IPL 2021: ಐಪಿಎಲ್: ಸ್ಟೇಡಿಯಂಗಳಲ್ಲಿ ಪ್ರೇಕ್ಷಕರಿಗೆ ಅವಕಾಶ; ನಾಳೆಯಿಂದ ಟಿಕೆಟ್ ಮಾರಾಟ

IPL ticket sale- ಸೆಪ್ಟೆಂಬರ್ 19ರಿಂದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ 2021ನ ಉಳಿಕೆ ಪಂದ್ಯಗಳನ್ನ ಸ್ಟೇಡಿಯಂಗೆ ಹೋಗಿ ವೀಕ್ಷಿಸುವ ಅವಕಾಶ ಜನರಿಗೆ ಸಿಕ್ಕಿದೆ. ನಾಳೆ ಟಿಕೆಟ್ ಮಾರಾಟ ಆರಂಭವಾಗುತ್ತದೆ.

ಸಿಎಸ್​ಕೆ ಮತ್ತು ಮುಂಬೈ ತಂಡಗಳು

ಸಿಎಸ್​ಕೆ ಮತ್ತು ಮುಂಬೈ ತಂಡಗಳು

  • Cricketnext
  • Last Updated :
  • Share this:
    ಮುಂಬೈ, ಸೆ. 15: ಎರಡು ವರ್ಷಗಳ ಬಳಿಕ ಜನಸಾಮಾನ್ಯರು ಸ್ಟೇಡಿಯಂನಲ್ಲಿ ಕೂತು ಐಪಿಎಲ್ ಪಂದ್ಯಗಳನ್ನ ವೀಕ್ಷಿಸುವ ಅವಕಾಶ ಸಿಗುತ್ತಿದೆ. ಯುಎಇ ದೇಶದಲ್ಲಿ (United Arab Emirates) ನಡೆಯುತ್ತಿರುವ ಈ ವರ್ಷದ ಐಪಿಎಲ್ ಟೂರ್ನಿಯ (IPL 2021 Second Leg) ಎರಡನೇ ಲೆಗ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ನಡೆಯಲಿವೆ. ಕೆಲ ನಿರ್ಬಂಧಗಳೊಂದಿಗೆ ಸ್ಟೇಡಿಯಂಗಳಲ್ಲಿ ಜನರು ಪಂದ್ಯ ವೀಕ್ಷಿಸಲು ಅನುಮತಿಸಲಾಗಿದೆ. ನಾಳೆ (ಸೆ. 16) ಟಿಕೆಟ್ ಮಾರಾಟ (Ticket sale) ಆರಂಭವಾಗುತ್ತದೆ. ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ದುಬೈ (Dubai), ಅಬುಧಾಬಿ (Abu Dhabi) ಮತ್ತು ಶಾರ್ಜಾ (Sharjah) ನಗರಗಳಲ್ಲಿರುವ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಸೆ. 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ಪಂದ್ಯಗಳು ನಡೆದು ಟೂರ್ನಿ ಸಮಾಪ್ತಿಗೊಳ್ಳಲಿದೆ. ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

    ಭಾರತದಲ್ಲಿ ಈ ಸಾಲಿನ ಐಪಿಎಲ್ ಟೂರ್ನಿ ಆರಂಭಗೊಂಡಿದ್ದರೂ ಕೋವಿಡ್ ಎರಡನೇ ಅಲೆ ಕಾರಣಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶ ಇರಲಿಲ್ಲ. ಕಳೆದ ವರ್ಷದ ಐಪಿಎಲ್ ಟೂರ್ನಿಯೂ ಕೋವಿಡ್ ಕಾರಣಕ್ಕೆ ಯುಎಇಯಲ್ಲಿ ನಡೆದಿತ್ತು. ಆಗ ಪ್ರೇಕ್ಷಕರಿಲ್ಲದೇ ಪಂದ್ಯಗಳು ನಡೆದಿದ್ದವು. ಕಳೆದ ವರ್ಷ ಕೋವಿಡ್ ಮೊದಲು ಕಾಣಿಸಿಕೊಂಡಂದಿನಿಂದ ವಿಶ್ವದೆಲ್ಲೆಡೆ ಬಹುತೇಕ ಕ್ರಿಕೆಟ್ ಪಂದ್ಯಗಳು ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆದಿಲ್ಲ. ಟಿವಿಯಲ್ಲಿ ಪ್ರೇಕ್ಷಕರ ಧ್ವನಿಯನ್ನ ಕೃತಕವಾಗಿ ಸೃಷ್ಟಿಸಿ ಪಂದ್ಯಗಳ ಪ್ರಸಾರ ಮಾಡಲಾಗುತ್ತಿತ್ತು. ಈಗ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಆದರೆ, ಅರ್ಧ ಸ್ಟೇಡಿಯಂ ಮಾತ್ರ ಭರ್ತಿ ಮಾಡಬಹುದು. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಕ್ರಮಗಳನ್ನ ಜಾರಿಗೆ ತರಲಾಗುತ್ತಿದೆ. ಹಾಗೂ ಯುಎಇ ದೇಶದ ಕೊವಿಡ್ ನಿಯಮಗಳ ಪಾಲನೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇರುವ ಸ್ಟೇಡಿಯಂನಲ್ಲಿ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಬರಲು ಅನುವು ಮಾಡಿಕೊಡಲಾಗುತ್ತಿದೆ.

    ಇದನ್ನೂ ಓದಿ: SL vs SA T20 Cricket| ತವರಿನಲ್ಲೇ ಶ್ರೀಲಂಕಾಗೆ ಮುಖಭಂಗ; ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ

    ಐಪಿಎಲ್​ನ ಅಧಿಕೃತ ವೆಬ್​ಸೈಟ್​ನಲ್ಲಿ ನಾಳೆಯಿಂದ ಎಲ್ಲಾ ಪಂದ್ಯಗಳಿಗೂ ಟಿಕೆಟ್ ಮಾರಾಟ ನಡೆಯಲಿದೆ. ಬೇರೆ ಕೆಲ ನಿರ್ದಿಷ್ಟ ಸ್ಥಳಗಳಲ್ಲೂ ಟಿಕೆಟ್ ಮಾರಾಟ ಇರಲಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ನಗರಗಳಲ್ಲಿ ಬಹಳಷ್ಟು ಅನಿವಾಸಿ ಭಾರತೀಯರು ಇದ್ದಾರೆ. ಸಾಮಾನ್ಯ ದಿನಗಳಲ್ಲಿ ಇಲ್ಲಿನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಭಾರತ ಅಥವಾ ಪಾಕಿಸ್ತಾನದ ಪಂದ್ಯಗಳು ಇದ್ದರೆ ಪ್ರೇಕ್ಷಕರಿಂದ ಭರ್ತಿಯಾಗಿ ಹೋಗಿರುತ್ತದೆ. ಈಗ ಐಪಿಎಲ್ ಪಂದ್ಯಗಳಲ್ಲಿ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲಾ ಸೀಟುಗಳೂ ಭರ್ತಿಯಾಗುವುದು ನಿಶ್ಚಿತ. ವಿಶ್ವಶ್ರೇಷ್ಠ ಕ್ರಿಕೆಟಿಗರ ಆಟವನ್ನು ಕಣ್ಗುಂಬಿಸಿಕೊಳ್ಳುವ ಅವಕಾಶ ಪಡೆದ ಜನರೇ ಅದೃಷ್ಟವಂತರು.

    ಇದನ್ನೂ ಓದಿ: IPL 2021| ಸೆ.19 ರಿಂದ ಮತ್ತೆ ಐಪಿಎಲ್ ಹಬ್ಬ; ಕಳೆದ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾವ್ಯಾವ ತಂಡ ಯಾವ ಸ್ಥಾನದಲ್ಲಿತ್ತು?

    ಐಪಿಎಲ್ 2021 ಟೂರ್ನಿ ಸರಿಯಾಗಿ ಅರ್ಧ ನಡೆದಿದೆ. ಈಗಾಗಲೇ ಏಳು ಸುತ್ತುಗಳು ಮುಗಿದಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಾತ್ರ ಎಂಟನೇ ಸುತ್ತನ್ನು ಮುಗಿಸಿವೆ. ಇನ್ನೂ ಏಳು ಸುತ್ತುಗಳು ಬಾಕಿ ಇವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಟು ಪಂದ್ಯಗಳಿಂದ 12 ಅಂಕ ಪಡೆದ ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಏಳು ಪಂದ್ಯಗಳಿಂದ 10 ಅಂಕ ಗಳಿಸಿ 2 ಮತ್ತು 3ನೇ ಸ್ಥಾನದಲ್ಲಿವೆ. ಹೈದರಾಬಾದ್ ಸನ್ ರೈಸರ್ಸ್ ತಂಡ ಒಂದೇ ಗೆಲುವಿನೊಂದಿಗೆ ಎಂಟನೇ ಮತ್ತು ಕೊನೆಯ ಸ್ಥಾನದಲ್ಲಿದೆ.
    Published by:Vijayasarthy SN
    First published: