KKR vs DC- Qualifier2: ಕೆಕೆಆರ್-ಡೆಲ್ಲಿ ಸೂಪರ್ ಥ್ರಿಲ್ಲರ್ ಮ್ಯಾಚ್; ಫೈನಲ್​ಗೆ ಕೋಲ್ಕತಾ

Kolkata Knight Riders vs Delhi Capitals Match- ಎರಡನೇ ಕ್ವಾಲಿಫಯರ್​ನಲ್ಲಿ ಡೆಲ್ಲಿ ವಿರುದ್ಧ ರೋಚಕ ಗೆಲುವು ಸಾಧಿಸಿ ಕೆಕೆಆರ್ ಫೈನಲ್ ತಲುಪಿದೆ. ಅ. 15ರಂದು ಚೆನ್ನೈ ಮತ್ತು ಕೋಲ್ಕತಾ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ವೆಂಕಟೇಶ್ ಅಯ್ಯರ್

ವೆಂಕಟೇಶ್ ಅಯ್ಯರ್

 • Share this:
  ಶಾರ್ಜಾ, ಅ. 13: ಕೋಲ್ಕತಾ ತಂಡ ಗೆಲುವಿನ ಸಮೀಪ ಬಂದು ಎಡವಿಬಿಡುತ್ತದೇನೋ ಎಂದು ಭಾವಿಸುವಷ್ಟರಲ್ಲಿ ರೋಚಕ ಗೆಲುವು ಪಡೆದು ಐಪಿಎಲ್ ಫೈನಲ್ ತಲುಪಿದೆ. ಇಂದು ನಡೆದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 3 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಗೆಲ್ಲಲು 136 ರನ್ ಗುರಿ ಪಡೆದ ಕೋಲ್ಕತಾ ಕೊನೆಯ ಒಂದು ಬಾಲ್ ಇರುವಂತೆ ರೋಚಕಾತಿರೋಚಕ ರೀತಿಯಲ್ಲಿ ಸೋಲಿನ ದವಡೆಯಿಂದ ಪಾರಾಗಿ ಗೆಲುವು ಪಡೆಯಿತು. ಸೋಲುವುದು ನಿಶ್ಚಿತ ಎಂಬಂತಿದ್ದ ಸಂದರ್ಭದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಸೋಲಪ್ಪದೆ ಕೊನೆಯವರೆಗೂ ಹೋರಾಡುವ ಕೆಚ್ಚು ತೋರಿದರು. 7 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡರೂ ಕೆಕೆಆರ್ ತಂಡ ಅಂತಿಮವಾಗಿ ಗೆಲುವಿನ ನಗೆ ಬೀರಿತು. ಈ ಮೂಲಕ ಮೂರನೇ ಬಾರಿ ಐಪಿಎಲ್ ಟೂರ್ನಿಯ ಫೈನಲ್ ತಲುಪಿತು.

  ಯುಎಇಯಲ್ಲಿ ನಡೆದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಕೆಕೆಆರ್ ಆರಂಭಿಕ ಬ್ಯಾಟರ್ಸ್ ಶುಬ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಇಬ್ಬರೂ ತಮ್ಮ ಫಾರ್ಮ್ ಅನ್ನು ಇಲ್ಲಿಯೂ ಮುಂದುವರಿಸಿದರು. ಮೊದಲ ವಿಕೆಟ್​ಗೆ 12 ಒವರ್​ನಲ್ಲಿ ಅವರಿಬ್ಬರು 96 ರನ್ ಸೇರಿಸಿದ್ದು ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಯ್ಯರ್ ಔಟಾದ ಬಳಿಕ ಗಿಲ್ ಕೆಲ ಹೊತ್ತು ನಿಂತು ಆಡಿದರಾದರೂ ವಿಕೆಟ್ ಪತನ ನಿಲ್ಲಲಿಲ್ಲ. ನಿತೀಶ್ ರಾಣಾ ಎರಡನೇಯವರಾಗಿ ಔಟಾದಾಗ ತಂಡದ ಸ್ಕೋರು 123 ರನ್ ಇತ್ತು. ಆಗ ಗೆಲುವಿಗೆ 4 ಓವರ್​ನಲ್ಲಿ ಬೇಕಿದ್ದದ್ದು ಕೇವಲ 13 ರನ್ ಮಾತ್ರ. ಶುಬ್ಮನ್ ಗಿಲ್ ಭರ್ಜರಿ ಫಾರ್ಮ್​ನಲ್ಲಿದ್ದರು. ಮುಂಬರಲಿರುವ ಬ್ಯಾಟುಗಾರರ ಪೈಕಿ ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಸುನೀಲ್ ನರೈನ್ ಮ್ಯಾಚ್ ವಿನ್ನರ್​ಗಳೇ ಆಗಿದ್ದರು. ಕೆಕೆಆರ್ ಸೋಲಿನ ಸುಳಿಯಲ್ಲಿ ಸಿಲುಕುತ್ತದೆ ಎಂದು ಯಾರೂ ಅಂದಾಜಿಸಲು ಸಾಧ್ಯ ಇರಲಿಲ್ಲ. ಆದರೆ ಅಂಥದ್ದೊಂದು ಬೆಳವಣಿಗೆ ಆಗಿಯೇ ಹೋಯಿತು.

  ರಾಣಾ ವಿಕೆಟ್ ಸೇರಿದಂತೆ 7 ರನ್ ಅಂತರದಲ್ಲಿ 6 ವಿಕೆಟ್ ಪತನಗೊಂಡವು. ನಾಲ್ವರು ಬ್ಯಾಟರ್ಸ್ ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್​ಗೆ ಮರಳಿದರು. 24 ಬಾಲ್​ನಲ್ಲಿ 13 ರನ್ ಗಳಿಸಬೇಕಿದ್ದ ಕೆಕೆಆರ್​ನ ಈಕ್ವೇಶನ್ ಬರಬರುತ್ತಾ ಕ್ಲಿಷ್ಟವಾಗುತ್ತಾ ಹೋಯಿತು. ಅವೇಶ್ ಖಾನ್ ಅವರ 17ನೇ ಓವರ್​ನಲ್ಲಿ 2 ರನ್, 1 ವಿಕೆಟ್; ರಬಡ ಅವರ 18ನೇ ಓವರ್​ನಲ್ಲಿ 1 ರನ್ 1 ವಿಕೆಟ್; ನೋರ್ಟಿಯಾ ಅವರ 19ನೇ ಓವರ್​ನಲ್ಲಿ 3 ರನ್ 1 ವಿಕೆಟ್ ಬಂದು ಕೆಕೆಆರ್ ಕೊನೆಯ ಓವರ್​ನಲ್ಲಿ ಗಳಿಸಬೇಕಾಗಿ ಬಂದದ್ದು 7 ರನ್.

  ಆರ್ ಅಶ್ವಿನ್ ಅವರೂ ಕೂಡ ಕೊನೆಯ ಓವರ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಎರಡು ವಿಕೆಟ್ ಪಡೆದರು. ಆರ್​ಸಿಬಿಯನ್ನ ಚಂಡಾಡಿದ್ದ ಸುನೀನ್ ನರೈನ್ ಅವರು ಅಶ್ವಿನ್ ಎಸೆತಕ್ಕೆ ಬಲಿಯಾದಾಗ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಗೆಲುವಿನ ನಗೆಗಳು ಮೂಡಲು ಆರಂಭಿಸಿದ್ದವು. ಎರಡು ಎಸೆತದಲ್ಲಿ 6 ರನ್ ಗಳಿಸಬೇಕಾಗಿ ಬಂದಿತು. ಆದರೆ, ರಾಹುಲ್ ತ್ರಿಪಾಠಿ ಐದನೇ ಎಸೆತವನ್ನ ಸಿಕ್ಸರ್ ಭಾರಿಸಿ ಕೆಕೆಆರ್​ಗೆ ರೋಚಕ ಗೆಲುವು ತಂದುಕೊಟ್ಟರು.

  ಇದಕ್ಕೆ ಮುನ್ನ ಟಾಸ್ ಸೋತು ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟ್ ಮಾಡಿತು. ಶ್ರೇಯಸ್ ಅಯ್ಯರ್, ಶಿಖರ್ ಧವನ್, ಪೃಥ್ವಿ ಶಾ, ಮಾರ್ಕಸ್ ಸ್ಟಾಯ್ನಿಸ್, ಶಿಮ್ರಾನ್ ಹೆಟ್ಮೆಯರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 135 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತು. ಕೆಕೆಆರ್​ನ ಎಲ್ಲಾ ಬೌಲರ್​ಗಳು ರನ್ ನೀಡಲು ಜಿಪುಣತನ ತೋರಿದರು. ವರುಣ್ ಚಕ್ರವರ್ತಿ 26 ರನ್ನಿತ್ತು 2 ವಿಕೆಟ್ ಪಡೆದರೆ, ಲಾಕೀ ಫರ್ಗ್ಯೂಸನ್ ಮತ್ತು ಶಿವಮ್ ಮಾವಿ ಇಬ್ಬರೂ ತಲಾ ಒಂದೊಂದು ವಿಕೆಟ್ ಪಡೆದರು.

  ಆರೆಂಜ್ ಕ್ಯಾಪ್ ಪೈಪೋಟಿ:

  ಆರೆಂಜ್ ಕ್ಯಾಪ್ ರೇಸ್​ನಲ್ಲಿರುವ ಶಿಖರ್ ಧವನ್ ಇವತ್ತು 36 ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾದರು. ಇವತ್ತಿನ ಸ್ಕೋರ್ ಬಳಿಕ ಅವರು ಈ ಐಪಿಎಲ್ ಸೀಸನ್​ನಲ್ಲಿ ಗಳಿಸಿರುವ ರನ್​ಗಳ ಮೊತ್ತ 607ಕ್ಕೆ ಏರಿತು. ಆರೆಂಜ್ ಕ್ಯಾಪ್ ರೇಸ್​ನಲ್ಲಿ ಈಗ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಾಡ್ ಅವರನ್ನ ಹಿಂದಿಕ್ಕಿದ್ದಾರೆ. ಆದರೆ, ಕೆಎಲ್ ರಾಹುಲ್ ಅವರೇ ಈಗಲೂ ಟಾಪ್​ನಲ್ಲಿ ಇದ್ದಾರೆ. ಕೆಎಲ್ ರಾಹುಲ್ ಒಟ್ಟು 626 ರನ್ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಬ್ಬ ಆಟಗಾರ ಡುಪ್ಲೆಸಿ 547 ರನ್ ಗಳಿಸಿದ್ದಾರೆ. ಈಗ ಕೆಎಲ್ ರಾಹುಲ್ ಅವರನ್ನ ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆಯುವ ಸಾಧ್ಯತೆ ಇರುವುದು ಋತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿಗೆ ಮಾತ್ರವೇ.

  ಕೆಕೆಆರ್ ತಂಡ ಈ ಗೆಲುವಿನೊಂದಿಗೆ ಅ. 15ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನ ಎದುರಿಸಲಿದ್ದಾರೆ. ಇಲ್ಲಿ ಚೆನ್ನೈ ತಂಡ ಒಂಬತ್ತನೇ ಬಾರಿ ಫೈನಲ್ ಪ್ರವೇಶಿಸಿದ್ದು, ನಾಲ್ಕನೇ ಬಾರಿ ಪ್ರಶಸ್ತಿ ಪಡೆಯುವ ಪ್ರಯತ್ನ ಮಾಡುತ್ತಿದೆ. ಇನ್ನು, ಕೆಕೆಆರ್ ತಂಡ ಫೈನಲ್ ಪ್ರವೇಶಿಸುತ್ತಿರುವುದು ಇದು ಮೂರನೇ ಬಾರಿ. ಹಿಂದೆ ಫೈನಲ್ ಪ್ರವೇಶಿಸಿದ ಎರಡೂ ಸಂದರ್ಭದಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯೂ ಅದು ಆಗುತ್ತದಾ ಕಾದುನೋಡಬೇಕು.

  ತಂಡಗಳು:

  ಕೋಲ್ಕತಾ ನೈಟ್ ರೈಡರ್ಸ್ ತಂಡ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಲಾಕಿ ಫರ್ಗ್ಯೂಸನ್, ಶಿವಮ್ ಮಾವಿ, ವರುಣ್ ಚಕ್ರವರ್ತಿ.

  ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಮಾರ್ಕಸ್ ಸ್ಟಾಯ್ನಿಸ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಅವೇಶ್ ಖಾನ್, ಆನ್ರಿಚ್ ನೋರ್ಟಿಯಾ.

  ಸ್ಕೋರು ವಿವರ:

  ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ 135/5
  (ಶಿಖರ್ ಧವನ್ 36, ಶ್ರೇಯಸ್ ಅಯ್ಯರ್ ಅಜೇಯ 30, ಪೃಥ್ವಿ ಶಾ 18, ಮಾರ್ಕಸ್ ಸ್ಟಾಯ್ನಿಸ್ 18, ಶಿಮ್ರಾನ್ ಹೆಟ್ಮೆಯರ್ 17 ರನ್- ವರುಣ್ ಚಕ್ರವರ್ತಿ 26/2)

  ಕೋಲ್ಕತಾ ನೈಟ್ ರೈಡರ್ಸ್ 19.5 ಓವರ್ 136/7
  (ವೆಂಕಟೇಶ್ ಅಯ್ಯರ್ 55, ಶುಬ್ಮನ್ ಗಿಲ್ 46, ನಿತೀಶ್ ರಾಣಾ 13 ರನ್, ರಾಹುಲ್ ತ್ರಿಪಾಠಿ ಅಜೇಯ 12 ರನ್- ಕಗಿಸೋ ರಬಡ 23/2, ಆರ್ ಅಶ್ವಿನ್ 27/2, ಆನ್ರಿಕ್ ನೋರ್ಟಿಯಾ 31/2)
  Published by:Vijayasarthy SN
  First published: