IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ

ಐಪಿಎಲ್​ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ಲಲಿತ್ ಮೋದಿಗೆ ಸಂಪೂರ್ಣ ಅವಕಾಶವಿತ್ತು. ಅಲ್ಲದೇ ಲಲಿತ್ ಕುಮಾರ್ ಮೋದಿ ಐಪಿಎಲ್ ಆರಂಭಿಕ ಪ್ರಕ್ರಿಯೆಯ ಕೆಲಸಗಳಿಗೆ ಯಾವುದೇ ಸಂಭಾವನೆಯನ್ನೂ ಪಡೆದಿರಲಿಲ್ಲವಂತೆ!

ಲಲಿತ್ ಮೋದಿ

ಲಲಿತ್ ಮೋದಿ

  • Share this:
ಐಪಿಎಲ್ 2022 ಕ್ಕೆ (IPL 2022) ಇನ್ನೇನು ಕೆಲವೇ ದಿನ! ಆದರೆ ನಿಮಗೆ ಗೊತ್ತೇ? ಇಡೀ ಜಗತ್ತಿನ ಗಮನವನ್ನು ತನ್ನತ್ತ ಚುಂಬಕದಂತೆ ಸೆಳೆಯುವ ಭಾರತದ ಐಪಿಎಲ್ ಸರಣಿಯನ್ನು ಹುಟ್ಟುಹಾಕಿದವರಾದರೂ ಯಾರು?  ನೂರಾರು ದೇಶೀಯ ಕ್ರೀಡಾಪಟುಗಳನ್ನು (Indian Cricketers) ಹುಟ್ಟುಹಾಕಿದ, ಕಾಲದ ತೆರೆಮರೆಗೆ ಸರಿಯುತ್ತಿದ್ದ ಕ್ರಿಕೆಟರ್​ಗಳಿಗೆ ಮರುಜನ್ಮವನ್ನೇ ನೀಡಿದ ಐಪಿಎಲ್ ಯಾರ ಕನಸು? ವಿಶ್ವದ ಅತ್ಯಂತ ಯಶಸ್ವಿ ಪಂದ್ಯಾವಳಿಗಳ ಸಾಲಿನಲ್ಲಿ ನಿಲ್ಲುವ ಐಪಿಎಲ್ ಯಾರ ಐಡಿಯಾ? (Who created IPL?) ಬನ್ನಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಲಲಿತ್  ಮೋದಿ (Lalit Modi) ಎಂಬ ಓರ್ವ ಭಾರತೀಯ ಉದ್ಯಮಿಯೇ ಐಪಿಎಲ್​ನ ಜನ್ಮದಾತ!

ಆದರೆ ಅವರೀಗ ತಲೆ ಮರೆಸಿಕೊಂಡಿರುವ ಓರ್ವ ಆರೋಪಿ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಕನಿಷ್ಠ ಪಕ್ಷ ಟಿವಿಯಲ್ಲಾದರೂ ಐಪಿಎಲ್ 2022ನ್ನು ವೀಕ್ಷಿಸುತ್ತಿರಬಹುದೇನೋ!

ಅಮೆರಿಕದಂತೆ ನಮ್ಮಲ್ಲೂ ಆಗಬೇಕು!
ಮೂಲತಃ ಉದ್ಯಮದ ಹಿನ್ನೆಲೆಯ ಕುಟುಂಬದಲ್ಲೇ ಜನಿಸಿದ ಲಲಿತ್ ಮೋದಿ, ತಮ್ಮ ಕಾಲೇಜು ದಿನಗಳಲ್ಲಿ ಅಮೆರಿಕದ ವೃತ್ತಿಪರ ಕ್ರೀಡೆಗಳ ಪಂದ್ಯಗಳು ಹೇಗೆ ನಡೆಯುತ್ತಿದ್ದವು ಎಂಬುದನ್ನು ಅರ್ಥಮಾಡಿಕೊಂಡಿದ್ದರು.

ಅಮೆರಿಕದಂತಹ ದೇಶಗಳಲ್ಲಿ ಕ್ರೀಡಾ ಪಂದ್ಯಗಳಿಂದ ಹೇಗೆ ಹಣದ ಹೊಳೆಯನ್ನೇ ಹರಿಸಲಾಗುತ್ತದೆ ಎಂದು ಅವರು ಅರ್ಥ ಮಾಡಿಕೊಂಡಿದ್ದರು. ಇದುವೇ ಐಪಿಎಲ್ ಎಂಬ ಕನಸಿಗೆ ಪುಷ್ಠಿ ನೀಡಿತು. ಭಾರತದಲ್ಲೂ ಕ್ರಿಕೆಟ್ ಲೀಗ್ ಆರಂಭಕ್ಕೆ ನಾಂದಿ ಹಾಡಿತು.

ಬಹಳ ಹಿಂದಿನ ಯೋಚನೆ!
1996 ರಲ್ಲಿಯೇ ಲಲಿತ್  ಮೋದಿ ತಮ್ಮ ಕನಸನ್ನು ಜಾರಿಗೆ ತರಲು ನಿರ್ಧರಿಸಿದ್ದರು. ಅವರು ಇಂಡಿಯನ್ ಕ್ರಿಕೆಟ್ ಲೀಗ್ ಎಂಬ ಲೀಗ್ ಅನ್ನು ರಚಿಸಿದರು. 50 ಓವರ್​ಗಳ ಪಂದ್ಯಾವಳಿಯಲ್ಲಿ ಎಂಟು ನಗರ ಆಧಾರಿತ ತಂಡಗಳ ನಡುವೆ ಸ್ಪರ್ಧೆಯನ್ನು ಹೊಂದಿಸುವ ಯೋಚನೆ ಅವರದ್ದಾಗಿತ್ತು. ಆದರೆ ಕಾರಣಾಂತರಗಳಿಂದ ಆಗ ಅದು ಸಾಧ್ಯವಾಗಲಿಲ್ಲ.

ಮೋದಿ ಎಂಟರ್ಟೈನ್ಮೆಂಟ್ ನೆಟ್ವರ್ಕ್
ಲಲಿತ್  ಮೋದಿ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಎಂಬ ಕಂಪನಿಯನ್ನು ಆರಂಭಿಸಿದ್ದರು. ಇಎಸ್​ಪಿಎನ್ ಗೊತ್ತಲ್ಲ ನಿಮಗೆ? ಈ ಸಂಸ್ಥೆಯ ಜೊತೆ ಲಲಿತ್ ಮೋದಿ ಅವರ ಸಂಸ್ಥೆ ಒಡಂಬಡಿಕೆ ಮಾಡಿಕೊಂಡು ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟಿತು. BCCI ಭಾರತದ ವಿವಿಧ ಪಂದ್ಯಗಳ ಪ್ರಸಾರದ ಹಕ್ಕನ್ನು ESPN ಗೆ ನೀಡಿತ್ತು.

$25 ಮಿಲಿಯನ್​ ಚೆಕ್!
10 ಸೆಪ್ಟೆಂಬರ್ 2007 ರಂದು, ಆಗಿನ BCCI ಅಧ್ಯಕ್ಷ ಶರದ್ ಪವಾರ್ ಲಲಿತ್ ಕುಮಾರ್ ಮೋದಿ ಕನಸಿನ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಅಗತ್ಯವಿರುವ ಆಟಗಾರರನ್ನು ಪಡೆಯಲು $25 ಮಿಲಿಯನ್​ನ ಚೆಕ್ ಅನ್ನು ಹಸ್ತಾಂತರಿಸಿದರು. ಮುಂಬೈನಲ್ಲಿರುವ ತಮ್ಮ ವೈಯಕ್ತಿಕ ಕಚೇರಿಯಿಂದ ಲೀಗ್​ನ ಎಲ್ಲಾ ಪ್ರಕ್ರಿಯೆಗಳನ್ನು ನಿಯಂತ್ರಿಸಬೇಕು ಎಂಬ ಷರತ್ತುಗಳ ಮೇಲೆ ಲಲಿತ್ ಮೋದಿ ಅವರಿಗೆ ಹಣವನ್ನು ನೀಡಲಾಯಿತು.

ಸಂಭಾವನೆ ಪಡೆಯದೇ ಕೆಲಸ!
ಐಪಿಎಲ್​ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ಲಲಿತ್ ಮೋದಿಗೆ ಸಂಪೂರ್ಣ ಅವಕಾಶವಿತ್ತು. ಅಲ್ಲದೇ ಲಲಿತ್ ಕುಮಾರ್ ಮೋದಿ ಐಪಿಎಲ್ ಆರಂಭಿಕ ಪ್ರಕ್ರಿಯೆಯ ಕೆಲಸಗಳಿಗೆ ಯಾವುದೇ ಸಂಭಾವನೆಯನ್ನೂ ಪಡೆದಿರಲಿಲ್ಲವಂತೆ.

ಆಟಗಾರರನ್ನು ಒಪ್ಪಿಸಬೇಕಲ್ಲ
ಕ್ರಿಕೆಟ್ ಆಟಗಾರರು ಭಾಗವಹಿಸಬೇಕಲ್ಲ! ಕೇವಲ ಬಿಸಿಸಿಸಿಐ ಒಪ್ಪಿದರೆ ಸಾಲದು, ಕ್ರಿಕೆಟಿಗರು ಭಾಗವಹಿಸದರೆ ಮಾತ್ರ ಪಂದ್ಯ ನಡೆಯಬಹುದು. ಹೀಗಾಗಿ ಅವರನ್ನು ಒಪ್ಪಿಸುವ ಬಹುದೊಡ್ಡ ಟಾಸ್ಕ್ ಲಲಿತ್ ಮೋದಿ ಅವರ ಮೇಲಿತ್ತು. ವಿಶ್ವ T20ಯ ಮೊದಲ ಆವೃತ್ತಿಯು ಸೆಪ್ಟೆಂಬರ್ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿತ್ತು. ಮೋದಿ  ವಿಶ್ವದ ಅಗ್ರ 100 ಆಟಗಾರರನ್ನು ಅವರ ಗಳಿಕೆ ಮತ್ತು ಕೌಶಲ್ಯದ ಪ್ರಕಾರ ನಾಲ್ಕು ವಿಭಾಗಗಳಾಗಿ ವಿಂಗಡಿಸಿದರು.

ಸಂಬಳ ಹೀಗಿತ್ತು
ನಾಲ್ಕು ವರ್ಗಗಳನ್ನು ನಾಲ್ಕು ವಿಭಿನ್ನ ಸಂಬಳದ ಸ್ಲ್ಯಾಬ್​ಗಳ ಅಡಿಯಲ್ಲಿ ವರ್ಗೀಕರಿಸಿದರು. - $100,000, $200,000, $300,000 ಮತ್ತು $400,000. ಈ ವೇತನಗಳು ಮೊದಲ ಐಪಿಎಲ್ ಹರಾಜಿನಲ್ಲಿ ಆಟಗಾರರಿಗೆ ನಿಗದಿಪಡಿಸಿದ ಮೂಲ ಬೆಲೆಯಾಗಿತ್ತು.

ವಿಶ್ವ T20 ಸಮಯದಲ್ಲಿ, ಮೋದಿ  ಆಟಗಾರರನ್ನು ಭೇಟಿ ಮಾಡಿದರು. ಐಪಿಎಲ್​ನಿಂದ ಆಟಗಾರರಿಗೆ ದೊರೆಯುವ ಸಂಬಳ ಮತ್ತು ಐಪಿಎಲ್​ ಇತರ ಪ್ರಯೋಜನಗಳ ಬಗ್ಗೆ ತಿಳಿಸಿ ಹೇಳಿ ಮನದಟ್ಟು ಮಾಡಿದರು.

ಇದನ್ನೂ ಓBCCI ಗೆ ಹಣ ಎಲ್ಲಿಂದೆಲ್ಲಾ ಬರುತ್ತೆ? ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ರೋಚಕ ಕಥೆದಿ: 

ವಿವಿಧ ದೇಶಗಳ ಕ್ರಿಕೆಟ್ ಬೋರ್ಡ್​ಗಳಿಗೆ ಪಂದ್ಯಾವಳಿ ಹೇಗೆ ನಡೆಯಲಿದೆ?  ಫ್ರಾಂಚೈಸಿಗಳ ಸಂಖ್ಯೆ, ಪಂದ್ಯಗಳ ಸಂಖ್ಯೆ, ತಂಡದಲ್ಲಿರುವ ವಿದೇಶಿ ಆಟಗಾರರ ಸಂಖ್ಯೆ ಮತ್ತು ಮುಂತಾದವುಗಳನ್ನು ವಿವರಿಸಿದರು.

ಕೊನೆಗೂ ಶುರುವಾಯ್ತು!
ಕೊನೆಗೂ 2008ರಲ್ಲಿ ಐಪಿಎಲ್ ವರ್ಣ ರಂಜಿತ ಸಮಾರಂಭದಲ್ಲಿ ಆರಂಭವಾಗೇ ಬಿಟ್ಟಿತು. ಲಲಿತ್ ಕುಮಾರ್ ಮೋದಿ 2010 ರವರೆಗೆ ಮೂರು ವರ್ಷಗಳ ಕಾಲ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿಯೇ ನಡೆಸಿದರು. ಅವರು 2008-10 ರ ಅವಧಿಯಲ್ಲಿ ಚಾಂಪಿಯನ್ಸ್ ಲೀಗ್​ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಅವರು 2005-10ರ ಅವಧಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಉಪಾಧ್ಯಕ್ಷರಾಗಿದ್ದರು. ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ (2005-09 ಮತ್ತು 2014-15) ಮತ್ತು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಲಲಿತ್ ಕುಮಾರ್ ಮೋದಿ ಸೇವೆ ಸಲ್ಲಿಸಿದ್ದಾರೆ.

ಕಥೆಗೆ ಶಶಿ ತರೂರ್ ಪ್ರವೇಶ!
2010 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸದ ಶಶಿ ತರೂರ್ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಐಪಿಎಲ್ ಫ್ರಾಂಚೈಸಿಯಲ್ಲಿ ಪರೋಕ್ಷ ಉಚಿತ ಇಕ್ವಿಟಿ ಹೊಂದಿದ್ದಾರೆ ಎಂದು ಮೋದಿ ಆರೋಪಿಸಿದರು. ಈ ಆರೋಪವು ಅಂತಿಮವಾಗಿ ತರೂರ್ ರಾಜೀನಾಮೆಗೆ ಕಾರಣವಾಯಿತು.

ಲಲಿತ್ ಮೋದಿ ಐಪಿಎಲ್​ನಿಂದ ಹೊರಬಿದ್ದಿದ್ದು ಹೇಗೆ?
ಆದರೆ IPL 2010 ಮುಗಿದ ಸ್ವಲ್ಪ ಸಮಯದಲ್ಲೇ ದುರ್ವರ್ತನೆ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪಗಳ ಅಡಿ ಲಲಿತ್ ಕುಮಾರ್ ಮೋದಿ ಅವರನ್ನು BCCI ನಿಂದಲೇ ಅಮಾನತುಗೊಳಿಸಲಾಯಿತು.

ಬಿಸಿಸಿಐ ಅವರ ವಿರುದ್ಧ ತನಿಖೆಯನ್ನೂ ನಡೆಸಿ ಅಜೀವ ಪರ್ಯಂತ ತನ್ನ ಚಟುವಟಿಕೆಗಳಿಂದ ಲಲಿತ್ ಕುಮಾರ್ ಮೋದಿ ಅವರಿಗೆ ನಿಷೇಧ ಹೇರಿತು. ಆದರೆ ಮೋದಿ ರಾಜಕೀಯ ಕಾರಣಗಳಿಂದ ತಮ್ಮ ವಿರುದ್ಧ ಆರೋಪ ಹೋರಿಸಲಾಗಿದೆ ಎಂದು ದೂರಿದರು. ಅವರ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಮಾಡಿತು. ಆದರೆ ಇದಕ್ಕೂ ಕೊಂಚ ಸಮಯದ ಮುನ್ನ ಅವರು ಲಂಡನ್​ ಸೇರಿಕೊಂಡರು.

ಇದನ್ನೂ ಓದಿ: IPL ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಬ್ಯಾನ್ ಆಗಿರುವುದೇಕೆ?

ಅಂದಿನಿಂದ ಭಾರತದ ಮುಖ್ಯವಾಹಿನಿಯಲ್ಲಿ ಲಲಿತ್ ಕುಮಾರ್ ಮೋದಿ ಹೆಸರು ಕೇಳುವುದು ಅಪರೂಪ. ಏನೇ ಆದರೂ ಭಾರತದತ್ತ ಇತರ ದೇಶಗಳು ತಿರುಗಿ ನೋಡುವಂತಹ ಐಪಿಎಲ್​ ರೂಪಿಸಿದ ಮನುಷ್ಯನಿಗೆ ಇಂದು ಭಾರತದಲ್ಲಿ ಅಸ್ತಿತ್ವವಿಲ್ಲ. ಇಂದು ಯಾವುದೋ ದೇಶದ ಎಲ್ಲೋ ಕುಳಿತು ಟಿವಿಯಲ್ಲಿಅದರೂ ಮ್ಯಾಚ್ ನೋಡೊ ಸ್ಥಿತಿಲಿ ಇದ್ದಾರಾ ಎಂಬ ಪ್ರಶ್ನೆ ಕಾಡುತ್ತದೆ. ಇದೊಂಥರಾ ಜಗತ್ತಿನ ವ್ಯಂಗ್ಯವೂ ಹೌದು, ವಿಷಾದವೂ ಹೌದು!
Published by:guruganesh bhat
First published: