MI vs DC: ಮಿಶ್ರಾ ಮ್ಯಾಜಿಕ್ ಮುಂದೆ ಮಂಡಿಯೂರಿದ ಮುಂಬೈ ಬ್ಯಾಟ್ಸ್​ಮನ್​ಗಳು

ಉಭಯ ತಂಡಗಳು 28 ಬಾರಿ ಸೆಣಸಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 16 ಬಾರಿ ಗೆಲುವು ದಾಖಲಿಸಿದೆ. ಇನ್ನು 12 ಬಾರಿ ಜಯ ಸಾಧಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ.

dehli capitals

dehli capitals

 • Share this:
  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ಗೆ 138 ರನ್​ಗಳ ಸಾಧಾರಣ ಗುರಿ ನೀಡಿದೆ. ಡೆಲ್ಲಿ ಪರ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಅಮಿತ್ ಮಿಶ್ರಾ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು.  ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು.

  ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್​​ಗೆ ಆರಂಭಿಕ ಆಘಾತ ನೀಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಯಶಸ್ವಿಯಾಯಿತು. ಇನಿಂಗ್ಸ್​ನ ಮೂರನೇ ಓವರ್​ನ ಮೊದಲ ಎಸೆತದಲ್ಲೇ ಮಾರ್ಕಸ್ ಸ್ಟೋಯಿನಿಸ್ ಕ್ವಿಂಟನ್ ಡಿಕಾಕ್ (1) ವಿಕೆಟ್ ಪಡೆಯುವ ಮೂಲಕ ಡೆಲ್ಲಿಗೆ ಮೊದಲ ಯಶಸ್ಸು ತಂದುಕೊಟ್ಟರು.

  ಆದರೆ ಮತ್ತೊಂದೆಡೆ ಇದ್ದ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪವರ್​ಪ್ಲೇನಲ್ಲಿ 2 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿದ ಹಿಟ್​ಮ್ಯಾನ್ ತಂಡದ ಮೊತ್ತ ಹೆಚ್ಚಿಸಿದರು. ನಾಯಕನಿಗೆ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 23 ರನ್ ಬಾರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್​ ತಂಡದ ಮೊತ್ತ 55ಕ್ಕೆ ಬಂದು ನಿಂತಿತು.

  ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ಅವೇಶ್ ಖಾನ್ ಎಸೆದ 7ನೇ ಓವರ್​ನ ಅಂತಿಮ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (24) ವಿಕೆಟ್ ಕೀಪರ್ ರಿಷಭ್ ಪಂತ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 9ನೇ ಓವರ್​ನಲ್ಲಿ ದಾಳಿಗಿಳಿದ ಅಮಿತ್ ಮಿಶ್ರಾ ಮೊದಲು ರೋಹಿತ್ ಶರ್ಮಾ (44) ವಿಕೆಟ್ ಪಡೆದರು. ಅಲ್ಲದೆ 6ನೇ ಎಸೆತದಲ್ಲಿ  ಹಾರ್ದಿಕ್ ಪಾಂಡ್ಯ(0)ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಮುಂಬೈಗೆ ಡಬಲ್ ಶಾಕ್ ನೀಡಿದರು.

  ಇದರ ಬೆನ್ನಲ್ಲೇ ಕೃನಾಲ್ ಪಾಂಡ್ಯ (1) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಲಿತ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್​ಗೆ 5ನೇ ಯಶಸ್ಸು ತಂದುಕೊಟ್ಟರು. ಇನ್ನು 2 ರನ್​ಗಳಿಸಿ ಪೊಲಾರ್ಡ್ ಅಮಿತ್ ಮಿಶ್ರಾ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು. ಪರಿಣಾಮ 15ನೇ ಓವರ್​ನಲ್ಲಿ ಮುಂಬೈ ಇಂಡಿಯನ್ಸ್ 100 ರನ್​ಗಳ ಗಡಿದಾಟಿತು.

  7ನೇ ವಿಕೆಟ್​ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಜಯಂತ್ ಯಾದವ್ ಮುಂಬೈಗೆ ಆಸರೆಯಾಗಿ ನಿಂತರು. ಅಲ್ಲದೆ 39 ರನ್​ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಅತ್ತ ಅಂತಿಮ ಓವರ್​ ಬರುತ್ತಿದ್ದಂತೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ  ಇಶಾನ್ ಕಿಶನ್ (26) ವಿಕೆಟ್ ಪಡೆಯುವ ಮೂಲಕ ಅಮಿತ್ ಮಿಶ್ರಾ ಮತ್ತೊಂದು ಯಶಸ್ಸು ತಂದುಕೊಟ್ಟರು.

  ಅಂತಿಮವಾಗಿ ಮುಂಬೈ ಇಂಡಿಯನ್ಸ್​ 9 ವಿಕೆಟ್ ನಷ್ಟಕ್ಕೆ 137 ರನ್​ಗಳಿಸಲಷ್ಟೇ ಶಕ್ತರಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 4 ಓವರ್​ನಲ್ಲಿ 24 ರನ್​ ನೀಡಿ 4 ವಿಕೆಟ್ ಪಡೆದರೆ, ಅವೇಶ್ ಖಾನ್ 2 ಓವರ್​ನಲ್ಲಿ 15 ರನ್ ನೀಡಿದ 2 ವಿಕೆಟ್ ಉರುಳಿಸಿದರು.  ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿರುವ ಮುಂಬೈಗೆ ಸೋಲುಣಿಸಿ 2ನೇ ಸ್ಥಾನಕ್ಕೇರುವ ತವಕದಲ್ಲಿದ್ದು, ಇತ್ತ ರೋಹಿತ್ ಪಡೆ ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

  IPL 2021, dc vs mi playing 11: ಡೆಲ್ಲಿ ಟೀಮ್​ನಲ್ಲಿ 2 ಬದಲಾವಣೆ: ಉಭಯ ತಂಡಗಳು ಹೀಗಿವೆ

  ಇನ್ನು ಉಭಯ ತಂಡಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಇದುವರೆಗೆ ಉಭಯ ತಂಡಗಳು 28 ಬಾರಿ ಸೆಣಸಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 16 ಬಾರಿ ಗೆಲುವು ದಾಖಲಿಸಿದೆ. ಇನ್ನು 12 ಬಾರಿ ಜಯ ಸಾಧಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ. ಕಳೆದ ಸೀಸನ್​ನಲ್ಲಿ ಫೈನಲ್ ಸೇರಿ ಉಭಯ ತಂಡಗಳು 4 ಬಾರಿ ಮುಖಾಮುಖಿಯಾಗಿದೆ. ಆದರೆ ನಾಲ್ಕು ಬಾರಿ ಕೂಡ ಮುಂಬೈ ಇಂಡಿಯನ್ಸ್ ಡೆಲ್ಲಿಗೆ ಸೋಲುಣಿಸಿದೆ. ಕೊನೆಯ 10 ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯಗಳಲ್ಲಿ ಮಾತ್ರ ಮುಂಬೈ ವಿರುದ್ದ ಜಯ ಸಾಧಿಸಿದೆ.
  Published by:zahir
  First published: