KKR vs MI- ಅಯ್ಯರ್, ತ್ರಿಪಾಠಿ ಆಕರ್ಷಕ ಬ್ಯಾಟಿಂಗ್; ಮುಂಬೈ ವಿರುದ್ಧವೂ ಗೆದ್ದ ಕೆಕೆಆರ್

ಐಪಿಎಲ್​ನ 34ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಗೆಲ್ಲಲು 156 ರನ್ ಗುರಿ ಪಡೆದ ಕೆಕೆಆರ್ 16ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

ರಾಹುಲ್ ತ್ರಿಪಾಠಿ

ರಾಹುಲ್ ತ್ರಿಪಾಠಿ

 • Cricketnext
 • Last Updated :
 • Share this:
  ಅಬುಧಾಬಿ, ಸೆ. 23: ಗೆಲ್ಲಲು ಮುಂಬೈ ಇಂಡಿಯನ್ಸ್ (Mumbai Indians) ಒಡ್ಡಿದ 156 ರನ್ ಗುರಿಯನ್ನ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಸುಲಭವಾಗಿ ಬೆನ್ನತ್ತಿ ಏಳು ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಈ ಮೂಲಕ ಕೆಕೆಆರ್ ಫೀನಿಕ್ಸ್​ನಂತೆ ಮೇಲೆದ್ದು ಸತತ ಎರಡು ಪಂದ್ಯ ಗೆದ್ದು ಬೀಗಿದೆ. ಸಿಎಸ್​ಕೆ ವಿರುದ್ಧ ಸೋತಿದ್ದ ಮುಂಬೈ ಈಗ ಸತತ ಎರಡನೇ ಸೋಲಿನ ಆಘಾತ ಅನುಭವಿಸಿತು. ಆರ್​ಸಿಬಿ ವಿರುದ್ಧ ಆಕರ್ಷಕ ಬ್ಯಾಟಿಂಗ್ ಆಡಿ ತಂಡಕ್ಕೆ ಸುಲಭ ಗೆಲುವು ತಂದಿದ್ದ ವೆಂಕಟೇಶ್ ಅಯ್ಯರ್ ಇವತ್ತಿನ ಮುಂಬೈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರು. ಶುಬ್ಮನ್ ಗಿಲ್ ವಿಕೆಟ್ ಬೇಗ ಪತನವಾದರೂ ವೆಂಕಟೇಶ್ ಅಯ್ಯರ್ (Venkatesh Iyer) ಮತ್ತು ರಾಹುಲ್ ತ್ರಿಪಾಠಿ (Rahul Tripathi) ಉತ್ತಮ ಜೊತೆಯಾಟ ಆಡಿ ಕೆಕೆಆರ್ ಚೇಸಿಂಗ್ ಹಾದಿಯನ್ನ ಸುಲಭಗೊಳಿಸಿದರು. ಇಬ್ಬರೂ ಎರಡನೇ ವಿಕೆಟ್​ಗೆ 8.4 ಓವರ್​ನಲ್ಲಿ 88 ರನ್ ಜೊತೆಯಾಟ ನೀಡಿದರು. ವೆಂಕಟೇಶ್ ಅಯ್ಯರ್ 53 ರನ್ ಗಳಿಸಿದರು. ರಾಹುಲ್ ತ್ರಿಪಾಠಿ ಇನ್ನೂ ಅಮೋಘ ಪ್ರದರ್ಶನ ನೀಡಿ ಕೆಕೆಆರ್​ಗೆ ಮತ್ತೊಂದು ನಿರಾಯಾಸ ಗೆಲುವು ದಕ್ಕುವಂತೆ ಮಾಡಿದರು. ತ್ರಿಪಾಠಿ ಕೇವಲ 42 ಬಾಲ್​ನಲ್ಲಿ ಅಜೇಯ 74 ರನ್ ಗಳಿಸಿದರು.

  ಇದಕ್ಕೆ ಮುನ್ನ, ಕ್ವಿಂಟಾನ್ ಡೀ ಕಾಕ್ (Quinton de Cock) ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ದಾಖಲಿಸಿತು. ಕೆಕೆಆರ್​ಗೆ ಗೆಲ್ಲಲು 156 ರನ್ ಗುರಿ ನೀಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡೀ ಕಾಕ್ ಅವರಿಬ್ಬರು 9 ಓವರ್​ನಲ್ಲಿ 78 ರನ್ ಜೊತೆಯಾಟ ನೀಡಿ ಒಳ್ಳೆಯ ಆರಂಭ ಕೊಟ್ಟರು. ಆದರೆ, ರೋಹಿತ್ ಶರ್ಮಾ ನಿರ್ಗಮನದ ಬಳಿಕ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ನಿಧಾನಗೊಂಡಿತು. 41 ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ದೊಡ್ಡ ಸ್ಕೋರು ದಾಖಲಿಸುವ ಸನ್ನಾಹದಲ್ಲಿದ್ದ ಮುಂಬೈ ಇಂಡಿಯನ್ಸ್ ಅಂತಿಮವಾಗಿ ತುಸು ಕಡಿಮೆ ಮೊತ್ತಕ್ಕೆ ತೃಪ್ತಿಪಡಬೇಕಾಯಿತು.

  ಕೆಕೆಆರ್ ತಂಡದಲ್ಲಿರುವ ಕನ್ನಡಿಗ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಕ್ವಿಂಟನ್ ಡೀ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಉರುಳಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ಉಂಟು ಮಾಡಿದರು. ಲಾಕೀ ಫರ್ಗ್ಯೂಸನ್ ಕೂಡ 2 ವಿಕೆಟ್ ಪಡೆದರು.

  ಯುಎಇಯಲ್ಲಿ ಆರಂಭಗೊಂಡ ಐಪಿಎಲ್​ನ ದ್ವಿತೀಯಾರ್ಧದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಕೌಟ್ ಹಂತ ತಲುಪಲು ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿತ್ತು. ಎಂಟು ಪಂದ್ಯಗಳಿಂದ ಎಂಟು ಅಂಕ ಹೊಂದಿರುವ ಮುಂಬೈ ಈಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನೊಂದೆಡೆ, ಆರ್​ಸಿಬಿ ವಿರುದ್ಧ ಗೆಲುವಿನ ನಂತರ ಗರಿಗೆದರಿ ನಿಂತಿದ್ದ ಕೆಕೆಆರ್ ತಂಡ ಈಗ ಮುಂಬೈ ತಂಡವನ್ನೂ ಸೋಲಿಸಿ ಅಂಕಪಟ್ಟಿಯಲ್ಲಿ ಮೇಲೇರಿದೆ. ಆರನೇ ಸ್ಥಾನದಲ್ಲಿದ್ದ ಕೆಕೆಆರ್ ಈಗ 4ನೇ ಸ್ಥಾನಕ್ಕೇರಿದೆ. ಈ ಮೂಲಕ ಫೀನಿಕ್ಸ್​ನಂತೆ ತಿರುಗಿ ಬಿದ್ದಿದೆ ಕೋಲ್ಕತಾ ಟೀಮ್.

  ಇದನ್ನೂ ಓದಿ: R Ashwin- ಆರ್ ಅಶ್ವಿನ್​ಗೆ ಯಾಕೆ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ? ಸೆಹ್ವಾಗ್ ಬಳಿ ಇದೆ ಉತ್ತರ

  ಸ್ಕೋರು ವಿವರ:

  ಮುಂಬೈ ಇಂಡಿಯನ್ಸ್ ತಂಡ 20 ಓವರ್ 155/6
  (ಕ್ವಿಂಟನ್ ಡೀ ಕಾಕ್ 55, ರೋಹಿತ್ ಶರ್ಮಾ 33 ರನ್, ಕೀರಾನ್ ಪೊಲಾರ್ಡ್ 21, ಇಶಾನ್ ಕಿಶನ್ 14 ರನ್ – ಲಾಕೀ ಫರ್ಗ್ಯೂಸನ್ 27/2, ಪ್ರಸಿದ್ಧ್ ಕೃಷ್ಣ 43/2)

  ಕೋಲ್ಕತಾ ನೈಟ್ ರೈಡರ್ಸ್ ಓವರ್ 15.1 ಓವರ್ 159/3
  (ರಾಹುಲ್ ತ್ರಿಪಾಠಿ ಅಜೇಯ 74, ವೆಂಕಟೇಶ್ ಅಯ್ಯರ್ 53 ರನ್)

  (
  RESULT DATA:
  ಕಣಕ್ಕಿಳಿದಿರುವ ತಂಡಗಳ ಆಟಗಾರರು:

  ಮುಂಬೈ ಇಂಡಿಯನ್ಸ್ ತಂಡ:
  ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡೀ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರಾನ್ ಪೊಲಾರ್ಡ್, ಸೌರಭ್ ತಿವಾರಿ, ಕೃಣಾಲ್ ಪಾಂಡ್ಯ, ಅಡಂ ಮಿಲ್ನೆ, ರಾಹುಲ್ ಚಾಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  ಕೋಲ್ಕತಾ ನೈಟ್ ರೈಡರ್ಸ್ ತಂಡ:
  ಇಯಾನ್ ಮಾರ್ಗನ್ (ನಾಯಕ), ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ನಿತೀಶ್ ರಾಣ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಸುನೀಲ್ ನರೈನ್, ಲಾಕೀ ಫೆರ್ಗೂಸನ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
  Published by:Vijayasarthy SN
  First published: