KKR beat RCB- ಸುನೀಲ್ ಆದ್ಭುತ ಆಟ; ಇಲಿಮಿನೇಟರ್​ನಲ್ಲಿ ಕೆಕೆಆರ್​ಗೆ ಗೆಲುವು; ಆರ್​ಸಿಬಿ ಔಟ್

IPL 2021, Eliminator Match RCB vs KKR- ಕೆರಿಬಿಯನ್ ಆಲ್​ರೌಂಡರ್ ಸುನೀಲ್ ನರೈನ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಕೋಲ್ಕತಾ ತಂಡ ಆರ್​ಸಿಬಿಯನ್ನ 4 ವಿಕೆಟ್​ಗಳಿಂದ ಸೋಲಿಸಿ ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಕೆಕೆಆರ್ ಮತ್ತು ಆರ್​ಸಿಬಿ

ಕೆಕೆಆರ್ ಮತ್ತು ಆರ್​ಸಿಬಿ

 • Share this:
  ಶಾರ್ಜಾ, ಅ. 11: ಸುನೀಲ್ ನರೈನ್ ಅವರ ಆಲ್​ರೌಂಡ್ ಆಟದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಆರ್​ಸಿಬಿಯನ್ನ ಮಣಿಸಿ ಎರಡನೇ ಕ್ವಾಲಿಫಯರ್​ಗೆ ಅರ್ಹತೆ ಪಡೆದಿದೆ. ಇಂದು ನಡೆದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಕೋಲ್ಕತಾ 4 ವಿಕೆಟ್​ಗಳಿಂದ ರೋಚಕ ಜಯ ಸಾಧಿಸಿತು. ಗೆಲ್ಲಲು ಪಡೆದ 139 ರನ್ ಗುರಿಯನ್ನ 2 ಎಸೆತ ಬಾರಿ ಇರುವಂತೆ ತಲುಪಿತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ಕಪ್ ಎತ್ತಿ ಹಿಡಿಯಲು ಆಗದೇ ನಿರ್ಗಮಿಸಿದೆ. ಆದರೆ, ಸೋಲೊಪ್ಪುವ ಮುನ್ನ ಆರ್​ಸಿಬಿಯ ಬೌಲರ್​ಗಳು, ಅದರಲ್ಲೂ ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ಅವರು ಅದ್ಭುತ ಪ್ರದರ್ಶನ ನೀಡಿ ತಂಡವನ್ನ ಗೆಲುವಿನ ಸಮೀಪ ತರುವಲ್ಲಿ ಯಶಸ್ವಿಯಾದರು.

  ಸುನೀಲ್ ನರೈನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ಅವರ ಆಟವೇ ಈ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ಟರ್ನಿಂಗ್ ಪಾಯಿಂಟ್​ಗಳನ್ನ ನೀಡಿದ್ದು. ಬೌಲಿಂಗ್​ನಲ್ಲಿ ಮ್ಯಾಕ್ಸ್​ವೆಲ್, ಕೊಹ್ಲಿ, ಭರತ್ ಸೇರಿ ನಾಲ್ಕು ಪ್ರಮುಖ ವಿಕೆಟ್​ಗಳನ್ನ ಕಿತ್ತ ಸುನೀಲ್ ನರೈನ್, ಬ್ಯಾಟಿಂಗ್​ನಲ್ಲಿ ಕೇವಲ 15 ಬಾಲ್​ನಲ್ಲಿ 26 ರನ್ ಚಚ್ಚಿದರು. ಗೆಲುವು ಕಷ್ಟಕರ ಎಂಬಂತಿದ್ದ ಪರಿಸ್ಥಿತಿಯಲ್ಲಿ ಸುನೀಲ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಕೆಕೆಆರ್ ತಂಡದ ಗೆಲುವಿನ ಹಾದಿ ಸುಗಮಗೊಂಡಿತು.

  ಅದೇನೇ ಇದ್ದರೂ ಆರ್​ಸಿಬಿ ಬೌಲರ್​ಗಳು ವಿಕೆಟ್​ಗಾಗಿ ಅವಿರತ ಪ್ರಯತ್ನ ನಡೆಸುತ್ತಲೇ ಇದ್ದರು. ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರೂ ತಲಾ ಎರಡು ವಿಕೆಟ್ ಪಡೆದರು. 17ನೇ ಓವರ್​ನಲ್ಲಿ ಸುನೀಲ್ ನರೈನ್ ಅವರ ಕ್ಯಾಚನ್ನು ಪಡಿಕ್ಕಲ್ ಕೈಚೆಲ್ಲದೇ ಹೋಗಿದ್ದರೆ ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತು ಹೊಸ ದಾಖಲೆ ಬರೆಯುತ್ತಿದ್ದರು. ಆದರೆ, ಅದು ದಾಖಲೆ ಸಮ ಮಾಡಲಷ್ಟೇ ಸಾಧ್ಯವಾಯಿತು.

  ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 138 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಸುನೀಲ್ ನರೈನ್ ಸ್ಪಿನ್ ಗಾಳಕ್ಕೆ ಆರ್​ಸಿಬಿ ಬ್ಯಾಟರ್ಸ್ ಬಳಿ ಹೆಚ್ಚು ಉತ್ತರ ಇರಲಿಲ್ಲ. ನಾಲ್ಕು ಪ್ರಮುಖ ವಿಕೆಟ್​ಗಳನ್ನ ಸುನೀಲ್ ಉರುಳಿಸಿದರು. ವಿರಾಟ್ ಕೊಹ್ಲಿ, ಕೆಎಸ್ ಭರತ್, ಎಬಿ ಡೀವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನ ಪೆವಿಲಿಯನ್​ಗೆ ಮರಳಿಸಿದ ಕೆರಿಬಿಯನ್ ಬೌಲರ್ ಸುನೀಲ್ ನರೈನ್ ಅವರು ಬೆಂಗಳೂರಿಗರಿಗೆ ಮಾರಕವಾಗಿ ಪರಿಣಮಿಸಿದರು. ಇಡೀ ಟೂರ್ನಿಯಲ್ಲಿ ಆರ್​ಸಿಬಿಗೆ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 15 ರನ್ ಗಳಿಸಲು ಶಕ್ಯರಾದರು.

  ಬೆಂಗಳೂರು ತಂಡಕ್ಕೆ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭವೇನೋ ಒದಗಿಸಿದರು. ಮೊದಲ ವಿಕೆಟ್​ಗೆ ಇವರಿಬ್ಬರು ಐದು ಓವರ್​ನಲ್ಲಿ 49 ರನ್ ಸೇರಿಸಿದಾಗ ಆರ್​ಸಿಬಿಗೆ ಬೃಹತ್ ಮೊತ್ತ ದಕ್ಕುವ ನಿರೀಕ್ಷೆಗಳಿದ್ದವು. ಆದರೆ, ಪಡಿಕ್ಕಲ್ ನಿರ್ಗಮನದ ಬಳಿಕ ಆರ್​ಸಿಬಿ ಇನ್ನಿಂಗ್ಸ್ ನಿಧಾನಗೊಂಡಿತು. ಹಿಂದಿನ ಡೆಲ್ಲಿ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿದ್ದ ಕೆಎಸ್ ಭರತ್ ಅವರು ರನ್ ಗಳಿಸಲು ತಡವರಿಸಿದರು. 16 ಬಾಲ್​ನಲ್ಲಿ 9 ರನ್ ಗಳಿಸಿ ಭರತ್ ಅವರು ಸುನೀಲ್ ಸ್ಪಿನ್ ಕರಾಮತ್ತಿಗೆ ಬಲಿಯಾದರು. ಬಳಿಕ ಸುನೀಲ್ ನರೈನ್ ಅವರ ಅದ್ಬುತ ಎಸೆತಗಳಿಗೆ ವಿರಾಟ್ ಕೊಹ್ಲಿ ಮತ್ತು ಎಬಿ ಡೀವಿಲಿಯರ್ಸ್ ಇಬ್ಬರೂ ಔಟಾದರು. ವಿರಾಟ್ ಕೊಹ್ಲಿ 33 ಬಾಲ್​ನಲ್ಲಿ 39 ರನ್ ಗಳಿಸಿದರೆ, ಎಬಿ ಡೀವಿಲಿಯರ್ಸ್ ಅವರ ಕಳಪೆ ಫಾರ್ಮ್ ಇಲ್ಲಿಯೂ ಮುಂದುವರಿಯಿತು. ಅವರು 11 ರನ್ ಗಳಿಸಿ ಔಟಾದರು. ಗ್ಲೆನ್ ಮ್ಯಾಕ್ಸ್​ವೆಲ್ ಅವರು ಆರ್​ಸಿಬಿ ಇನ್ನಿಂಗ್ಸ್​ನಲ್ಲಿ ಸ್ವಲ್ಪ ಭರವಸೆ ಮೂಡಿಸಿದರಾದರೂ ಅದು ಹೆಚ್ಚು ಹೊತ್ತು ನಿಲ್ಲಲಿಲ್ಲ.

  ಕೆಕೆಆರ್ ತಂಡದ ಸುನೀಲ್ ನರೈನ್ ವಿಜೃಂಬಿಸಿದರೆ, ಲಾಕೀ ಫರ್ಗ್ಯೂಸನ್ ಕೂಡ 2 ವಿಕೆಟ್ ಕಬಳಿಸಿದರು. ಆದರೆ, ಸ್ಪಿನ್ ಬೌಲರ್​ಗಳಾದ ಶಾಕಿಬ್ ಅಲ್ ಹಸನ್ ಮತ್ತು ವರುಣ್ ಚಕ್ರವರ್ತಿ ಅವರು ವಿಕೆಟ್ ಪಡೆಯದಿದ್ದರೂ ಹೆಚ್ಚು ರನ್ ಕೊಡದೆ ಆರ್​ಸಿಬಿ ಬ್ಯಾಟ್ಸ್​ಮನ್​ಗಳನ್ನ ಹತಾಶೆಗೊಳಿಸುವಲ್ಲಿ ಯಶಸ್ವಿಯಾದರು.

  ಇದನ್ನೂ ಓದಿ: IPL 2021- ಈತ ಭಾರತದ ಕ್ರಿಸ್ ಗೇಲ್; ಅಜ್ಜಿಯಿಂದ ಕ್ರಿಕೆಟಿಗನಾಗಿ ಬೆಳೆದ ಫ್ಯೂಚರ್ ಸ್ಟಾರ್

  ಎರಡನೇ ಕ್ವಾಲಿಫಯರ್ ಪಂದ್ಯ: ಅಕ್ಟೋಬರ್ 13ರಂದು ಇದೇ ಶಾರ್ಜಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಅಕ್ಟೋಬರ್ 15ರಂದು ದುಬೈನಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸೆಣಸಲಿದ್ದಾರೆ.

  ತಂಡಗಳು:

  ಆರ್​ಸಿಬಿ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಡ್ಯಾನ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್

  ಕೆಕೆಆರ್: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಲಾಕೀ ಫರ್ಗ್ಯೂಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ.
  RESULT DATA:
  ಸ್ಕೋರು ವಿವರ:

  ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ 138/7
  (ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಗ್ಲೆನ್ ಮ್ಯಾಕ್ಸ್​ವೆಲ್ 15 ರನ್, ಶಹಬ್ಬಾಸ್ ಅಹ್ಮದ್ 13, ಎಬಿ ಡೀವಿಲಿಯರ್ಸ್ 11 ರನ್- ಸುನೀಲ್ ನರೈನ್ 21/4. ಲಾಕೀ ಫರ್ಗೂಸನ್ 30/2)

  ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್ 139/6
  (ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ಸುನೀಲ್ ನರೈನ್ 26, ನಿತೀಶ್ ರಾಣಾ 23 ರನ್ – ಯುಜವೇಂದ್ರ ಚಹಲ್ 16/2, ಹರ್ಷಲ್ ಪಟೇಲ್ 19/2, ಮೊಹಮ್ಮದ್ ಸಿರಾಜ್ 19/2)
  Published by:Vijayasarthy SN
  First published: