ದುಬೈ; ಮಂಗಳವಾರ ದುಬೈನಲ್ಲಿ ನಡೆದ 32ನೇ ಐಪಿಎಲ್ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ರಾಜಸ್ತಾನ್ ರಾಯಲ್ಸ್ ನೀಡಿದ್ದ 185 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಪಂಜಾಬ್ ಒಂದು ಹಂತದಲ್ಲಿ 19ನೇ ಓವರ್ ವರೆಗೆ ಗೆಲುವನ್ನು ಖಚಿತಪಡಿಸಿತ್ತು. ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರ ಶತಕದ ಜೊತೆಯಾಟ ನಿಜಕ್ಕೂ ರಾಜಸ್ತಾನ ಬೌಲರ್ಗಳ ಬೆವರಿಳಿಸಿತ್ತು. ಪರಿಣಾಮ ಕೊನೆಯ ಓವರ್ನಲ್ಲಿ ಗೆಲುವಿಗೆ ಕೇವಲ 4 ರನ್ ಮಾತ್ರ ಅಗತ್ಯವಿತ್ತು. ಆದರೆ, ಕಾರ್ತಿಕ್ ತ್ಯಾಗಿ ಅವರ ಅದ್ಬುತ ಬೌಲಿಂಗ್ ಪರಿಣಮದಿಂದಾಗಿ ರಾಜಸ್ತಾನ ತಂಡ 2 ರನ್ಗಳ ರೋಚಕ ಗೆಲುವು ಸಾಧಿಸಿದೆ. ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್ನಲ್ಲಿ ಅತ್ಯಂತ ಕಡಿಮೆ ರನ್ ಅನ್ನೂ ಡಿಫೆಂಡ್ ಮಾಡಿದ ಮೊದಲ ಬೌಲರ್ ಎಂಬ ಶ್ರೇಯಕ್ಕೆ ಕಾರ್ತಿಕ್ ತ್ಯಾಗಿ ಪಾತ್ರರಾಗಿದ್ದಾರೆ.
ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್;
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ರಾಜಸ್ತಾನ ರಾಯಲ್ಸ್ ಗೆ ಉತ್ತರ ಆರಂಭ ಲಭಿಸಿತ್ತು. ಆರಂಭಿಕರಾದ ಇವಾನ್ ಲೂಯಿಸ್ (36) ಮತ್ತು ಯಶಸ್ವಿ ಜೈಸ್ವಾಲ್ (49) ಜೋಡಿ 5.3 ಓವರ್ಗಳಲ್ಲಿ 54 ರನ್ಗಳ ಭರ್ಜರಿ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿತ್ತು. ಅಲ್ಲದೆ, ಬೃಹತ್ ಮೊತ್ತ ಪೇರಿಸುವ ಭರವಸೆಯನ್ನು ಮೂಡಿಸಿತ್ತು. ಅವರ ನಂತರ ಬಂದ ಎಲ್ಲಾ ಬ್ಯಾಟ್ಸ್ಮನ್ಗಳೂ ಸಹ ಸ್ಪೋಟಕ ಆಟಕ್ಕೆ ಮೊರೆ ಹೋಗಿದ್ದರು.
ನಾಯಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದರೂ ಸಹ, ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್ ಕೇವಲ 17 ಎಸೆತಗಳಲ್ಲಿ 43 ಮತ್ತು ಲಿಯಾಮ್ ಲಿವಿಂಗ್ಸ್ಟನ್ 17 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಪರಿಣಾಮ ಸ್ಲಾಗ್ ಓವರ್ಗಳಲ್ಲಿ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದರೂ ಸಹ ರಾಜಸ್ತಾನ ನಿಗದಿತ ಓವರ್ಗೆ ಎಲ್ಲಾ ವಿಕೆಟ್ ಕಳೆದುಕೊಂಡು 185 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.
ಗುರಿ ಬೆನ್ನಟ್ಟಿದ ಪಂಜಾಬ್ ಬ್ಯಾಟ್ಸ್ಮನ್ಗಳಾದ ಕೆ.ಎಲ್. ರಾಹುಲ್ (49) ಮತ್ತು ಮಯಾಂಕ್ ಅಗರ್ವಾಲ್ (67) ತಂಡಕ್ಕೆ ಸ್ಪೋಟಕ ಆರಂಭ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್ಗೆ 11.5 ಓವರ್ಗಳಲ್ಲಿ 120 ರನ್ಗಳ ಜೊತೆಯಾಟ ನೀಡಿದ್ದರು. ಈ ವೇಳೆಗಾಗಲೆ ಪಂಜಾಬ್ಗೆ ಗೆಲುವು ಖಚಿತವಾಗಿತ್ತು. ಇವರ ಬೆನ್ನಿಗೆ ಏಡಿನ್ ಮಾಕ್ರಮ್ (26) ಮತ್ತು ನಿಕೋಲಸ್ ಪೂರನ್ (32) ಸಹ ಸ್ಪೋಟಕ ಆಟ ಆಡಿದ್ದರು. ಹೀಗಾಗಿ ಗೆಲುವಿಗೆ ಕೊನೆಯ ಓವರ್ನಲ್ಲಿ ಕೇವಲ 4 ರನ್ ಮಾತ್ರ ಅಗತ್ಯವಿತ್ತು. ಆದರೆ, ಆ ಒಂದು ಓವರ್ನಲ್ಲಿ ತ್ಯಾಗಿ ಎಲ್ಲವನ್ನೂ ಬದಲಿಸಿದ್ದರು.
ಹೊಸ ಇತಿಹಾಸ ಬರೆದ ಕಾರ್ತಿಕ್ ತ್ಯಾಗಿ;
ಐಪಿಎಲ್ ಟೂರ್ನಿಯಲ್ಲಿ ಸೆಟ್ ಬ್ಯಾಟ್ಸ್ಮನ್ಗಳು ಸ್ಕ್ರೀಸ್ ಕಚ್ಚಿ ನಿಂತಾಗ ಕೊನೆಯ ಓವರ್ನಲ್ಲಿ 15ಕ್ಕಿಂತ ಹೆಚ್ಚು ರನ್ ಇದ್ದರೂ ಸಹ ಅದನ್ನು ಡಿಫೆಂಡ್ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಭಾರತದ ಯುವ ವೇಗಿ ಕಾರ್ತಿಕ್ ತ್ಯಾಗಿ ಕೇವಲ 4 ರನ್ಗಳನ್ನು ಡಿಫೆಂಡ್ ಮಾಡಿ ತನ್ನ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಅಸಲಿಗೆ ಕೊನೆಯ ಓವರ್ಗೆ ಕೇವಲ 4 ರನ್ ಅಷ್ಟೆ ಅಗತ್ಯವಿತ್ತು. ಸ್ಟ್ರೈಕ್ನಲ್ಲಿ ಮಾಕ್ರಮ್ ಮತ್ತು ನಾನ್ ಸ್ಟ್ರೈಕ್ನಲ್ಲಿ ಪೂರನ್ ಬ್ಯಾಟಿಂಗ್ನಲ್ಲಿದ್ದರು. ಪಂಜಾಬ್ಗೆ ಗೆಲುವು ಖಚಿತವಾಗಿತ್ತು. ಇಡೀ ಡಗೌಟ್ ಗೆಲುವಿನ ಸಂತಸದಲ್ಲಿತ್ತು. ಆದರೆ, ನಂತರದ ಆರು ಸೆತದಲ್ಲಿ ಎಲ್ಲವೂ ಬದಲಾಗಿತ್ತು.
ತ್ಯಾಗಿ ಎಸೆದ ಮೊದಲ ಎಸೆತ ಡಾಟ್ ಆಗಿದ್ದರೆ, ಎರಡನೇ ಎಸೆತಕ್ಕೆ ಮಾಕ್ರಮ್ ಒಂದು ರನ್ ಪಡೆದು ನಾನ್ ಸ್ಟ್ರೈಕ್ಗೆ ಬಂದಿದ್ದರು. ಮೂರನೇ ಎಸೆತ ಪೂರನ್ ಕೀಪರ್ ಕೈಗೆ ಕ್ಯಾಚಿತ್ತು ಹೊರ ನಡೆದರು. ನಾಲ್ಕನೇ ಎಸೆತಕ್ಕೆ ದೀಪಕ್ ಹೂಡ ಡಾಟ್ ಬಾಲ್, ಐದನೇ ಎಸೆತಕ್ಕೆ ಹೂಡ ಸಹ ಕೀಪರ್ ಕೈಗೆ ಕ್ಯಾಚಿತ್ತು ಹೊರ ನಡೆದರು. ಈ ವೇಳೆ ಅಂತಿಮ ಎಸೆತಕ್ಕೆ ಪಂಜಾಬ್ ಗೆಲುವಿಗೆ 3 ರನ್ ಅಗತ್ಯವಿತ್ತು. ಸ್ಕ್ರೀಸ್ನಲ್ಲಿ ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಫ್ಯಾಬಿನ್ ಆ್ಯಲೆನ್ ಇದ್ದರು. ಆದರೆ, ಅಂತಿಮ ಆರನೇ ಯಾರ್ಕರ್ ಎಸೆತಕ್ಕೆ ಆ್ಯಲೆನ್ ತಬ್ಬಿಬ್ಬಾಗಿದ್ದರು. ಪರಿಣಾಮ ರಾಜಸ್ತಾನಕ್ಕೆ 2 ರನ್ಗಳ ರೋಚಕ ಗೆಲವು!.
ಇದನ್ನೂ ಓದಿ: PBKS vs RR: ಕನ್ನಡಿಗರ ಅದ್ಭುತ ಪ್ರದರ್ಶನದ ನಡುವೆಯೂ, ಪಂಜಾಬ್ಗೆ ಕಡೆಯ ಬಾಲ್ನಲ್ಲಿ ಸೋಲು
ಅಸಲಿಗೆ ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್ನಲ್ಲಿ ಇಷ್ಟು ಕಡಿಮೆ ರನ್ಗಳನ್ನು ಡಿಫೆಂಡ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ರನ್ಗಳನ್ನು ಡಿಫೆಂಡ್ ಮಾಡುವ ಮೂಲಕ ಯುವ ವೇಗಿ ಕಾರ್ತಿಕ್ ತ್ಯಾಗಿ, ಮಲಿಂಗಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ದಾಖಲೆಗಳನ್ನು ಪುಡಿಗಟ್ಟಿ ಹೊಸ ದಾಖಲೆ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ