RCB vs CSK| ಶಾರ್ಜಾ ಅಂಗಳದಲ್ಲಿ ಕೊಹ್ಲಿ vs ಧೋನಿ ಬಿಗ್​ ಫೈಟ್​; ಯಾರ ಪಾಲಾಗಲಿದೆ ಗೆಲುವು?

ಶಾರ್ಜಾದಲ್ಲಿನ ಪಿಚ್ ಐಪಿಎಲ್ 2020 ರಲ್ಲಿ ಆರಂಭವಾದಾಗಿನಿಂದ ಬ್ಯಾಟಿಂಗ್ ಸ್ವರ್ಗವಾಗಿದೆ. ಈ ಅಂಗಳದಲ್ಲಿ ಎರಡೂ ತಂಡಗಳು 200 ಕ್ಕೂ ಹೆಚ್ಚು ರನ್ ಗಳನ್ನು ಗಳಿಸುವ ಸಾಧ್ಯತೆ ಇದೆ. ಟಾಸ್​ ಪ್ರಮುಖ ಪಾತ್ರ ವಹಿಸಲಿದ್ದು, ಈ ಅಂಗಳದಲ್ಲಿ ಮೊದಲು ಫೀಲ್ಡಿಂಗ್ ಮಾಡುವವರಿಗೆ ಗೆಲ್ಲುವ ಅವಕಾಶ ಅಧಿಕವಾಗಿರುತ್ತದೆ ಎನ್ನಲಾಗುತ್ತದೆ.

ಮಹೇಂದ್ರ ಸಿಂಗ್ ಧೋನಿ-ವಿರಾಟ್ ಕೊಹ್ಲಿ.

ಮಹೇಂದ್ರ ಸಿಂಗ್ ಧೋನಿ-ವಿರಾಟ್ ಕೊಹ್ಲಿ.

 • Share this:
  ಶಾರ್ಜಾ (ಸೆಪ್ಟೆಂಬರ್​ 24); ವಿರಾಟ್​ ಕೊಹ್ಲಿ (Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡ ಇಂದು ಶಾರ್ಜಾದಲ್ಲಿ ನಡೆಯಲಿರುವ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super kings) ವಿರುದ್ಧ ಗೆಲುವಿಗಾಗಿ ಸೆಣಸಲಿದೆ. ಎಂ.ಎಸ್. ಧೋನಿ (MS Dhoni) ನೇತೃತ್ವದ ಸೂಪರ್ ಕಿಂಗ್ಸ್ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, 5 ಗೆಲುವಿನೊಂದಿಗೆ 10 ಅಂಕ ಗಳಿಸಿರುವ ಆರ್​ಸಿಬಿ ಮೂರನೇ ಸ್ಥಾನದಲ್ಲಿದೆ. ಆದರೆ, ದ್ವಿತಿಯಾರ್ಧದಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವುದು ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.  ಆಟಗಾರರಲ್ಲೂ ಆತ್ಮವಿಶ್ವಾಸ ಕುಗ್ಗಲು ಕಾರಣವಾಗಿರಬಹುದು. ಆದರೆ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಕೊಹ್ಲಿ ಪಡೆಗೆ ಇದೆ. ಪ್ಲೇ ಆಫ್​ಗೆ ಆಯ್ಕೆಯಾಗಲು ಈ ಪಂದ್ಯದ ಗೆಲುವು ನಿರ್ಣಾಯಕ. ಇಲ್ಲದಿದ್ದರೆ, ಆರ್​ಸಿಬಿಯನ್ನು ಕೆಳೆಕ್ಕೆ ತಳ್ಳಿ ಮುಂಬೈ ಇಂಡಿಯನ್ಸ್​ (Mumbai Indians) ಅಥವಾ ಕೋಲ್ಕತ್ತಾ ನೈಟ್​ ರೈಡರ್ಸ್​ (Kolkatta Night Riders) ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಸಾಧ್ಯತೆ ಇದೆ. ಮತ್ತೊಂದೆಡೆ ಚೆನ್ನೈ ಸೂಪರ್​ ಕಿಂಗ್ಸ್​ ಸಹ ಬಲಿಷ್ಠವಾಗಿದ್ದು, ಇಂದಿನ ಪಂದ್ಯದ ಗೆಲುವು ಯಾರಿಗೆ? ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

  ಗೆಲುವಿನ ಟ್ರ್ಯಾಕ್​​ಗೆ ಮರಳಲಿದೆಯೇ ಬೆಂಗಳೂರು?

  ಇಂದಿನ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ. ಹೇಳಿ ಕೇಳಿ ಶಾರ್ಜಾ ಚಿಕ್ಕ ಅಂಗಳ. ಅಲ್ಲದೆ, ಬ್ಯಾಟಿಂಗ್ ಸ್ನೇಹಿ ಅಂಗಳವೂ ಹೌದು. ಹೀಗಾಗಿ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​ ತಂಡದ ಬ್ಯಾಟ್ಸ್​ಮನ್​ಗಳಾದ ದೇವದತ್​ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮ್ಯಾಕ್ಸ್​ವೆಲ್ ನೆಲಕಚ್ಚಿ ಆಡಿದರೆ ಚೆನ್ನೈ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಆದರೆ, ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಇಂದಿನ ಪಂದ್ಯದಲ್ಲೇ ಮತ್ತೆ ಲಯಕ್ಕೆ ಮರಳುತ್ತಾರಾ? ಎಂಬುದು ಪ್ರಶ್ನೆ. ಮತ್ತೊಂದೆಡೆ ತಂಡದ ಬೌಲಿಂಗ್ ವಿಭಾಗ ಈ ಋತುವಿನಲ್ಲೂ ಕಳಪೆ ಪ್ರದರ್ಶನ ನೀಡುತ್ತಿರುವುದು ನಾಯಕ ವಿರಾಟ್ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ.

  ಸಮತೋಲಿತ ತಂಡವಾಗಿರುವ ಚೆನ್ನೈ ಕಿಂಗ್ಸ್:

  ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಇಡೀ ಟೂರ್ನಿಯಲ್ಲೇ ಸಮತೋಲಿತ ತಂಡವಾಗಿ ಕಾಣುತ್ತಿದೆ. ಆರಂಭಿಕರಾದ ಫಾಫ್ ಡುಪ್ಲೆಸಿಸಿ ಮತ್ತು ರಿತುರಾಜ್ ಗಾಯಕ್ವಾಡ್ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಅಂಬಾಟಿ ರಾಯ್ಡು ಮತ್ತು ಎಂ.ಎಸ್. ಧೋನಿ ಸಿಡಿದರೆ ಶಾರ್ಜಾ ಅಂಗಳದ ಮೂಲೆ ಮೂಲೆಗಳಿಗೂ ಚೆಂಡು ಹಾರುವುದು ಗ್ಯಾರಂಟಿ. ಇನ್ನೂ ಕೆಳ ಕ್ರಮಾಂಕದಲ್ಲಿ ಡ್ವೇನ್ ಬ್ರಾವೋ ರನ್ ಗತಿಯನ್ನು ಏರಿಸುವಂತಹ ಅದ್ಭುತ ಆಟವನ್ನು ಪ್ರದರ್ಶಿಸುತ್ತಾರೆ.

  ಇದನ್ನೂ ಓದಿ: ಪಾಕಿಸ್ತಾನದ ಭದ್ರತೆಯ ಕುರಿತು ಅಣಕವಾಡಿ ಟ್ವೀಟ್ ಮಾಡಿದ ನ್ಯೂಜಿಲ್ಯಾಂಡ್ ಕ್ರಿಕೆಟರ್ ಫಿನ್ ಅಲೆನ್; ಸುದ್ದಿಯ ಅಸಲಿಯತ್ತೇನು?

  ಬೌಲಿಂಗ್ ವಿಭಾಗದಲ್ಲೂ ಚೆನ್ನೈ ಬಲಿಷ್ಠವಾಗಿದೆ. ವೇಗಿಗಳಾದ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ ಮತ್ತು ಜೋಸ್​ ಹ್ಯಾಜಲ್​ವುಡ್​ ವಿಕೆಟ್​ ಕೀಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಡ್ವೇನ್ ಬ್ರಾವೋ ಮತ್ತು ರವೀಂದ್ರ ಜಡೆಜಾ ಸಹ ಫಾರ್ಮ್​ನಲ್ಲಿದ್ದು, ಧೋನಿ ಎದುರು ಸಾಕಷ್ಟು ಆಯ್ಕೆಗಳು ಇರುವುದು ಸಹ ತಂಡದ ಬಲವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ? ಎಂಬುದನ್ನು ಕಾದು ನೋಡಬೇಕಿದೆ.

  ಇದನ್ನೂ ಓದಿ: Virat Kohli- ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಡಲು ಕುಟುಂಬ ಕಾರಣ ಇರಬಹುದು: ಡೇಲ್ ಸ್ಟೇನ್

  ಪಿಚ್ ವರದಿ
  ಶಾರ್ಜಾದಲ್ಲಿನ ಪಿಚ್ ಐಪಿಎಲ್ 2020 ರಲ್ಲಿ ಆರಂಭವಾದಾಗಿನಿಂದ ಬ್ಯಾಟಿಂಗ್ ಸ್ವರ್ಗವಾಗಿದೆ. ಈ ಅಂಗಳದಲ್ಲಿ ಎರಡೂ ತಂಡಗಳು 200 ಕ್ಕೂ ಹೆಚ್ಚು ರನ್ ಗಳನ್ನು ಗಳಿಸುವ ಸಾಧ್ಯತೆ ಇದೆ. ಹೀಗಾಗಿ ಬೌಲರ್​ಗಳು ಮಾತ್ರ ಇಂದಿನ ಪಂದ್ಯದಲ್ಲಿ ಪರದಾಡುವುದು ದಿಟ. ಅಲ್ಲದೆ, ಶಾರ್ಜಾ ಅಂಗಳದಲ್ಲಿ ಟಾಸ್​ ಪ್ರಮುಖ ಪಾತ್ರ ವಹಿಸಲಿದ್ದು, ಈ ಅಂಗಳದಲ್ಲಿ ಮೊದಲು ಫೀಲ್ಡಿಂಗ್ ಮಾಡುವವರಿಗೆ ಗೆಲ್ಲುವ ಅವಕಾಶ ಅಧಿಕವಾಗಿರುತ್ತದೆ ಎನ್ನಲಾಗುತ್ತದೆ.
  Published by:MAshok Kumar
  First published: