Ishan Fastest Fifty- 32 ಬಾಲ್​ನಲ್ಲಿ 84 ರನ್ ಚಚ್ಚಿದ ಇಶಾನ್ ಕಿಶನ್; ಫಾರ್ಮ್​ಗೆ ಮರಳಿದ ಸೂರ್ಯಕುಮಾರ್

ಟೀಮ್ ಇಂಡಿಯಾದ ಟಿ20 ತಂಡದಲ್ಲಿರುವ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಸಕಾಲದಲ್ಲಿ ಫಾರ್ಮ್​ಗೆ ಮರಳಿದ್ಧಾರೆ. ಹೈದರಾಬಾದ್ ವಿರುದ್ಧ ಇಶಾನ್ ಕಿಶನ್ ಮತ್ತು ಎಸ್​ಕೆ ಯಾದವ್ ಸ್ಪೋಟಕ ಇನ್ನಿಂಗ್ಸ್ ಆಡಿದ್ಧಾರೆ.

ಇಶಾನ್ ಕಿಶನ್

ಇಶಾನ್ ಕಿಶನ್

 • Share this:
  ಮುಂಬೈ, ಅ. 08: ಟಿ20 ವಿಶ್ವಕಪ್​ಗೆ ಮುನ್ನ ಟೀಮ್ ಇಂಡಿಯಾಗೆ ತುಸು ನಿರಾಳವಾಗುವ ಬೆಳವಣಿಗೆ ಇದು. ಭಾರತದ ಟಿ20 ತಂಡದಲ್ಲಿರುವ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಫಾರ್ಮ್​ಗೆ ಮರಳಿದ್ದಾರೆ. ಹಿಂದಿನ ಪಂದ್ಯದಲ್ಲೇ ಇಶಾನ್ ತಾನು ಲಯ ಕಂಡುಕೊಂಡಿರುವ ಸುಳಿವು ನೀಡಿದ್ದರು. ಇವತ್ತು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 32 ಬಾಲ್​ನಲ್ಲಿ 84 ರನ್ ಗಳಿಸಿದರು. ಕೇವಲ 16 ಬಾಲ್​ನಲ್ಲಿ ಅವರು ಅರ್ಧಶತಕ ಭಾರಿಸಿದರು. ಮುಂಬೈ ಇಂಡಿಯನ್ಸ್ ತಂಡದ ಯಾವುದೇ ಆಟಗಾರ ಗಳಿಸಿದ ಅತಿ ವೇಗದ ಅರ್ಧಶತಕ ಇದು. 2021ರ ಐಪಿಎಲ್​ನಲ್ಲಿ ಇದು ಅತಿ ವೇಗದ ಅರ್ಧಶತಕವೂ ಹೌದು. ಹಾಗೆಯೇ ಯಾವುದೇ ಐಪಿಎಲ್​ನಲ್ಲಿ ಇದು ಮೂರನೇ ಅತೀ ವೇಗದ ಅರ್ಧಶತಕ ಆಗಿದೆ.

  ಸಿದ್ಧಾರ್ಥ್ ಕೌಲ್ ಮತ್ತು ಮೊಹಮ್ಮದ್ ನಬಿ ಅವರಿಬ್ಬರ ಬೌಲಿಂಗ್​ನಲ್ಲಿ ಇಶಾನ್ ಕಿಶನ್ ಗಳಿಸಿದ ರನ್ ಇದು 4,4,4,4,2,4,1,4. ಸತತ ಏಳು ಬಾಲ್​ನಲ್ಲಿ ಅವರು 27 ರನ್ ಚಚ್ಚಿದರು. ಈ ಮೂಲಕ ಇಶಾನ್ ಕಿಶನ್ ಅದ್ಭುತ ಫಾರ್ಮ್​ಗೆ ಮರಳಿರುವುದನ್ನ ಜಗಜ್ಜಾಹೀರುಗೊಳಿಸಿದರು.

  ಡ್ರಾಪ್ ಮಾಡಿದ್ದು ಇಶಾನ್​ಗೆ ವರ್ಕೌಟ್ ಆಯಿತಾ?

  ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರಂಭದಲ್ಲಿ ಇಶಾನ್ ಕಿಶನ್ ರನ್ ಗಳಿಸಲು ಪರದಾಡಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 24 ರನ್ ಮಾತ್ರ. ನಂತರ ಅವರನ್ನ ತಂಡದಿಂದ ಕೈಬಿಟ್ಟು ಬ್ರೇಕ್ ಕೊಡಲಾಯಿತು. ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರನ್ನ ಮತ್ತೆ ಆಡಿಸಲಾಯಿತು. ಅದರಲ್ಲಿ ಇಶಾನ್ ಕಿಶನ್ ಸ್ಪೋಟಕ ಆಟವಾಡಿ ಅರ್ಧಶತಕ ಗಳಿಸಿದರು. ಈಗ ಇವತ್ತು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಇನ್ನೂ ದೊಡ್ಡ ಇನಿಂಗ್ಸ್ ಆಡಿದ್ದಾರೆ. ರಾಯಲ್ಸ್ ವಿರುದ್ಧ ಅವರು 25 ಬಾಲ್​ನಲ್ಲಿ ಅರ್ಧಶತಕ ಗಳಿಸಿದರೆ, ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 16 ಎಸೆತದಲ್ಲಿ ಅರ್ಧಶತಕ ಪೂರೈಸಿದ್ದು ಗಮನಾರ್ಹ. ಪಂದ್ಯದಿಂದ ಪಂದ್ಯಕ್ಕೆ ಇಶಾನ್ ಡೇಂಜರಸ್ ಎನಿಸುತ್ತಿದ್ದಾರೆ.

  ಇದನ್ನೂ ಓದಿ: Orange Cap - Purple Cap- ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆಯುವ ಸಂಭವ ಹೆಚ್ಚಿರುವ ಆಟಗಾರರು ಇವರು

  ಸೂರ್ಯಕುಮಾರ್ ಯಾದವ್ ಕೂಡ ಲಯಕ್ಕೆ:

  ಇಶಾನ್ ಕಿಶನ್ ಅವರಂತೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರೂ ಫಾರ್ಮ್​ಗೆ ಮರಳಿದ್ಧಾರೆ. ಯುಎಇಯಲ್ಲಿ ನಡೆದ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು. ಕೇವಲ 25 ಬಾಲ್​ನಲ್ಲಿ ಅವರು ಅರ್ಧಶತಕ ಗಳಿಸಿದರು. 39 ಬಾಲ್​ನಲ್ಲಿ ಅವರು 82 ರನ್ ಗಳಿಸಿ ಔಟಾದರು.

  ಇದನ್ನೂ ಓದಿ: Calculating NRR- ಒಂದು ತಂಡದ ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ವಿಧಾನ ಇದು

  ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿರುವ ಪ್ರಮುಖ ಆಟಗಾರರಲ್ಲಿ ಇವರೂ ಒಬ್ಬರು. ಇದೇ ಯುಎಇಯಲ್ಲಿ ವಿಶ್ವಕಪ್ ನಡೆಯಲಿರುವುದರಿಂದ ಐಪಿಎಲ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ. ಟೀಮ್ ಇಂಡಿಯಾದ ಬಹುತೇಕ ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ಧಾರೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮ ತ್ತು ಹಾರ್ದಿಕ್ ಪಾಂಡ್ಯ ಅವರ ನೀರಸ ಪ್ರದರ್ಶನವು ಭಾರತಕ್ಕೆ ತಲೆನೋವಾಗಿತ್ತು. ಈಗ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಲಯಕ್ಕೆ ಮರಳಿದ್ಧಾರೆ. ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಇನ್ನೂ ಆಟಕ್ಕೆ ಸರಿಯಾಗಿ ಕುದುರಬೇಕಿದೆ. ಅವರೊಬ್ಬರೇ ಈಗ ತಂಡದ ವೀಕ್ ಲಿಂಕ್ ಎನಿಸಿದ್ದಾರೆ.

  ಇದೇ ವೇಳೆ, ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು 171ಕ್ಕೂ ಹೆಚ್ಚು ರನ್​ಗಳ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ. ಮುಂಬೈ ಬ್ಯಾಟರ್ಸ್ ಬಹುತೇಕ ತಮ್ಮ ಕೆಲಸ ಪೂರೈಸಿದ್ಧಾರೆ. ಈಗ ಬೌಲರ್​ಗಳು ಮುಂಬೈಗೆ ಅಗತ್ಯ ಗೆಲುವು ತಂದುಕೊಡುತ್ತಾರಾ ಕಾದುನೋಡಬೇಕು. ಒಂದು ವೇಳೆ ಮುಂಬೈ ತಂಡ ಪ್ಲೇ ಆಫ್ ಪ್ರವೇಶಿಸಿದರೆ ಆರ್​ಸಿಬಿ ತಂಡಕ್ಕೆ ಬಹುದೊಡ್ಡ ಸವಾಲಂತೂ ಎದುರಾಗಲಿದೆ.
  Published by:Vijayasarthy SN
  First published: