ಸತತ ಸೋಲಿನಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ (RCB) ಮತ್ತು ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (MI) ತಂಡ ಐಪಿಎಲ್ 39ನೇ (IPL 39th Match) ಪಂದ್ಯದಲ್ಲಿ ಗೆಲುವಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಎರಡೂ ತಂಡಗಳು ಇವೆ. 8 ಅಂಕಗಳೊಂದಿಗೆ 6 ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಸೋತರೆ ಪ್ಲೇ ಆಫ್ ತಲುವುದು ಕಷ್ಟವಾಗಲಿದೆ. ಇನ್ನೂ 10 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿರುವ ಆರ್ಸಿಬಿ ಸೋಲನುಭವಿಸಿದರೆ, ಮತ್ತೆರಡು ಸ್ಥಾನ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ಎರಡೂ ತಂಡಗಳ ಪಾಲಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಮತ್ತಷ್ಟು ರೋಚಕತೆ ಹೆಚ್ಚಾಗಿದೆ. ಆರ್ಸಿಬಿ ಬ್ಯಾಟಿಂಗ್ ಬಲಿಷ್ಟವಾಗಿದೆ. ಆದರೆ, ಯಾರೂ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಇನ್ನೂ ಮುಂಬೈ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಬಲಿಷ್ಠವಾಗಿದ್ದು, ಸಣ್ಣ ಪುಟ್ಟ ತಪ್ಪುಗಳು ಸೋಲಿಗೆ ಕಾರಣವಾಗುತ್ತಿವೆ. ಹೀಗಾಗಿ ಈ ಎರಡು ತಂಡಗಳ ಪೈಕಿ ಇಂದು ವಿಜಯಲಕ್ಷ್ಮಿ ಯಾರ ಪಾಲಾಗಲಿದ್ದಾಳೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಆರ್ಸಿಬಿಯಿಂದ ಮತ್ತೆ ಮತ್ತೆ ಅದೇ ತಪ್ಪು;
ಮೇಲ್ನೋಟಕ್ಕೆ ಆರ್ಸಿಬಿ ಅತ್ಯಂತ ಬಲಿಷ್ಠವಾದ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮತ್ತೆ ಮತ್ತೆ ಮಾಡಿದ ತಪ್ಪುಗಳನ್ನೇ ಮಾಡುತ್ತಿರುವುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ. ಅಸಲಿಗೆ ಪವರ್ ಪ್ಲೇ ಓವರ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೇ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಗೆದ್ದಿರುವುದು ಹೆಚ್ಚು. ಆದರೆ, ಇತರೆ ತಂಡಗಳಿಗೆ ಹೋಲಿಕೆ ಮಾಡಿದರೆ ಪವರ್ ಪ್ಲೇ ಓವರ್ಗಳಲ್ಲಿ ಆರ್ಸಿಬಿ ರನ್ ರೇಟ್ ತೃಪ್ತಿಕರವಾಗಿಲ್ಲ. ಈ ಸಂಬಂಧ ಆರ್ಸಿಬಿ ಮೇಲೆ ಸಾಕಷ್ಟು ಆರೋಪಗಳು ಇವೆ.
ಆದರೆ, ಕಳೆದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಪವರ್ ಪ್ಲೇ 6 ಓವರ್ಗಳಲ್ಲಿ 54 ರನ್ ಭಾರಿಸಿದ್ದರು. ಮೊದಲ 10 ಓವರ್ಗಳಿಗೆ 90 ರನ್ ಕಲೆಹಾಕಿದ್ದರು. ಈ ಸಂದರ್ಭದಲ್ಲಿ ತಂಡದ ಮೊತ್ತ 200ರ ಗಡಿದಾಟಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಆರ್ಸಿಬಿ ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕ ಮತ್ತೆ ವಿಫಲವಾಯಿತು.
ಸ್ಪೋಟಕ ಆಟಗಾರರಾದ ಮ್ಯಾಕ್ಸ್ವೆಲ್, ಟಿಮ್ ಡೇವಿಡ್ ಮತ್ತು ಎ.ಬಿ. ಡಿವಿಲಿಯರ್ಸ್ ಸಹ ವಿಫಲವಾದದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಇನ್ನೂ ಬೌಲಿಂಗ್ ವಿಭಾಗದ ಯಜುವೇಂದ್ರ ಚಾಹೆಲ್ ಹೊರತುಪಡಿಸಿ ಉಳಿದ ಯಾವ ಬೌಲರ್ಗಳೂ ಸಹ ಪರಿಣಾಮಕಾರಿ ಆಗದೆ ಇರುವುದು ಗೆಲುವಿನ ಸಾಧ್ಯತೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಾದರೂ ಆರ್ಸಿಬಿ ಈ ಸಮಸ್ಯೆಗೆ ಇತಿಶ್ರೀ ಹಾಡಲಿದೆಯೇ? ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: SRH vs PBKS- ಹೋಲ್ಡರ್ ವೀರೋಚಿತ ಹೋರಾಟ ವ್ಯರ್ಥ; ಪಂಜಾಬ್ ಕಿಂಗ್ಸ್ಗೆ ರೋಚಕ ಜಯ
ನಿರ್ಣಾಯಕ ಪಂದ್ಯದಲ್ಲಿ ಮುಂಬೈ:
ಮುಂಬೈ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಕಳೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡಿದ್ದರೂ ಸಹ ಮುಂಬೈ ತಂಡ ಕೆಕೆಆರ್ ಸ್ಪಿನ್ ಮೋಡಿಗೆ ಮಣಿದಿತ್ತು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ತಂಡಕ್ಕೆ ದುಬಾರಿಯಾಗಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಈ ಆಟಗಾರರು ಫಾರ್ಮ್ಗೆ ಮರಳಿದರೆ ಮುಂಬೈ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನೂ ಕೆಳಕ್ರಮಾಂಕದಲ್ಲಿ ಕಿರೋನ್ ಪೊಲಾರ್ಡ್ ತಂಡದ ಬಹುದೊಡ್ಡ ನಂಬಿಕೆ. ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಾಹರ್ ಅತ್ಯತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಆರ್ಸಿಬಿ ಬ್ಯಾಟ್ಸ್ಮನ್ಗಳಿಗೆ ಇಂದು ಸವಾಲಾಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಹೈವೋಲ್ಟೇಜ್ ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ