ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿ, ಹೊಸ ತಂಡಗಳನ್ನು ಘೋಷಿಸಿದ್ದಾರೆ. ಒಂದೆಡೆ ತಂಡದ ಘೋಷಣೆ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆ್ಯಂಡ್ರೊ ಮೆಕ್ಡೊನಾಲ್ಡ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿತ್ತು. ಈ ಕಾರಣಕ್ಕಾಗಿ ಮೆಕ್ಡೊನಾಲ್ಡ್ ತಮ್ಮ ಅವರನ್ನು ಸ್ಥಾನದಿಂದ ಕೈಬಿಡುವ ನಿರ್ಧಾರವನ್ನು ರಾಜಸ್ಥಾನ್ ರಾಯಲ್ಸ್ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಆಸ್ಟ್ರೇಲಿಯಾ ತಂಡದ ಕೋಚ್ ಆಗಿರುವ ಮೆಕ್ಡೊನಾಲ್ಡ್ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ರಾಜಸ್ಥಾನ್ ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ಮೆಕ್ಡೊನಾಲ್ಡ್ ಕೋಚ್ ಹುದ್ದೆ ತೊರೆಯುವ ನಿರ್ಧಾರ ಮಾಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿ ಶ್ರೀಲಂಕಾ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಆಯ್ಕೆಯಾಗಿದ್ದರು. ಇದೀಗ ಸಂಗಕ್ಕಾರ ಅವರೇ ರಾಜಸ್ಥಾನ್ ತಂಡ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ಜಿಂಬಾಬ್ವೆ ತಂಡದ ಮಾಜಿ ಆಟಗಾರ ಟ್ರೆವರ್ ಪೆನ್ನೆ ಅವರು ಸಹ ಕೋಚ್ ಆಗಿ ಸಂಗಕ್ಕಾರ ಅವರಿಗೆ ಸಾಥ್ ನೀಡಲಿದ್ದಾರೆ.
ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಅದರಲ್ಲೂ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ.ರೂ ದಾಖಲೆ ಬೆಲೆಗೆ ಈ ಬಾರಿ ಖರೀದಿಸಿದೆ.
ಇದಲ್ಲದೆ ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತೇವಟಿಯಾ, ಮಹಿಪಾಲ್ ಲೊಮರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನಮ್ ವೊಹ್ರಾ , ಮುಸ್ತಾಫಿಜುರ್ ರಹೀಮ್, ಚೇತನ್ ಸಕರಿಯಾ, ಕೆ.ಸಿ.ಕರಿಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್...ಸೇರಿದಂತೆ ದೊಡ್ಡ ಬಳಗವೇ ರಾಜಸ್ಥಾನ್ ತಂಡದಲ್ಲಿದೆ. ಹೀಗಾಗಿ ಕುಮಾರ ಸಂಗಕ್ಕಾರ ಮಾರ್ಗದರ್ಶನದಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರಬಲ ತಂಡವಾಗಿ ರೂಪುಗೊಳ್ಳಲಿದೆಯಾ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ