IPL 2021 SRH vs RCB: ಕಿಂಗ್ ಕೊಹ್ಲಿ vs ಡೇಂಜರಸ್ ವಾರ್ನರ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

SRH vs RCB Head to head: ಉಭಯ ತಂಡಗಳು ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ 10 ಬಾರಿ ಗೆಲುವಿನ ರುಚಿ ನೋಡಿದೆ.

RCB vs SRH

RCB vs SRH

 • Share this:
  ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಸೆಣಸಲಿದೆ. ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವುದರಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು. ಏಕೆಂದರೆ ಆರ್​ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಇದ್ದರೆ, ಸನ್​ರೈಸರ್ಸ್​ ಪರ ಆಡುತ್ತಿರುವ ಮನೀಷ್ ಪಾಂಡೆ ಉತ್ತಮ ಫಾರ್ಮ್​ನಲ್ಲಿದ್ದಾರೆ. ಇನ್ನು ನಾಯಕ ವಿರಾಟ್ ಕೊಹ್ಲಿ ರನ್​ ಮಳೆ ಹರಿಸುವ ಸಾಮರ್ಥ್ಯ ಹೊಂದಿದ್ದರೆ, ಎಸ್​ಆರ್​ ಹೆಚ್​ ನಾಯಕನಾಗಿ ಡೇವಿಡ್ ವಾರ್ನರ್ ಅಬ್ಬರಿಸಲಿದ್ದಾರೆ.

  ಇತ್ತ ಗ್ಲೆನ್ ಮ್ಯಾಕ್ಸ್​ವೆಲ್​​ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ಅತ್ತ ಜಾನಿ ಬೈರ್​ಸ್ಟೋವ್ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ ಆರ್​ಸಿಬಿ ತಂಡದಲ್ಲಿ ಆಪತ್ಭಾಂಧವನಾಗಿ ಎಬಿ ಡಿವಿಲಿಯರ್ಸ್ ಇದ್ದರೆ, ಎಸ್​ಆರ್​ಹೆಚ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಆಪತ್ಭಾಂಧವನ ಜವಬ್ದಾರಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದಾಗ್ಯೂ ಮೊದಲ ಪಂದ್ಯದಲ್ಲಿ ವಿಲಿಯಮ್ಸನ್ ಅವಕಾಶ ಪಡೆದಿರಲಿಲ್ಲ. ಹೀಗಾಗಿ 2ನೇ ಪಂದ್ಯದಲ್ಲೂ ಆಲ್​ರೌಂಡರ್ ಮೊಹಮ್ಮದ್ ನಬಿ ಮುಂದುವರೆಯುವ ಸಾಧ್ಯತೆಯಿದೆ.

  ಇನ್ನು ಉಭಯ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಸನ್​ರೈಸರ್ಸ್​ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಉಭಯ ತಂಡಗಳು ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ 10 ಬಾರಿ ಗೆಲುವಿನ ರುಚಿ ನೋಡಿದೆ. ಹಾಗೇಯ ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು.

  ಕಳೆದ ಸೀಸನ್​ನಲ್ಲಿನ ಎರಡೂ ತಂಡಗಳ ಪ್ರದರ್ಶನವನ್ನು ಗಮನಿಸುವುದಾದರೆ, ಉಭಯ ತಂಡಗಳು 3 ಬಾರಿ ಸೆಣಸಿವೆ. ಅದರಲ್ಲಿ ಎರಡು ಬಾರಿ ಸನ್​ರೈಸರ್ಸ್ ಹೈದರಾಬಾದ್ ಗೆಲುವು ದಾಖಲಿಸಿದೆ. ಇನ್ನು ಕೊನೆಯ 10 ಪಂದ್ಯಗಳ ಫಲಿತಾಂಶವನ್ನು ತೆಗೆದುಕೊಂಡರೆ, ಅದರಲ್ಲಿ ಆರ್​ಸಿಬಿ 4 ಬಾರಿ ಮಾತ್ರ ಗೆಲುವು ದಾಖಲಿಸಿದೆ.

  ಇನ್ನು ಬ್ಯಾಟ್ಸ್​ಮನ್​ಗಳ ಸಾಧನೆಯನ್ನು ಗಣನೆಗೆ ತೆಗೆದುಕೊಂಡರೆ, ಆರ್​ಸಿಬಿ ವಿರುದ್ದ ಡೇವಿಡ್ ವಾರ್ನರ್ ಒಟ್ಟು 593 ರನ್ ಕಲೆಹಾಕುವ ಮೂಲಕ ಅತ್ಯುತ್ತಮ ಫಾರ್ಮ್​ ಪ್ರದರ್ಶಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಎಸ್​ಆರ್​ಹೆಚ್​ ವಿರುದ್ದ ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ಕೊಹ್ಲಿ ಇದುವರೆಗೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ 531 ರನ್ ಬಾರಿಸಿದ್ದಾರೆ. ಹಾಗೆಯೇ ಎಬಿಡಿ ಕೂಡ ಎಸ್​ಆರ್​ಹೆಚ್ ವಿರುದ್ದ ಉತ್ತಮ ಪ್ರದರ್ಶನ ನೀಡಿದ್ದು, ಇದುವರೆಗೆ 520 ರನ್​ ಕಲೆಹಾಕಿದ್ದಾರೆ. ಅತ್ತ ಕೇನ್ ವಿಲಿಯಮ್ಸನ್ ಸಹ ಒಟ್ಟು 320 ರನ್ ಬಾರಿಸಿ ಆರ್​ಸಿಬಿ ವಿರುದ್ದ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.

  ಇನ್ನು ಬೌಲಿಂಗ್ ವಿಭಾಗದಲ್ಲಿ ಎಸ್​ಆರ್​ಹೆಚ್​ ವಿರುದ್ದ ಚಹಲ್ ಮಿಂಚಿದ್ದಾರೆ. ಇದುವರೆಗೆ ಚಹಲ್ ಸನ್​ರೈಸರ್ಸ್​ ವಿರುದ್ದ 16 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಭುವನೇಶ್ವರ್ ಕುಮಾರ್ ಆರ್​ಸಿಬಿ ವಿರುದ್ದ 14 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಆರ್​​ಸಿಬಿ ವಿರುದ್ದ 8 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ 7 ವಿಕೆಟ್ ಉರುಳಿಸಿದ್ದಾರೆ. ಇದಾಗ್ಯೂ ಮೊಹಮ್ಮದ್ ಸಿರಾಜ್ ಕೂಡ ಹೈದರಾಬಾದ್ ವಿರುದ್ದ ಒಟ್ಟು 6 ವಿಕೆಟ್ ಪಡೆದು ಆರ್​ಸಿಬಿ ಪರ ಯಶಸ್ವಿ ವೇಗಿ ಎನಿಸಿಕೊಂಡಿದ್ದಾರೆ.

  ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮತೋಲನದಿಂದ ಕೂಡಿದೆ ಎಂದೇ ಹೇಳಬಹುದು. ಹೀಗಾಗಿ ಎರಡೂ ತಂಡಗಳಿಂದ ತೀವ್ರ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.
  Published by:zahir
  First published: