ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಪ್ರತಿದಿನ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಹೊಸ ಚಿಂತೆಗೆ ಕಾರಣವಾಗಿದೆ. ಅತ್ತ ದೆಹಲಿ ಕೂಡ ಕೊರೋನಾದಿಂದ ತತ್ತರಿಸಿದೆ. ಅದರಲ್ಲೂ ದಕ್ಷಿಣ ದೆಹಲಿಯ ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ತುಂಬಿವೆ. ಇದರಿಂದ ಚಿಕಿತ್ಸೆಯೊಂದಿಗೆ ರೋಗಿಗಳು ಒಂದೊತ್ತಿನ ಆಹಾರಕ್ಕೂ ಕೂಡ ಪರದಾಡುವಂತಾಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ದಕ್ಷಿಣ ದೆಹಲಿಯ ಕೊರೋನಾ ಪೀಡಿತ ಜನರಿಗೆ ತಮ್ಮ ಅಕಾಡೆಮಿ ವತಿಯಿಂದ ಉಚಿತ ಆಹಾರವನ್ನು ಒದಗಿಸುವುದಾಗಿ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಘೋಷಿಸಿದ್ದಾರೆ.
ಕೊರೋನಾ ಎರಡನೇ ಅಲೆ ದೇಶಾದ್ಯಂತ ವಿಸ್ತರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ವತಿಯಿಂದ ದಕ್ಷಿಣ ದೆಹಲಿಯ ಅಗತ್ಯವಿರುವವರಿಗೆ ಉಚಿತ ಆಹಾರವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಕೊರೋನಾ ಸಮಯದಲ್ಲಿ ಯೂಸುಫ್ ಮತ್ತು ಇರ್ಫಾನ್ 4000 ಕ್ಕೂ ಅಧಿಕ ಮಾಸ್ಕ್ಗಳನ್ನು ವಿತರಿಸಿದ್ದರು. ಅಲ್ಲದೆ ಅಗತ್ಯ ಇರುವವರಿಗೆ ಆಹಾರದ ವ್ಯವಸ್ಥೆ ಮಾಡಿದ್ದರು. ಇದೀಗ ಮತ್ತೊಮ್ಮೆ ಆಸ್ಪತ್ರೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ಪಠಾಣ್ ಬ್ರದರ್ಸ್ ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ