IPL 2022: ಅಹ್ಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್; ಫೆ. 12-13ರಂದು ಐಪಿಎಲ್ ಹರಾಜು ಫಿಕ್ಸ್

IPL Auction on Feb 12-13: ಈ ಬಾರಿಯ ಐಪಿಎಲ್ ಹರಾಜು ಕಾರ್ಯಕ್ರಮ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಸಲು ಬಿಸಿಸಿಐ ನಿರ್ಧಾರ ಮಾಡಿದೆ. ಹಾಗೆಯೇ, ಅಹ್ಮದಾಬಾದ್ ಫ್ರಾಂಚೈಸಿಯ ಮಾಲೀಕರಿಗೆ ಸಮ್ಮತಿ ಕೂಡ ನೀಡಲಾಗಿದೆ.

ಐಪಿಎಲ್ ಹರಾಜು

ಐಪಿಎಲ್ ಹರಾಜು

 • Share this:
  ನವದೆಹಲಿ, ಜ. 11: ಬೆಟಿಂಗ್ ಜಾಲದ ಶಂಕೆಯ ಮೇಲೆ ತಡೆಹಿಡಿಯಲಾಗಿದ್ದ ಅಹ್ಮದಾಬಾದ್ ಫ್ರಾಂಚೈಸಿ ಮಾಲೀಕರಿಗೆ ಕೊನೆಗೂ ಒಪ್ಪಿಗೆ ಮುದ್ರೆ ಸಿಕ್ಕಿದೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಬಿಸಿಸಿಐ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದರೊಂದಿಗೆ ಅಹಮದಾಬಾದ್ ಫ್ರಾಂಚೈಸಿಯ ಮಾಲಕತ್ವ ಸಿವಿಸಿ ಕ್ಯಾಪಿಟಲ್ಸ್ ಕೈತಪ್ಪಬಹುದು ಎಂಬ ವದಂತಿಗೆ ತೆರೆಬಿದ್ದಂತಾಗಿದೆ. ಐಪಿಎಲ್ ಛೇರ್ಮನ್ ಬ್ರಿಜೇಶ್ ಪಟೇಲ್ ಅವರು ಇಂದು ಆಡಳಿತ ಮಂಡಳಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಈ ಎರಡು ಹೊಸ ಫ್ರಾಂಚೈಸಿಗಳಿಗೆ ಅನುಮೋದನೆ ಕೊಟ್ಟಿರುವ ವಿಚಾರವನ್ನು ತಿಳಿಸಿದರು.

  ಐಪಿಎಲ್​ನಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಅಧಿಕೃತವಾಗಿ ಒಪ್ಪಿಗೆ ಕೊಟ್ಟಿದೆ. ಈ ಎರಡು ತಂಡಗಳು ನಿಗದಿತ ಸಂಖ್ಯೆಯಲ್ಲಿ ಆಟಗಾರರನ್ನ ಆಯ್ಕೆ ಮಾಡಿಕೊಳ್ಳಲು ಎರಡು ವಾರ ಕಾಲಾವಕಾಶ ಕೊಡಲಾಗಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ಧಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಅಹ್ಮದಾಬಾದ್ ಫ್ರಾಂಚೈಸಿ ವಿವಾದವೇನು?

  ಕಳೆದ ವರ್ಷ ನಡೆಸಲಾದ ಬಿಡ್​ಗಳಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಮಾರಾಟವಾಗಿದ್ದವು. ವಿಶ್ವದ ಪ್ರಬಲ ಹೂಡಿಕೆ ಸಂಸ್ಥೆ ಎನಿಸಿದ ಸಿವಿಸಿ ಕ್ಯಾಪಿಟಲ್ ಅಹ್ಮದಾಬಾದ್ ಫ್ರಾಂಚೈಸಿಯನ್ನ ಖರೀದಿ ಮಾಡಿತ್ತು. ಆದರೆ, ಸಿವಿಸಿ ಕ್ಯಾಪಿಟಲ್​ನ ಯೂರೋಪ್ ವಿಭಾಗದ ಸಂಸ್ಥೆ ಬೆಟಿಂಗ್ ಕಂಪನಿಗಳ ಜೊತೆ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ, ಅಹ್ಮದಾಬಾದ್ ಫ್ರಾಂಚೈಸಿಯ ಹಕ್ಕನ್ನು ತಡೆಹಿಡಿಯಲಾಗಿತ್ತು. ಇದೀಗ ಸಿವಿಸಿ ಕ್ಯಾಪಿಟಲ್ ತನ್ನ ಏಷ್ಯನ್ ಫಂಡ್ಸ್ ಮೂಲಕ ಅಹ್ಮದಾಬಾದ್ ಫ್ರಾಂಚೈಸಿಯ ಮೇಲೆ ಹೂಡಿಕೆ ಮಾಡಿರುವ ವಿಚಾರ ತಿಳಿದುಬಂದಿತು. ಆದರೆ, ಸಿವಿಸಿಯ ಏಷ್ಯನ್ ಫಂಡ್ಸ್​ಗೂ ಬೆಟಿಂಗ್ ಕಂಪನಿಗಳಿಗೂ ಯಾವುದೇ ಲಿಂಕ್ ಇಲ್ಲದಿರುವುದನ್ನೂ ಬಿಸಿಸಿಐ ಖಚಿಪಡಿಸಿಕೊಂಡಿತು. ಹೀಗಾಗಿ, ಅಹ್ಮದಾಬಾದ್ ಫ್ರಾಂಚೈಸಿ ಮಾಲೀಕರಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ.

  ಇದನ್ನೂ ಓದಿ: Tata IPL: ಐಪಿಎಲ್ ಪ್ರಾಯೋಜಕತ್ವಕ್ಕೆ Vivo ಬದಲು ಟಾಟಾ; ಸ್ಪಾನ್ಸರ್​ಶಿಪ್ ದುಡ್ಡಲ್ಲಿ ತಂಡಗಳಿಗೆ ಸಿಗೋ ಹಣ ಇಷ್ಟು

  ಬೆಂಗಳೂರಿನಲ್ಲೇ ಐಪಿಎಲ್ ಹರಾಜು:

  ಐಪಿಎಲ್ 2022ಗಾಗಿ ಐಪಿಎಲ್ ಹರಾಜಿಗೆ ಸ್ಥಳ ಮತ್ತು ದಿನಾಂಕವನ್ನು ಖಚಿತಪಡಿಸಲಾಗಿದೆ. ಫೆಬ್ರವರಿ 12 ಮತ್ತು 13ರಂದು ಎರಡು ದಿನ ಬೆಂಗಳೂರಿನಲ್ಲಿ ಹರಾಜು ಕಾರ್ಯಕ್ರಮ ಇರಲಿದೆ. ಅದಕ್ಕಾಗಿ ಆಟಗಾರರ ಡ್ರಾಫ್ಟ್ ಲಿಸ್ಟ್ ಮಾಡಲಾಗುತ್ತಿದೆ.

  ಈಗ ಅನುಮೋದನೆಗೊಂಡಿರುವ ಎರಡು ಹೊಸ ಫ್ರಾಂಚೈಸಿಗಳು ಹರಾಜಿಗೆ ಮುನ್ನವೇ ತಲಾ ಮೂರು ಆಟಗಾರರನ್ನ ಖರೀದಿಸುವ ಅವಕಾಶ ಹೊಂದಿವೆ. ಈ ಆಟಗಾರರ ಪಟ್ಟಿಯನ್ನು ಈ ಎರಡು ಫ್ರಾಂಚೈಸಿಗಳು ಎರಡು ವಾರಗಳ ಒಳಗೆ ಅಂತಿಮಗೊಳಿಸಿ ಬಿಸಿಸಿಐಗೆ ಸಲ್ಲಿಸಬೇಕು.

  ಇದನ್ನೂ ಓದಿ: ODI ಕ್ರಿಕೆಟ್‌ ಶುರುವಾಗಿ 51 ವರ್ಷ ಆಗಿದೆ, ಮೊದಲ ಪಂದ್ಯ ಹೇಗಿತ್ತು ನೋಡಿ

  ಈ ಮೂವರು ಆಟಗಾರರ ಖರೀದಿಗೆ ಗರಿಷ್ಠ 33 ಕೋಟಿ ಮಾತ್ರ ಖರ್ಚು ಮಾಡಬಹುದು. ಮೊದಲ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ಎಂದು ನಿಗದಿ ಮಾಡಲಾಗಿದೆ. ಎಲ್ಲಾ ತಂಡಗಳಂತೆ ಈ ಎರಡು ಹೊಸ ಫ್ರಾಂಚೈಸಿಗಳಿಗೂ ಒಟ್ಟಾರೆ ಬಜೆಟ್ 90 ಕೋಟಿ ಇರುತ್ತದೆ. ಒಂದು ವೇಳೆ 33 ಕೋಟಿ ಕೊಟ್ಟು 3 ಆಟಗಾರರನ್ನ ಖರೀದಿಸಿದರೆ ಅವುಗಳ ಬಜೆಟ್​ನಲ್ಲಿ ಉಳಿಯುವುದು 57 ಕೋಟಿ ರೂ ಮಾತ್ರ.

  ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನ ಲಕ್ನೋ ಫ್ರಾಂಚೈಸಿಯವರು ಖರೀದಿ ಮಾಡುವ ಸಾಧ್ಯತೆ ಇದೆ. ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಷೀದ್ ಖಾನ್, ಆಸ್ಟ್ರೇಲಿಯನ್ ಆಟಗಾರ ಡೇವಿಡ್ ವಾರ್ನರ್ ಹಾಗೂ ಇನ್ನೂ ಕೆಲ ಪ್ರಮುಖ ಆಟಗಾರರ ಮೇಲೆ ಈ ಎರಡು ಫ್ರಾಂಚೈಸಿಗಳು ಕಣ್ಣಿಟ್ಟಿವೆ.
  Published by:Vijayasarthy SN
  First published: