಂತಿರುಗಿದರು. ಬಳಿಕ ಬಂದ ಕಾರ್ತಿಕ್ ತ್ಯಾಗಿ (2) ಮಾವಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಶ್ರೇಯಸ್ ಗೋಪಾಲ್ ಅವರ ಅಜೇಯ 23 ರನ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 60 ರನ್​ಗಳಿಂದ ಸ್ಮಿತ್ ಪಡೆ ಸೋಲನುಭವಿಸಿತು.

   ಇದಕ್ಕೂ ಮೊದಲು ಟಾಸ್ ಗೆದ್ದ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಕಪ್ತಾನನ ನಿರ್ಧಾರವನ್ನು ಸಮರ್ಥಿಸುವಂತೆ ಮೊದಲ ಓವರ್​ನಲ್ಲೇ ನಿತೇಶ್ ರಾಣಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ ಕಡೆ ಕಳುಹಿಸಿದ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

  ಆದರೆ ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಪತನವಾದರೂ, ಕೆಕೆಆರ್ ಬ್ಯಾಟ್ಸ್​ಮನ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಆರ್ಚರ್ ಓವರ್​ನ್ನು ಹೊರತುಪಡಿಸಿ ಶುಭ್​ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಇತರೆ ಬೌಲರುಗಳನ್ನು ದಂಡಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 55 ಕ್ಕೆ ಬಂದು ನಿಂತಿತು.

  ತಂಡದ ಮೊತ್ತ 73 ಆಗಿದ್ದ ವೇಳೆ ರಾಹುಲ್ ತೆವಾಠಿಯಾ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಶುಭ್​ಮನ್ ಗಿಲ್ (36) ಬಟ್ಲರ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಸುನೀಲ್ ನರೈನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. 39 ರನ್​ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ತ್ರಿಪಾಠಿ (39) ಉತ್ತಪ್ಪ ಹಿಡಿದ ಉತ್ತಮ ಕ್ಯಾಚ್​ಗೆ ನಿರ್ಗಮಿಸಲೇಬೇಕಾಯಿತು. ಬಳಿಕ ಬಂದ ದಿನೇಶ್ ಕಾರ್ತಿಕ್ (0) ಬಂದ ವೇಗದಲ್ಲೇ ಹಿಂತಿರುಗಿದರು.

  ಈ ಹಂತದಲ್ಲಿ ಜೊತೆಗೂಡಿದ ಇಯಾನ್ ಮೋರ್ಗನ್ ಹಾಗೂ ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ರಸೆಲ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್​ಗಳ ಮೂಲಕ ರಂಜಿಸಿದರು. ಕೇವಲ 11 ಎಸೆತಗಳಲ್ಲಿ 25 ರನ್ ಬಾರಿಸಿದ ರಸೆಲ್ ತ್ಯಾಗಿ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು.

  ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ನಾಯಕ ಮೋರ್ಗನ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಮಿನ್ಸ್ ಜೊತೆಗೂಡಿ ಬೆನ್ ಸ್ಟೋಕ್ಸ್ ಎಸೆದ 19ನೇ ಓವರ್​ನಲ್ಲಿ 23 ರನ್ ಕಲೆಹಾಕಿದರು. ಇನ್ನು ಕೊನೆಯ ಓವರ್​ನಲ್ಲಿ 9 ರನ್ ಕಲೆಹಾಕಿದ ಮೋರ್ಗನ್ ತಂಡದ ಮೊತ್ತವನ್ನು 191 ಕ್ಕೆ ತಂದು ನಿಲ್ಲಿಸಿದರು.

  ಕೊನೆಯವರೆಗೂ ಬ್ಯಾಟ್ ಬೀಸಿದ ಕೆಕೆಆರ್ ನಾಯಕ 6 ಭರ್ಜರಿ ಸಿಕ್ಸರ್​ ಹಾಗೂ 5 ಬೌಂಡರಿಗಳೊಂದಿಗೆ 35 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು. ರಾಜಸ್ಥಾನ್ ಪರ 4 ಓವರ್​ನಲ್ಲಿ 25 ರನ್ ನೀಡಿ 3 ವಿಕೆಟ್ ಉರುಳಿಸಿ ರಾಹುಲ್ ತೆವಾಠಿಯಾ ಯಶಸ್ವಿ ಬೌಲರ್ ಎನಿಸಿಕೊಂಡರು.

  ಇನ್ನು ಕೆಕೆಆರ್ ಪರ ಮಾರಕ ದಾಳಿ ಸಂಘಟಿಸಿದ ಪ್ಯಾಟ್ ಕಮಿನ್ಸ್ 4 ಓವರ್​ನಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದರೆ ಶಿವಂ ಮಾವಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಉರುಳಿಸಿದರು. ಈ ಭರ್ಜರಿ ಗೆಲುವಿನೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರೆ, ರಾಜಸ್ಥಾನ್ ರಾಯಲ್ಸ್​ ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತು.

  ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್  ಹಾಗೂ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ಪ್ಲೇ ಆಫ್ ಪ್ರವೇಶ ನಿರ್ಧಾರವಾಗಲಿದೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ​​ ತಂಡ ಪ್ರಕಟ
  Published by:zahir
  First published: