ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಐಪಿಎಲ್ ಅಭಿಯಾನವನ್ನು ಜಯದೊಂದಿಗೆ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಸೋಲುಣಿಸುವ ಮೂಲಕ ರಿಷಭ್ ಪಂತ್ ನಾಯಕತ್ವದಲ್ಲಿ ಚೊಚ್ಚಲ ಜಯ ಸಾಧಿಸಿತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ಗಳಿಂದ ಶರಣಾಗಿತ್ತು. ಇದಾಗ್ಯೂ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ತಂಡದ ಅನುಭವಿ ವೇಗಿ ಇಶಾಂತ್ ಶರ್ಮಾ ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ತಂಡದಲ್ಲಿ ವೇಗಿಯಾಗಿ ಅವೇಶ್ ಖಾನ್ ಕಾಣಿಸಿಕೊಂಡಿದ್ದರು. 2 ಪಂದ್ಯಗಳಿಂದ 5 ವಿಕೆಟ್ ಪಡೆಯುವ ಮೂಲಕ ಅವೇಶ್ ಕೂಡ ಮಿಂಚಿದ್ದರು.
ಆದರೆ ಮೊದಲೆರಡು ಪಂದ್ಯಗಳಿಂದ ಇಶಾಂತ್ ಶರ್ಮಾ ಹೊರಗುಳಿಯಲು ಏನು ಕಾರಣ ಎಂಬುದನ್ನು ಡೆಲ್ಲಿ ತಂಡ ಬಹಿರಂಗಪಡಿಸಿರಲಿಲ್ಲ. ಆದರೀಗ ಈ ಬಗ್ಗೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಸ್ಪಷ್ಟನೆ ನೀಡಿದ್ದಾರೆ. ಅನುಭವಿ ವೇಗಿಯನ್ನು ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿಸದಿರಲು ಕಾರಣ ಗಾಯದ ಸಮಸ್ಯೆ ಎಂದಿದ್ದಾರೆ ಪಾಂಟಿಂಗ್.
ಇಶಾಂತ್ ಶರ್ಮಾ ಇಮ್ಮಡಿ ನೋವಿನಿಂದ ಬಳುತ್ತಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಪರಿಗಣಿಸಲಾಗಿಲ್ಲ ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ. ಕಳೆದ ಸೀಸನ್ ಐಪಿಎಲ್ನಿಂದ ಗಾಯದ ಕಾರಣ ಇಶಾಂತ್ ಶರ್ಮಾ ಹೊರಗುಳಿದಿದ್ದರು. ಇದೀಗ ಮತ್ತೆ ಗಾಯದ ಸಮಸ್ಯೆ ಎದುರಾಗಿದೆ. ಹೀಗಾಗಿ ಮುಂದಿನ ಪಂದ್ಯಕ್ಕೂ ಇಶಾಂತ್ ಅಲಭ್ಯರಾಗುವ ಸಾಧ್ಯತೆಯಿದೆ.
ಇಶಾಂತ್ ಶರ್ಮಾ ಅವರ ಅನುಪಸ್ಥಿತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ತಂಡದಲ್ಲಿ ಪ್ರಮುಖ ವೇಗಿಗಳಾಗಿ ಕಗಿಸೋ ರಬಾಡ, ಕ್ರಿಸ್ ವೋಕ್ಸ್ ಇದ್ದು, ಅವರೊಂದಿಗೆ ಅವೇಶ್ ಖಾನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ