ಇಂಡಿಯನ್ ಪ್ರೀಮಿಯರ್ ಲೀಗ್ ಚುಟುಕು ಕ್ರಿಕೆಟ್ ಕದನಕ್ಕೆ ಇಂದಿನಿಂದ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ಎದುರಾಳಿಯಾಗಿ ಕಣಕ್ಕಿಳಿಯುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಒಂದಾರ್ಥದಲ್ಲಿ ಟೀಮ್ ಇಂಡಿಯಾ ನಾಯಕ ಹಾಗೂ ಉಪನಾಯಕನ ನಡುವಣ ಕದನ ಎಂದೇ ಹೇಳಬಹುದು. ಅಷ್ಟೇ ಅಲ್ಲದೆ ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇರುವುದು ಇನ್ನೊಂದು ವಿಶೇಷ. ಅತ್ತ 6ನೇ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವ ತುಡಿತದಲ್ಲಿದೆ. ಆದರೆ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡುವ ಮೂಲಕ ಈ ಬಾರಿ ಕಪ್ ಗೆದ್ದೇ ಗೆಲ್ಲಬೇಕೆಂಬ ಇರಾದೆಯಲ್ಲಿ ಆರ್ಸಿಬಿ. ಹೀಗಾಗಿ ಎರಡೂ ತಂಡಗಳಿಂದ ರೋಚಕ ಪೈಪೋಟಿಯಂತು ನಿರೀಕ್ಷಿಸಬಹುದು.
ಇನ್ನು ಎರಡೂ ತಂಡಗಳ ಬಲಾಬಲ ನೋಡುವುದಾದರೆ...ಮುಂಬೈ ತಂಡದ್ದೇ ಮೇಲುಗೈ ಎನ್ನಬಹುದು. ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 29 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಮುಂಬೈ 19 ಗೆಲುವು ದಾಖಲಿಸಿದರೆ, ಆರ್ಸಿಬಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಕಳೆದ ಐಪಿಎಲ್ನಲ್ಲಿ ಮುಂಬೈ ಒಂದು ಪಂದ್ಯ ಗೆದ್ದರೆ, ಆರ್ಸಿಬಿ ಸೂಪರ್ ಓವರ್ನಲ್ಲಿ ಜಯ ಸಾಧಿಸಿತ್ತು.
ಹಾಗೆಯೇ ತಂಡದ ಬ್ಯಾಟಿಂಗ್ ಬಲದಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು. ಏಕೆಂದರೆ ಮುಂಬೈನಲ್ಲಿ ರೋಹಿತ್ ಶರ್ಮಾ ಇದ್ದರೆ, ಆರ್ಸಿಬಿಯಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ಅತ್ತ ಪಂದ್ಯದ ಗತಿ ಬದಲಿಸಬಲ್ಲ ಹಾರ್ದಿಕ್ ಪಾಂಡ್ಯ ಇದ್ದರೆ, ಇತ್ತ ಎಬಿ ಡಿವಿಲಿಯರ್ಸ್ ಇದ್ದಾರೆ. ಇನ್ನು ಪೊಲಾರ್ಡ್ ಆಟಕ್ಕೆ ಸವಾಲಾಗಬಲ್ಲ ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿ ತಂಡದಲ್ಲಿದ್ದಾರೆ. ಎಡಗೈ ದಾಂಡಿಗನಾಗಿ ಇಶಾನ್ ಕಿಶನ್ ಮುಂಬೈ ತಂಡದಲ್ಲಿದ್ದರೆ, ಪಡಿಕ್ಕಲ್ ಎಂಬ ಪವರ್ ಆರ್ಸಿಬಿ ತಂಡಕ್ಕಿದೆ. ಹೀಗಾಗಿ ಬ್ಯಾಟಿಂಗ್ ವಿಷಯದಲ್ಲಿ ಎರಡೂ ತಂಡಗಳು ಸಮಬಲದಿಂದ ಕೂಡಿದೆ ಎಂದೇ ಹೇಳಬಹುದು.
ಇನ್ನು ಆರ್ಸಿಬಿ ತಂಡದ ಪ್ಲಸ್ ಮತ್ತು ಮೈನಸ್ ಏನೂ ಎಂದು ನೋಡುವುದಾದರೆ, ಕೊಹ್ಲಿ, ಎಬಿಡಿ, ಪಡಿಕ್ಕಲ್,ಮ್ಯಾಕ್ಸ್ವೆಲ್ ಅಗ್ರ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಹಾಗೆಯೇ ಕ್ರಿಶ್ಚಿಯನ್ ಫಿನಿಶರ್ ಪಾತ್ರ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೊಹ್ಲಿ-ಪಡಿಕ್ಕಲ್ ಆರಂಭಿಕ ಜೋಡಿ ಈ ಬಾರಿಯ ವೈಶಿಷ್ಟ್ಯ. ಅದರೊಂದಿಗೆ ಮ್ಯಾಕ್ಸ್ವೆಲ್ ಸೇರ್ಪಡೆ ತಂಡದ ಬ್ಯಾಟಿಂಗ್ಗೆ ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆಯಿದೆ.
ಆರ್ಸಿಬಿ ತಂಡದ ಮೈನಸ್ ಪಾಯಿಂಟ್ ಅಂದರೆ ಬೌಲಿಂಗ್ ವಿಭಾಗ. ಅದರಲ್ಲೂ ಮುಖ್ಯವಾಗಿ ಡೆತ್ ಓವರ್ ಸ್ಪೆಷಲಿಸ್ಟ್ ಕೊರತೆ ಈ ಬಾರಿ ಕೂಡ ತಂಡಕ್ಕಿದೆ. ಬೌಲಿಂಗ್ ವಿಭಾಗದ ಸಾರಥ್ಯ ವಹಿಸಿ ಎದುರಾಳಿಯನ್ನು ಕಟ್ಟಿ ಹಾಕಬಲ್ಲ ನುರಿತ ಬೌಲರ್ಗಳ ಕೊರತೆಯಿದೆ. ಹಾಗೆಯೇ ಹೊಡಿಬಡಿ ದಾಂಡಿಗ ಮ್ಯಾಕ್ಸ್ವೆಲ್ ಫಾರ್ಮ್ ಅನ್ನು ಯಾವುದೇ ಕಾರಣಕ್ಕೆ ನಂಬುವಂತಿಲ್ಲ ಎಂಬುದಕ್ಕೆ ಈ ಹಿಂದಿನ ಐಪಿಎಲ್ ಟೂರ್ನಿಗಳೇ ಸಾಕ್ಷಿ.
ಇನ್ನು ಈ ಬಾರಿ ಆರ್ಸಿಬಿ ತಂಡಕ್ಕೆ ಡೇನಿಯಲ್ ಕ್ರಿಶ್ಚಿಯನ್, ಡೇನಿಯಲ್ ಸ್ಯಾಮ್ಸ್ ಹಾಗೂ ಕೈಲ್ ಜೇಮಿಸನ್ ಎಂಬ ತ್ರಿಮೂರ್ತಿ ಆಲ್ರೌಂಡರ್ಗಳ ಆಗಮನವಾಗಿರುವುದು ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೆ ಈ ಮೂವರ ಮೇಲೆ ಬೌಲಿಂಗ್ ವಿಭಾಗ ಕೂಡ ಅವಲಂಭಿತವಾಗಲಿದೆ. ಇದಾಗ್ಯೂ ಮೊಹಮ್ಮದ್ ಸಿರಾಜ್ ಹಾಗೂ ಸೈನಿ ಒತ್ತಡವನ್ನು ಮೆಟ್ಟಿ ಲಯಬದ್ಧ ಬೌಲಿಂಗ್ ನಡೆಸುವುದು ಕೂಡ ಅನಿವಾರ್ಯ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪ್ಲಸ್ ಪಾಯಿಂಟ್-ಮೈನಸ್ ಪಾಯಿಂಟ್ಗಳೇನು ಎಂದು ನೋಡುವುದಾದ್ರೆ, ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನಪ್ ಮುಂಬೈ ತಂಡದ ಪ್ಲಸ್ ಪಾಯಿಂಟ್. ರೋಹಿತ್ ನಾಯಕತ್ವ ಹಾಗೂ ಅತ್ಯಂತ ಸಮತೋಲನವೇ ಮುಂಬೈಯನ್ನು ಯಶಸ್ವೀ ತಂಡವನ್ನಾಗಿ ಮಾಡಿದೆ. ಉತ್ತಮ ಫಿನಿಶರ್ ಹಾಗೂ ಡೆತ್ ಬೌಲಿಂಗ್ ರೋಹಿತ್ ಪಡೆಯ ಶಕ್ತಿ ಎಂದೇ ಹೇಳಬಹುದು.
ಮಿಲ್ನೆ ಹಾಗೂ ಕೌಲ್ಟರ್ನೈಲ್ ಬೌಲಿಂಗ್ ಕ್ಷಮತೆ ತಂಡಕ್ಕೆ ಕೊಂಚ ಹಿನ್ನಡೆಯಾದರೆ ಅಚ್ಚರಿಯಿಲ್ಲ. ಇದಾಗ್ಯೂ ಅದನ್ನು ಸಮತೋಲನಗೊಳಿಸಬಲ್ಲ ಬೌಲರ್ಗಳಾಗಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹಾಗೂ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ತಂಡದಲ್ಲಿದ್ದಾರೆ. ಹಾಗೆಯೇ ಈ ಬಾರಿ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಮಾಡಲಿದ್ದಾರೆ. ಹೀಗಾಗಿ ತಂಡಕ್ಕೆ ಹಿನ್ನಡೆಯಾದರೂ ಅದನ್ನು ಸರಿದೂಗಿಸಲು ರೋಹಿತ್ ಶರ್ಮಾ ಮುಂದೆ ಹಲವು ಆಯ್ಕೆಗಳಿವೆ ಎಂದೇ ಹೇಳಬಹುದು.
ಅದೇ ರೀತಿ ಮುಂಬೈನ ಬ್ಯಾಟಿಂಗ್ ಬಲ ತಿಳಿಯಲು ಕಳೆದ ಸೀಸನ್ವೊಂದನ್ನೇ ಗಮಿಸಿದರೆ ಸಾಕು. ಬ್ಯಾಟಿಂಗ್ನಲ್ಲಿ ಒಬ್ಬರ ವೈಫಲ್ಯವನ್ನು ಮತ್ತೊಬ್ಬರು ಸರಿದೂಗಿಸಿದ್ದಾರೆ. ಆರಂಭಿಕರು ವಿಫಲವಾದರೆ, 3ನೇ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅಬ್ಬರಿಸುವ ಮೂಲಕ ತಂಡವನ್ನು ಮೇಲೆಕ್ಕೆತ್ತಿದ್ದಾರೆ. ಇನ್ನು ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವುದರಿಂದ ಬ್ಯಾಟ್ಸ್ಮನ್ಗಳು ಕೈಕೊಟ್ಟರೂ ಬೌಲಿಂಗ್ ಮೂಲಕ ಪಂದ್ಯ ಗೆಲ್ಲುವ ಸಾಮರ್ಥ್ಯವಿದೆ.
ಇತ್ತ ಆರ್ಸಿಬಿ ಪರ ಈ ಬಾರಿ ಕೊಹ್ಲಿ-ಮ್ಯಾಕ್ವೆಲ್-ಎಬಿಡಿ ಸ್ಥಿರ ಪ್ರದರ್ಶನ ನೀಡಲೇಬೇಕು. ಹೀಗಾದರೆ ಮಾತ್ರ ಯುವ ಆಟಗಾರರ ಒತ್ತಡ ಕಡಿಮೆಯಾಗಲಿದೆ. ಏಕೆಂದರೆ ಆರ್ಸಿಬಿ ಬ್ಯಾಟಿಂಗ್ ವಿಭಾಗ ಅಷ್ಟಾಗಿ ಅನುಭವಿಗಳನ್ನು ಹೊಂದಿಲ್ಲ. ಹೀಗಾಗಿ ಈ ಮೂವರ ಫಾರ್ಮ್ ತಂಡದ ಫಲಿತಾಂಶವನ್ನು ನಿರ್ಧರಿಸಲಿದೆ ಎಂದೇ ಹೇಳಬಹುದು. ಡೇನಿಯಲ್ ಕ್ರಿಶ್ಚಿಯನ್ ಆಲ್ರೌಂಡರ್ ಪ್ರದರ್ಶನ ನೀಡಿದ್ರೆ ಅದು ಪ್ಲಸ್ ಪಾಯಿಂಟ್ ಆಗಲಿದೆ. ಹಾಗೆಯೇ ಎಬಿಡಿ-ಕೊಹ್ಲಿ-ಮ್ಯಾಕ್ಸ್ವೆಲ್ ಮಿಂಚಿದರೆ ತಂಡ ಬೌಲಿಂಗ್ ವಿಭಾಗದ ಚಿಂತೆ ಕಡಿಮೆ ಆಗುವುದರಲ್ಲಿ ಡೌಟೇ ಇಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಈ ಬಾರಿ ಇನಿಂಗ್ಸ್ ಆರಂಭಿಸುತ್ತಿರುವುದು ಆರ್ಸಿಬಿ ತಂಡಕ್ಕೆ ಆನೆಬಲ ಎಂದೇ ಹೇಳಬಹುದು. ಏಕೆಂದರೆ 2016 ರಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು 16 ಪಂದ್ಯಗಳಿಂದ 973 ರನ್ ಬಾರಿಸಿ ದಾಖಲೆ ಬರೆದಿದ್ದರು. ಹೀಗಾಗಿ ಈ ಬಾರಿ ಸಂಪೂರ್ಣ ಬ್ಯಾಟಿಂಗ್ ಸಾಮರ್ಥ್ಯ ಬಳಸಿಕೊಂಡರೆ ಈ ಸಲ ಕಪ್ ಆರ್ಸಿಬಿ ಪಾಲಾಗಬಹುದು.
ಮುಂಬೈ-ಆರ್ಸಿಬಿ ಕಾದಾಟದಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆರ್ಸಿಬಿ ಆಟಗಾರರು. ವಿರಾಟ್ ಕೊಹ್ಲಿ ಇದುವರೆಗೆ ಮುಂಬೈ ವಿರುದ್ಧ 695 ರನ್ ಕಲೆಹಾಕಿದ್ದಾರೆ. ಹಾಗೆಯೇ ಎಬಿ ಡಿವಿಲಿಯರ್ಸ್ 634 ರನ್ ಬಾರಿಸುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಆರ್ಸಿಬಿ ವಿರುದ್ಧ 539 ಬಾರಿಸಿರುವ ಕೀರನ್ ಪೊಲಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ.
ವಿಕೆಟ್ ಕಬಳಿಸಿದ ಆಟಗಾರರ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಆರ್ಸಿಬಿ ವಿರುದ್ಧ 22 ವಿಕೆಟ್ ಪಡೆದಿರುವ ಭಜ್ಜಿ ಪ್ರಸ್ತುತ ಮುಂಬೈ ತಂಡದಲ್ಲಿಲ್ಲ ಎಂಬುದು ವಿಶೇಷ. ಹಾಗೆಯೇ ಮುಂಬೈ ವಿರುದ್ಧ ಯುಜ್ವೇಂದ್ರ ಚಹಲ್ 19 ವಿಕೆಟ್ ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ 19 ವಿಕೆಟ್ ಉರುಳಿಸಿ ಆರ್ಸಿಬಿ ವಿರುದ್ಧ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಎರಡೂ ತಂಡಗಳ ಬೌಲಿಂಗ್ ಲೈನಪ್ನಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ