ಐಪಿಎಲ್ 2021 (IPL 2021) ದ್ವಿತಿಯಾರ್ಧದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkatta Night Riders) ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡವನ್ನು ಕೇವಲ 93 ರನ್ಗಳಿಗೆ ಆಲೌಟ್ ಮಾಡಿದ್ದ ಕೆಕೆಆರ್ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ತನ್ನ ನೆಟ್ ರನ್ರೇಟ್ ಸಹ ಉತ್ತಮಗೊಳಿಸಿಕೊಂಡಿದ್ದು, ಕೆಕೆಆರ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಆದರೆ, ಮತ್ತೊಂದೆಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ (MI) ಸತತ ಸೋಲಿನಿಂದ ಕಂಗೆಟ್ಟಿದೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೋಲುವ ಮೂಲಕ ಅಭಿಯಾನವನ್ನು ಆರಂಭಿಸಿದೆ. ಹೀಗಾಗಿ ಪ್ಲೇ ಆಫ್ಗೆ ಅವಕಾಶ ಪಡೆಯಲು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದದ್ದು ಎರಡೂ ತಂಡಕ್ಕೆ ಅಗತ್ಯವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ಬಲಿಷ್ಠವಾಗಿದೆ ಕೆಕೆಆರ್:
ಇತರೆ ತಂಡಗಳಿಗೆ ಹೋಲಿಕೆ ಮಾಡಿದರೆ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠವಾಗಿಯೇ ಇದೆ. ಆರಂಭಿಕರಾಗಿ ಶುಭ್ಮನ್ ಗಿಲ್, ನಿತೀಶ್ ರಾಣಾ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಇಯಾನ್ ಮಾರ್ಗನ್, ತ್ರಿಪಾಠಿ, ದಿನೇಶ್ ಕಾರ್ತಿಕ್ ಯಾವುದೇ ಸಂದರ್ಭದಲ್ಲಿ ತಂಡಕ್ಕೆ ನೆರವಾಗಬಲ್ಲ ಬ್ಯಾಟ್ಸ್ಮನ್ಗಳಾದರೆ, ಕೊನೆಯಲ್ಲಿ ಆ್ಯಂಡ್ರೆ ರಸೆಲ್ ತಮ್ಮ ಭರ್ಜರಿ ಹೊಡೆತಗಳ ಮೂಲಕ ರನ್ ರೇಟ್ ಏರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಒಂದೆಡೆ ಪ್ರಸಿದ್ಧ ಕೃಷ್ಣ ವೇಗದ ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿದ್ದರೆ, ತಂಡದಲ್ಲಿ ಇಬ್ಬರು ಮಿಸ್ಟ್ರಿ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಲ್ಲದೆ, ಶಿವಮ್ ಮಾವಿ ಮತ್ತು ಆ್ಯಂಡ್ರೆ ರಸೆಲ್ ಸಹ ಉತ್ತಮ ಬೌಲಿಂಗ್ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಹೇಗೆ ನೋಡಿದರೂ ಎಲ್ಲಾ ರೀತಿಯಲ್ಲೂ ಕೆಕೆಆರ್ ಬಲಿಷ್ಠ ತಂಡ ಹೌದು. ಆದರೆ, ಪಂದ್ಯದ ವೇಳೆ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.
ಲಯಕ್ಕೆ ಮರಳುತ್ತಾ ಮುಂಬೈ?
ರನ್ನಿಂಗ್ ಚಾಂಪಿಯನ್ ಮುಂಬೈ ಈ ಆವೃತ್ತಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದೆ. ಸಿಎಸ್ಕೆ ವಿರುದ್ಧ ಕೇವಲ 156 ರನ್ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲನುಭವಿಸಿದ್ದು ಸಾಮಾನ್ಯವಾಗಿ ತಂಡದ ಆತ್ಮವಿಶ್ವಾಸವನ್ನು ಕದಡಿದೆ. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಗೆ ರೆಸ್ಟ್ ನೀಡಲಾಗಿತ್ತು. ಮುಂಬೈ ಸೋಲಿಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು. ಆದರೆ, ಇಂದಿನ ಪಂದ್ಯಕ್ಕೆ ಇಬ್ಬರೂ ಲಭ್ಯರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: RCB problems- ಕೆಕೆಆರ್ ಎದುರು ಆರ್ಸಿಬಿ ತಂಡ ಸೋತಿದ್ದು ಯಾಕೆ? ಬ್ರಿಯನ್ ಲಾರಾ ಕೊಟ್ಟ ಕಾರಣಗಳಿವು
ಇನ್ನೂ ಆರಂಭಿಕರಾಗಿ ಕ್ವಿಂಟನ್ ಡಿಕಾಕ್ ಫಾರ್ಮ್ನಲ್ಲಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡುತ್ತಾರೆ. ಆದರೆ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸದೆ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕಿರೋನ್ ಪೊಲಾರ್ಡ್ ಪಾರ್ಮ್ಗೆ ಮರಳಿದರೆ ಎಂತಹ ಪಂದ್ಯವನ್ನೂ ಬದಲಿಸುವ ಶಕ್ತಿ ಇರುವ ಆಟಗಾರರು. ಆದರೆ, ಈ ಎಲ್ಲಾ ಬ್ಯಾಟ್ಸ್ಮನ್ಗಳು ಇಂದು ಮತ್ತೆ ಫಾರ್ಮ್ ಮರಳುತ್ತಾರ? ಎಂಬುದು ಪ್ರಶ್ನೆ.
ಇದನ್ನೂ ಓದಿ: DC vs SRH- ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ ನಿರಾಯಾಸ ಗೆಲುವು; ಮತ್ತೆ ಅಗ್ರಸ್ಥಾನಕ್ಕೇರಿದ ಪಂತ್ ಪಡೆ
ಇನ್ನೂ ಬೌಲಿಂಗ್ ವಿಭಾಗದಲ್ಲಿ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ರಾಹುಲ್ ಚಾಹರ್ ಲೆಗ್ ಸ್ಪಿನ್ ನಿಜಕ್ಕೂ ಪರಿಣಾಮಕಾರಿಯಾಗಿದೆ. ಸಿಎಸ್ಕೆ ಎದುರಿನ ಪಂದ್ಯದಲ್ಲಿ ಮುಂಬೈ ಬೌಲಿಂಗ್ ಪರಿಣಾಮಕಾರಿಯಾಗಿಯೇ ಇತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಎದುರುನೋಡಲಾಗುತ್ತಿದೆ. ಒಟ್ಟಾರೆ ಇಂದಿನ ಪಂದ್ಯ ಇಬ್ಬರ ಪಾಲಿಗೂ ನಿರ್ಣಾಯವಾಗಿದ್ದು, ಕ್ರಿಕೆಟ್ ಪ್ರೇಮಿಗಳ ನಡುವೆ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ