ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದ ಆರ್ಸಿಬಿ ಈ ಬಾರಿ ಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಗುರುತಿಸಿಕೊಂಡಿತ್ತು. ಆದರೀಗ ಐಪಿಎಲ್ ಮುಂದೂಡಲಾಗಿದೆ. ಇದಾಗ್ಯೂ ಟೂರ್ನಿಯನ್ನು ಪೂರ್ಣಗೊಳಿಸುವುದಾಗಿ ಬಿಸಿಸಿಐ ಘೋಷಿಸಿದೆ. ಆದರೆ ಈ ಮುಂದೂಡಿಕೆಯಿಂದ ಆರ್ಸಿಬಿ ಅತ್ಯುತ್ತಮ ಲಾಭ ಪಡೆದುಕೊಳ್ಳಲಿದೆ.
ಹೌದು, ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಇದರಿಂದ ಆರ್ಸಿಬಿ ತನ್ನ ತಂಡವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿಕೊಳ್ಳಬಹುದು. ಏಕೆಂದರೆ ಐಪಿಎಲ್ ಮಧ್ಯೆದಲ್ಲೇ ಆರ್ಸಿಬಿ ತಂಡದಿಂದ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಝಂಪಾ ಹೊರ ನಡೆದಿದ್ದರು. ಮೊದಲೇ 22 ಮಂದಿಯನ್ನು ಹೊಂದಿದ್ದ ಆರ್ಸಿಬಿ ಬಳಗಕ್ಕೆ ಇಬ್ಬರ ನಿರ್ಗಮನ ಶಾಕ್ ನೀಡಿತ್ತು. ಏಕೆಂದರೆ ಉಳಿದ ಎಲ್ಲಾ ತಂಡಗಳಲ್ಲಿ 25 ರಿಂದ 28 ಮಂದಿಯಿದ್ದರೆ ಈ ಬಾರಿ ಆರ್ಸಿಬಿ ತಂಡದಲ್ಲಿ ಕೇವಲ 22 ಮಂದಿ ಮಾತ್ರ ಇದ್ದರು. ಇತ್ತ ಝಂಪಾ, ರಿಚರ್ಡ್ಸನ್ ನಿರ್ಗಮನದಿಂದ ಆರ್ಸಿಬಿ ತಂಡದ ಅಭ್ಯಾಸಕ್ಕೆ ಅನುಭವಿ ಬೌಲರುಗಳ ಕೊರತೆ ಕಾಡಿತ್ತು. ಅತ್ತ ಕೊರೋನಾ ಕಾರಣದಿಂದ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಿಂದ ಭಾರತಕ್ಕೆ ಫ್ಲೈಟ್ಗಳನ್ನು ರದ್ದುಗೊಳಿಸಿದ್ದರಿಂದ ಬದಲಿ ಆಟಗಾರರನ್ನು ಕರೆಸಿಕೊಳ್ಳಲು ಕೂಡ ಸಾಧ್ಯವಾಗಿರಲಿಲ್ಲ.
ಇದಾಗ್ಯೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಸ್ಕಾಟ್ ಕುಗ್ಗೆಲಿನ್ ಅವರನ್ನು ಆರ್ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದು ಉತ್ತಮ ಆಯ್ಕೆಯಲ್ಲ ಎಂಬುದು ಆರ್ಸಿಬಿಗೆ ಚೆನ್ನಾಗಿ ತಿಳಿದಿದ್ದರೂ, ತಂಡದ ಮ್ಯಾನೇಜ್ಮೆಂಟ್ಗೆ ಬೇರೆ ಆಯ್ಕೆಗಳಿರಲಿಲ್ಲ. ಆದರೀಗ ಐಪಿಎಲ್ ಮುಂದೂಡಿದ್ದರಿಂದ ಆರ್ಸಿಬಿ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಝಂಪಾ ಅವರ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಏಕೆಂದರೆ ಸ್ಕಾಟ್ ಕುಗ್ಗೆಲಿನ್ ಅನಿವಾರ್ಯ ಆಯ್ಕೆಯಾಗಿದ್ದರಿಂದ ಅವರನ್ನು ಮುಂದುವರೆಸುವ ಅಥವಾ ಕೈಬಿಡುವ ಸ್ವಾತಂತ್ರ್ಯ ಆರ್ಸಿಬಿ ಮುಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ