IPL 2021- ರಾಹುಲ್ ಪಡೆ ಸೋಲಲೆಂದು ಹಾರೈಸುತ್ತಿರುವ ಆರ್​ಸಿಬಿ ಅಭಿಮಾನಿಗಳು; ಬೆಂಗಳೂರಿಗೆ ಎಷ್ಟಿದೆ ಚಾನ್ಸ್?

Chances for RCB- ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಈಗಲೂ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಬೆಂಗಳೂರು ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದ್ದು ಪ್ಲೇ ಆಫ್ ಪ್ರವೇಶಕ್ಕೆ ಎಷ್ಟು ಅವಕಾಶ ಇದೆ ಎಂಬ ಲೆಕ್ಕಾಚಾರ ಇಲ್ಲಿದೆ:

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

  • Cricketnext
  • Last Updated :
  • Share this:
    ಬೆಂಗಳೂರು, ಸೆ. 25: ಈ ಬಾರಿ ಕಪ್ ನಮ್ಮದೇ ಎಂದು ಹಿಂದೆಂದಿಗಿಂತಲೂ ಗಟ್ಟಿ ಧ್ವನಿಯಲ್ಲಿ ಕಿರುಚುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕಳೆದ ಎರಡು ಪಂದ್ಯಗಳ ಸೋಲು ಕಂಗೆಡಿಸಿದೆ. ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲವೇನೋ ಎಂಬ ಆತಂಕ ಶುರುವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಬೆಂಗಳೂರಿಗರ ನೆಟ್ ರನ್ ರೇಟ್ ಅಧೋಗತಿಯಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ರನ್ ರೇಟ್ ಮೈನಸ್ 0.720 ಇದೆ. ಪ್ಲೇ ಆಫ್ ಹಂತ ಯಾರು ಪ್ರವೇಶಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿ ನೆಟ್ ರನ್ ರೇಟ್ ಮಹತ್ವದ ಸ್ಥಾನ ಪಡೆಯಬಹುದು. ಒಂದು ವೇಳೆ, ಎರಡು ತಂಡಗಳು ಸಮಾನ ಅಂಕ ಹೊಂದಿದ್ದರೆ ನೆಟ್ ರನ್ ರೇಟ್ ಹೆಚ್ಚು ಇರುವ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗಾಗಿ, ಆರ್​ಸಿಬಿ ತಂಡಕ್ಕೆ ತನಗೆ ಬಾಕಿ ಉಳಿದಿರುವ ಐದು ಪಂದ್ಯಗಳ ಪೈಕಿ ಕನಿಷ್ಠ ಮೂರನ್ನಾದರೂ ಗೆಲ್ಲುವುದು ಅನಿವಾರ್ಯವಾಗಿದೆ.

    ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬಹುತೇಕ ಪ್ಲೇ ಆಫ್ ಪ್ರವೇಶವನ್ನು ಖಾತ್ರಿಪಡಿಸಿಕೊಂಡಿವೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಆರ್​ಸಿಬಿ, ಕೆಕೆಆರ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಈ ತಂಡಗಳ ಪೈಕಿ ಆರ್​​ಸಿಬಿ 10 ಅಂಕಗಳೊಂದಿಗೆ ಮೇಲಿದೆ. ಕೆಕೆಆರ್, ಮುಂಬೈ ಮತ್ತು ರಾಯಲ್ಸ್ ತಲಾ ಎಂಟು ಅಂಕಗಳನ್ನ ಹೊಂದಿವೆ. ಪಂಜಾಬ್ 6 ಅಂಕಗಳನ್ನ ಹೊಂದಿದೆ.

    ಇವತ್ತು ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಒಂದು ವೇಳೆ ರಾಯಲ್ಸ್ ಗೆದ್ದಿದ್ದರೆ ಅರ್​ಸಿಬಿಗೆ ಕಠಿಣವಾಗುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿರುವುದು ಬೆಂಗಳೂರು ತಂಡಕ್ಕೆ ತುಸು ಅನುಕೂಲವಾಗಿದೆ. ಇನ್ನೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ತಂಡ ಗೆದ್ದರೆ ಆರ್​ಸಿಬಿಗೆ ಅನುಕೂಲವಾಗುತ್ತದೆ.

    ಇದನ್ನೂ ಓದಿ: England vs India- ಮ್ಯಾಂಚೆಸ್ಟರ್ ಪಂದ್ಯ ಬದಲು 2022ರಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ಒಂದು ಟೆಸ್ಟ್

    ನಾಳೆ ಮುಂಬೈ ಇಂಡಿಯನ್ಸ್ ಎದುರು ಆರ್​ಸಿಬಿ ಗೆದ್ದಿದ್ದೇ ಆದಲ್ಲಿ ಪ್ಲೇ ಆಫ್ ಸಾಧ್ಯತೆ ತುಸು ಗಟ್ಟಿಗೊಳ್ಳುತ್ತದೆ. ನಂತರ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡಗಳ ಸವಾಲು ಆರ್​ಸಿಬಿಗೆ ಎದುರಾಗುತ್ತದೆ. ಈ ಮೂರು ಪಂದ್ಯಗಳು ಬೆಂಗಳೂರು ತಂಡಕ್ಕೆ ಬಹಳ ಮಹತ್ವದ್ದು. ಯಾಕೆಂದರೆ ಪ್ಲೇ ಆಫ್ ಹಂತಕ್ಕೆ ಆರ್​ಸಿಬಿ ಜೊತೆ ನೇರ ಪೈಪೋಟಿಯಲ್ಲಿ ಈ ಮೂರು ತಂಡಗಳಿವೆ. ಈ ಪಂದ್ಯಗಳನ್ನ ಗೆದ್ದಷ್ಟೂ ಆರ್​ಸಿಬಿ ಪ್ಲೇ ಆಫ್ ಸಾಧ್ಯತೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಈ ಮೂರು ಪಂದ್ಯಗಳ ಬಳಿಕ ಸನ್ ರೈಸರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧವೂ ಆರ್​ಸಿಬಿ ಪಂದ್ಯ ಆಡಲಿದೆ.

    ಆರ್​ಸಿಬಿಯ ಮುಂದಿನ ಪಂದ್ಯಗಳು:

    1) ಮುಂಬೈ ಇಂಡಿಯನ್ಸ್ ವಿರುದ್ಧ: ಸೆ. 26, ದುಬೈ
    2) ರಾಜಸ್ಥಾನ್ ರಾಯಲ್ಸ್ ವಿರುದ್ಧ: ಸೆ. 29, ದುಬೈ
    3) ಪಂಜಾಬ್ ಕಿಂಗ್ಸ್ ವಿರುದ್ಧ: ಅ. 3, ಶಾರ್ಜಾ
    4) ಸನ್ ರೈಸರ್ಸ್ ಹೈದರಾಬಾದ್: ಅ. 6, ಅಬುಧಾಬಿ
    5) ಡೆಲ್ಲಿ ಕ್ಯಾಪಿಟಲ್ಸ್: ಅ. 8, ದುಬೈ

    ಇದನ್ನೂ ಓದಿ: Navnita Gautam- ಇಡೀ ಐಪಿಎಲ್​ನ ಸಪೋರ್ಟ್ ಸ್ಟಾಫ್​ನಲ್ಲಿ ಏಕೈಕ ಹುಡುಗಿ; ಈಕೆ ಆರ್​ಸಿಬಿ ಮಸಾಜ್ ಥೆರಪಿಸ್ಟ್

    ಆರ್​ಸಿಬಿ ಉಳಿದಿರುವ ಹೆಚ್ಚಿನ ಪಂದ್ಯಗಳನ್ನ ಗೆಲ್ಲುವುದರ ಜೊತೆಗೆ ಕೆಕೆಆರ್, ಮುಂಬೈ, ರಾಯಲ್ಸ್ ಮತ್ತು ಪಂಜಾಬ್ ತಂಡಗಳು ತಂತಮ್ಮ ಪಂದ್ಯಗಳನ್ನ ಸೋತಷ್ಟೂ ಆರ್​ಸಿಬಿಗೆ ಲಾಭವಾಗುತ್ತದೆ. ಹೀಗಾಗಿ, ಆರ್​ಸಿಬಿ ಅಭಿಮಾನಿಗಳ ಕಣ್ಣು ಈ ನಾಲ್ಕು ತಂಡಗಳ ಪಂದ್ಯಗಳ ಮೇಲೆ ನೆಟ್ಟಿರುತ್ತದೆ.
    Published by:Vijayasarthy SN
    First published: