ದುಬೈ ಕ್ರೀಡಾಂಗಣದಲ್ಲಿ (Dubai Stadium) ಇಂದು ನಡೆಯಲಿರುವ ಮಹತ್ವದ ಐಪಿಎಲ್ 2021ರ 40ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ತಾನ್ ರಾಯಲ್ಸ್ (Rajasthan Royals) ಮತ್ತು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್ರೈಸರ್ಸ್ ಹೈದ್ರಾಬಾದ್ (Sunrisers Hyderabad) ಮುಖಾಮುಖಿಯಾಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್ರೈಸರ್ಸ್ ಹೈದ್ರಾಬಾದ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸನ್ರೈಸರ್ಸ್ ತಂಡಕ್ಕೆ ಇಲ್ಲ. ಆದರೆ, ರಾಜಸ್ತಾನ ರಾಯಲ್ಸ್ ಪಾಲಿಗೆ ಪ್ಲೇ ಆಫ್ (Play Off) ತಲುಪಲು ಇಂದಿನ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸಂಜು ಸ್ಯಾಮ್ಸನ್ ಪಡೆ ಮತ್ತಷ್ಟು ನಿಗಾವಹಿಸಿ ಆಡಬೇಕಾದ ಒತ್ತಡದಲ್ಲಿದೆ. ಇದೇ ಕಾರಣಕ್ಕೆ ಇಂದಿನ ಪಂದ್ಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ರಾಜಸ್ತಾನ್ಗೆ ಮಾಡು ಇಲ್ಲವೇ ಮಡಿ ಪಂದ್ಯ:
ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 155 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ್ದ ರಾಯಲ್ಸ್ ಎಡವಿತ್ತು. ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್ಮನ್ ಸಹ ಉತ್ತಮ ಪ್ರದರ್ಶನ ನೀಡಿಲ್ಲ. ಎರಡಂಕಿಯೂ ಯಾರೂ ದಾಟಿಲ್ಲ. ಪರಿಣಾಮ ರಾಜಸ್ತಾನ ರಾಯಲ್ಸ್ ಗೆಲ್ಲುವ ಪಂದ್ಯದಲ್ಲಿ ಸೋಲನುಭವಿಸಿತ್ತು.
ಆದರೆ, ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ರಾಜಸ್ತಾನ ತಂಡ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದ ನಾಯಕ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ್ದಾರೆ. ಆದರೆ, ಉಳಿದ ಬ್ಯಾಟ್ಸ್ಮನ್ಗಳು ನಾಯಕನಿಗೆ ಯಾವ ರೀತಿ ಸಾಥ್ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನೂ ಬೌಲಿಂಗ್ ವಿಭಾಗ ಉತ್ತಮವಾಗಿಯೇ ಪ್ರದರ್ಶನ ನೀಡುತ್ತಿದ್ದು, ಗಾಯಾಳುವಾಗಿರುವ ಇವಾನ್ ಊಯಿಸ್ ಮತ್ತು ಆಲ್ರೌಂಡರ್ ಕ್ರಿಸ್ ಮೋರಿಸ್ ಈ ಪಂದ್ಯದಲ್ಲಿ ಕಣಕ್ಕಿಳಿದರೆ ರಾಜಸ್ತಾನ ತಂಡ ಮತ್ತಷ್ಟು ಬಲಿವಾಗಿರಲಿದೆ.
ಸೋಲಿನ ಸುಳಿಯಲ್ಲಿ ಹೈದ್ರಾಬಾದ್;
ಸನ್ರೈಸರ್ಸ್ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಪಂದ್ಯ ಸನ್ರೈಸರ್ಸ್ ಗೆದ್ದರೂ ಸಹ ಅಂಕಪಟ್ಟಿಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಸನ್ರೈಸರ್ಸ್ ಹೈದ್ರಾಬಾದ್ ಇಂದಿನ ಪಂದ್ಯದಲ್ಲಿ ಹೊಸ ಹೊಸ ಪ್ರಯೋಗಕ್ಕೆ ಮುಂದಾದರೂ ಅಚ್ಚರಿ ಇಲ್ಲ. ಹೀಗಾಗಿ ಈವರೆಗೆ ಅವಕಾಶ ಪಡೆದ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ