IPL: ಹೊಸ ತಂಡಗಳು ಯಾವುವು? ಪೈಪೋಟಿಯಲ್ಲಿ ಯಾರ್‍ಯಾರು? ಬಿಸಿಸಿಐಗೆ ಬರೋ ದುಡ್ಡು ಎಷ್ಟು?

IPL New Policy for 2022- ಯಾವ್ಯಾವು ಹೊಸ ತಂಡಗಳು, ಎಷ್ಟು ಆಟಗಾರರನ್ನ ಉಳಿಸಿಕೊಳ್ಳಬಹುದು, ಒಂದು ತಂಡದ ಬಜೆಟ್ ಮಿತಿ ಎಷ್ಟು, ಹೊಸ ಫ್ರಾಂಚೈಸಿಗೆ ಬಿಡ್ ಸಲ್ಲಿಸಿರುವವರು ಯಾರು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಐಪಿಎಲ್

ಐಪಿಎಲ್

 • Share this:
  ಮುಂಬೈ, ಅ. 22: ಮುಂದಿನ ವರ್ಷ ನಡೆಯಲಿರುವ ಐಪಿಎಲ್ 2022 ಟೂರ್ನಿಗೆ ಬಿಸಿಸಿಐ ಭರ್ಜರಿ ತಯಾರಿ ನಡೆಸುತ್ತಿದೆ. ಹಿಂದಿನ ಒಂದೆರಡು ಸೀಸನ್​ಗಳಲ್ಲಿ ಇದ್ದಂತೆ ಮುಂದಿನ ವರ್ಷದಿಂದ ಎಂಟು ಬದಲು ಹತ್ತು ತಂಡಗಳು ಇರಲಿವೆ. ಎರಡು ಹೊಸ ಫ್ರಾಂಚೈಸಿಗಳು ಯಾವುವು ಎಂದು ನಿರ್ಧಾರವಾಗಿಲ್ಲ. ಆದರೆ, ಕೆಲ ವರದಿಗಳ ಪ್ರಕಾರ ಎರಡು ಹೊಸ ಫ್ರಾಂಚೈಸಿಗಳು ಅಹ್ಮದಾಬಾದ್ ಮತ್ತು ಲಕ್ನೋ ನಗರಗಳದ್ದಾಗಿರಲಿವೆ. ವಿಶ್ವ ಫುಟ್ಬಾಲ್ ದಿಗ್ಗ ಮ್ಯಾಂಚೆಸ್ಟರ್ ಯುನೈಟೆಟ್ ತಂಡದ ಮಾಲೀಕರಾದ ಗ್ಲೇಜರ್ ಫ್ಯಾಮಿಲಿ, ಅದಾನಿ ಗ್ರೂಪ್ ಸೇರಿದಂತೆ ಹಲವರು ಈಗಾಗಲೇ ಬಿಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಅ. 20ವರೆಗೆ ಬಿಡ್ಡಿಂಗ್ ಸಲ್ಲಿಸಲು ಅವಕಾಶ ಕೊಡಲಾಗಿತ್ತು. ಅಕ್ಟೋಬರ್ 25ರಂದು ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದ್ದು, ಇಬ್ಬರು ಬಿಡ್ಡರ್ಸ್​ಗೆ ತಂಡಗಳನ್ನ ಕಟ್ಟುವ ಅವಕಾಶ ಇರಲಿದೆ.

  ಇದೇ ಡಿಸೆಂಬರ್​ನಲ್ಲಿ ಐಪಿಎಲ್ 2022ರ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಎರಡು ಹೊಸ ತಂಡಗಳೂ ಈ ಬಿಡಿಂಗ್​ನಲ್ಲಿ ಪಾಲ್ಗೊಳ್ಳಲಿವೆ.

  ಫ್ರಾಂಚೈಸಿಗಳು ಎಷ್ಟು ಆಟಗಾರರನ್ನ ಉಳಿಸಿಕೊಳ್ಳಬಹುದು?

  ಕ್ರಿಕ್ ಬಜ್ ವೆಬ್ ಸೈಟ್ ಪ್ರಕಟಿಸಿರುವ ವರದಿ ಪ್ರಕಾರ ಈಗಿರುವ ಎಂಟು ಐಪಿಎಲ್ ಫ್ರಾಂಚೈಸಿಗಳು ತಯಾ ನಾಲ್ಕು ಆಟಗಾರರನ್ನ ಉಳಿಸಿಕೊಳ್ಳುವ ಹಕ್ಕು ಹೊಂದಿವೆ. ಬಿಸಿಸಿಐ ಮತ್ತು ವಿವಿಧ ಫ್ರಾಂಚೈಸಿಗಳ ಪ್ರತಿನಿಧಿಗಳು ಸಭೆ ನಡೆಸಿ ಈ ವಿಚಾರದ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ ಒಂದು ತಂಡಕ್ಕೆ ನಾಲ್ಕು ಆಟಗಾರರನ್ನ ರೀಟೈನ್ ಮಾಡಿಕೊಳ್ಳುವ ಅವಕಾಶ ಕೊಡಲು ನಿರ್ಧರಿಸಲಾಗಿದೆಯಂತೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕಷ್ಟೇ ಎಂದು ಮೂಲಗಳು ಹೇಳುತ್ತವೆ.

  ತಂಡದ ಬಜೆಟ್ ಮಿತಿ ಹೆಚ್ಚಳ?

  ಮುಂದಿನ ವರ್ಷ ಪ್ರತೀ ತಂಡವೂ ಆಟಗಾರರ ಖರೀದಿಗೆ 90 ಕೋಟಿ ರೂ ವ್ಯಯಿಸುವ ಅವಕಾಶ ಹೊಂದಿರಲಿವೆ. ಅದಾದ ನಂತರ ಇನ್ನೆರಡು ವರ್ಷದಲ್ಲಿ ಈ ಬಜೆಟ್ ಮಿತಿ 95 ಕೋಟಿ ರೂ ಹಾಗೂ 100 ಕೋಟಿ ರೂಗೆ ಹೆಚ್ಚಳವಾಗಲಿದೆ.

  ನಾಲ್ಕು ಆಟಗಾರರನ್ನ ರೀಟೈನ್ ಮಾಡಿಕೊಂಡರೆ ತಂಡದ ಬಜೆಟ್​ನಲ್ಲಿ ನಿರ್ದಿಷ್ಟ ಮೊತ್ತ ಕಡಿಮೆಗೊಳ್ಳುತ್ತದೆ. ಹಾಗೆಯೇ, ಫ್ರಾಂಚೈಸಿಗಳಿಗೆ ನಾಲ್ಕು ಆಟಗಾರರನ್ನ ಉಳಿಸಿಕೊಳ್ಳುವ ಅವಕಾಶ ಕೊಡಲಾಗಿರುವುದರಿಂದ ಆರ್​ಟಿಎಂ (ರೈಟ್ ಟು ಮ್ಯಾಚ್) ಹಕ್ಕು ಉಪಯೋಗಿಸಲು ಅವಕಾಶ ಇರುವುದಿಲ್ಲ.

  ಇದನ್ನೂ ಓದಿ: T20 Wold Cup- ಕೊಹ್ಲಿಗೂ ಹೆದರಲ್ಲ, ಬಾಬರ್​ಗೂ ಹೆದರಲ್ಲ: ತೊಡೆತಟ್ಟಿದ ಸ್ಕಾಟ್ಲೆಂಡ್ ಆಟಗಾರ

  ಹೊಸ ಐಪಿಎಲ್ ತಂಡಗಳಿಗೆ ಬಿಡ್ ಸಲ್ಲಿಸಿರುವವರು:

  ಅದಾನಿ ಗ್ರೂಪ್, ಬಿರ್ಲಾ ಗ್ರೂಪ್, ಕೋಟಕ್ ಗ್ರೂಪ್, ಅರಬಿಂದೋ ಫಾರ್ಮಾ, ಟೋರೆಂಟ್ ಫಾರ್ಮಾ, ಆರ್​ಪಿ-ಸಂಜೀವ್ ಗೋಯೆಂಕಾ ಗ್ರೂಪ್, ದಿ ಗ್ಲೇಜರ್​ ಫ್ಯಾಮಿಲಿ (ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮಾಲೀಕರು), ರೋನೀ ಸ್ಕ್ರೂವಾಲ, ಜಿಂದಾಲ್, ಸಿವಿಸಿ ಪಾರ್ಟ್ನರ್ಸ್, ಸಿಂಗಾಪುರದ ಪಿಇ, ಹಿಂದೂಸ್ತಾನ್ ಮೀಡಿಯಾ, ಐಟಿಡಬ್ಲ್ಯೂ ಗ್ರೂಪ್ ಎಂ.

  ಹೊಸ ತಂಡಗಳು: ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಅನುಮತಿ ನೀಡುವ ನಿರೀಕ್ಷೆ ಇದೆ. ಅದಾನಿ ಗ್ರೂಪ್ ಸಂಸ್ಥೆ ಅಹ್ಮದಾಬಾದ್ ಫ್ರಾಂಚೈಸಿಗಾಗಿ ಬಿಡ್ ಸಲ್ಲಿಸಿದೆ ಎಂಬ ಮಾಹಿತಿ ಕೇಳಿಬಂದಿದೆ.

  ಐಪಿಎಲ್ ಟಿವಿ ಪ್ರಸಾರದಿಂದ ಬಿಸಿಸಿಐಗೆ ಸಿಗುವ ಲಾಭ ಎಷ್ಟು?

  ಕ್ರಿಕೆಟ್ ಭಾರತದ ಮಟ್ಟಿಗೆ ದೊಡ್ಡ ಬ್ಯುಸಿನೆಸ್. ಅಂತೆಯೇ ಬಿಸಿಸಿಐ ವಿಶ್ವದಲ್ಲೇ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವುದು. ಈ ಬಾರಿ ಐಪಿಎಲ್​ನ ಪ್ರಸಾರ ಹಕ್ಕುಗಳ ಮಾರಾಟದಿಂದ ಬಿಸಿಸಿಐ 2023 ರಿಂದ 2027ರ ಐದು ವರ್ಷಗಳ ಅವಧಿಯಲ್ಲಿ 5 ಬಿಲಿಯನ್ ಡಾಲರ್ ಹಣದ ಲಾಭ ಮಾಡಿಕೊಳ್ಳಬಹುದು. ಅಂದರೆ, ಸುಮಾರು 37 ಸಾವಿರ ಕೋಟಿ ರೂಪಾಯಿಯಷ್ಟು ಹಣ ಬಿಸಿಸಿಐ ಬೊಕ್ಕಸ ಸೇರುವ ನಿರೀಕ್ಷೆ ಇದೆ. ಇಲ್ಲಿ ಪ್ರಸಾರ ಹಕ್ಕು ಎಂದರೆ ಟಿವಿ ಪ್ರಸಾರ ಹಾಗೂ ಡಿಜಿಟಲ್ ಪ್ರಸಾರ ಎರಡೂ ಸೇರಿದಂತೆ ಅನ್ವಯ ಆಗುತ್ತದೆ.

  ಇದನ್ನೂ ಓದಿ: Cricketers married to Cousin Sisters- ವರಸೆಯಲ್ಲಿ ತಂಗಿಯನ್ನೇ ಮದುವೆಯಾದ ಕ್ರಿಕೆಟಿಗರು ಇವರು

  ಸದ್ಯ 2018ರಿಂದ 2022ರವರೆಗೆ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾದವರು ಖರೀದಿಸಿದ್ಧಾರೆ. ಅದರ ಮೊತ್ತ 2.55 ಬಿಲಿಯನ್ ಡಾಲರ್ (ಸುಮಾರು 16 ಸಾವಿರ ಕೋಟಿ ರೂ) ಆಗಿದೆ. ಈ ಬಾರಿ ಇದರ ಮೊತ್ತ ದುಪ್ಪಟ್ಟುಗೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷ ಐಪಿಎಲ್ ತಂಡಗಳ ಸಂಖ್ಯೆ 10ಕ್ಕೇರಲಿದ್ದು, ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ, ಹೆಚ್ಚಿನ ಮೊತ್ತಕ್ಕೆ ಹಕ್ಕುಗಳ ಮಾರಾಟ ಮಾಡಲು ಬಿಸಿಸಿಐ ನಿರ್ಧರಿಸಿದೆ.

  ಅಮೆರಿಕ ಮೂಲದ ಕಂಪನಿಯೊಂದು ಐಪಿಎಲ್ ಮೀಡಿಯಾ ಹಕ್ಕಿಗೆ ಅತೀವ ಆಸಕ್ತಿ ತೋರಿಸಿದೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
  Published by:Vijayasarthy SN
  First published: