news18-kannada Updated:September 29, 2020, 8:18 AM IST
ಇಶನ್ ಕಿಶನ್
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವಿನ ಪಂದ್ಯ ರೋಚಕತೆಗೆ ಸಾಕ್ಷಿಯಾಯಿತು. ಆರ್ಸಿಬಿ ನೀಡಿದ 202 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 201 ರನ್ ಗಳಿಸುವ ಮೂಲಕ ಸಮಬಲ ಸಾಧಿಸಿತು. ಬಳಿಕ ನಡೆದ ಸೂಪರ್ ಓವರ್ನಲ್ಲಿ ರೋಹಿತ್ ಪಡೆ ನೀಡಿದ 8 ರನ್ಗಳ ಗುರಿಯನ್ನು ಮುಟ್ಟುವ ಮೂಲಕ ಆರ್ಸಿಬಿ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮುಂಬೈ ಸೋತರೂ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಇಶನ್ ಕಿಶನ್. 22ರ ಹರೆಯದ ಈ ಯುವಕ ನಿನ್ನೆಯ ಪಂದ್ಯದಲ್ಲಿ ಮೋಡಿಯನ್ನೇ ಮಾಡಿ ಬಿಟ್ಟರು.
ಆರ್ಸಿಬಿ ನೀಡಿದ 202 ರನ್ಗಳ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಬೆನ್ನಲ್ಲೇ ಮತ್ತಿಬ್ಬರು ಆಟಗಾರರು ಕಡಿಮೆ ರನ್ಗೆ ಪೆವಿಲಿಯನ್ ಸೇರಿದರು. ಈ ವೇಳೆ ಪಂದ್ಯ ಕಟ್ಟೋಕೆ ನಿಂತಿದ್ದು, ಯುವ ಆಟಗಾರ ಇಶನ್ ಕಿಶನ್. ಹಾರ್ದಿಕ್ ಪಾಂಡ್ಯ ಹಗೂ ಇಶನ್ ಕಿಶನ್ ಉತ್ತಮ ಜೊತೆಯಾಟ ಆರಂಭಿಸಿದರು. ಈ ವೇಳೆ ಪಾಂಡ್ಯ ಔಟ್ ಆದರೆ, ಇಶನ್ ತಮ್ಮ ಆಟವನ್ನು ಮುಂದುವರಿಸಿದರು. ಈ ವೇಳೆ ಬಂದ ಪೊಲಾರ್ಡ್ ಅಬ್ಬರದ ಬ್ಯಾಟ್ ಬೀಸಿದರು. ಒಂದೆಡೆ ಪೊಲಾರ್ಡ್ ಅಬ್ಬರ, ಮತ್ತೊಂದೆಡೆ ಇಶನ್ ಕಿಶನ್ ಹುರುಪಿನ ಆಟ. ಈ ಮೂಲಕ ಪಂದ್ಯವನ್ನು ಗೆಲುವನ ಗಡಿಗೆ ತಂದಿದ್ದರು.
ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ಗೆ 19 ರನ್ ಬೇಕಿತ್ತು. ಈ ವೇಳೆ ಎರಡು ಸಿಕ್ಸರ್ ಬಾರಿಸುವ ಮೂಲಕ ಮುಂಬೈ ತಂಡವನ್ನು ಗೆಲುವಿನತ್ತ ಕರೆತಂದರು. ಅಲ್ಲದೆ, ತಮ್ಮ ವೈಕ್ತಿಕ ರನ್ ಅನ್ನು 99ಕ್ಕೆ ಏರಿಕೆ ಮಾಡಿಕೊಂಡರು. ಈ ವೇಳೆ ಸಿಕ್ಸರ್ ಸಿಡಿಸಲು ಹೋಗಿ ಔಟ್ ಆದರು.
ನಿನ್ನೆಯ ಕಿಶನ್ ಹೋರಾಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಅಬ್ಬರದ ಆಟ ನೋಡಿ ಎಲ್ಲರೂ ಕೊಂಡಾಡಿದ್ದಾರೆ. ಮೊನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ನ ರಾಹುಲ್ ತಿವಾಟಿಯಾ ಮಿಂಚಿದ್ದರು. ನಿನ್ನೆ ಇಶನ್ ಕಿಶನ್ ಹೊಸ ಹೀರೋ ಆಗಿ ಹೊರ ಹೊಮ್ಮಿದ್ದಾರೆ.
ಯಾರು ಈ ಇಶನ್ ಕಿಶನ್?
ಇಶನ್ ಕಿಶನ್ ಬಿಹಾರದ ಪಾಟ್ನಾದಲ್ಲಿ 1998, ಜುಲೈ 18ರಂದು ಹುಟ್ಟಿದ್ದರು. ಇವರ ತಂದೆ ಉದ್ಯಮಿ. ಮೊದಲಿನಿಂದಲೂ ಇಶನ್ ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿದ್ದರು. ಬಿಹಾರ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ನಡುವೆ ನೋಂದಣಿ ವಿಚಾರದ ಸಮಸ್ಯೆ ಇರುವದರಿಂದ ಇಶನ್ ನೆರೆಯ ರಾಜ್ಯ ಜಾರ್ಖಂಡಕ್ಕಾಗಿ ಆಡಲು ಆರಂಭಿಸಿದರು.
2016-17 ರಣಜಿ ಟ್ರೋಫಿಯಲ್ಲಿ ಇಶನ್ 273 ರನ್ ಕಲೆ ಹಾಕಿದ್ದರು. ರಣಜಿ ಟ್ರೋಫಿಯಲ್ಲಿ ಜಾರ್ಖಂಡದ ತಂಡದ ಆಟಗಾರನೊಬ್ಬನಿಂದ ಸಿಡಿದ ಗರಿಷ್ಠ ಮೊತ್ತ ಇದಾಗಿದೆ. 2017-18ರ ರಣಜಿ ಟ್ರೋಫಿಯಲ್ಲಿ 6 ಪಂದ್ಯಗಳಿಂದ ಇವರು ಬರೋಬ್ಬರಿ 484 ರನ್ ಸಿಡಿಸಿದ್ದರು.
2018ರ ಜನವರಿ ತಿಂಗಳಲ್ಲಿ ಮುಂಬೈ ಇಂಡಿಯನ್ಸ್ ಇಶನ್ ಅವರನ್ನು ಪಡೆದುಕೊಂಡಿತ್ತು. ಅಂದಿನಿಂದ ಇಲ್ಲಿವರೆಗೆ ಅವರು ಮುಂಬೈಗಾಗಿ ಆಡುತ್ತಿದ್ದಾರೆ. ಐಪಿಎಲ್ನಲ್ಲಿ 34 ಪಂದ್ಯಗಳನ್ನು ಅವರು ಆಡಿದ್ದು 794 ರನ್ ಸಿಡಿಸಿದ್ದಾರೆ. ನಿನ್ನೆ ಸಿಡಿಸಿದ 99 ರನ್ ಇಶನ್ ಐಪಿಎಲ್ನಲ್ಲಿ ಕಲೆ ಹಾಕಿದ ಅತ್ಯಧಿಕ ರನ್ ಆಗಿದೆ.
ಧೋನಿಯೇ ಮಾದರಿ:
ಇಶನ್ ಕಿಶನ್ಗೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯೇ ಮಾದರಿ. ಧೋನಿ ರೀತಿಯಲ್ಲೇ ಮಿಂಚಬೇಕು ಎಂಬುದು ಇಶನ್ ಆಸೆ. ಹೀಗಾಗಿ, ಧೋನಿಯನ್ನು ಇಶನ್ ದೇವರ ರೀತಿಯಲ್ಲಿ ಕಾಣುತ್ತಾರಂತೆ. ಅವರನ್ನು ಸದಾ ಆರಾಧಿಸುತ್ತಾರಂತೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲಿಕ್ರಿಸ್ಟ್ ಕೂಡ ಕಿಶನ್ ಫೆವರಿಟ್.
Published by:
Rajesh Duggumane
First published:
September 29, 2020, 8:14 AM IST