ಅಹ್ಮದಾಬಾದ್(ಏ. 28): ನಿನ್ನೆ ನಡೆದ ಐಪಿಎಲ್ ಟೂರ್ನಿ ಆರನೇ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 1 ರನ್ನಿಂದ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಆದರೆ, ಪಂತ್ ಕ್ಯಾಪ್ಟನ್ಸಿ ಬಗ್ಗೆ ಮಾಜಿ ಕ್ರಿಕೆಟಿಗರಾದ ವಿರೇಂದರ್ ಸೆಹ್ವಾಗ್ ಮತ್ತು ಆಶೀಶ್ ನೆಹ್ರಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡದ ನಾಯಕರಾಗಿ ಪಂತ್ ಹಲವು ತಪ್ಪುಗಳನ್ನ ಎಸಗಿದ್ದಾರೆ ಎಂದು ಇವರು ಎತ್ತಿ ತೋರಿಸಿದ್ದಾರೆ.
ನೇರ ನುಡಿಗಳ ವೀರೇಂದ್ರ ಸೆಹ್ವಾಗ್ ಅವರು ರಿಷಭ್ ಪಂತ್ ನಾಯಕತ್ವಕ್ಕೆ ನೀಡಿದ ಅಂಕ 10ಕ್ಕೆ 3 ಮಾತ್ರ. ತಮ್ಮ ತಂಡದ ಬೌಲರ್ಗಳನ್ನ ಸರಿಯಾಗಿ ಬಳಕೆ ಮಾಡಿಕೊಳ್ಳದೇ ಇದ್ದದ್ದು ಸೆಹ್ವಾಗ್ ಟೀಕೆಗೆ ಪ್ರಮುಖ ಕಾರಣ.
“ರಿಷಭ್ ಪಂತ್ ತನ್ನ ಬೌಲರ್ಗಳನ್ನ ಸರಿಯಾಗಿ ಬಳಸಲಿಲ್ಲ. ಇಂಥ ತಪ್ಪುಗಳನ್ನ ಮಾಡಲೇ ಬಾರದು. ಅದಕ್ಕಾಗಿ ಅವರ ಕ್ಯಾಪ್ಟನ್ಸಿಗೆ ನಾನು 10ಕ್ಕೆ ಐದು ಅಂಕವನ್ನೂ ಕೊಡುವುದಿಲ್ಲ. ನಿಮ್ಮ ತಂಡದ ಪ್ರಮುಖ ಬೌಲರ್ ಬೌಲಿಂಗ್ ಮಾಡದೇ ಇದ್ದಾಗ ನಿಮ್ಮ ಎಣಿಕೆಗಳು ತಪ್ಪಾಗಿ ಹೋಗುತ್ತವೆ. ಕ್ಯಾಪ್ಟನ್ಸಿ ಎಂದರೆ ಇದೇ ಆಗಿದೆ. ಈ ವಿಚಾರಗಳಲ್ಲಿ ಎಚ್ಚರ ವಹಿಸಬೇಕು. ಒಬ್ಬ ನಾಯಕ ಆದವನು ತನ್ನ ಬೌಲಿಂಗ್ ಸಂಪನ್ಮೂಲವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕು” ಎಂದು ಸೆಹ್ವಾಗ್ ಹೇಳಿದ್ದಾರೆ.
“ಇದನ್ನ ನೀವು ಅರಿತುಕೊಳ್ಳದಿದ್ದರೆ ಮನಸಿಗೆ ಬಂದಂತೆ ನೀವು ಬೌಲರ್ಗೆ ಚೆಂಡು ಕೊಡಬೇಕಾಗುತ್ತದೆ. ಆಟವನ್ನು ಹೇಗೆ ಬದಲಿಸುತ್ತಾನೆ ಎಂಬುದರ ಮೇಲೆ ನಾಯಕನ ಸಾಮರ್ಥ್ಯವನ್ನ ಅಳೆಯಲಾಗುತ್ತದೆ. ನಾಯಕನಾದವನು ಸಂದರ್ಭಕ್ಕೆ ತಕ್ಕಂತೆ ನೀವು ಬೌಲಿಂಗ್ ಮತ್ತು ಫೀಲ್ಡಿಂಗ್ ಅನ್ನು ಬದಲಾವಣೆ ಮಾಡಬೇಕಾಗುತ್ತದೆ” ಎಂದು ವೀರೂ ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: ಸ್ಯಾಂಡ್ ಸ್ಟಾರ್ಮ್ - ಡೆಲ್ಲಿ ವಿರುದ್ಧ ಆರ್ಸಿಬಿ ಗೆಲ್ಲಲು ಕಾರಣವಾದ ಪ್ರಮುಖ ಅಂಶಗಳು
“ರಿಷಭ್ ಪಂತ್ ಒಬ್ಬ ಒಳ್ಳೆಯ ನಾಯಕನಾಗಬೇಕೆಂದರೆ ಇಂಥ ಸಣ್ಣ ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು. ಸ್ಮಾರ್ಟ್ ಆಗಿ ಕ್ರಿಕೆಟ್ ಆಡಿದಾಗ ಮಾತ್ರ ಸ್ಮಾರ್ಟ್ ಕ್ಯಾಪ್ಟನ್ ಆಗಬಹುದು” ಎಂದು ಕ್ರಿಕ್ ಬಜ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ತಿಳಿಸಿದ್ದಾರೆ.
ನಿನ್ನೆಯ ಆರ್ಸಿಬಿ – ಡೆಲ್ಲಿ ಪಂದ್ಯದಲ್ಲಿ ಎಬಿ ಡೀವಿಲಿಯರ್ಸ್ ಬ್ಯಾಟಿಂಗ್ ಮಾಡುವಾಗ ಕೊನೆಯ ಓವರ್ನಲ್ಲಿ ಪರಿಪೂರ್ಣ ಬೌಲರ್ನ ಬಳಕೆ ಮಾಡದೇ ಮಾರ್ಕಸ್ ಸ್ಟೋಯ್ನಿಸ್ ಅವರಿಗೆ ಚೆಂಡು ನೀಡಲಾಗಿತ್ತು. ಆ ಕೊನೆಯ ಓವರ್ನಲ್ಲಿ ಎಬಿಡಿ ರನ್ಗಳ ಸುರಿಮಳೆ ಮಾಡಿದ್ದರು. ಈ ವಿಚಾರಕ್ಕೂ ಪಂತ್ ಅವರು ಟೀಕೆಗೆ ಒಳಗಾಗಿದ್ದಾರೆ.
ನೆಹ್ರೂ ಕೂಡ ಟೀಕೆ:
ರಿಷಭ್ ಪಂತ್ ಅವರು ಬೌಲಿಂಗ್ ಸಂಪನ್ಮೂಲವನ್ನು ಸರಿಯಾಗಿ ಬಳಕೆ ಮಾಡಲಿಲ್ಲ ಎಂಬುದು ವೀರೇಂದ್ರ ಸೆಹ್ವಾಗ್ ಅಸಮಾಧಾನವಾದರೆ, ಪಂತ್ ನಿಧಾನಗತಿ ಬ್ಯಾಟಿಂಗ್ ಅನ್ನು ಆಶೀಶ್ ನೆಹ್ರಾ ಟೀಕಿಸಿದ್ದಾರೆ. “ರಿಷಭ್ ಪಂತ್ ಇನ್ನಿಂಗ್ಸ್ನ ಮಿಡಲ್ ಓವರ್ಗಳಲ್ಲಿ ಆಡಿದ ರೀತಿ, ಹಾಗೂ ಅಂತಿಮ ಓವರ್ಗಳಲ್ಲಿ ಸರಿಯಾಗಿ ರನ್ ಗಳಿಸದೇ ಹೋಗಿದ್ದನ್ನ ಕಳಪೆ ಕಾರ್ಯತಂತ್ರ ಎನ್ನದೇ ಬೇರೆ ಅಲ್ಲ. ಒಂದು ವೇಳೆ ಶಿಮ್ರೋನ್ ಹೆಟ್ಮಯರ್ ಅವರು ಬೇಗನೇ ಔಟಾಗಿಹೋಗಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 25 ರನ್ಗಳ ಅಂತರದಿಂದ ಸೋಲಾಗುತ್ತಿತ್ತು” ಎಂದು ನೆಹ್ರಾ ಹೇಳಿದ್ಧಾರೆ.
“ಚೇಸಿಂಗ್ ಅನ್ನು ಬಹಳ ಕಳಪೆಯಾಗಿ ನಿರ್ವಹಿಸಿದ್ದಾರೆ. ಆಟಕ್ಕೆ ಕುದುರಿಕೊಂಡ ಬ್ಯಾಟುಗಾರರು ಅಂತಿಮವಾಗಿ ಔಟಾಗದೇ ಉಳಿದೂ ಕೂಡ ತಂಡ ಸೋತಿತು. ಈ ಮಾದರಿಯ ಕ್ರಿಕೆಟ್ನಲ್ಲಿ ಇಂಥದ್ದು ಆಗಬಾರದಿತ್ತು” ಎಂದು ಆಶೀಶ್ ನೆಹ್ರಾ ಅಭಿಪ್ರಾಯಪಟ್ಟಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ