RCB vs RR – ಬೆಂಗಳೂರು-ರಾಜಸ್ಥಾನ ಪಂದ್ಯದಲ್ಲಿ ಪಡಿಕ್ಕಲ್ ಶತಕ ಸೇರಿ ಹಲವು ದಾಖಲೆಗಳು

ರಾಜಸ್ಥಾನ್ ರಾಯಲ್ಸ್ ತಂಡ ಒಡ್ಡಿದ 178 ರನ್​ಗಳ ಗುರಿಯನ್ನು ಆರ್​ಸಿಬಿ ತಂಡ ಇನ್ನೂ 21 ಎಸೆತ ಬಾಕಿ ಇರುವಂತೆ ವಿಕೆಟ್ ನಷ್ಟ ಇಲ್ಲದೇ ಬೆನ್ನಟ್ಟಿ ನಿರಾಯಾಸ ಗೆಲುವು ಸಾಧಿಸಿತು. ದೇವದತ್ ಪಡಿಕ್ಕಲ್ ಅಜೇಯ ಶತಕ ಭಾರಿಸಿದರು.

ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ

  • Share this:
    ಮುಂಬೈ: ನಿನ್ನೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸತತ ನಾಲ್ಕು ಪಂದ್ಯಗಳನ್ನ ಗೆದ್ದು ಈ ಬಾರಿ ಅಭಿಮಾನಿಗಳು ಗಟ್ಟಿಯಾಗಿ ಕಪ್ ನಮ್ದೇ ಎಂದು ಹೇಳುವಷ್ಟು ವಿಶ್ವಾಸ ಮೂಡಿಸಿದೆ. ನಿನ್ನೆ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್​ಸಿಬಿ 10 ವಿಕೆಟ್​ಗಳಿಂದ ನಿರಾಯಾಸವಾಗಿ ಮಣಿಸಿದೆ. ಈ ಪಂದ್ಯದಲ್ಲಿ ಕರ್ನಾಟಕದ ಹುಡುಗ ದೇವದತ್ ಪಡಿಕ್ಕಲ್ ತಮ್ಮ ಚೊಚ್ಚಲ ಶತಕ ಗಳಿಸಿದ್ದು ಒಂದು ಹೆಗ್ಗಳಿಕೆಯಾದರೆ, ಈ ಪಂದ್ಯದಲ್ಲಿ ಇನ್ನೂ ಅನೇಕ ದಾಖಲೆಗಳು ಮುರಿದಿವೆ, ಮೈಲಿಗಲ್ಲುಗಳು, ಸಾಧನೆಗಳು ಬಂದಿವೆ.

    ದೇವದತ್ ಪಡಿಕ್ಕಲ್ ಅವರ ಅಜೇಯ 101 ರನ್​ಗಳ ಸಹಾಯದಿಂದ ಆರ್​ಸಿಬಿ ತಂಡ ಆರ್ ಆರ್ ಪಡೆಯನ್ನು ಧೂಳೀಪಟ ಮಾಡಿತು. ಬ್ಯಾಟಿಂಗ್ ಸ್ವರ್ಗ ಎನಿಸಿದ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 177 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆರ್​​ಸಿಬಿ ತಂಡ ವಿಕೆಟ್ ನಷ್ಟವಿಲ್ಲದೆ, ಇನ್ನೂ 21 ಎಸೆತ ಬಾರಿ ಇರುವಂತೆಯೇ ಗೆದ್ದು ಮತ್ತೊಮ್ಮೆ ಟೇಬಲ್ ಟಾಪರ್ ಆಗಿದೆ. ಈ ಪಂದ್ಯದಲ್ಲಿ ಬಂದಿರುವ ಕೆಲ ದಾಖಲೆಗಳು, ಮೈಲಿಗಲ್ಲುಗಳು ಇಲ್ಲಿವೆ:

    * ದೇವದತ್ ಪಡಿಕ್ಕಲ್ ಅವರಿಗೆ ಇದು ಚೊಚ್ಚಲ ಐಪಿಎಲ್ ಶತಕ; ಭಾರತ ತಂಡಕ್ಕೆ ಆಡದೆಯೇ ಐಪಿಎಲ್​ನಲ್ಲಿ ಶತಕ ಭಾರಿಸಿದ ಮೂರನೇ ಆಟಗಾರ ಅವರು. ಮನೀಶ್ ಪಾಂಡೆ, ಪೌಲ್ ವಲ್ದಾಟಿ ಇನ್ನಿಬ್ಬರು ಆಟಗಾರರು.

    * ದೇವದತ್ ಪಡಿಕ್ಕಲ್ ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ಮಾಡುವಾಗ ಶತಕ ಭಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.

    * ಐಪಿಎಲ್ ಟೂರ್ನಿಯಲ್ಲಿ ಮನೀಶ್ ಪಾಮಡೆ, ರಿಷಭ್ ಪಂತ್ ಬಿಟ್ಟರೆ ಶತಕ ಭಾರಿಸಿದ ಅತ್ಯಂತ ಕಿರಿಯ ಆಟಗಾರ ದೇವದತ್ ಪಡಿಕ್ಕಲ್

    * ದೇವದತ್ ಪಡಿಕ್ಕಲ್ ಐಪಿಎಲ್ ಟೂರ್ನಿಯಲ್ಲಿ ಶತಕ ಭಾರಿಸಿದ ಕರ್ನಾಟಕದ ನಾಲ್ಕನೇ ಆಟಗಾರ

    * ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಅವರು ಮೊದಲ ವಿಕೆಟ್​​ಗೆ 181 ರನ್​ಗಳ ಮುರಿಯದ ಜೊತೆಯಾಟ ಆಡಿದ್ದಾರೆ. ಇದು ಆರ್​ಸಿಬಿ ಪಾಲಿಗೆ ಅತಿ ದೊಡ್ಡ ಓಪನಿಂಗ್ ಪಾರ್ಟ್ನರ್​ಶಿಪ್ ಆಗಿದೆ. ಚೇಸಿಂಗ್ ಮಾಡುವಾಗ ಆರ್​ಸಿಬಿ ತಂಡ ಕಂಡ ಅತಿ ದೊಡ್ಡ ಜೊತೆಯಾಟ ಇದಾಗಿದೆ.

    * ಬೆಂಗಳೂರು ತಂಡ 178 ರನ್ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ ಮಾಡಿತು. ವಿಕೆಟ್ ನಷ್ಟವಿಲ್ಲದೆ ಅತಿದೊಡ್ಡ ಗುರಿ ಬೆನ್ನತ್ತಿದ ಐಪಿಎಲ್ ತಂಡಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ ಸಿಕ್ಕಿದೆ. ಕೆಕೆಆರ್ ಮತ್ತು ಸಿಎಸ್​ಕೆ ತಂಡಗಳು ಈ ಹಿಂದೆ 184 ಮತ್ತು 179 ರನ್ ಗುರಿಗಳನ್ನ ವಿಕೆಟ್ ನಷ್ಟವಿಲ್ಲದೇ ಮುಟ್ಟಿದ್ದವು.

    * ಆರ್​ಸಿಬಿ ತಂಡ ವಿಕೆಟ್ ನಷ್ಟವಿಲ್ಲದೇ ನಾಲ್ಕು ಪಂದ್ಯಗಳನ್ನ ಚೇಸ್ ಮಾಡಿ ಗೆದ್ದಿದೆ. ಅಂದರೆ, ನಾಲ್ಕು ಬಾರಿ ಅದು 10 ವಿಕೆಟ್​ಗಳ ಜಯಭೇರಿ ಭಾರಿಸಿದೆ. ಆರ್​ಸಿಬಿ ಬಿಟ್ಟರೆ ಬೇರೆ ತಂಡದಿಂದ ಬಂದ ಗರಿಷ್ಠ ಸಾಧನೆ ಎಂದರೆ 2 ಬಾರಿ 10 ವಿಕೆಟ್​ಗಳಿಂದ ಗೆದ್ದಿರುವುದು.

    * ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 6 ಸಾವಿರ ರನ್​ಗಳ ಗಡಿ ಮುಟ್ಟಿದ ಸಾಧನೆಯನ್ನು ಈ ಪಂದ್ಯದಲ್ಲಿ ಮಾಡಿದರು. ಈ ಮೈಲಿಗಲ್ಲು ಮುಟ್ಟಿದ ಮೊದಲ ಆಟಗಾರ ಅವರಾಗಿದ್ದಾರೆ.

    ಇದನ್ನೂ ಓದಿ: RCB Vs RR: ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್

    ಮೊದಲ ಮೂರು ಪಂದ್ಯಗಳನ್ನ ಚೆನ್ನೈನ ಕಠಿಣವಾದ ಚೇಪಾಕ್ ಪಿಚ್​ನಲ್ಲಿ ಆಡಿ ಗೆದ್ದಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ನಾಲ್ಕನೇ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇನ್ನೂ ಸಲೀಸಾಗಿ ಗೆಲುವು ಪಡೆದಿದೆ. ಏಪ್ರಿಲ್ 25ರಂದು ಇದೇ ವಾಂಖೆಡೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಸೆಣಸಲಿದೆ. ಸಿಎಸ್​ಕೆ ಕೂಡ ಹ್ಯಾಟ್ರಿಕ್ ಗೆಲುವಿನ ಮೂಲಕ ಹೊಸ ಆತ್ಮವಿಶ್ವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಆರ್​ಸಿಬಿ ಮತ್ತು ಸಿಎಎಸ್​​ಕೆ ನಡುವಿನ ಆ ಪಂದ್ಯ ರೋಚಕವಾಗಿರುವುದರಲ್ಲಿ ಸಂಶಯವಿಲ್ಲ.

    ಇನ್ನು, ಅಂಕಪಟ್ಟಿಯಲ್ಲಿ ತಳಕ್ಕೆ ಕುಸಿದಿರುವ ರಾಜಸ್ಥಾನ್ ರಾಯಲ್ಸ್ ತಂಡ ನಾಳೆ, ಅಂದರೆ ಏಪ್ರಿಲ್ 24ರಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಸೋತು ಸುಣ್ಣವಾಗಿ ಗಾಯಗೊಂಡ ಹುಲಿಗಳಂತಿವೆ. ಇದು ಒಂದು ತಂಡಕ್ಕೆ ಗೆಲುವಿನ ಪಥಕ್ಕೆ ಮರಳುವ ಅವಕಾಶವಂತೂ ಸಿಕ್ಕಿದೆ.

    ಇವತ್ತು ನಡೆಯುವ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇದೆ. ಕಳಪೆ ಫಾರ್ಮ್​ನಲ್ಲಿರುವ ಪಂಜಾಬ್ ತಂಡ ಪ್ರಬಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಷ್ಟರಮಟ್ಟಿಗೆ ಸವಾಲೊಡ್ಡಬಲ್ಲುದು ಎಂಬುದು ಪ್ರಶ್ನೆಯಾಗಿದೆ.
    Published by:Vijayasarthy SN
    First published: