HOME » NEWS » Ipl » IPL 2021 MI VS DC LIVE SCORE PANT S DELHI CAPITALS WON BY 6 WICKETS ZP

MI vs DC: ಬಲಿಷ್ಠ ಮುಂಬೈ ಇಂಡಿಯನ್ಸ್​ನ್ನು ಬಗ್ಗು ಬಡಿದ ಡೆಲ್ಲಿ ಕ್ಯಾಪಿಟಲ್ಸ್​

ಉಭಯ ತಂಡಗಳು 29 ಬಾರಿ ಸೆಣಸಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 16 ಬಾರಿ ಗೆಲುವು ದಾಖಲಿಸಿದೆ. ಇನ್ನು 13 ಬಾರಿ ಜಯ ಸಾಧಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ.

news18-kannada
Updated:April 20, 2021, 11:28 PM IST
MI vs DC: ಬಲಿಷ್ಠ ಮುಂಬೈ ಇಂಡಿಯನ್ಸ್​ನ್ನು ಬಗ್ಗು ಬಡಿದ ಡೆಲ್ಲಿ ಕ್ಯಾಪಿಟಲ್ಸ್​
Delhi capitals
  • Share this:
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ 138 ರನ್​ಗಳ ಗುರಿಯನ್ನು ಡೆಲ್ಲಿ 4 ವಿಕೆಟ್ ನಷ್ಟದೊಂದಿಗೆ 19.1 ಓವರ್​ನಲ್ಲಿ ಚೇಸ್ ಮಾಡಿತು.

ಇದಕ್ಕೂ ಮುನ್ನ ಮುಂಬೈ ನೀಡಿದ 138 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. 2ನೇ ಓವರ್​ನಲ್ಲೇ ಪೃಥ್ವಿ ಶಾ (7) ವಿಕೆಟ್ ಜಯಂತ್ ಯಾದವ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ ಶಿಖರ್ ಧವನ್ ಜೊತೆಗೂಡಿದ ಸ್ಟೀವ್ ಸ್ಮಿತ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 6 ಓವರ್​ನಲ್ಲಿ 39 ರನ್​ ಮಾತ್ರ ಕಲೆಹಾಕಿತು.

ಅಲ್ಲದೆ ಶಿಖರ್-ಸ್ಮಿತ್ ಜೋಡಿ 47 ಎಸೆತಗಳಲ್ಲಿ 53 ರನ್​ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ 10ನೇ ಓವರ್​ನಲ್ಲಿ ದಾಳಿಗಿಳಿದ ಪೊಲಾರ್ಡ್ ಎಸೆತವನ್ನು ಗುರುತಿಸಲು ಎಡವಿದ ಸ್ಟೀವ್ ಸ್ಮಿತ್ (33) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಹತ್ತು ಓವರ್​ನಲ್ಲಿ 68 ರನ್ ಕಲೆಹಾಕಿತು.

ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಯುವ ಆಟಗಾರ ಲಲಿತ್ ಯಾದವ್ ಜೊತೆಗೂಡಿ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಅದರಂತೆ 15ನೇ ಓವರ್​ನಲ್ಲಿ ತಂಡದ ಮೊತ್ತ 100ರ ಗಡಿದಾಟಿತು. ಇದೇ ವೇಳೆ 42 ಎಸೆತಗಳಲ್ಲಿ 45 ರನ್ ಬಾರಿಸಿದ್ದ ಧವನ್ ಬಿರುಸಿನ ಹೊಡೆತಕ್ಕೆ ಮುಂದಾಗಿ ಚಹರ್​ಗೆ ವಿಕೆಟ್ ಒಪ್ಪಿಸಿದರು.

ಕೊನೆಯ 5 ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ 37 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ 16ನೇ ಓವರ್ ಎಸೆದ ಟ್ರೆಂಟ್ ಬೌಲ್ಟ್ ಕೇವಲ 6 ರನ್ ಮಾತ್ರ ನೀಡಿದರು. 17ನೇ ಓವರ್ ಬೌಲ್ ಮಾಡಿದ ಬುಮ್ರಾ 9 ರನ್ ನೀಡಿ ರಿಷಭ್ ಪಂತ್ (7) ವಿಕೆಟ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್​ಗೆ ಕೊನೆಯ 3 ಓವರ್​ನಲ್ಲಿ 22 ರನ್​ಗಳು ಬೇಕಿತ್ತು. 18ನೇ ಓವರ್​ನಲ್ಲಿ ಬೌಲ್ಟ್  7 ರನ್ ನೀಡಿದರು. 19ನೇ ಓವರ್​ನಲ್ಲಿ ಬುಮ್ರಾ ಹತ್ತು ರನ್ ನೀಡಿದರು.

ಅದರಂತೆ ಅಂತಿಮ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು ಕೇವಲ 5 ರನ್​ಗಳ ಅಗತ್ಯವಿತ್ತು. ಪೊಲಾರ್ಡ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಹೆಟ್ಮೆಯರ್ ಬೌಂಡರಿ ಬಾರಿಸಿದರು. ನಂತರದ ಎಸೆತದಲ್ಲಿ 1 ರನ್ ಕಲೆಹಾಕುವ ಮೂಲಕ 138 ರನ್ ಪೇರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್​​ಗೆ ಆರಂಭಿಕ ಆಘಾತ ನೀಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಯಶಸ್ವಿಯಾಯಿತು. ಇನಿಂಗ್ಸ್​ನ ಮೂರನೇ ಓವರ್​ನ ಮೊದಲ ಎಸೆತದಲ್ಲೇ ಮಾರ್ಕಸ್ ಸ್ಟೋಯಿನಿಸ್ ಕ್ವಿಂಟನ್ ಡಿಕಾಕ್ (1) ವಿಕೆಟ್ ಪಡೆಯುವ ಮೂಲಕ ಡೆಲ್ಲಿಗೆ ಮೊದಲ ಯಶಸ್ಸು ತಂದುಕೊಟ್ಟರು.ಆದರೆ ಮತ್ತೊಂದೆಡೆ ಇದ್ದ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪವರ್​ಪ್ಲೇನಲ್ಲಿ 2 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿದ ಹಿಟ್​ಮ್ಯಾನ್ ತಂಡದ ಮೊತ್ತ ಹೆಚ್ಚಿಸಿದರು. ನಾಯಕನಿಗೆ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 23 ರನ್ ಬಾರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್​ ತಂಡದ ಮೊತ್ತ 55ಕ್ಕೆ ಬಂದು ನಿಂತಿತು.

ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ಅವೇಶ್ ಖಾನ್ ಎಸೆದ 7ನೇ ಓವರ್​ನ ಅಂತಿಮ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (24) ವಿಕೆಟ್ ಕೀಪರ್ ರಿಷಭ್ ಪಂತ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 9ನೇ ಓವರ್​ನಲ್ಲಿ ದಾಳಿಗಿಳಿದ ಅಮಿತ್ ಮಿಶ್ರಾ ಮೊದಲು ರೋಹಿತ್ ಶರ್ಮಾ (44) ವಿಕೆಟ್ ಪಡೆದರು. ಅಲ್ಲದೆ 6ನೇ ಎಸೆತದಲ್ಲಿ  ಹಾರ್ದಿಕ್ ಪಾಂಡ್ಯ(0)ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಮುಂಬೈಗೆ ಡಬಲ್ ಶಾಕ್ ನೀಡಿದರು.

ಇದರ ಬೆನ್ನಲ್ಲೇ ಕೃನಾಲ್ ಪಾಂಡ್ಯ (1) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಲಿತ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್​ಗೆ 5ನೇ ಯಶಸ್ಸು ತಂದುಕೊಟ್ಟರು. ಇನ್ನು 2 ರನ್​ಗಳಿಸಿ ಪೊಲಾರ್ಡ್ ಅಮಿತ್ ಮಿಶ್ರಾ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು. ಪರಿಣಾಮ 15ನೇ ಓವರ್​ನಲ್ಲಿ ಮುಂಬೈ ಇಂಡಿಯನ್ಸ್ 100 ರನ್​ಗಳ ಗಡಿದಾಟಿತು.

7ನೇ ವಿಕೆಟ್​ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಜಯಂತ್ ಯಾದವ್ ಮುಂಬೈಗೆ ಆಸರೆಯಾಗಿ ನಿಂತರು. ಅಲ್ಲದೆ 39 ರನ್​ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಅತ್ತ ಅಂತಿಮ ಓವರ್​ ಬರುತ್ತಿದ್ದಂತೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ  ಇಶಾನ್ ಕಿಶನ್ (26) ವಿಕೆಟ್ ಪಡೆಯುವ ಮೂಲಕ ಅಮಿತ್ ಮಿಶ್ರಾ ಮತ್ತೊಂದು ಯಶಸ್ಸು ತಂದುಕೊಟ್ಟರು.

ಅಂತಿಮವಾಗಿ ಮುಂಬೈ ಇಂಡಿಯನ್ಸ್​ 9 ವಿಕೆಟ್ ನಷ್ಟಕ್ಕೆ 137 ರನ್​ಗಳಿಸಲಷ್ಟೇ ಶಕ್ತರಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 4 ಓವರ್​ನಲ್ಲಿ 24 ರನ್​ ನೀಡಿ 4 ವಿಕೆಟ್ ಪಡೆದರೆ, ಅವೇಶ್ ಖಾನ್ 2 ಓವರ್​ನಲ್ಲಿ 15 ರನ್ ನೀಡಿದ 2 ವಿಕೆಟ್ ಉರುಳಿಸಿದರು.
Published by: zahir
First published: April 20, 2021, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories