ಮುಂಬೈ: ಈ ವರ್ಷದ ಐಪಿಎಲ್ ಸೀಸನ್ ಮುಗಿದ ಬೆನ್ನಲ್ಲೇ
ಟಿ20 ವಿಶ್ವಕಪ್ ನಡೆಯುತ್ತಿದೆ. ಇದು ಮುಗಿದ ಕೂಡಲೇ ಮುಂದಿನ ವರ್ಷದ ಐಪಿಎಲ್ನ ಹವಾ ಜೋರಾಗಲಿದೆ. ಈಗಾಗಲೇ ಎರಡು ಹೊಸ ತಂಡಗಳ ಸೇರ್ಪಡೆಯಾಗಿದೆ. ಡಿಸೆಂಬರ್ನಲ್ಲಿ ಆಟಗಾರರ ಹರಾಜು ನಡೆಯಲಿದೆ. 2022ರ ಏಪ್ರಿಲ್ ತಿಂಗಳಲ್ಲಿ
ಐಪಿಎಲ್ನ 15ನೇ ಸೀಸನ್ ಪಂದ್ಯಾವಳಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಹಾಲಿ ಇರುವ ಎಂಟು ತಂಡಗಳ ಜೊತೆ ಎರಡು ಹೊಸ ತಂಡಗಳು ಸೇರಿ ಒಟ್ಟು 10 ತಂಡಗಳು ಸ್ಪರ್ಧೆ ನಡೆಸುತ್ತವೆ.
ಬಿಸಿಸಿಐ ಈಗಾಗಲೇ ಒಟ್ಟು ಪಂದ್ಯಗಳು ಎಷ್ಟು ಎಂಬುದನ್ನು ಫಿಕ್ಸ್ ಮಾಡಿದೆ. 2022ರ ಐಪಿಎಲ್ನಲ್ಲಿ ಒಟ್ಟು 74 ಪಂದ್ಯಗಳನ್ನ ನಡೆಸಲು ನಿಶ್ಚಯಿಸಿದೆ. ಪ್ರತೀ ತಂಡ ಕೂಡ 14 ಪಂದ್ಯಗಳನ್ನ ಆಡಲಿವೆ. ತವರಿನಲ್ಲಿ ಏಳು, ಹೊರಗೆ ಮತ್ತೆ ಏಳು ಪಂದ್ಯಗಳು ಪ್ರತೀ ತಂಡಕ್ಕೂ ಸಿಗಲಿವೆ ಎಂದು ಬಿಸಿಸಿಐ ಹೇಳಿದೆ.
ಮಾಮೂಲಿಯಾಗಿ ಎಂಟು ತಂಡಗಳು ಇದ್ದಾಗ ಪ್ರತೀ ತಂಡ 14 ಪಂದ್ಯಗಳನ್ನ ಆಡಿತ್ತು. ಈಗ 10 ತಂಡ ಇದ್ದಾಗಲೂ 14 ಪಂದ್ಯಗಳು ಹೇಗೆ ಸಾಧ್ಯ ಎಂಬ ಸಂದೇಹ ಮೂಡಬಹುದು. ಹಿಂದಿನ ಸ್ವರೂಪದಲ್ಲೇ ಪಂದ್ಯಗಳನ್ನ ನಡೆಸಿದರೆ ಹೆಚ್ಚೂಕಡಿಮೆ ನೂರು ಪಂದ್ಯಗಳಾಗುತ್ತವೆ. ಆದರೆ, 2022ರ ಐಪಿಎಲ್ಗೆ ಪಂದ್ಯಗಳ ಸಂಖ್ಯೆಯನ್ನ 74ಕ್ಕೆ ಸೀಮಿತಗೊಳಿಸಲಾಗಿದೆ. ಇದು ಹೇಗೆ ಸಾಧ್ಯ ಎಂಬುದಕ್ಕೆ ನಾವು 2011ರ ಐಪಿಎಲ್ನಿಂದ ಸುಳಿವು ಪಡೆಯಬಹುದು. 2011ರ ಐಪಿಎಲ್ನಲ್ಲೂ ಹತ್ತು ತಂಡಗಳು ಇದ್ದವು. ಆಗ ಕೊಚ್ಚಿ ಟಸ್ಕರ್ಸ್ ಮತ್ತು ಪುಣೆ ವಾರಿಯರ್ಸ್ ತಂಡಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದವು. ಆ ವರ್ಷದ ಟೂರ್ನಿಯ ಸ್ವರೂಪವನ್ನ ಈ ಬಾರಿ ಅಳವಡಿಸಿಕೊಂಡರೆ 2022ರ ಐಪಿಎಲ್ನ ಪಂದ್ಯಗಳ ಸ್ವರೂಪ ಈ ಕೆಳಕಂಡಂತೆ ಇರಲಿದೆ.
ಇದನ್ನೂ ಓದಿ: T20 Rankings: ಇಂಗ್ಲೆಂಡ್, ಮಲನ್, ಶಮ್ಸಿ, ಶಾಕಿಬ್ ನಂ.1; ಭಾರತದ ಟಿ20 ಟಾಪರ್ಸ್ ಯಾರು? ಇಲ್ಲಿದೆ ಪಟ್ಟಿ
ಐಪಿಎಲ್ 2022 ಪಂದ್ಯಾವಳಿ ಸ್ವರೂಪ:
ಮುಂದಿನ ವರ್ಷ ಒಟ್ಟು 10 ತಂಡಗಳಿವೆ. ಇದನ್ನ ಐದೈದು ತಂಡಗಳಂತೆ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಉದಾಹರಣೆಗೆ, ಎ ಗುಂಪಿನಲ್ಲಿ ಬೆಂಗಳೂರು, ಮುಂಬೈ, ಅಹ್ಮದಾಬಾದ್, ರಾಜಸ್ಥಾನ್ ಮತ್ತು ಡೆಲ್ಲಿ ತಂಡಗಳು ಇರಲಿವೆ. ಬಿ ಗುಂಪಿನಲ್ಲಿ ಚೆನ್ನೈ, ಕೋಲ್ಕತಾ, ಪಂಜಾಬ್, ಹೈದರಾಬಾದ್ ಮತ್ತು ಲಕ್ನೋ ತಂಡಗಳು ಇರಲಿವೆ ಎಂದಿಟ್ಟುಕೊಳ್ಳೋಣ.
ಈಗ
ಬೆಂಗಳೂರು ತಂಡ ತನ್ನ ಎ ಗುಂಪಿನಲ್ಲಿ ಜೊತೆಯಲ್ಲಿರುವ ಇತರ ನಾಲ್ಕು ತಂಡಗಳ ಜೊತೆ ಎರಡೆರಡು ಪಂದ್ಯಗಳನ್ನ ಆಡುತ್ತದೆ. ಅಂದರೆ ತವರಿನಲ್ಲಿ ನಾಲ್ಕು, ಹೊರಗೆ ನಾಲ್ಕು ಹೀಗೆ ಎಂಟು ಪಂದ್ಯಗಳಾಗುತ್ತವೆ.
ಬಳಿಕ ಬಿ ಗುಂಪಿನಿಂದ ಯಾದೃಚ್ಛಿಕವಾಗಿ (Randomly) ಆರಿಸಲಾದ ಒಂದು ತಂಡದ ಜೊತೆ ಆರ್ಸಿಬಿ ಎರಡು ಪಂದ್ಯವಾಡುತ್ತದೆ. ಈಗ ಆರ್ಸಿಬಿ ಪಂದ್ಯಗಳ ಸಂಖ್ಯೆ 10 ಆಯಿತು.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ನಂತರ, ಅದೇ ಗುಂಪಿನಲ್ಲಿ ಉಳಿದ ನಾಲ್ಕು ತಂಡಗಳ ಜೊತೆ ಆರ್ಸಿಬಿ ಒಂದೊಂದು ಪಂದ್ಯ ಆಡುತ್ತದೆ. ಇದರಲ್ಲಿ ತವರಿನಲ್ಲಿ ಎರಡು, ಹೊರಗೆ ಎರಡು ಪಂದ್ಯಗಳು ಸಿಗುತ್ತವೆ. ಅಲ್ಲಿಗೆ ಆರ್ಸಿಬಿಗೆ ಲೀಗ್ ಹಂತದಲ್ಲಿ ಸಿಗುವ ಪಂದ್ಯಗಳು 14 ಆದಂತಾಗುತ್ತದೆ.
ಎಲ್ಲಾ 10 ತಂಡಗಳಿಗೂ ಇದೇ ಅನ್ವಯ ಆಗುತ್ತದೆ. ಆದರೆ, ಎರಡೂ ಗುಂಪು ಸೇರಿ ಅಂಕಪಟ್ಟಿ ಸಿದ್ಧವಾಗುತ್ತದೆ. ಮಾಮೂಲಿಯ ರೀತಿಯಲ್ಲಿ ಪ್ಲೇ ಆಫ್ ನಿರ್ಧಾರ ಮಾಡಬಹುದು. ಮೊದಲೆರಡು ಸ್ಥಾನ ಪಡೆದ ತಂಡಗಳು ಕ್ವಾಲಿಫಯರ್ಗೆ ಆಯ್ಕೆ ಆಗುತ್ತವೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಆಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ