IPL Auction: ಬೆಂಗಳೂರಿನಲ್ಲಿ ಮುಂದಿನ ತಿಂಗಳು ಐಪಿಎಲ್ ಹರಾಜು? ದಿನಾಂಕ ಮತ್ತಿತರ ಮಾಹಿತಿ

IPL 2022: ಏಪ್ರಿಲ್ ತಿಂಗಳಲ್ಲಿ ನಡೆಯಬಹುದಾದ ಐಪಿಎಲ್ 2022 ಟೂರ್ನಿಗಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮುಂದಿನ ತಿಂಗಳು ಹರಾಜು ನಡೆಯುವ ಸಾಧ್ಯತೆ ಇದೆ. ಇತ್ತೀಚಿನ ಎಲ್ಲಾ ಮಾಹಿತಿ ಇಲ್ಲಿದೆ…

ಐಪಿಎಲ್ ಹರಾಜು

ಐಪಿಎಲ್ ಹರಾಜು

 • Share this:
  ಬೆಂಗಳೂರು, ಜ. 7: ಓಮೈಕ್ರಾನ್ ಕೋವಿಡ್ ಭೀಕರವಾಗಿ ಹರಡುತ್ತಿರುವ ಹೊತ್ತಿನಲ್ಲೇ ಐಪಿಎಲ್ ಪಂದ್ಯಾವಳಿಯ ಸುದ್ದಿ ಸದ್ದು ಮಾಡುತ್ತಿದೆ. ಮುಂದಿನ ತಿಂಗಳು ಐಪಿಎಲ್ ಹರಾಜು ನಡೆಯುವ ಸಾಧ್ಯತೆ ಇದೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ ಐಪಿಎಲ್ ಟೂರ್ನಿ ವಿಸ್ತಾರಗೊಂಡಿದೆ. ಇದರೊಂದಿಗೆ ತಂಡಗಳ ಸಂಖ್ಯೆ ಎಂಟರಿಂದ ಹತ್ತಕ್ಕೆ ಏರಿದೆ. ಪಂದ್ಯಗಳ ಸಂಖ್ಯೆಯೂ ತುಸು ಏರಿಕೆ ಆಗಲಿದೆ. ಟೂರ್ನಮೆಂಟ್ ಸ್ವರೂಪದಲ್ಲೂ ಬದಲಾವಣೆ ಇರಲಿದೆ.

  ಐಪಿಎಲ್ ಹರಾಜು ಯಾವಾಗ?

  ಐಪಿಎಲ್ ಹರಾಜು ಯಾವಾಗ ಎಂದು ಬಿಸಿಸಿಐ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿಲ್ಲ. ಬಿಸಿಸಿಐ ಮೂಲಗಳನ್ನ ಉಲ್ಲೇಖಿಸಿ ವಿವಿಧ ಮಾಧ್ಯಮಗಳಲ್ಲಿ ಬಂದಿದ್ದ ವರದಿಗಳ ಪ್ರಕಾರ ಫೆಬ್ರವರಿ 12 ಮತ್ತು 13ರಂದು ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಬೇಕಿದೆ. ಆದರೆ, ಇತ್ತೀಚಿನ ವರದಿ ಪ್ರಕಾರ ಹರಾಜು ಒಂದು ವಾರ ಮುಂದೂಡಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಅಂದರೆ ಫೆಬ್ರವರಿ 19 ಮತ್ತು 20 ರಂದು ನಡೆಯಬಹುದು.

  ಮುಂದೂಡಿಕೆ ಯಾಕೆ?

  ಐಪಿಎಲ್​ನಿಂದ ಅನುಮೋದನೆ ಆಗಿರುವ ಎರಡು ಹೊಸ ಫ್ರಾಂಚೈಸಿಗಳಲ್ಲಿ ಅಹ್ಮದಾಬಾದ್ ಕೂಡ ಒಂದು. ಆದರೆ, ಅಹ್ಮದಾಬಾದ್ ಫ್ರಾಂಚೈಸಿ ಮಾಲೀಕರಿಗೂ ಬೆಟ್ಟಿಂಗ್ ವ್ಯವಹಾರಕ್ಕೂ ಸಂಬಂಧ ಇದೆ ಎಂಬ ಆರೋಪದ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಪರಿಶೀಲನೆ ನಡೆಸುತ್ತಿದೆ. ಫ್ರಾಂಚೈಸಿ ಜೊತೆ ವಿಭಿನ್ನ ನಿಬಂಧನೆಗಳೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಇದು ಅಂತಿಮಗೊಂಡಿಲ್ಲ. ಹೀಗಾಗಿ, ಒಂದು ವಾರ ಹರಾಜು ಪ್ರಕ್ರಿಯೆಯನ್ನ ಮುಂದಕ್ಕೆ ಹಾಕಲಾಗಬಹುದು ಎಂದು ಹೇಳಲಾಗುತ್ತಿದೆ.

  ಹರಾಜು ಸ್ಥಳ ಎಲ್ಲಿ?

  ಈ ಬಾರಿಯ ಐಪಿಎಲ್ ಹರಾಜಿಗೆ ಸ್ಥಳವಾಗಿ ಬೆಂಗಳೂರು ಮತ್ತು ಹೈದರಾಬಾದ್ ನಗರವನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ ಬೆಂಗಳೂರನ್ನ ಆಯ್ಕೆ ಮಾಡಲಾಗಿದೆ. ಕೋಲ್ಕತಾ, ಕೊಚ್ಚಿ ಮತ್ತು ಮುಂಬೈ ನಗರಗಳನ್ನೂ ಪರಿಗಣನೆಯಲ್ಲಿ ಇಟ್ಟುಕೊಳ್ಳಲಾಗಿದೆ. ಕೋವಿಡ್ ಪರಿಸ್ಥಿತಿ ಹೇಗಿದೆ ಎಂಬುದರ ಮೇಲೆ ಸ್ಥಳವನ್ನ ಅಂತಿಮಗೊಳಿಸಲಾಗುತ್ತದೆ. ಒಂದು ವೇಳೆ ಈ ನಗರಗಳಲ್ಲಿ ಕೋವಿಡ್ ಸ್ಥಿಗಿ ನಿಯಂತ್ರಣಕ್ಕೆ ಬರದಷ್ಟು ತೀವ್ರ ಮಟ್ಟಕ್ಕೆ ಹೋದರೆ ಟಿ20 ವಿಶ್ವಕಪ್ ನಡೆದ ಯುಎಇಯಲ್ಲೇ ಐಪಿಎಲ್ ಹರಾಜು ನಡೆದರೂ ನಡೆಯಬಹುದು.

  ಇದನ್ನೂ ಓದಿ: Slow Over Rate: ಟಿ20 ಪಂದ್ಯದಲ್ಲಿ ಸ್ಲೋ ಓವರ್ ರೇಟ್​ಗೆ ದಂಡದ ಜೊತೆ ಫೀಲ್ಡಿಂಗ್​ನಲ್ಲೂ ಬದಲಾವಣೆ

  ಎಂಟು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ:

  ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯೀನ್ ಅಲಿ ಮತು ಋತುರಾಜ್ ಗಾಯಕ್ವಾಡ್
  ಕೋಲ್ಕತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್.
  ಸನ್​ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್.
  ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್.
  ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮ್ಮದ್ ಸಿರಾಜ್
  ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಆನ್ರಿಕ್ ನೋರ್ಟಿಯಾ.
  ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್.
  ಪಂಜಾಬ್ ಕಿಂಗ್ಸ್: ಮಯಂಕ್ ಅಗರ್ವಾಲ್, ಅರ್ಷ್​ದೀಪ್ ಸಿಂಗ್

  ಹೊಸ ಎರಡು ತಂಡಗಳಿಗೆ ನಿಯಮಗಳು ಹೇಗೆ?:

  ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಆಟಗಾರರ ಹರಾಜಿಗೆ ಮುನ್ನ ತಲಾ ಮೂವರು ಆಟಗಾರರನ್ನ ಖರೀದಿಸುವ ಅವಕಾಶ ಪಡೆದಿವೆ. ಈ ಮೂರು ಆಟಗಾರರಿಗೆ ಗರಿಷ್ಠ 33 ಕೋಟಿ ರೂ ಮಾತ್ರ ಖರ್ಚು ಮಾಡಬಹುದು. ಮೊದಲ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರೂ ತೆರಬೇಕೆಂಬುದು ಪೂರ್ವನಿಗದಿತವಾಗಿದೆ.

  ಇದನ್ನೂ ಓದಿ: World Cup Team India: ಮಾರ್ಚ್​ನಿಂದ ಮಹಿಳಾ ಓಡಿಐ ವಿಶ್ವಕಪ್: ಭಾರತ ತಂಡ ಪ್ರಕಟ, ಮಿಥಾಲಿ ಕ್ಯಾಪ್ಟನ್

  ಹರಾಜಿಗೆ ವಿವಿಧ ತಂಡಗಳ ಬಳಿ ಉಳಿದಿರುವ ಬಜೆಟ್:

  ಪಂಜಾಬ್ ಕಿಂಗ್ಸ್: 72 ಕೋಟಿ ರೂ
  ಸನ್​ರೈಸರ್ಸ್ ಹೈದರಾಬಾದ್: 68 ಕೋಟಿ ರೂ
  ರಾಜಸ್ಥಾನ್ ರಾಯಲ್ಸ್: 62 ಕೋಟಿ ರೂ
  ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ
  ಚೆನ್ನೈ ಸೂಪರ್ ಕಿಂಗ್ಸ್: 48 ಕೋಟಿ ರೂ
  ಕೋಲ್ಕತಾ ನೈಟ್ ರೈಡರ್ಸ್: 48 ಕೋಟಿ ರೂ
  ಮುಂಬೈ ಇಂಡಿಯನ್ಸ್: 48 ಕೋಟಿ ರೂ
  ಡೆಲ್ಲಿ ಕ್ಯಾಪಿಟಲ್ಸ್: 47.5 ಕೋಟಿ ರೂ
  Published by:Vijayasarthy SN
  First published: