ದುಬೈ, ಅ. 25: ಮುಂದಿನ ವರ್ಷದ
ಐಪಿಎಲ್ನಲ್ಲಿ ಹತ್ತು ತಂಡಗಳು ಆಡಲಿವೆ. ಈಗಿರುವ ಎಂಟು ತಂಡಗಳ ಜೊತೆಗೆ ಇನ್ನೂ ಎರಡು ಹೊಸ ತಂಡಗಳ ರಚನೆಯಾಗಲಿದೆ. ಅಹ್ಮದಾಬಾದ್ ಮತ್ತು ಲಕ್ನೋ ಆ ಎರಡು ಹೊಸ ತಂಡಗಳಾಗಿವೆ. ಇಂದು ನಡೆದ ಬಿಡ್ ಪ್ರಕ್ರಿಯೆಯಲ್ಲಿ
ಬಿಸಿಸಿಐ ಎರಡು ತಂಡಗಳನ್ನ ಅಂತಿಮಗೊಳಿಸಿತು. ಬಿಸಿಸಿಐನ ನಿರೀಕ್ಷೆಮೀರಿ ಎರಡು ತಂಡಗಳು ದಾಖಲೆ ಮೊತ್ತಕ್ಕೆ ಬಿಡ್ ಆಗಿವೆ. 10 ಸಾವಿರ ಕೋಟಿ ರೂ ನಿರೀಕ್ಷೆ ಇತ್ತಾದರೂ ಬಿಸಿಸಿಐಗೆ ಈ ಎರಡು ತಂಡಗಳ ಬಿಡ್ನಿಂದ ಬಂದ ಮೊತ್ತ 12,690 ಕೋಟಿ ರೂ ಆಗಿದೆ.
ಆರ್ಪಿ-ಸಂಜೀವ್ ಗೋಯೆಂಕಾ ಗ್ರೂಪ್ ಸಂಸ್ಥೆ 7,090 ಕೋಟಿ ರೂಗೆ ಬಿಡ್ ಮಾಡಿ ಲಕ್ನೋ ಐಪಿಎಲ್ ತಂಡವನ್ನ ಪಡೆಯಿತು. ಸಿವಿಸಿ ಕ್ಯಾಪಿಟಲ್ ಎಂಬ ಸಂಸ್ಥೆ 5,200 ರೂಗೆ ಅಹ್ಮದಾಬಾದ್ ಫ್ರಾಂಚೈಸಿಯನ್ನ ಪಡೆದಿದೆ.
ಕ್ರೀಡೆಗಳೊಂದಿಗೆ ನಂಟಿರುವ ಸಂಸ್ಥೆಗಳು:
ಅಹ್ಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿ ಪಡೆದ ಸಂಸ್ಥೆಗಳು ಕ್ರೀಡೆಯೊಂದಿಗೆ ಜೋಡಿತವಾಗಿರುವಂಥವೇ. ಆರ್ಪಿ-ಸಂಜೀವ್ ಗೋಯೆಂಕಾ ಗ್ರೂಪ್ ಸಂಸ್ಥೆ ಈ ಹಿಂದೆ ಐಪಿಎಲ್ನಲ್ಲಿ ಇದ್ದ ಪುಣೆ ಐಪಿಎಲ್ ತಂಡವನ್ನ ಹೊಂದಿತ್ತು. ಜೊತೆಗೆ, ಅಥ್ಲೆಟಿಕೋ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ತಂಡದ ಮಾಲೀಕ ಸಂಸ್ಥೆಯೂ ಆಗಿದೆ.
ಅತ್ತ, ಸಿವಿಸಿ ಕ್ಯಾಪಿಟಲ್ಸ್ ಅಂತರರಾಷ್ಟ್ರೀಯ ಸಮೂಹ ಸಂಸ್ಥೆಯಾಗಿದೆ. ಫಾರ್ಮುಲಾ ಒನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿತ್ತು. ಸ್ಪೇನ್ ದೇಶದ ಲಾ ಲಿಗಾ ಎಂಬ ಅತ್ಯುನ್ನತ ಮಟ್ಟದ ಫುಟ್ಬಾಲ್ ಲೀಗ್ನಲ್ಲೂ ಜೋಡಿತಗೊಂಡಿದೆ.
ಇದನ್ನೂ ಓದಿ: ಪಾಕ್ ಪಂದ್ಯದ ವೇಳೆ Black Lives Matter ಗಾಗಿ ಮಂಡಿಯೂರಿದ ಭಾರತೀಯ ಆಟಗಾರರು; ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ!
ಪೈಪೋಟಿ ಹೆಚ್ಚಿತ್ತು:
ಹಿಂದಿನ ಕೆಲ ವರದಿಗಳ ಪ್ರಕಾರ ಅದಾನಿ ಗ್ರೂಪ್ ಸಂಸ್ಥೆಗೆ ಅಹ್ಮದಾಬಾದ್ ಫ್ರಾಂಚೈಸಿ ಸಿಗುವ ನಿರೀಕ್ಷೆ ಇತ್ತು. ಕೊನೆಗೆ ಸಂಜೀವ್ ಗೋಯೆಂಕಾ ಕುಟುಂಬದವರಿಗೆ ಫ್ರಾಂಚೈಸಿ ಸಿಕ್ಕಿದೆ. ಅದಾನಿ ಗ್ರೂಪ್ ಅಷ್ಟೇ ಅಲ್ಲ ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ನ ಮಾಲೀಕರಾದ ವಿಶ್ವಖ್ಯಾತ ಗ್ಲೇಜರ್ ಫ್ಯಾಮಿಲಿ, ಅರಬಿಂದೋ ಫಾರ್ಮಾ, ಕೋಟಕ್ ಗ್ರೂಪ್, ಟೋರೆಂಟ್ ಗ್ರೂಪ್ ಮೊದಲಾದ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಅದಾನಿ ಗ್ರೂಪ್, ಹಿಂದೂಸ್ತಾನ್ ಟೈಮ್ಸ್, ಗ್ಲೇಜರ್ ಫ್ಯಾಮಿಲಿ, ಸಂಜೀವ್ ಗೋಯೆಂಕಾ ಮತ್ತು ಅರಬಿಂದೋ ಫಾರ್ಮಾ ಸಂಸ್ಥೆಗಳು ಅತಿ ಹೆಚ್ಚು ಬಿಡ್ ಸಲ್ಲಿಸಿದ್ದವು.
ಅಹ್ಮದಾಬಾದ್, ಲಕ್ನೋ ಫ್ರಾಂಚೈಸಿ ಯಾಕೆ?
ಪುಣೆ, ಇಂದೋರ್, ಗುವಾಹಟಿ, ಕಟಕ್, ಧರ್ಮಶಾಲ ಮೊದಲಾದ ನಗರಗಳಿಂದಲೂ ಫ್ರಾಂಚೈಸಿಗೆ ಪೋಪೋಟಿ ಇತ್ತು. ಆದರೆ, ವಿವಿಧ ನಗರಗಳಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಹಾಗೂ ಅದಲ್ಲಿನ ಮೂಲ ಸೌಕರ್ಯಗಳನ್ನ ಪರಿಗಣಿಸಿ ಅಂತಿಮವಾಗಿ ಅಹ್ಮದಾಬಾದ್ ಮತ್ತು ಲಕ್ನೋ ನಗರಗಳಿಗೆ ಮಣೆ ಹಾಕಲಾಗಿದೆ.
ಅಹ್ಮದಾಬಾದ್ನಲ್ಲಿರುವ ಮೊಟೆರಾ ಸ್ಟೇಡಿಯಂ ಅನ್ನು ನವೀಕರಿಸಲಾಗಿದ್ದು, ವಿಶ್ವದರ್ಜೆಯ ಸೌಕರ್ಯಗಳನ್ನ ಹೊಂದಿದೆ. ಇದು 1 ಲಕ್ಷ ಜನರಿಗೆ ಸೀಟಿಂಗ್ ಸಾಮರ್ಥ್ಯ ಹೊಂದಿದೆ. ನರೇಂದ್ರ ಮೋದಿ ಸ್ಟೇಡಿಯಂ ಎಂದು ನಾಮಕರಣಗೊಂಡಿರುವ ಈ ಸ್ಟೇಡಿಯಂನಲ್ಲಿ ಈಗಾಗಲೇ ಕೆಲ ಅಂತರರಾಷ್ಟ್ರೀಯ ಪಂದ್ಯಗಳನ್ನೂ ಆಡಿಸಲಾಗಿದೆ.
ಇದನ್ನೂ ಓದಿ: Pak Bowler Arshad- ವರ್ಲ್ಡ್ ಕ್ಲಾಸ್ ಬೌಲರ್ ಆಗಿದ್ದವ ಜೀವನೋಪಾಯಕ್ಕೆ ಟ್ಯಾಕ್ಸಿ ಡ್ರೈವರ್ ಆದ ಕಥೆ
ಲಕ್ನೋದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಇದೆ. ಇಲ್ಲಿಯೂ ಸ್ಟೇಡಿಯಂ ಉತ್ತಮ ಸ್ಥಿತಿಯಲ್ಲಿದೆ.
ಇನ್ನು, ಈ ಎರಡು ಹೊಸ ತಂಡಗಳಿಗೆ ಏನು ನಾಮಕರಣ ಮಾಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನ ನಿಷೇಧಿಸಿದ್ಧಾಗ ರೈಸಿಂಗ್ ಪುಣೆ ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳ ಫ್ರಾಂಚೈಸಿ ನೀಡಲಾಗಿತ್ತು. ಸಿಎಸ್ಕೆ ಮತ್ತು ರಾಜಸ್ಥಾನ್ ತಂಡಗಳ ನಿಷೇಧ ಹಿಂಪಡೆದ ಬಳಿಕ ಪುಣೆ ಮತ್ತು ಲಯನ್ಸ್ ತಂಡಗಳನ್ನ ಕೈಬಿಡಲಾಗಿತ್ತು.
ಆಟಗಾರರ ಹರಾಜು:
ಇದೇ ಡಿಸೆಂಬರ್ ತಿಂಗಳಲ್ಲಿ 2022ರ ಐಪಿಎಲ್ಗಾಗಿ
ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಿರುವ ಎಂಟು ತಂಡಗಳು ಐದು ಆಟಗಾರರನ್ನ ಉಳಿಸಿಕೊಳ್ಳುವ ಅವಕಾಶ ಕೊಡಲಾಗಿದೆ. 90 ಕೋಟಿ ರೂ ಬಜೆಟ್ ಅವಕಾಶ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ