HOME » NEWS » Ipl » IPL 2021 SRH VS RCB LIVE SCORE RCB WON BY 6 RUNS ZP

IPL 2021: ಶಭಾಷ್ ಶಹಬಾಜ್: SRH ವಿರುದ್ದ ಗೆದ್ದು ಬೀಗಿದ RCB

Rcb ಪರ ಕೇವಲ 2 ಓವರ್​ ಎಸೆದ ಶಹಬಾಜ್ ಮೊದಲ ಓವರ್​ನಲ್ಲಿ ಕೇವಲ 6 ರನ್ ನೀಡಿದರೆ, 2ನೇ ಓವರ್​ನಲ್ಲಿ 1 ರನ್​ ನೀಡಿ 3 ವಿಕೆಟ್ ಉರುಳಿಸಿದರು. ಅಲ್ಲದೆ ಎಸ್​ಆರ್​ಹೆಚ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಪತನಕ್ಕೆ ಪ್ರಮುಖ ಕಾರಣರಾದರು. ಅಲ್ಲದೆ ಇಡೀ ಪಂದ್ಯದ ಚಿತ್ರಣ ಬದಲಾಯಿಸಿದರು.

news18-kannada
Updated:April 14, 2021, 11:20 PM IST
IPL 2021: ಶಭಾಷ್ ಶಹಬಾಜ್: SRH ವಿರುದ್ದ ಗೆದ್ದು ಬೀಗಿದ  RCB
Rcb
  • Share this:
ಚೆನ್ನೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ 6 ರನ್​ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದಕ್ಕೂ ಮುನ್ನ ಆರ್​ಸಿಬಿ ನೀಡಿದ 150 ರನ್​ಗಳ ಸಾಧಾರಣ ಗುರಿ ಬೆನ್ನತಿದ ಸನ್​ರೈಸರ್ಸ್​ ಹೈದರಾಬಾದ್​ಗೆ ಮೊಹಮ್ಮದ್ ಸಿರಾಜ್ 3ನೇ ಓವರ್​ನಲ್ಲಿ ಆಘಾತ ನೀಡಿದರು. 2ನೇ ಎಸೆತದಲ್ಲಿ ವೃದ್ದಿಮಾನ್ ಸಾಹ (1) ವಿಕೆಟ್ ಪಡೆಯುವ ಮೂಲಕ ಆರ್​ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು. ಅಲ್ಲದೆ ತಮ್ಮ ಮೊದಲೆರೆಡು ಓವರ್​ನಲ್ಲಿ ಕೇವಲ 2 ರನ್​ ನೀಡಿ ಸಿರಾಜ್ ಗಮನ ಸೆಳೆದರು. ಆದರೆ ಮತ್ತೊಂದೆಡೆ ಕೈಲ್ ಜೇಮಿಸನ್ ತಮ್ಮ ಮೊದಲ 2 ಓವರ್​ನಲ್ಲಿ 26 ರನ್​ ನೀಡಿ ದುಬಾರಿ ಎನಿಸಿಕೊಂಡರು.

ಆದರೆ 6ನೇ ಓವರ್​ ಎಸೆದ ಸಿರಾಜ್ 12 ರನ್ ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಸನ್​ರೈಸರ್ಸ್​ ಮೊತ್ತ 50ಕ್ಕೆ ಬಂದು ನಿಂತಿತು. ಅಲ್ಲದೆ ಮನೀಷ್ ಪಾಂಡೆ ಹಾಗೂ ಡೇವಿಡ್ ವಾರ್ನರ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ 10 ಓವರ್​ ಮುಗಿದಾಗ ತಂಡದ ಮೊತ್ತ 77ಕ್ಕೇರಿತು. ಅಲ್ಲದೆ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಎಸ್​ಆರ್​ಹೆಚ್ ನಾಯಕ ಡೇವಿಡ್ ವಾರ್ನರ್ ಬ್ಯಾಟ್ ಮೇಲೆಕ್ಕೆತ್ತಿದರು. ಹಾಫ್ ಸೆಂಚುರಿ ಬೆನ್ನಲ್ಲೇ ವಾರ್ನರ್ (54) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದಾಗ್ಯೂ 14 ಓವರ್​ ಮುಕ್ತಾಯದ ವೇಳೆಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಕೋರ್ 100ರ ಗಡಿದಾಟಿತ್ತು. ಕೊನೆಯ ಐದು ಓವರ್​ಗಳಲ್ಲಿ ಎಸ್​ಆರ್​ಹೆಚ್ ತಂಡಕ್ಕೆ 42 ರನ್​ಗಳ ಅವಶ್ಯಕತೆಯಿತ್ತು. 17ನೇ ಓವರ್​ನಲ್ಲಿ ಜಾನಿ ಬೈರ್​​ಸ್ಟೋವ್ (12) , ಮನೀಷ್ ಪಾಂಡೆ (38) ಹಾಗೂ ಅಬ್ದುಲ್ ಸಮದ್ ವಿಕೆಟ್ ಪಡೆಯುವ ಮೂಲಕ ಶಬಾಜ್ ಅಹ್ಮದ್ ಸನ್​ರೈಸರ್ಸ್ ಪರವಿದ್ದ ಪಂದ್ಯವನ್ನು ಆರ್​ಸಿಬಿ ಕಡೆ ವಾಲಿಸಿದರು. ಅದರಂತೆ ಕೊನೆಯ ಮೂರು ಓವರ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ಗೆ 34 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಕೇವಲ 7 ರನ್ ನೀಡಿ ಒಂದು ವಿಜಯ್ ಶಂಕರ್ ವಿಕೆಟ್ ಪಡೆದರು.

ಅಂತಿಮ 2 ಓವರ್​ನಲ್ಲಿ 27 ರನ್​ಗಳು ಬೇಕಿತ್ತು. ಮೊಹಮ್ಮದ್ ಸಿರಾಜ್ ಎಸೆದ 19ನೇ ಓವರ್​ನ ಮೊದಲ ಎಸೆತದಲ್ಲಿ ರಶೀದ್ ಖಾನ್ ಸಿಕ್ಸರ್ ಸಿಡಿಸಿದರು. 2ನೇ ಎಸೆತದಲ್ಲಿ 1 ರನ್. 3ನೇ ಎಸೆತದಲ್ಲಿ ಜೇಸನ್ ಹೋಲ್ಡರ್ (4) ಕ್ಯಾಚ್ ನೀಡಿದರು. 4ನೇ ಮತ್ತು 5ನೇ ಎಸೆತದಲ್ಲಿ ಎರಡೆರಡು ರನ್​ಗಳು. ಅಂತಿಮ ಎಸೆತದಲ್ಲಿ ಯಾವುದೇ ರನ್ ಇಲ್ಲ.

ಕೊನೆಯ ಓವರ್​ನಲ್ಲಿ ಎಸ್​ಆರ್​ಹೆಚ್ ಗೆಲ್ಲಲು 16 ರನ್​ಗಳು ಬೇಕಿತ್ತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ 2 ರನ್. 3ನೇ ಎಸೆತ ನೋಬಾಲ್-ಬೌಂಡರಿ. ಫ್ರೀ ಹಿಟ್ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ರಶೀದ್ ಖಾನ್ ರನೌಟ್. 5ನೇ ಎಸೆತದಲ್ಲಿ ನದೀಮ್ ಔಟ್. ಕೊನೆಯ ಎಸೆತದಲ್ಲಿ 1 ರನ್​. ಇದರೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಇನಿಂಗ್ಸ್​ 143 ರನ್​ಗಳೊಂದಿಗೆ ಅಂತ್ಯವಾಯಿತು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್​ಗಳ ರೋಚಕ ಜಯ ಸಾಧಿಸಿತು.

Rcb ಪರ ಕೇವಲ 2 ಓವರ್​ ಎಸೆದ ಶಹಬಾಜ್ ಮೊದಲ ಓವರ್​ನಲ್ಲಿ ಕೇವಲ 6 ರನ್ ನೀಡಿದರೆ, 2ನೇ ಓವರ್​ನಲ್ಲಿ 1 ರನ್​ ನೀಡಿ 3 ವಿಕೆಟ್ ಉರುಳಿಸಿದರು. ಅಲ್ಲದೆ ಎಸ್​ಆರ್​ಹೆಚ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಪತನಕ್ಕೆ ಪ್ರಮುಖ ಕಾರಣರಾದರು. ಅಲ್ಲದೆ ಇಡೀ ಪಂದ್ಯದ ಚಿತ್ರಣ ಬದಲಾಯಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದ ಎಸ್​ಆರ್​​ಹೆಚ್ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್ ಅವರ ಮೊದಲ ಓವರ್​ನಲ್ಲೇ ಭರ್ಜರಿ ಫೋರ್ ಬಾರಿಸಿ ಬೌಂಡರಿ ಖಾತೆ ತೆರೆದರು. 2ನೇ ಓವರ್​ನ ಮೊದಲ ಎಸೆತದಲ್ಲೇ ದೇವದತ್ ಪಡಿಕ್ಕಲ್ ಕೂಡ ಬೌಂಡರಿ ಬಾರಿಸಿ ರನ್ ಖಾತೆ ಓಪನ್ ಮಾಡಿದರು.

ಭುವನೇಶ್ವರ್ ಕುಮಾರ್ ಎಸೆದ ಮೂರನೇ ಓವರ್​ನ 5ನೇ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್ (11) ನದೀಮ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹಬಾಜ್ ಅಹ್ಮದ್ ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾದರು. ಅಲ್ಲದೆ ಕೊಹ್ಲಿ ಜೊತೆಗೂಡಿ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 47 ಕ್ಕೆ ತಂದು ನಿಲ್ಲಿಸಿದರು.

ಆದರೆ 7ನೇ ಓವರ್​ನ ಮೊದಲ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಶಹಬಾಜ್ ಅಹ್ಮದ್ (14) ರಶೀದ್​​ ಖಾನ್​ಗೆ ಕ್ಯಾಚ್ ಔಟಾದರು. ಈ ಹಂತದಲ್ಲಿ ಕೊಹ್ಲಿ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್​ವೆಲ್ ರನ್​ಗಳಿಸಲು ಪರದಾಡಿದರು. 16 ಎಸೆತಗಳನ್ನು ಎದುರಿಸಿ ಕೇವಲ 9 ರನ್​ ಮಾತ್ರ ಕಲೆಹಾಕಿದರು. ಪರಿಣಾಮ 10 ಓವರ್ ಮುಕ್ತಾಯದ ವೇಳೆಗೆ ಆರ್​ಸಿಬಿ ಮೊತ್ತ ಕೇವಲ 63 ರನ್​ಗಳು ಮಾತ್ರ.

10 ಓವರ್ ಮುಕ್ತಾಯದ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಮ್ಯಾಕ್ಸ್​ವೆಲ್ ನದೀಮ್ ಓವರ್​ನಲ್ಲಿ ಸಿಕ್ಸ್, ಫೋರ್, ಸಿಕ್ಸ್​ನೊಂದಿಗೆ ಕೊಹ್ಲಿ ಜೊತೆ ಸೇರಿ 22 ರನ್​ ಕಲೆಹಾಕಿದರು. ತಂಡದ ರನ್​ಗಳಿಕೆ ವೇಗ ಪಡೆಯುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 13ನೇ ಓವರ್​ನ ಜೀಸನ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ವಿರಾಟ್ ಕೊಹ್ಲಿ (33, 29ಎಸೆತ) ನಿರ್ಗಮಿಸಿದರು. ನಾಯಕನ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ (1) ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಪ್ರಮುಖ ವಿಕೆಟ್ ಕಳೆದುಕೊಂಡ ಆರ್​ಸಿಬಿ 100 ರನ್​ಗಳ ಗಡಿದಾಟಲು 15ನೇ ಓವರ್​ಗಳನ್ನು ತೆಗೆದುಕೊಂಡಿತು. ಈ ಹಂತದಲ್ಲಿ 8 ರನ್​ಗಳಿಸಿದ್ದ ವಾಷಿಂಗ್ಟನ್​ ಸುಂದರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಮನೀಷ್ ಪಾಂಡೆ ಪೆವಿಲಿಯನ್​ಗೆ ಕಳುಹಿಸಿದರು. ನಟರಾಜನ್ ಎಸೆದ 17ನೇ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಡೇನಿಯಲ್ ಕ್ರಿಶ್ಚಿಯನ್ (1) ಬಂದ ವೇಗದಲ್ಲೇ ಹಿಂತಿರುಗಿದರು.

ಈ ಹಂತದಲ್ಲಿ ಕಣಕ್ಕಿಳಿದ ಜೇಮಿಸನ್ ಭುವನೇಶ್ವರ್ ಕುಮಾರ್ ಓವರ್​ನಲ್ಲಿ 2 ಬೌಂಡರಿ ಬಾರಿಸುವ ಮೂಲಕ ಆರ್​ಸಿಬಿ ರನ್​ಗಳಿಕೆ ಹೆಚ್ಚಿಸಿದರು. ಅದರಂತೆ 18ನೇ ಓವರ್​ನಲ್ಲಿ 14 ರನ್​ ಮೂಡಿಬಂತು. 19ನೇ ಕೊಂಚ ಅಬ್ಬರಿಸಿದ ಮ್ಯಾಕ್ಸ್​​ವೆಲ್ 12 ರನ್​ ಕಲೆಹಾಕಿದರು.

ಜೇಸನ್ ಹೋಲ್ಡರ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಕೈಲ್ ಜೇಮಿಸನ್ (12) ನಿರ್ಗಮಿಸಿದರು. 2ನೇ ಎಸೆತದಲ್ಲಿ ಮ್ಯಾಕ್ಸ್​ವೆಲ್ ರನ್ ಓಡಲಿಲ್ಲ.  ಮೂರನೇ ಎಸೆತದಲ್ಲಿ 2 ರನ್ ಓಡುವ ಮೂಲಕ 38 ಎಸೆತಗಳಲ್ಲಿ ಮ್ಯಾಕ್ಸಿ ತಮ್ಮ ಅರ್ಧಶತಕ ಪೂರೈಸಿದರು. 4ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್.  5ನೇ ಎಸೆತದಲ್ಲಿ ವೈಡ್+2 ರನ್. ಕೊನೆಯ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡುವ ಮೂಲಕ ಮ್ಯಾಕ್ಸ್​ವೆಲ್ (59) ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್​ ಕಲೆಹಾಕಿತು. ಸನ್​ರೈಸರ್ಸ್​ ಪರ ಜೇಸನ್ ಹೋಲ್ಡರ್ 4 ಓವರ್​ನಲ್ಲಿ 30 ರನ್​ ನೀಡಿ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ಓವರ್​ನಲ್ಲಿ ಕೇವಲ 18 ರನ್​ ನೀಡಿ 2 ವಿಕೆಟ್ ಉರುಳಿಸಿದರು.
Published by: zahir
First published: April 14, 2021, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories